Saturday, September 5, 2015

ನಾಕುದಾರಿಯಲ್ಲೊಂದು ಮರದ ಕಥೆ

ದಟ್ಟನೆಯ ಎತ್ತರೆತ್ತರದ ಮರಗಳ ಕಾಡು, ಅದರ ಜೊತೆಗೂಡಿದ ಜಲಪಾತಗಳ ಸೊಬಗು... ಪರಿಶುದ್ಧ ಗಾಳಿ... ಮಳೆಗಾಲದ ಎಡೆಯಿಲ್ಲದ ಮಳೆ... ಮಲೆನಾಡಿನ ಮಡಿಲಲ್ಲಿರುವ ನಮ್ಮ ಊರಿನ ನಿತ್ಯಹರಿದ್ವರ್ಣ ಕಾಡಿನ ವರ್ಣನೆ ಮಾಡುತ್ತಾ ಹೊರಟರೆ ಅದಕ್ಕೆ ಕೊನೆಯಿಲ್ಲ.

ದುರಾದೃಷ್ಟವೆಂದರೆ ಮರಗಳ್ಳರ ಕಾಟ ನಮ್ಮೂರನ್ನೂ ಬಿಟ್ಟಿಲ್ಲ. ಫಾರೆಸ್ಟನ ಕಣ್ಣು ತಪ್ಪಿಸಿ ಮರಗಳಿಗೆ ಬೆಂಕಿ ಹಚ್ಚಿ ಬೀಳಿಸಿ, ನಂತರ ಉಳಿದ ಮರವನ್ನು ಕಡಿದು ಸಾಗಿಸುವದು ಸಾಮಾನ್ಯ. ಮಾವಿನ ಮರದ ಕಾಯಿ ಬೇಕೆಂದರೆ ಬುಡಗೂಡಿ ಮರವನ್ನೇ ಕಡಿಯುವುದೂ, ರಾತ್ರೋರಾತ್ರಿ ಮನೆಯಂಗಳಕ್ಕೇ ನುಗ್ಗಿ ಗಂಧದ ಮರವನ್ನು ಕಡಿದು ಸಾಗಿಸುವದೂ, ಬೀಟೆ ತೇಗದ ಮರಗಳ ಕಳ್ಳತನಗಳೂ, ಇವೆಲ್ಲ ನಿರಂತರವಾಗಿ ನಡೇದೇ ಇರುವ ಅವಾಂತರಗಳು.

ನಾಕುದಾರಿ ಎಂಬಲ್ಲಿ ನಮ್ಮ ಊರಿನ ಕಾಡುದಾರಿ ಬೇರೆಬೇರೆ ಮನೆಗಳಿಗೆ ಹೋಗಲು ಕವಲೊಡೆಯುತ್ತದೆ. ಹಾಗೆಯೇ ಕನ್ನಡ ಶಾಲೆಯ ಮಕ್ಕಳೆಲ್ಲ ನಾವೊಂದು ದಿನ ಮಳಲಗಾಂವ ಶಾಲೆಯಿಂದ ಸಂಜೆ ಕಾಡುದಾರಿಯಲ್ಲಿ ಮನೆಗೆ ನಡೆದು ಬರುತ್ತಿದ್ದೆವು. ಯಾವ ಕಾರಣಕ್ಕೋ ಏನೋ, ದಾರಿಯ ಪಕ್ಕದಲ್ಲಿನ ಒಂದು ಬಹು ಎತ್ತರದ ದಪ್ಪನೆಯ ಮರದ ಬುಡಕ್ಕೆ ಬೆಂಕಿ ಹೊತ್ತಿತ್ತು. ತುಂಬಾ ಎತ್ತರವಿದ್ದ ಆ ಮರ ಸುಮಾರು  300 ವರ್ಷ ಹಳೆಯದೇ ಇದ್ದಿರಬಹುದು. ಯಾರೋ ಮರಗಳ್ಳರು ಬೇಕೆಂದೇ ಬೆಂಕಿ ಹಚ್ಚಿದ್ದು ಸ್ಪಷ್ಟವಾಗಿತ್ತು. ಅದನ್ನು ನೋಡಿ ಏನಾದರೂ ಮಾಡಲೇಬೇಕೆಂದು ಎಲ್ಲಾ ಮಕ್ಕಳೂ ಮನೆಗೆ ಕಿತ್ತಾಬಿದ್ದು ಓಡಿದೆವು.

ನಮ್ಮ ಮನೆಯ ವಿಶ್ವಣ್ಣ ನಮ್ಮೂರಿಗೇ ಹೆಸರಾಂತ ಪರಿಸರಪ್ರೇಮಿ. ಯಾರಾದರೂ ಒಂದು ಚಿಕ್ಕ ಗಿಡವನ್ನು ಕಡಿದರೂ ಸರಿ, ಅವರಿಗೆ ಪರಿಸರದ ಬಗ್ಗೆ, ಮರಗಳ ಸಂರಕ್ಷಣೆಯ ಬಗ್ಗೆ ತಿಳಿಸಿ,ಮನವೊಲಿಸಿ, ಮತ್ತೊಮ್ಮೆ ಹಾಗಾಗದಂತೆ ನೋಡಿಕೊಳ್ಳುತ್ತಾನೆ.

ನಾನು ಓಡೋಡಿ ಮನೆಗೆ ಬಂದವನೇ, "ವಿಶ್ವಣ್ಣಾ, ಯಾರೋ ನಾಕುದಾರಿಯ ದೊಡ್ಡ ಮರಕ್ಕೆ ಬೆಂಕಿ ಹಚ್ಚಿದ್ದ... ಎಂಥಾ ಮಾಡವೋ..." ಎಂದು ಕೇಳಿದೆ. ಕೂಡಲೇ ವಿಶ್ವಣ್ಣ ಎಂದಿನಂತೆ ಸಟಕ್ಕನೇ ಒಂದು ಉಪಾಯ ಹೂಡಿದ. ಮನೆಯಿಂದ ಸುಮಾರು ಅರ್ಧ ಕಿಮಿ ದೂರದಲ್ಲಿನ ಕಾಡಿನ ಬೆಂಕಿಯನ್ನು ಆರಿಸುವುದು ಸುಲಭದ ಕೆಲಸವಾಗಿರಲಿಲ್ಲ. ಮನೆಯಲ್ಲಿದ್ದ ಟ್ರಾಕ್ಟರಿನ ಟ್ರಾಲಿಯಲ್ಲಿ ಒಂದು ದೊಡ್ಡ ನೀರಿನ ಹಂಡೆಯನ್ನು ತಂದು ಕೂಡಿಸಿದೆವು. ದನದ ಕೊಟ್ಟಿಗೆಯಿಂದ ನೀರಿನ ಹಂಡೆಯಲ್ಲಿ ನೀರು ತುಂಬಿಸಿ, ಇಬ್ಬರೂ ಟ್ರಾಕ್ಟರಿನಲ್ಲಿ ನಾಕುದಾರಿಯ ಕಡೆಗೆ ಹೊರಟೆವು.

ಒಂದೇ ಹಂಡೆಯ ನೀರು ಸಾಲದೇ ಇನ್ನೂ ಎರಡು ಸಲ ದನದ ಕೊಟ್ಟಿಗೆಗೆ ನೀರು ತರಲು ಟ್ರಾಕ್ಟರಿನಲ್ಲಿ ತಿರುಗಿದೆವು. ಸುಮಾರು ಹೊತ್ತು ಸತತವಾಗಿ 3 ಹಂಡೆಯ ನೀರನ್ನು ಉರಿಯುತ್ತಿದ್ದ ಮರದ ಬುಡಕ್ಕೆ ಹಾಕಿ, ಅಂತೂ ಬೆಂಕಿಯನ್ನು ನಂದಿಸಿದೆವು. ಆವತ್ತಿಗೆ ನಾವು ಆ ಮರದ ಬೆಂಕಿಯನ್ನು ಆರಿಸಿರದಿದ್ದರೆ, ಉರಿಯುತ್ತಿದ್ದ ಬೆಂಕಿ ಕಾಳ್ಗಿಚ್ಚಾಗಿ ಹಬ್ಬಿ ಎಷ್ಟು ಮರಗಳನ್ನು ಸುಡುತ್ತಿತ್ತೋ ಏನೋ...

ಇಂದಿಗೂ ನಮ್ಮೂರಿಗೆ ಹೋಗುವಾಗ ಆ ಮರ ಕಾಣುತ್ತದೆ. ನಾನು ವಿಶ್ವಣ್ಣ ಒಟ್ಟಿಗೇ ಇದ್ದರಂತೂ ಆ ಮರದ ಬಳಿ ನಿಂತು, ಆ ದಿನದ ನಮ್ಮ ಟ್ರಾಕ್ಟರಿನ ಸಾಹಸವನ್ನು ನೆನೆಸಿಕೊಳ್ಳುತ್ತೇವೆ.

ಇಂಥ ಸಾವಿರಾರು ಗಿಡ ಮರಗಳು ನಮಗಿಂದು ಉಸಿರಾಡುವ ಗಾಳಿಯನ್ನೂ - ಬದುಕನ್ನೂ ನೀಡಿವೆ. ಆದರೆ ನಾವೆಷ್ಟು ಅವಕ್ಕೆ ಮರಳಿ ನೀಡಿದ್ದೇವೆ...?

No comments: