Tuesday, December 15, 2009

ಬಸವರಾಜ ಮೇಷ್ಟ್ರು

"ಓ ಬಸವರಾಜ ಮೇಷ್ಟ್ರು..... ಗ್ರೇಟ್ ಪರ್ಸನಾಲಿಟಿ.... ಅದ್ರ ಬಗ್ಗೆ ಎರಡನೇ ಪ್ರಶ್ನೇನೇ ಇಲ್ಲಾ.." ... ಹೀಗೆಲ್ಲಾ ಅವರೊಡನೆ ಒಡನಾಡಿದ ಜನರ ಅಭಿಪ್ರಾಯವಾದರೆ ಅದರಲ್ಲಿ ಅತಿಶಯ ಏನೂ ಇಲ್ಲ.

ಸದ್ಯಕ್ಕೆ ಇವರ ವಯಸ್ಸು 72. ಊರು ಚಿತ್ರದುರ್ಗ. ತಮ್ಮ ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದಮೇಲೆ ಪ್ರಕೃತಿಯೊಡನೆ ಸತತವಾದ ಒಡನಾಟವನ್ನು ತಮ್ಮ ಸಾಹಸಭರಿತವಾದ ಚಾರಣಗಳ ಮೂಲಕ ಗಳಿಸಿಕೊಂಡವರು. ನಿಸರ್ಗದ ಜೊತೆಗಿನ ನಿಕಟತೆಯೇ ಮನುಷ್ಯನ ಉನ್ನತಿಯ ಮಾರ್ಗ ಎಂಬುದನ್ನು ಇಂದಿಗೂ ಯುವಕರಿಗೆ ಸಾಧಿಸಿ ತೋರಿಸುತ್ತಿರುವವರು.

ನಾವು ಸರ್-ಪಾಸ್ ಹಿಮಾಲಯ ಶ್ರೇಣಿಯಲ್ಲಿ ’ಯುಥ್ ಹಾಸ್ಟೇಲ್’ ಚಾರಣದಲ್ಲಿ ಭಾಗವಹಿಸಿದ್ದಾಗ ಬಸವರಾಜ್ ಅಂಕಲ್ ನಮ್ಮ ಸಹ ಚಾರಣಿಗರು. ಈ ಇಳಿವಯಸ್ಸಿನಲ್ಲೂ 14000 ಅಡಿ ಹತ್ತುವ ಅದ್ಭುತವಾದ ಸಾಹಸಕ್ಕೆ ಕೈ ಹಾಕುವವರನ್ನು ಅಲ್ಲಿಯವರೆಗೆ ನಾನೂ ನೋಡಿರಲಿಲ್ಲ. ಪ್ರತಿದಿನ ಉದಯದಲ್ಲಿ ಯೋಗಾಭ್ಯಾಸ, ಪ್ರತಿದಿನ ಡೈರಿಯಲ್ಲಿ ಅಂದಂದಿನದ ಅನುಭವಗಳನ್ನು ದಾಖಲಿಸುದು, ನಮ್ಮಂಥ ಯುವ ಚಾರಣಿಗರನ್ನು ಹುರಿದುಂಬಿಸುವ ರೀತಿ,,, ಎಲ್ಲವನ್ನು ನೋಡಿ ಅವಾಕ್ಕಾದೆ!!!

ದಿನ .... ಕಸೋಲಿನಲ್ಲಿ ಬಸವರಾಜ ಅಂಕಲ್ ಸರ್-ಪಾಸ್ ಚಾರಣಕ್ಕೆ ಬಂದ ಇಸ್ರೇಲಿನ ಯುವಕನೊಬ್ಬನಿಗೆ ಹೇಳುತ್ತಿದ್ದರು, "ಭಾರತದಲ್ಲಿ ಒಂದು ಹಳೆಯ ಹೇಳಿಕೆ ಇದೆ. ನೀವು ಸಮುದ್ರವನ್ನೂ ಮತ್ತು ಹಿಮಾಲಯವನ್ನೂ ಕಣ್ಣಾರೆ ನೋಡಿದ ವಿನಹ ಅವುಗಳ ಗಾಂಭೀರ್ಯತೆ, ವಿಶಾಲತೆ, ಆಳವನ್ನು ಅಳೆಯಲಾಗಲೀ ವರ್ಣಿಸಲಾಗಲೀ ಸಾಧ್ಯವಿಲ್ಲ" ಎಂದು. ಅವರ ಮಾತುಗಳೇ ಹಾಗೆ. ಕೇಳುತ್ತಿರುವವರಿಗೆ ಕರ್ಣಾನಂದ, ಹಿತಕರ, ಮಾಹಿತಿದಾಯಕ, ಪ್ರೀತಿಪೂರ್ವಕ ಇತ್ಯಾದಿ ಇತ್ಯಾದಿ.

ಇಲ್ಲಿಯವರೆಗೆ ಅಂಕಲ್ 12 ಸಲ ಹಿಮಾಲಯದ ಶಿಖರಗಳಲ್ಲಿ ಚಾರಣ ಮಾಡಿದ್ದಾರೆ. ಹಿಮಾಲಯದ ಅನೇಕ ಕಣಿವೆಗಳಲ್ಲಿ ಸುತ್ತಾಡಿದ್ದಾರೆ. ಒಮ್ಮೆಯಂತೂ 10,000 ಅಡಿಯ ಮೇಲಿನ ಹಿಮಾಲಯದ ಬೆಟ್ಟವೊಂದರಲ್ಲಿ ಒಂದು ತಿಂಗಳು ಏಕಾಂತವಾಸ ಮಾಡಿದ್ದಾರೆ.!!!!
ಪಶ್ಚಿಮ ಘಟ್ಟಗಳಲ್ಲಂತೂ ಇವರು ಚಾರಣಿಸದ ಬೆಟ್ಟ ಗುಡ್ಡಗಳೇ ಇಲ್ಲ ಎನ್ನಬಹುದು. ಬೆನ್ನಿಗೊಂದು ಟೆಂಟು ಏರಿಸಿ
ಕಾಡಿನಲ್ಲಿ ಹೊರಟರೆ ಅದಕ್ಕಿಂತ ಖುಷಿ ಅವರಿಗೆ ಇನ್ನೊಂದಿಲ್ಲ.

ಅಂಕಲ್ ಮೂರು ತಿಂಗಳ ಹಿಂದೆ ಕೊಲ್ಲೂರಿನಲ್ಲಿ ಬೆಟ್ಟ ಹತ್ತುವಾಗ ಕಾಲು ಉಳುಕಿಸಿಕೊಂಡು 2 ತಿಂಗಳು ಬೆಡ್ ರೆಸ್ಟ್ ಅಂತ ಕೇಳಿದಾಗ ನಮ್ಮೆಲ್ಲರಿಗೆ ಆದ ನೋವು ಅಷ್ಟಿಷ್ಟಲ್ಲ. ಆದರೂ ಇತ್ತೀಚೆಗೆ ಬಸವರಾಜ ಅಂಕಲ್ ಸಾಗರದಿಂದ ದಿನಾಲೂ 25 km ಗಳು ನಡೆಯುತ್ತಾ, ರಾತ್ರಿ ಅಡಿಕೆ ತೋಟಗಳಲ್ಲಿ ಮಲಗಿ, ಮತ್ತೆ ನಡೆಯುತ್ತಾ ಗೋಕರ್ಣ ತಲುಪಿ ಅಲ್ಲಿನ ಬೀಚ್ ಗಳಲ್ಲಿ ಚಾರಣವನ್ನು ಮಾಡಿ ಬಂದರು!!!!.

ಮೊನ್ನೆ ಅವರಿಗೆ ಫೋನ್ ಮಾಡಿದಾಗ ಕೇಳಿದರು, ’ಸತೀಶ್ ಮತ್ತೆ ಎಲ್ಲಾದ್ರೂ ಟ್ರೆಕ್ ಹೋಗಿದ್ರಾ?’...
ನಾನಂದೆ, ’ಇಲ್ಲಾ ಅಂಕಲ್ ಯಾಕೋ ಎಲ್ಲಿಗೂ ಹೋಗ್ಲಿಕ್ಕೇ ಆಗ್ಲಿಲ್ಲಾ.. ಬೊಯ್ಸ್ ಎಲ್ರೂ ಬ್ಯುಸಿ ಆಗ್ಬಿಟ್ಟಿದಾರೆ’.
ಅದಕ್ಕೆ ಅವರು ಥಟ್ ಅಂತ, ’ಇಲ್ಲಾ ಸತೀಶ್ ನಿಮ್ಮ್ ಸಾಫ್ಟ್ ವೇರ್ ಲೈಫ್ ನಲ್ಲಿ ದುಡ್ಡಿದೆ. ಆದ್ರೆ ಬದುಕು ಇಲ್ಲ. Go back to nature. ಇಲ್ಲಾ ಅಂದ್ರೆ ಹದಿನೈದು ದಿನಕ್ಕಾದ್ರೂ ಎಲ್ಲಾದ್ರು ಹೋಗಿಬನ್ನಿ’ ಅಂದರು. ಕಾಂಕ್ರೀಟ್ ಕಾಡಿನ ನನ್ನ ಬರಡು ಜೀವನಕ್ಕೆ ಅದು ಸಂಪೂರ್ಣ ಸತ್ಯವೆನಿಸಿತು.ಬಸವರಾಜ ಅಂಕಲ್ ಅವರ ಅದ್ಭುತವಾದ ಜೀವನಾನುಭವಗಳು, ಅವರ ಚಾರಣಗಳ ಸಾಹಸ ಕಥೆಗಳೂ, ಆಗಾಗೀಗೊಮ್ಮೆ ಚಿಮ್ಮುವ ಹಾಸ್ಯ ಚಟಾಕಿಗಳೂ, ವಯಸ್ಸು 72 ಆದರೂ ಹದಿನಾರರ ಹರೆಯದ ಆ ಅದಮ್ಯ ಉತ್ಸಾಹದ ಬುಗ್ಗೆಯೂ, ನಿಸರ್ಗದ ನಿಕಟತೆಯಲ್ಲಿ ಅವರಿಗೇ ಅರಿವಿಲ್ಲದಂತೆ ಹೆಮ್ಮರದಂತೆ ಬೆಳೆದಿರುವ ಅವರ ವಿಶ್ವಮಾನವತೆಯೂ........ ಹೀಗೇ....ಜೀವನದಲ್ಲಿ ನಾವು ಕಂಡ ಅದ್ಭುತ ವ್ಯಕ್ತಿಗಳ ಮೆಲುಕಿನಲ್ಲಿ ಭುಗ್ಗೆಂದು ಮೇಲೆದ್ದು ಬರುತ್ತಾರೆ ನಮ್ಮ ಪ್ರೀತಿಯ ಬಸವರಾಜ ಅಂಕಲ್.


ಸರ್ - ಪಾಸ್ ಚಾರಣದ ತುತ್ತತುದಿಯಲ್ಲಿ ಬಸವರಾಜ್ ಅಂಕಲ್ ಅವರ ಮಾತು...
ಈಗ 77ರ ಹರೆಯದ ಬಸವರಾಜ್ ಅಂಕಲ್. ಮೊನ್ನೆ ಚಿತ್ರದುರ್ಗಕ್ಕೆ ಹೋದಾಗ ಕೋಟೆಯ ಮೇಲೆ ತೆಗೆದ ಫೋಟೋ


ಮತ್ತೆ ಈ ವರ್ಷ (2013) 77ನೇ ವಯಸ್ಸಿನಲ್ಲಿಯೂ ಹಿಮಾಲಯದ ಚಾರಣಕ್ಕೆ ಹೊರಟಿರುವ ಅಂಕಲ್ ಗೆ ಎಂದಿನಂತೆ ಪ್ರೋತ್ಸಾಹ ನೀಡುತ್ತಿರುವ ಆಂಟಿಯ ಜೊತೆ...

4 comments:

ಅನಂತ said...

ವಾಹ್.. :)
ಅಬ್ಬಾ ಆಶ್ಚರ್ಯ ಆಗುತ್ತೆ, ಮತ್ತೆ ನನ್ನ ಬಗ್ಗೆ ನಾನೇ ಉಗಿಯುವಷ್ಟು ನಾಚಿಕೆ ಕೂಡ ಆಗುತ್ತೆ.. :(
ಗ್ರೇಟ್..!

tigersolanki said...

nice to see the page, its really exhilrating

Unknown said...

Life is a journey to be enjoyed...Basavraj uncle is living that and is an inspiration...Well written article..

Narayan said...

Very good blog..
Basavaraj Uncle an inspiring personality..