Saturday, June 24, 2023

ಸತೀಸ ಹಾಗೂ ಇತರೆ ಹೆಸರಿನ ಅವಾಂತರಗಳು

    ಇದು ನನಗಿರುವ ಅನೇಕ ಹೆಸರುಗಳಿಂದಾದ ಅವಾಂತರಗಳ ಸರಮಾಲೆಯ ಕಥೆ. ಆಂಧ್ರಪ್ರದೇಶದ ಅಥವಾ ತಮಿಳುನಾಡಿನ ಜನರ ಉದ್ದುದ್ದ ಹೆಸರುಗಳ ಕಥೆಯನ್ನು ಕೇಳಿ ನಗುತ್ತಿದ್ದ ನನಗೂ ಅದೇ ಪರಿಸ್ಥಿತಿ ಬಂದು ನನ್ನ ಕುರಿತೇ ನಾನು ನಗುವಂತಾಯಿತು.


೧) ಸತೀಸ : ಇದು ನನ್ನ ಜನನ ದಾಖಲಾತಿಯ ಹೆಸರು !!! ನಾನು ಹುಟ್ಟಿದಾಗ ತಾಲೂಕು ಆಫೀಸ್ನಲ್ಲಿ ನನ್ನ ಹೆಸರನ್ನು ಬರೆಯಿಸಿದವರು ಯಾರೋ... ಬರೆದ ಸರಕಾರೀ ನೌಕರ, ಪುಣ್ಯಾತ್ಮ ಯಾರೋ ಗೊತ್ತಿಲ್ಲ... "ಸತೀಶ" ಬದಲಿಗೆ "ಸತೀಸ" ಎಂದು ನನ್ನ Birth certificate ಹೆಸರು ಆಯಿತು.


೨) M.R.ಸತೀಶ : ಇದು ನನ್ನ ೧ ರಿಂದ ೧೦ ನೇ ತರಗತಿ ವರೆಗಿನ ಶಾಲೆಯ ದಾಖಲಾತಿ ಹೆಸರು. M ಅಂದರೆ ಮಳಲಗಾಂವ (ನನ್ನೂರು), R - ರಾಮಕೃಷ್ಣ (ನನ್ನ ತಂದೆಯವರ ಹೆಸರು) .. ಹೀಗೆ MR ಎಂದು ಸೇರ್ಪಡೆ ಆಯಿತು. ಈ ರೀತಿ ಹೆಸರುಗಳು ತುಂಬಾ catchy ಇರುತ್ತದೆ ಎಂದೋ ಏನೋ, ಮಳಲಗಾಂವ್ ಶಾಲೆಯ ಕಿಷೋರ್ ಸರ್ ಹೀಗೆ ನನ್ನ ನಾಮಕರಣವನ್ನು ಮಾಡಿದರು. 


೩) ಸತೀಶ MR : ೧೦ನೇ ತರಗತಿಯ ಕೊನೆಯಲ್ಲಿ, ಮುಖ್ಯೋಪಾಧ್ಯಾಯರು ನನ್ನನ್ನು ಕರೆದು, "ನೋಡು... ನಿನ್ನ ಹೆಸರಿನಿಂದ ತುಂಬ ಅವಾಂತರಗಳು ಆಗಬಹುದು" ಎಂದು ಭವಿಷ್ಯ ನುಡಿದು, "MR ಸತೀಶ" -->  "ಸತೀಶ MR" ಎಂದು ಮಾಡಿದರು. ಇದು ೧೦ ನೇ ತರಗತಿ ನಂತರದ ಎಲ್ಲ ಕಾಲೇಜಿನಲ್ಲಿನ ಹೆಸರು.


೪) ಸತೀಶ ಮಳಲಗಾಂವ ರಾಮಕೃಷ್ಣ : ಇದು ನನ್ನ ಇತ್ತೀಚಿನ ಹೆಸರು. ಪಾಸ್-ಪೋರ್ಟ್ ಇತ್ಯಾದಿಗಳಲ್ಲಿ, ಕೇವಲ MR ಎಂದು ನಮೂದಿಸುವದು ಸಾಧ್ಯವಿಲ್ಲದ್ದರಿಂದ, ನನ್ನ ಹೆಸರು ವಿಸ್ತಾರವಾಯಿತು.  ಇದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮೊದಲ ಹೆಸರು - "ಸತೀಶ" .. ಕೊನೆಯ ಹೆಸರು - "ಮಳಲಗಾಂವ ರಾಮಕೃಷ್ಣ" ಎಂದಾಯಿತು !!!


ಇದರ ನಂತರ ಅನೇಕ ವಿಚಿತ್ರ ಸಂದರ್ಭಗಳು ಎದುರಾಗತೊಡಗಿದವು... ನಾನು ವಿದೇಶದಲ್ಲಿ ಇದ್ದಾಗ, ಅಲ್ಲಿನ ಸಂಪ್ರದಾಯದಂತೆ, ಕೊನೆಯ ಹೆಸರನ್ನು ಕರೆಯಲು ಹೋಗಿ, ಅಲ್ಲಿನ ಜನರಿಗೆ ಸರಿಯಾಗಿ "ಮಳಲಗಾಂವ ರಾಮಕೃಷ್ಣ" ಎಂದು ಹೇಳಲಾಗದೇ,

"ಮಿಸ್ಟರ್ ಮಳಲ್" 

"ಮಿಸ್ಟರ್ ಮಳಲಲ್" 

"ಮಿಸ್ಟರ್ ಮಳಲ್ ರಾಮಾ" 

"ಮಿಸ್ಟರ್ ಮಳ್ ರಾಮ್ ಸತೀಶ್"

     ಎಂದಿತ್ಯಾದಿ ಹೆಸರುಗಳಿಂದ ನನ್ನನ್ನು ಕರೆಯುತ್ತಿದ್ದರು :) ನನ್ನ ಊರಿನ ಹೆಸರು ಹೇಳಲಾಗದೇ, ಕೆಲವೊಂದು ಕಡೆ "ಸತೀಶ್ M ರಾಮಕೃಷ್ಣ" ಎಂದು ಬರೆದರು. ನನ್ನ ಕೊನೆಯ ಹೆಸರಿನಲ್ಲಿ 2 ಹೆಸರುಗಳಿಂದ ಇದ್ದಿದ್ದರಿಂದ, ಎಷ್ಟೋ ಕಡೆ documents/form ತಂಬಿಸುವಾಗ, ಜಾಗದ ಅಭಾವವಾಗಿ ... MalalaganvRamakr, MalalaganvR ಎಂದೆಲ್ಲಾ ಎನೇನೋ ತುಂಬಿದ್ದಿದೆ. ಇನ್ನು ಬ್ಯಾಂಕುಗಳಲ್ಲಿ, PAN ಕಾರ್ಡಿನಲ್ಲಿ, ಹೀಗೆಲ್ಲಾ ಅವರಿಗೆ ಬೇಕಾದಂತೆ ಹೆಸರನ್ನು ಉದ್ದಗಿಡ್ಡ ಮಾಡಿ ಬರೆದಿದ್ದೂ, ಕರೆದಿದ್ದೂ ಆಗಿ ಕಥೆ ಮುಂದುವರೆಯುತ್ತಾ ಹೋಯಿತು...  

    ಅನೇಕ ಹೆಸರುಗಳಿಂದ ಸುಸ್ತಾಗಿ, ನನ್ನ ಹೆಸರಿನಿಂದ ಊರ ಹೆಸರಾದ 'ಮಳಲಗಾಂವ್'ನ್ನು ತೆಗೆದು, ಹೆಸರನ್ನು "ಸತೀಶ ರಾಮಕೃಷ್ಣ" ಎಂದು ಮರುನಾಮಕರಣ ಮಾಡೋಣ... ಎಂಬ ಉಪಾಯ ಬಂತು... 

    ಜನನ ದಾಖಲಾತಿ ಆಫೀಸಿನಲ್ಲಿ ಹೆಸರು ಬದಲಾಯಿಸಲು ಕೇಳಿದರೆ, "ನಮಗೆ ಹೆಸರನ್ನು ಬದಲಾವಣೆ ಮಾಡುವ ಅಧಿಕಾರ ಇಲ್ಲ, ಹೊಸ ಹೆಸರಿಗೆ court order ಆಗಬೇಕು" ಎಂದರು...  ನನ್ನ ವಕೀಲರು procedure ಪ್ರಕಾರ ಕೋರ್ಟ್ ನಲ್ಲಿ ನನ್ನ ಹೆಸರನ್ನು ಬದಲಾಯಿಸಲು ದಾವೆ ಹೂಡಿದರು... ನನ್ನ ಹೆಸರು ಎಲ್ಲೆಲ್ಲಿ ಸರಕಾರೀ ಕಡತಗಳಲ್ಲಿ ಬದಲಾಗಬೇಕೋ ಅವರುಗಳಿಗೆಲ್ಲ ನೋಟೀಸ್ ಕೊಟ್ಟರು... procedure ಪ್ರಕಾರ, ನನ್ನ ದಾವೆ ಯನ್ನು ವಿರೋಧಿಸಲು, ಒಬ್ಬ ಪ್ರತಿವಾದಿ ಸರ್ಕಾರೀ ವಕೀಲರು ನೇಮಕಗೊಂಡರು.

    8 ತಿಂಗಳ ನಂತರ, ನಮ್ಮ ದಾವೆಗೆ ದಿನಾಂಕ ಕೂಡಿಬಂದು, ಕೋರ್ಟ್ ಗೆ ಹಾಜರಾತಿ ನೀಡಲು ಹೋದೆ. ಕಟಕಟೆಯಲ್ಲಿ ನಿಂತು "ಸತ್ಯವನ್ನೇ ಹೇಳುತ್ತೇನೆ, ನಾನು ಹೇಳುವದೆಲ್ಲಾ ಸತ್ಯ" ಎಂದು ಆಣೆ ಮಾಡಿದೆ. ನನಗೆ ಇದೆಲ್ಲ ಮೊದಲ ಅನುಭವ! ... ನನ್ನ ದಾವೆಯ ವಿಚಾರಗಳನ್ನು, ಎಲ್ಲಾ ದಾಖಲಾತಿಗಳನ್ನು ಜಡ್ಜ್ ಸರಿಯಾಗಿ ನೋಡಿದರು. ನಮ್ಮ ಅಹವಾಲನ್ನು ಕೇಳಿದರು.

     ಇನ್ನೇನು ನನಗೆ ಹೊಸ ಹೆಸರು ನೀಡಲು ಜಡ್ಜ್ ಮೆಂಟ್ ಕೊಡಬೇಕು ಅನ್ನುವಷ್ಟರಲ್ಲಿ...ಪ್ರತಿವಾದಿ ವಕೀಲ ಎದ್ದು ನಿಂತು... "ಇದಕ್ಕೆ ನನ್ನ ಆಕ್ಷೇಪ ಇದೆ ಯುವರ್ ಹಾನರ್".. ಎನ್ನುತ್ತಾ ತನ್ನ ವರಸೆ ಆರಂಭಿಸಿದ....  ನನ್ನ ಹೆಸರು ನಾನು ಬದಲಾಯಿಸಿಕೊಳ್ಳಲೂ ಪ್ರತಿವಾದಿತ್ವ ಇರುವುದೇ ಎಂದು ಅನ್ನಿಸಿತು !!! 

    ಪ್ರತಿವಾದಿ ವಕೀಲ ನನ್ನ ಹೆಸರಿನ ಬಗ್ಗೆ ಸರಿಯಾಗಿಯೇ ಅಧ್ಯಯನ ಮಾಡಿಯೇ ಬಂದಿದ್ದ. ಅನೇಕ ವಿಚಿತ್ರ ಪ್ರಶ್ನೆಗಳನ್ನು ನನಗೆ ಹಾಕಿ, ನನ್ನ ಹೆಸರಿನ ಮೂಲಗಳನ್ನು ತಿಳಿದುಕೊಂಡ. 

ವಕೀಲ - "೧೦ನೇ ತರಗತಿಯಲ್ಲಿ -ಸತೀಶ್ MR ಎಂದು ಅರ್ಜಿಗೆ ನೀವೇ ಸಹಿ ಹಾಕಿದ್ದೀರೋ?"

ನಾನು - "ನನ್ನಿಂದಲೇ ಹಾಕಿಸಿರಬಹುದು, ನೆನಪಿಲ್ಲ, 20 ವರ್ಷದ ಹಿಂದೆ ಮಾಡಿದ್ದು"

ವಕೀಲ - "ಅಧಾರ್ ಹಾಗೂ ಪಾಸ್ ಪೋರ್ಟಿನಲ್ಲಿ ಹೇಗೆ 'ಸತೀಶ ಮಳಲಗಾಂವ ರಾಮಕೃಷ್ಣ' ಎಂದಾಯಿತು?"

ನಾನು - "ಅವರು MR ಅನ್ನು ವಿಸ್ತರಿಸಿ ಬರೆದರು .. ಪಾಸ್ ಪೋರ್ಟಿನವರು short form ನಲ್ಲಿ ಹೆಸರು ಬರೆಯುವದಿಲ್ಲ"

ಹೀಗೇ ... ವಾದ ಪ್ರತಿವಾದ ಮುಂದುವರೆಯುತ್ತಾ ಹೋಯಿತು ... ಆದರೆ ಪ್ರತಿವಾದಿ ವಕೀಲ ಆವತ್ತು ಎಲ್ಲಿಯದೋ ... ಯಾರದ್ದೋ... ಸಿಟ್ಟನ್ನು ನನ್ನ ಮೇಲೇ ಹಾಕಿದಂತಿತ್ತು :)


ವಕೀಲ - "ಇಲ್ಲ ನೀವು ಆಧಾರ್ ಹಾಗೂ ಪಾಸ್ ಪೋರ್ಟ್ ಅಧಿಕಾರಿಗಳ ಜೊತೆ ಶಾಮೀಲಾಗಿ, ನಿಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದೀರಿ"

ನಾನು - (ದಂಗುಬಡಿದು) .."ಇಲ್ಲ ಇಲ್ಲ.. ಅವರು ನನ್ನ ಹೆಸರನ್ನು ವಿಸ್ತರಿಸಿದ್ದಾರೆ ಅಷ್ಟೇ.. ಬದಲಾಯಿಸಿಲ್ಲ"

ವಕೀಲ - "ಇಷ್ಟು ವರ್ಷ ಈಗಿರುವ ಹೆಸರಿನಿಂದ ಎಲ್ಲ ಸರಕಾರೀ ಸವಲತ್ತು ಗಳನ್ನು ಪಡೆದು, ಈಗ ಹೆಸರು ಬದಲಾಯಿಸಲು ಏಕೆ ಪ್ರಯತ್ನ ಪಡುತ್ತಾ ಇದ್ದೀರಿ.. ಇದರಲ್ಲಿ ಏನೋ ದುರಾಲೋಚನೆ ಇದೆ"

ನಾನು - "ಇಲ್ಲ, ಖಂಡಿತ ಏನೂ ದುರಾಲೋಚನೆ ಇಲ್ಲ..."

ವಕೀಲ - "ಇಲ್ಲ ಇದರಲ್ಲಿ ಏನೋ ಮಸಲತ್ತು ಇದೆ... ಇವರ ನಿಜವಾದ ಹೆಸರು 'ಸತೀಶ್ MR' .. ಅದನ್ನು ಬದಲಾಯಿಸಬಾರದು.... ಅಷ್ಟರಲ್ಲೂ ಕೋರ್ಟಿನಲ್ಲಿ ದಾವೆ ಹೂಡಿ, ನಮ್ಮೆಲ್ಲರ ಸಮಯವನ್ನು ಹಾಳು ಮಾಡಿದ್ದಕ್ಕೆ ದಂಡ ವಿಧಿಸಬೇಕು" !!!

ನಾನು -- "...." ... ಮೌನವಾಗಿಬಿಟ್ಟೆ... ಸುಮ್ಮನೆ ಜಡ್ಜ್ ಮುಖವನ್ನು ನೋಡಿ ಅಸಹಾಯಕನಾಗಿ ನಿಂತೆ!!!

ಜಡ್ಜ್ ಗೆ ನನ್ನ ಪರಿಸ್ಥಿತಿಯ ಅರಿವಾಗಿ -- "ಈ ವಾದಕ್ಕೆ ನಮ್ಮ ಒಪ್ಪಿಗೆ ಇಲ್ಲ ಅಂತ ವಾದಿ ಹೇಳ್ತಾ ಇದಾರೆ ಅಂತಾ ಬರ್ಕೋಳ್ರಿ" ಎಂದು ಟೈಪಿಂಗ್ ಅಸಿಸ್ಟಂಟ್ ಗೆ ಹೇಳಿದರು.

ಮಾನ್ಯ ಕೋರ್ಟ್... ಪ್ರತಿವಾದಿಗಳ ವಾದವನ್ನು ಆಲಿಸಲು ದಾವೆಯನ್ನು ಮತ್ತೊಂದು ತಿಂಗಳಿಗೆ ಮುಂದೂಡಿತು...

(ಮುಂದುವರಿಯುವದು...) 




     

Saturday, March 7, 2020

ಅಜ್ಜ ಹೇಳಿದ ಹುಲಿಯಪ್ಪನ ಕಥೆ

೧೯೫೦ ರ ಆಸುಪಾಸು ಇರಬಹುದು.  ನನ್ನ ಆಜ್ಜ ಹೇಳುತ್ತಿದ್ದ ಅವರು ಪ್ರಾಯಕಾಲದಲ್ಲಿರುವಾಗಿನ ಕಥೆ.

ಅಜ್ಜ ಯಲ್ಲಾಪುರದಿಂದ ಮನೆಗೆ ನಡೆದು ಬರುತ್ತಾ ಇದ್ದರಂತೆ. ನಮ್ಮೂರಿನ ದಟ್ಟವಾದ ನಿತ್ಯಹರಿದ್ವರ್ಣ ಕಾಡಿನಲ್ಲಿ ಹುಲಿಗಳು ಹೇರಳವಾಗಿದ್ದ ಕಾಲ ಅದು. ಮನೆಯ ಹತ್ತಿರದ ಗೋಳಿಕಾನಿನ ಹತ್ತಿರ ನಡೆದು ಬರುತ್ತಿರುವಾಗ, ಅಜ್ಜನ ಎದುರಿಗೇ ಹದಿನಾರು ಮೆಟ್ಟಿನ ಹುಲಿಯೊಂದು  ಗಾಂಭೀರ್ಯದಿಂದ ಕಾಡಿನ ಒಂದು ಕಡೆಯಿಂದ ರಸ್ತೆಗೆ ಇಳಿದು, ರಸ್ತೆಯನ್ನು ದಾಟಿ, ಮತ್ತೆ ಆತ್ತಕಡೆಯ ಕಾಡಿನೊಳಗೆ ಹೊಕ್ಕು ಹೊರಟು ಹೋಯಿತಂತೆ.... ಕಾಡಿನಲ್ಲಿಯೇ ಮನೆ ಮಾಡಿದ್ದರೂ ಅಷ್ಟು ದೊಡ್ಡ ಹುಲಿಯನ್ನು ಅಲ್ಲಿಯವರೆಗೆ ಅತಿ ಹತ್ತಿರದಲ್ಲಿ ಒಬ್ಬಂಟಿಯಾಗಿ ನೋಡಿರದಿದ್ದ ನನ್ನ ಅಜ್ಜ ಹಾಗೆಯೇ ಗರಬಡಿದು ಹೋದರಂತೆ. ಹೆದರಿ ಮನೆಗೆ ಬಂದು ಜ್ವರದಿಂದ ಮಲಗಿದವರು ಸುಧಾರಿಸಿಕೊಳ್ಳಲು ನಾಲ್ಕು ದಿನವಾದರೂ ಬೇಕಾಯಿತಂತೆ. !!!





ಶಿರಿ ಚಿಕ್ಕಪ್ಪ ಇನ್ನೊಂದು ಕಥೆ ಹೇಳಿದ. ಅಜ್ಜನ ಅಪ್ಪ - ದೊಡ್ಡಜ್ಜನ ಕಥೆ.

ಇದು ಇನ್ನೂ ಹಳೆಯ ಕಾಲದ ಕಥೆ.

ಅಡಿಕೆ ಕೆಲಸಕ್ಕೆ ಮನೆಗೆ ಬಂದಿದ್ದ ಆಳುಗಳು, ದೊಡ್ಡಜ್ಜನ ಹತ್ತಿರ, ಹುಲಿದೇವರ ಪೂಜಿಸುವದರ ಬಗ್ಗೆ ಅಪಹಾಸ್ಯ ಮಾಡಿದರಂತೆ. ಆಗ ದೊಡ್ಡಜ್ಜನಿಗೆ ಅಸಾಧ್ಯ ಸಿಟ್ಟು ಬಂದು, 'ನಿಮಗೆಲ್ಲಾ ಒಂದು ಬುದ್ದಿ ಕಲಿಸುತ್ತೇನೆ ' ಎಂದು ಹೇಳುತ್ತಾ ಒಳಗೆ ಹೋಗಿ ಹುಲಿದೇವರ ಪ್ರಾರ್ಥನೆ ಮಾಡುವಷ್ಟರಲ್ಲಿ,  ನಮ್ಮ ಮನೆಯ ಹತ್ತಿರ ತೋಟದ ಆಚೆ ಕಾಡಿನಲ್ಲಿ ಹುಲಿಯೊಂದು ಭಯಾನಕವಾಗಿ ಘರ್ಜಿಸಲು ಶುರು ಮಾಡಿತಂತೆ. ಆಗ ಹುಲಿದೇವರ ಬಗ್ಗೆ ಅಪಹಾಸ್ಯ ಮಾಡಿದ್ದ ಆಳುಗಳು ಹೆದರಿ ಕಂಗಾಲಾಗಿ, ದೊಡ್ಡಜ್ಜನ ಹತ್ತಿರ ತಾವು ಮಾಡಿದ್ದು ತಪ್ಪಾಯಿತೆಂದು ಅಂಗಲಾಚಿ ಕ್ಷಮೆ ಕೋರಿದ ನಂತರ, ದೊಡ್ಡಜ್ಜ ಮತ್ತೆ ಹುಲಿದೇವರ ಪ್ರಾರ್ಥನೆ ಮಾಡಿದರಂತೆ. ಆಗ ದೊಡ್ಡಜ್ಜನ ಮಂತ್ರಶಕ್ತಿ ಹಾಗೂ ಭಕ್ತಿಯಿಂದ ಸಂಪ್ರೀತವಾಗಿ ಆ ಹುಲಿ ಮತ್ತೆ ಕಾಡಿಗೆ ತೆರಳಿತಂತೆ.  !!!



ನಾವು ಚಿಕ್ಕವರಿದ್ದಾಗ ಈ ಕಥೆಗಳನ್ನು ಕೇಳಿ ತುಂಬಾ ರೋಮಾಂಚನ ಪಡುತ್ತಿದ್ದೆವು. ಕಾಡಿನ ದಾರಿಯಲ್ಲಿ ಶಾಲೆಗೆ ಒಬ್ಬಂಟಿಯಾಗಿ ನಡೆದು ಹೋಗುತ್ತಿರುವಾಗ ಭಯವಾದರೆ ಹುಲಿದೇವರ ಪ್ರಾರ್ಥನೆ ಮಾಡುತ್ತಿದ್ದೆವು. ಅಜ್ಜನ ಹತ್ತಿರ - "ನೀನು ಎಷ್ಟು ಹುಲಿ ನೋಡಿದ್ದೆ?"  ಎಂದು ಕೇಳಿದಾಗ, ಬೇರೆ ಬೇರೆ ಜಾಗಗಳಲ್ಲಿ ಹೇಗೆ ಆತನಿಗೆ ಹುಲಿ ಎದುರಾಗಿತ್ತು ಎಂಬ ಕಥೆಗಳನ್ನು ಹೇಳುತ್ತಿದ್ದ. !!!

ನಮ್ಮೂರಿನಲ್ಲಿ ಹುಲಿಯನ್ನು ಗ್ರಾಮದೇವತೆ ಎಂದು ಪೂಜಿಸುತ್ತಾರೆ.  ಊರಿನ ಜನ, ದನಕರು ಎಲ್ಲರಿಗೂ ಹುಲಿದೇವರ ರಕ್ಷೆ ಸಿಗಲಿ ಎಂಬುದೇ ಆಶಯ. ಊರಿನ ಹಾಗೂ ಸುತ್ತಲಿನ ಊರಿನ ಜನರೆಲ್ಲ ವರ್ಷಕ್ಕೆ ಎರಡು ಬಾರಿ ತಪ್ಪದೇ  ಹುಲಿಯಪ್ಪನ ಪೂಜೆ (ಹುಲಿಹಬ್ಬ) ಮಾಡುತ್ತಾರೆ. ಕಾಡಿನಲ್ಲೇ ಹುಲಿದೇವರ ಸಾನ್ನಿಧ್ಯದಲ್ಲಿ ಅಡುಗೆ ಮಾಡಿ ವನಭೋಜನ ಮಾಡುತ್ತಾರೆ. ತಲೆತಲಾಂತರದಿಂದ ಪೂಜೆ ಹಾಗೂ ಆಚರಣೆ ಮಾಡಿಕೊಂಡು ಬಂದ ಸಂಪ್ರದಾಯ ಹಾಗೇ ಮುಂದುವರಿಯಲಿ ಎಂಬುದೇ ಎಲ್ಲರ ಆಶಯ.




ಮೊನ್ನೆ ಊರಿಗೆ ಬಂದಾಗ ಪುಟಾಣಿ ಸ್ವರಾಳಿಗೆ ಹುಲಿದೇವರ ಹಾಗೂ ಅಜ್ಜನ ಕಥೆ ಹೇಳಿದೆ. ಅವಳು ಭಕ್ತಿಯಿಂದ ಕೈ ಮುಗಿದು - "ನಮ್ಮನ್ನೆಲ್ಲಾ ಕಾಪಾಡಪ್ಪಾ..ಹುಲಿಯಪ್ಪಾ" ಎಂದು  ಮುಗ್ಧವಾಗಿ ನಮಸ್ಕಾರ ಮಾಡಿದಳು !!!


Saturday, September 5, 2015

ನಾಕುದಾರಿಯಲ್ಲೊಂದು ಮರದ ಕಥೆ

ದಟ್ಟನೆಯ ಎತ್ತರೆತ್ತರದ ಮರಗಳ ಕಾಡು, ಅದರ ಜೊತೆಗೂಡಿದ ಜಲಪಾತಗಳ ಸೊಬಗು... ಪರಿಶುದ್ಧ ಗಾಳಿ... ಮಳೆಗಾಲದ ಎಡೆಯಿಲ್ಲದ ಮಳೆ... ಮಲೆನಾಡಿನ ಮಡಿಲಲ್ಲಿರುವ ನಮ್ಮ ಊರಿನ ನಿತ್ಯಹರಿದ್ವರ್ಣ ಕಾಡಿನ ವರ್ಣನೆ ಮಾಡುತ್ತಾ ಹೊರಟರೆ ಅದಕ್ಕೆ ಕೊನೆಯಿಲ್ಲ.

ದುರಾದೃಷ್ಟವೆಂದರೆ ಮರಗಳ್ಳರ ಕಾಟ ನಮ್ಮೂರನ್ನೂ ಬಿಟ್ಟಿಲ್ಲ. ಫಾರೆಸ್ಟನ ಕಣ್ಣು ತಪ್ಪಿಸಿ ಮರಗಳಿಗೆ ಬೆಂಕಿ ಹಚ್ಚಿ ಬೀಳಿಸಿ, ನಂತರ ಉಳಿದ ಮರವನ್ನು ಕಡಿದು ಸಾಗಿಸುವದು ಸಾಮಾನ್ಯ. ಮಾವಿನ ಮರದ ಕಾಯಿ ಬೇಕೆಂದರೆ ಬುಡಗೂಡಿ ಮರವನ್ನೇ ಕಡಿಯುವುದೂ, ರಾತ್ರೋರಾತ್ರಿ ಮನೆಯಂಗಳಕ್ಕೇ ನುಗ್ಗಿ ಗಂಧದ ಮರವನ್ನು ಕಡಿದು ಸಾಗಿಸುವದೂ, ಬೀಟೆ ತೇಗದ ಮರಗಳ ಕಳ್ಳತನಗಳೂ, ಇವೆಲ್ಲ ನಿರಂತರವಾಗಿ ನಡೇದೇ ಇರುವ ಅವಾಂತರಗಳು.

ನಾಕುದಾರಿ ಎಂಬಲ್ಲಿ ನಮ್ಮ ಊರಿನ ಕಾಡುದಾರಿ ಬೇರೆಬೇರೆ ಮನೆಗಳಿಗೆ ಹೋಗಲು ಕವಲೊಡೆಯುತ್ತದೆ. ಹಾಗೆಯೇ ಕನ್ನಡ ಶಾಲೆಯ ಮಕ್ಕಳೆಲ್ಲ ನಾವೊಂದು ದಿನ ಮಳಲಗಾಂವ ಶಾಲೆಯಿಂದ ಸಂಜೆ ಕಾಡುದಾರಿಯಲ್ಲಿ ಮನೆಗೆ ನಡೆದು ಬರುತ್ತಿದ್ದೆವು. ಯಾವ ಕಾರಣಕ್ಕೋ ಏನೋ, ದಾರಿಯ ಪಕ್ಕದಲ್ಲಿನ ಒಂದು ಬಹು ಎತ್ತರದ ದಪ್ಪನೆಯ ಮರದ ಬುಡಕ್ಕೆ ಬೆಂಕಿ ಹೊತ್ತಿತ್ತು. ತುಂಬಾ ಎತ್ತರವಿದ್ದ ಆ ಮರ ಸುಮಾರು  300 ವರ್ಷ ಹಳೆಯದೇ ಇದ್ದಿರಬಹುದು. ಯಾರೋ ಮರಗಳ್ಳರು ಬೇಕೆಂದೇ ಬೆಂಕಿ ಹಚ್ಚಿದ್ದು ಸ್ಪಷ್ಟವಾಗಿತ್ತು. ಅದನ್ನು ನೋಡಿ ಏನಾದರೂ ಮಾಡಲೇಬೇಕೆಂದು ಎಲ್ಲಾ ಮಕ್ಕಳೂ ಮನೆಗೆ ಕಿತ್ತಾಬಿದ್ದು ಓಡಿದೆವು.

ನಮ್ಮ ಮನೆಯ ವಿಶ್ವಣ್ಣ ನಮ್ಮೂರಿಗೇ ಹೆಸರಾಂತ ಪರಿಸರಪ್ರೇಮಿ. ಯಾರಾದರೂ ಒಂದು ಚಿಕ್ಕ ಗಿಡವನ್ನು ಕಡಿದರೂ ಸರಿ, ಅವರಿಗೆ ಪರಿಸರದ ಬಗ್ಗೆ, ಮರಗಳ ಸಂರಕ್ಷಣೆಯ ಬಗ್ಗೆ ತಿಳಿಸಿ,ಮನವೊಲಿಸಿ, ಮತ್ತೊಮ್ಮೆ ಹಾಗಾಗದಂತೆ ನೋಡಿಕೊಳ್ಳುತ್ತಾನೆ.

ನಾನು ಓಡೋಡಿ ಮನೆಗೆ ಬಂದವನೇ, "ವಿಶ್ವಣ್ಣಾ, ಯಾರೋ ನಾಕುದಾರಿಯ ದೊಡ್ಡ ಮರಕ್ಕೆ ಬೆಂಕಿ ಹಚ್ಚಿದ್ದ... ಎಂಥಾ ಮಾಡವೋ..." ಎಂದು ಕೇಳಿದೆ. ಕೂಡಲೇ ವಿಶ್ವಣ್ಣ ಎಂದಿನಂತೆ ಸಟಕ್ಕನೇ ಒಂದು ಉಪಾಯ ಹೂಡಿದ. ಮನೆಯಿಂದ ಸುಮಾರು ಅರ್ಧ ಕಿಮಿ ದೂರದಲ್ಲಿನ ಕಾಡಿನ ಬೆಂಕಿಯನ್ನು ಆರಿಸುವುದು ಸುಲಭದ ಕೆಲಸವಾಗಿರಲಿಲ್ಲ. ಮನೆಯಲ್ಲಿದ್ದ ಟ್ರಾಕ್ಟರಿನ ಟ್ರಾಲಿಯಲ್ಲಿ ಒಂದು ದೊಡ್ಡ ನೀರಿನ ಹಂಡೆಯನ್ನು ತಂದು ಕೂಡಿಸಿದೆವು. ದನದ ಕೊಟ್ಟಿಗೆಯಿಂದ ನೀರಿನ ಹಂಡೆಯಲ್ಲಿ ನೀರು ತುಂಬಿಸಿ, ಇಬ್ಬರೂ ಟ್ರಾಕ್ಟರಿನಲ್ಲಿ ನಾಕುದಾರಿಯ ಕಡೆಗೆ ಹೊರಟೆವು.

ಒಂದೇ ಹಂಡೆಯ ನೀರು ಸಾಲದೇ ಇನ್ನೂ ಎರಡು ಸಲ ದನದ ಕೊಟ್ಟಿಗೆಗೆ ನೀರು ತರಲು ಟ್ರಾಕ್ಟರಿನಲ್ಲಿ ತಿರುಗಿದೆವು. ಸುಮಾರು ಹೊತ್ತು ಸತತವಾಗಿ 3 ಹಂಡೆಯ ನೀರನ್ನು ಉರಿಯುತ್ತಿದ್ದ ಮರದ ಬುಡಕ್ಕೆ ಹಾಕಿ, ಅಂತೂ ಬೆಂಕಿಯನ್ನು ನಂದಿಸಿದೆವು. ಆವತ್ತಿಗೆ ನಾವು ಆ ಮರದ ಬೆಂಕಿಯನ್ನು ಆರಿಸಿರದಿದ್ದರೆ, ಉರಿಯುತ್ತಿದ್ದ ಬೆಂಕಿ ಕಾಳ್ಗಿಚ್ಚಾಗಿ ಹಬ್ಬಿ ಎಷ್ಟು ಮರಗಳನ್ನು ಸುಡುತ್ತಿತ್ತೋ ಏನೋ...

ಇಂದಿಗೂ ನಮ್ಮೂರಿಗೆ ಹೋಗುವಾಗ ಆ ಮರ ಕಾಣುತ್ತದೆ. ನಾನು ವಿಶ್ವಣ್ಣ ಒಟ್ಟಿಗೇ ಇದ್ದರಂತೂ ಆ ಮರದ ಬಳಿ ನಿಂತು, ಆ ದಿನದ ನಮ್ಮ ಟ್ರಾಕ್ಟರಿನ ಸಾಹಸವನ್ನು ನೆನೆಸಿಕೊಳ್ಳುತ್ತೇವೆ.

ಇಂಥ ಸಾವಿರಾರು ಗಿಡ ಮರಗಳು ನಮಗಿಂದು ಉಸಿರಾಡುವ ಗಾಳಿಯನ್ನೂ - ಬದುಕನ್ನೂ ನೀಡಿವೆ. ಆದರೆ ನಾವೆಷ್ಟು ಅವಕ್ಕೆ ಮರಳಿ ನೀಡಿದ್ದೇವೆ...?

Saturday, December 20, 2014

ಪಲಾವ್ ಮಹಾತ್ಮೆ

ಈ ಪಲಾವನ್ನು ಯಾರು ಮೊದಲಿಗೆ ಕಂಡುಹಿಡಿದರೋ ಗೊತ್ತಿಲ್ಲ. ಅವರಿಗೆ ಪುಣ್ಯ ಬರಲಿ ಎಂದು ಆಶಿಸುತ್ತೇನೆ. ಏಕೆಂದರೆ ನಮ್ಮಂಥಹ ಅರೆಬರೆ ಬಾಣಸಿಗರ ಹೊಟ್ಟೆಯ ಹಸಿವನ್ನು ನೀಗಿಸುತ್ತಿದೆಯಲ್ಲವೇ ಈ ಪಲಾವ್ ಎಂಬ ಮಹಾನ್ ಅಡುಗೆ. !!!

ಮೊದಲಿಗೆ ಕಾಲೇಜಿನ ದಿನಗಳಲ್ಲಿ ನಾನು ಅಡುಗೆ ಮಾಡಲು ಶುರು ಮಾಡಿದಾಗ ಸಾರು, ಹುಳಿ, ತಂಬುಳಿ, ಗೊಜ್ಜು, ಪಲ್ಯ ಇತ್ಯಾದಿ ಇತ್ಯಾದಿ ಕ್ಲಿಷ್ಟಕರವಾದ ಅಡುಗೆಗಳನ್ನು ತಯಾರಿಸಲು ಪ್ರಯತ್ನಪಡುತ್ತಾ ಕೈಸುಟ್ಟುಕೊಳ್ಳುತ್ತಿದ್ದೆ. ನನ್ನ ದುರಾದೃಷ್ಟವೋ ಏನೋ, ನನ್ನ ಹಸ್ತದಲ್ಲಿ ನಳರೇಖೆ ಇಲ್ಲ ಎಂಬುದು ಬರಬರುತ್ತಾ ನನಗೇ ಅರಿವಾಗತೊಡಗಿತು. ಒಂದು ದಿನ ಅಡುಗೆಯಲ್ಲಿ ಉಪ್ಪು ಜಾಸ್ತಿ ಆದರೆ ಇನ್ನೊಂದು ದಿನ ಹುಳಿ ಕಡಿಮೆ ಆಗುತ್ತಿತ್ತು. ದಿನವೂ ಒಂದೇ ಕ್ವಾಲಿಟಿಯ ಅಡುಗೆ ಮಾಡುವದು ನನ್ನಿಂದ ಸಾಧ್ಯವಿಲ್ಲದ ಕೆಲಸ ಎಂಬುದು ಅರಿವಾಗತೊಡಗಿತು. ಮೊದಮೊದಲಿಗೆ ನನ್ನ ಅಡುಗೆ ಪ್ರಯತ್ನಗಳು ಶುರುವಾದಾಗ ರೂಮಿಗೆ ಊಟಕ್ಕೆಂದು ಧಾಳಿ ಇಡುತ್ತಿದ್ದ ಗೆಳೆಯರೂ ನನ್ನ ಅಡುಗೆಯ ರುಚಿಯನ್ನು ಒಂದೆರಡು ಸಲ ಸವಿದಮೇಲೆ ನಿಧಾನವಾಗಿ ಊಟಕ್ಕೆ ಬರುವದನ್ನು ನಿಲ್ಲಿಸಿದರು. ನನಗೂ ನಾನು ಮಾಡಿದ ಅಡುಗೆಯನ್ನೇ ತಿನ್ನುವದೂ ಕಷ್ಟವೆನಿಸತೊಡಗಿತು. ಎಲ್ಲರೂ ಒಗ್ಗರಣೆಗೆ ಹಾಕುವುದು ಅದೇ ಎಣ್ಣೆ, ಸಾಸಿವೆ, ಜೀರಿಗೆ, ಮೆಣಸು...ನಾನು ಹಾಕುವುದೂ ಅದನ್ನೇ...ಆದರೆ ನನ್ನ ಅಡುಗೆ ಯಾಕೆ ರುಚಿ ಆಗುವದಿಲ್ಲ? ಎಂಬುದು ಒಂದು ಯಕ್ಷಪ್ರಶ್ನೆಯಾಗಿ ಕಾಣಿಸುತ್ತಿತ್ತು...ದಿನವೂ ಹೊರಗಡೆ ತಿಂದರೆ ಆರೋಗ್ಯ ಕೆಡುತ್ತದೆ...ಮನೆಯಲ್ಲಿ ಮಾಡಿದ್ದು ತಿನ್ನಲು ರುಚಿಸುವದಿಲ್ಲ...

ಇಂಥಹ ಒಂದು ಇಕ್ಕಟ್ಟಿನ ಸಮಯದಲ್ಲಿ ನನಗೊಂದು ಮ್ಯಾಜಿಕ್ ರೆಸಿಪಿಯ ಅಗತ್ಯವಿತ್ತು... ಅನ್ನವಂತೂ ಊಟದಲ್ಲಿ ಇರಲೇಬೇಕು...ತರಕಾರಿಗಳೂ ಹೇರಳವಾಗಿ ಊಟ ಎಂದರೆ ಇರಲೇಬೇಕು...ಅಡುಗೆ ಸ್ಪೈಸಿಯಾಗೂ ಇರಬೇಕು...ಮಜ್ಜಿಗೆಯ ಜೊತೆಗೂ ತಿನ್ನುವಂತಿರಬೇಕು... ಪ್ರತಿ ಸಲ ಮಾಡಿದಾಗಲೂ ರುಚಿ ಒಂದೇ ಥರವಾಗಿರಬೇಕು...ಹತ್ತೇ ನಿಮಿಷದಲ್ಲಿ ಅಡುಗೆ ಮಾಡಿ ಮುಗಿಯಬೇಕು....

ಅಂಥಾ ಒಂದು ಸಂಧಿಗ್ದ ಪರಿಸ್ಥಿತಿಯಲ್ಲಿ ನನಗೆ ಒಲಿದ ಅಡುಗೆಯೇ ಪಲಾವು....!!!

ನಾನು ಮತ್ತು ದಿನೇಶ ಪುಣೆಯ ಮನೆಯಲ್ಲಿ ವೀಕೆಂಡಿನಲ್ಲಿ ವಿಧವಿಧವಾದ ತರಕಾರಿಗಳನ್ನು ಹಾಕಿ, ವಿಧವಿಧವಾದ ಪಲಾವನ್ನು ತಯಾರಿಸಿ ಸವಿಯುತ್ತಿದ್ದೆವು...ಅವನಂತೂ ನನ್ನ ಅಡುಗೆಯ ಅದರಲ್ಲೂ ಪಲಾವಿನ ರುಚಿಯನ್ನು ಸವಿಸವಿದು ನನ್ನ ಫ್ಯಾನ್ ಆಗಿಬಿಟ್ಟಿದ್ದ...:) ಬೆಂಗಳೂರಿನಲ್ಲಿ ನನ್ನ ರೂಂಮೇಟ್ ಆಗಿದ್ದ ಸುನೀಲನಂತೂ ದಿನವೂ ನಾನು ಮಾಡಿದ ಪಲಾವನ್ನು ತಿಂದೂ ತಿಂದೂ ದಿನಕಳೆದಂತೆ ಸ್ಲಿಮ್ ಆಗುತ್ತಲೇ ಇದ್ದ :)

ನನ್ನ ಮನೆಗೆ ಒಮ್ಮೆ ಗೆಳೆಯ ರಘು ಬಂದಿದ್ದ... ಅತ ಅಡುಗೆಯಲ್ಲಿ ಮಹಾ ನಿಪುಣ.... ಎಂಥಹ ಅಡುಗೆಯನ್ನೂ ಲೀಲಾಜಾಲವಾಗಿ ಮಾಡಬಲ್ಲ. ಆತ ಮಾತ್ರ ನನ್ನ ಪಲಾವಿನ ರುಚಿಯನ್ನು ಸವಿದು "ನಿಂಗೆ ಪಲಾವ್ ಮಾಡ್ಲೇ ಬತ್ಲೆ ವಯಾ...ದೋಸ್ತಾ...ಇದ್ಕೆ ಪಲಾವ್ ಪೌಡರು ಹಾಕವೋ ಮಾರಾಯಾ...ಇಲ್ಲೆ ಅಂದ್ರೆ ಎಂಥಾ ರುಚಿನೂ ಆಗ್ತ್ಲ್ಯೋ..." ಎನ್ನುತ್ತಾ ನಾನು ಮಾಡುತ್ತಿದ್ದ ಪಲಾವಿನ ರೆಸಿಪಿಯನ್ನು ಸಾರಾಸಗಟಾಗಿ ತಿರಸ್ಕರಿಸಿಬಿಟ್ಟ !!! ಅಂದಿನಿಂದಲೇ ನನಗೆ ಅರಿವಿಗೆ ಬಂದಿದ್ದು MTR ಪಲಾವ್ ಪೌಡರಿನ ಮಹಿಮೆ!!!

ಅಂದಿನಿಂದ ಇಂದಿನವರೆಗೂ ನನ್ನ ಗೆಳೆಯರಿಗೆ ಅದ್ಭುತವಾದ ಪಲಾವಿನ ರುಚಿಯನ್ನು ತೋರಿಸಿದ್ದೇನೆ... ಅನೇಕರು ನನ್ನ ಪಲಾವಿನ ರೆಸಿಪಿಯನ್ನು ಕಾಪಿ ಮಾಡಿ ಅದು ಅವರೇ ಕಂಡುಹಿಡಿದ ಪಲಾವಿನ ರೆಸಿಪಿ ಎಂದು ಹೇಳಿಕೊಳ್ಳುತ್ತಾರೆ...

ಒಂದು ದಿನ ನೆಂಟರಿಷ್ಟರೆಲ್ಲಾ ಮನೆಗೆ ಬಂದಾಗ ನಾನು "ಪಲಾವ್" ಮಾಡಿದ್ದೆ...ಬಂದವರಲ್ಲಿ ಗಂಡಸರೆಲ್ಲಾ ನನ್ನ ಪಲಾವ್ ರುಚಿಯನ್ನು ಸವಿದು, ತಮ್ಮ ಹೆಂಡಂದಿರಿಗೆ "ಪಲಾವ್ ಮಾಡಿದ್ರೆ ಹಿಂಗ್ ಮಾಡವು..." ಎಂದು ಹೇಳಿ ನನಗೆ 'ಪಲಾವ್' ಸರ್ಟಿಫಿಕೇಟ್ ಕೊಟ್ಟುಬಿಟ್ಟರು...

ದೂರದ ಅಮೇರಿಕದ ಹೋಟೆಲ್ಲಿನ ಅಡುಗೆ ಮನೆಯಲ್ಲಿ ಮತ್ತೆ ನನ್ನ ಪಲಾವು ಘಮಘಮಿಸುತ್ತಿತ್ತು.... ನನ್ನ ಆರೋಗ್ಯ ಹಾಳಾಗದಂತೆ...ಬಾಯಿರುಚಿ ಎಂದಿಗೂ ಸಪ್ಪೆಯಾಗದಂತೆ...ದಿನವೂ ನನ್ನ ಹೊಟ್ಟೆ ತುಂಬಿಸುತ್ತಿರುವ ಅಮೃತಸಮಾನವಾದ ಪಲಾವಿಗೆ ಈ ಬ್ಲಾಗ್ ಬರಹವನ್ನು ಅರ್ಪಿಸುತ್ತಿದ್ದೇನೆ....

Friday, March 7, 2014

ತಮ್ಮನಲ್ಲದ ತಮ್ಮ

ಇದು ಎಲ್ಲಾ ಕಥೆಗಳಿಗಿಂತ ಸ್ವಲ್ಪ ದೊಡ್ಡದು ಹಾಗೂ ವಿಚಿತ್ರ ತಿರುವುಗಳಿಂದ ಕೂಡಿದೆ ಎನ್ನಬಹುದು!

ನಾನು ಕೆಲ ವರ್ಷಗಳ ಹಿಂದೆ ಹೊಸ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿ ಪುಣೆ ನಗರಿಗೆ ತೆರಳಿದೆ. ಆ ಕಂಪೆನಿಯವರು ನನಗೆ ಒಂದು ಹೋಟೆಲ್ಲಿನಲ್ಲಿ ಉಳಿಸಿ ನಂತರ ಒಂದು ತಿಂಗಳೊಳಗೆ ಎಲ್ಲಾದರೂ ಬಾಡಿಗೆ ಮನೆಯನ್ನು ಹುಡುಕಿಕೊಳ್ಳುವಂತೆ ಸಲಹೆ ಮಾಡಿದ್ದರು. ಆದರೆ ಪುಣೆಯಲ್ಲಿ ಬಾಡಿಗೆ ಮನೆ ಹುಡುಕಲು ಬೇರೆ ಭಾಷೆ, ಅಪರಿಚಿತ ನಗರ ಇವೆಲ್ಲ ವಿಷಯಗಳು ಅಷ್ಟೆಲ್ಲಾ ಅಡ್ಡಿಯಾಗಲಿಲ್ಲದಿದ್ದರೂ ನಾನು ಒಬ್ಬ ಬ್ಯಾಚುಲರ್ ಹುಡುಗ ಎಂಬುದು ನನ್ನ ಊಹೆಗೂ ಮೀರಿದ ಘನಘೋರ ತೊಂದರೆಯಾಗಿ ಪರಿಣಮಿಸಿತು.! ಉತ್ತರ ಭಾರತದ ಬ್ಯಾಚುಲರ್ ಪಡ್ಡೆ ಹುಡುಗರ ಚೇಷ್ಟೆಗಳಿಂದ ಬೇಸತ್ತ ಪುಣೆಯ ಮನೆಯ ಓನರುಗಳು ಏನೇ ಆದರೂ ಮದುವೆಯಾಗದ ಹುಡುಗರಿಗೆ ಮನೆ ಕೊಡಬಾರದು ಎಂದು ನಿರ್ಧರಿಸಿಬಿಟ್ಟಿದ್ದರು. ಬಾಡಿಗೆ ಮನೆಗಳನ್ನು ಹುಡುಕಿ ಕೊಡುವ ರಿಯಲ್ ಎಸ್ಟೇಟ್ ಏಜೆಂಟರನ್ನು ಹಿಡಿದು ಎಷ್ಟು ಅಲೆದರೂ ದಿನದ ಕೊನೆಗೆ ಎಂದಿನಂತೆ ಮನೆ ಸಿಗದೇ ನಿರಾಶೆಯಿಂದ ಹೋಟೆಲ್ಲಿಗೆ ಮರಳುವದು ಸಾಮಾನ್ಯ ಸಂಗತಿಯಾಗಿಬಿಟ್ಟಿತ್ತು.  ಹಾಗೇ ಒಂದು ದಿನ ಏಜೆಂಟರುಗಳು ನನ್ನನ್ನು "ಮನೆ ಬಾಡಿಗೆಗೆ ಇದೆ" ಎಂದು ಬರೆದಿದ್ದ ಕೊತ್-ರೋಡ್ ಏರಿಯಾದ ಒಂದು ಮನೆಗೆ ಕರೆದು ತಂದರು. ಆ ಮನೆಯ ಮಾಲೀಕ ಬಾಗಿಲಲ್ಲೇ ನಿಂತು ನನ್ನನ್ನು ಕೇಳಿದ, "ಆಪ್ ಕಾ ಫ್ಯಾಮಿಲಿ ಹೈ ಕ್ಯಾ"... ನಾನು, "ನಹೀ" ಎಂದೆ...ಕೂಡಲೇ ಆ ಮಾಲೀಕ ಪುಣ್ಯಾತ್ಮ "ತೋ ಆಪ್ ಕೋ ಇಧರ್ ಆನೇ ಕಾ ಜರೂರತ್ ನಹೀ ಹೈ" ಎಂದು ಸಿಟ್ಟಿನಲ್ಲಿ ಹೇಳುತ್ತಾ ಮನೆಯ ಬಾಗಿಲನ್ನು ಧಡಾರನೇ ಹಾಕಿಬಿಟ್ಟ!!! :) ದಿನಕಳೆದಂತೆ ನನಗೆ ಮತ್ತು ನನಗೆಂದು ಮನೆ ಹುಡುಕುತ್ತಿದ್ದ ಏಜೆಂಟರುಗಳಿಗೆ ಪರಿಸ್ಥಿತಿಯ ನಿಜವಾದ ಬಿಸಿ ಮುಟ್ಟತೊಡಗಿತು. ಹಾಗೇ ಒಂದು ದಿನ ಕರ್ವೇ ರೋಡಿನ ನಲ್-ಸ್ಟಾಪಿನಲ್ಲಿರುವ 'ಸಮುದ್ರ' ಹೋಟೇಲಿನಲ್ಲಿ ಕುಳಿತು ಏಜೆಂಟರುಗಳೊಡನೆ ಈ ಸಮಸ್ಯೆ ಬಗೆ ಹರಿಸಲು, ಬಿಸಿ ಬಿಸಿ ಚಹಾ ಹೀರುತ್ತಾ, ಸುದೀರ್ಘವಾದ ಮಂತ್ರಾಲೋಚನೆ ನಡೆಸಿ ಅಂತೂ ಎಲ್ಲರೂ ಸೇರಿ ಬಾಡಿಗೆ ಮನೆಯ ಓನರುಗಳ ಮನವೊಲಿಸಲು ಒಂದು ಸಂಚು ಹೂಡಿದೆವು.

ಮರುದಿನ ಕರ್ವೇ ರೋಡಿನ ಎರಾಂಡವಾನ ಎಂಬ ಏರಿಯಾದಲ್ಲಿ, ಸ್ವೀಟ್ ಹೋಮ್ ಎಂಬ ಸೊಸೈಟಿಯಲ್ಲಿನ ಬಾಡಿಗೆ ಮನೆಯ ಮಾಲೀಕರನ್ನು ಭೇಟಿಯಾದೆವು. ಎಲ್ಲರಂತೆ ಈ ಓನರ್ ಸಹಾ ತೆಗೆದ ಬಾಯಿಗೇ "ಆಪ್ ಶಾದೀಶುದಾ ಹೈ ಕ್ಯಾ...?" ಎಂದು ಮುಂತಾಗಿ ಕೇಳತೊಡಗಿದರು... ಕೂಡಲೇ ನಮ್ಮ ಏಜೆಂಟರುಗಳು "ಸರ್ ಕಾ ಶಾದಿ ಫಿಕ್ಸ್ ಹೊಗಯಾ ಹೈ, ದೋ ತೀನ್ ಮಹೀನೆ ಮೆ ಹೋ ಜಾಯೇಗಾ" ಎಂದು ಭರವಸೆ ನೀಡಿದರು..! ಇಷ್ಟು ಕೇಳಿದ ಮೇಲೆ ಸ್ವಲ್ಪ ತಣ್ಣಗಾದ ನಮ್ಮ ಓನರು ಉಳಿದ ಮಾತನ್ನೆಲ್ಲಾ ಆಡಿ, ಅಂತೂ ನನಗೆ ಮನೆಯನ್ನು ಬಾಡಿಗೆ ಕೊಡಲು ಒಪ್ಪಿದರು!!!... ನಾನೂ ಸಹ ಬದುಕಿದೆಯಾ ಬಡಜೀವವೇ ಎಂದು ಒಂದು ನಿಟ್ಟುಸಿರು ಬಿಟ್ಟು ಪುಣೆ ನಗರಿಯಲ್ಲಿ ಸುಖವಾಗಿ ಬದುಕಿದೆ :)
........  .....

ಕಾಲಾನಂತರದಲ್ಲಿ ಮತ್ತೆ ನಾನು ಬೆಂಗಳೂರಿಗೆ ವಾಪಸ್ಸು ಬಂದಾಗಲೇ ನನಗೆ ಅರಿವಾಗಿದ್ದು, ಬೆಂಗಳೂರಿನ ಬಾಡಿಗೆ ಮನೆ ಓನರುಗಳೂ ಪಾಪ ಪುಣೆಯ ಓನರುಗಳಂತೆಯೇ ಬ್ಯಾಚುಲರ್ ಭಯದಂದ ತತ್ತರಿಸಿ ಹೋಗಿದ್ದಾರೆ ಎಂದು!!! ನಮ್ಮ ಕಂಪೆನಿ ವೈಟ್-ಫೀಲ್ಡ್ ನಲ್ಲಿ ಇದ್ದಿದ್ದರಿಂದ ಹತ್ತಿರದಲ್ಲಿರುವ ಬಿ.ಇ.ಎಂ.ಎಲ್ ಬಡಾವಣೆಗೆ ಮನೆ ಹುಡುಕಲು ಬಂದೆ. ಇಲ್ಲಿನ ಮನೆ ಹುಡುಕುವ ಏಜೆಂಟನಾದ 'ರವಿ'ಯ ಹತ್ತಿರ ನಮಗೆ ಒಂದು ಒಳ್ಳೆಯ ಮನೆ ಹುಡುಕಿ ಕೊಡುವಂತೆ ದಂಬಾಲು ಬಿದ್ದೆ. ಆದರೆ ಆತ ಮಾತ್ರ ನನ್ನೆಡೆಗೆ ಸ್ವಲ್ಪವೂ ಕರುಣೆ ತೋರದೇ, "ಸಾರ್ ಈ ಲೇಓಟ್ ನಲ್ಲಿ ಮೊನ್ನೆ ಮೊನ್ನೆ ನಾರ್ಥ್ ಇಂಡಿಯಾದ ಬ್ಯಾಚುಲರ್ ಹುಡುಗರುಗಳು ಮಧ್ಯರಾತ್ರಿಲಿ ಕುಡಿದು, ಡ್ಯಾನ್ಸ್ ಮಾಡಿ ದೊಡ್ಡ ರಂಪಾಟ ಮಾಡಿದಾರೆ ಸಾರ್. ಅದಾದ ಮೇಲಿಂದ ಬ್ಯಾಚುಲರ್ ಹುಡುಗರಿಗೆ ಮನೆ ಬಾಡಿಗೆ ಸಿಗೋ ಛಾನ್ಸೇ ಇಲ್ಲಾ ಬಿಡಿ, ಇದು ಫ್ಯಾಮಿಲಿಗಳಿರೋ ಏರಿಯಾ. ಇಲ್ಲಿ ಎಲ್ಲಾ ಮದುವೆ ಆಗದೇ ಇದ್ದರೆ ಮನೆ ಬಾಡಿಗೆಗೆ ಸಿಗೋದೇ ಎಲ್ಲಾ..." ಎಂಬ ನೀರಸ ಮಾತುಗಳನ್ನಾಡಿದ. ನಾನು "ಇದು ಹೇಗೆ ಸಾರ್, ಈ ಓನರುಗಳೆಲ್ಲಾ ಮೊದಲೊಂದು ದಿನ ಬ್ಯಾಚುಲರ್ ಗಳೇ ಆಗಿದ್ದರು ತಾನೇ...ಮದುವೆ ಆದರೆ ಮಾತ್ರ ಮನೆ ಬಾಡಿಗೆಗೆ ಸಿಗುತ್ತದೆ ಎಂದಾದರೆ ಇದು ಯಾವ ನ್ಯಾಯ ಸಾರ್" ಎಂದು ಅವಲತ್ತುಕೊಂಡೆ...

ಈ ಶೀರ್ಷಿಕೆಯ ಆಕರ್ಷಣೆಯಾದ, "ಸುನೀಲ" ನನ್ನ ದೂರದ ಸಂಬಂಧಿ ಕೂಡಾ ಹೌದು. ಪುಣೆಯಿಂದ ಬಂದ ಮೇಲೆ, ಬೆಂಗಳೂರಿನಲ್ಲಿ ಹೊಸ ಬಾಡಿಗೆ ಮನೆ ಸಿಕ್ಕ ಮೇಲೆ, ಆತ ನನ್ನ ರೂಮೇಟ್ ಆಗುತ್ತೇನೆಂದು ಅಭಯ ನೀಡಿದ್ದ. ಆತ ನನಗೆ ಹೋಲಿಸಿದರೆ ಸುಮಾರಿಗೇ ತೆಳ್ಳನೆಯ ಶಾರೀರ ಹೊಂದಿದ್ದರಿಂದ, ನಿಜವಾದ ತಮ್ಮ ಅಲ್ಲದಿದ್ದರೂ ಆತನನ್ನು ನನ್ನ ತಮ್ಮನನ್ನಾಗಿ ಮಾಡಬೇಕಾಗಿ ಬಂತು:)

ಫ್ಯಾಮಿಲಿ ಅಂದರೆ ಮದುವೆಯೇ ಆಗಿರಬೇಕೆಂದೇನಿಲ್ಲ, ಅಣ್ಣ ತಮ್ಮ ಎಲ್ಲರೂ ಕುಟುಂಬದವರೇ ಎಂದು ಏಜೆಂಟನಾದ ರವಿಯ ಮನವೊಲಿಸಿ ನಮ್ಮ ಈಗಿನ ಮನೆಯ ಓನರನ್ನು ಭೇಟಿಯಾಗಲು ಬಂದೆವು. ಯಥಾಪ್ರಕಾರ ಅವರು "ಓ ಬ್ಯಾಚುಲರಾ...ಇಲ್ಲ...ಇಲ್ಲಾ..ಮನೆ ಖಾಲಿ ಇಲ್ಲಾ" ಎಂದು ಹೇಳತೊಡಗಿದರು...ಆಗ ಕೂಡಲೇ ರವಿ ಭಾವಪರವಶನಾಗಿ, "ಸಾರ್ ಗೆ ಒಂದು ತಮ್ಮ ಇದಾನೆ..ತುಂಬಾ ಚಿಕ್ಕಂದಿನಿಂದಲೂ ಇವರೇ ಆತನಿಗೆ ಓದಿಸಿ ಬೆಳೆಸಿದವರು...ನೋಡಿ ನೀವು ಅಕಸ್ಮಾತ್ ಫ್ಯಾಮಿಲಿಗೇ ಬಾಡಿಗೆ ಕೊಟ್ಟರೆ ಅವರು ನೀರು ಜಾಸ್ತಿ ಖರ್ಚು ಮಾಡ್ತಾರೆ, ಜನರೂ ಜಾಸ್ತಿ ಬರ್ತಾರೆ...ಪಾಪ ಅಣ್ಣ ತಮ್ಮ ಒಳ್ಳೆಯವರು ಇರ್ಲಿ ಬಿಡಿ.. ಇದೂ ಒಂಥರಾ ಫ್ಯಾಮಿಲೀನೇ.." ಎಂದೆಲ್ಲಾ ಮನವೊಲಿಕೆಯ ಮಾತುಗಳನ್ನಾಡಿದ. ರವಿಯ ಮಾತುಗಳಿಗೆ ಮಣಿದ ಮನೆಯ ಓನರು ನಮಗೆ ಅಂತೂ ಷರತ್ತುಬದ್ಧವಾಗಿ ಮನೆಯನ್ನು ಬಾಡಿಗೆಗೆ ಕೊಟ್ಟರು. ನಾನೂ ಕೂಡ ಈ "ತಮ್ಮ" ಎಂಬ ವಿಷಯ ಇಷ್ಟೆಲ್ಲಾ ಕೆಲಸ ಮಾಡುತ್ತದೆ ಅಂದುಕೊಂಡಿರಲಿಲ್ಲ. ಅಂತೂ ಸುನೀಲನ ಅಣ್ಣನಲ್ಲದ ಅಣ್ಣನಾಗಿ ನಾನೂ ಹಾಗೂ ತಮ್ಮನಲ್ಲದ ತಮ್ಮನಾಗಿ ಸುನೀಲನೂ ಇಬ್ಬರೂ ಬೆಂಗಳೂರಿನ ಹೊಸ ಬಾಡಿಗೆ ಮನೆಯಲ್ಲಿ ಠಿಕಾಣಿ ಹೂಡಿದೆವು.


ಈಗಲೂ ನನ್ನ ಕಂಡಕೂಡಲೇ ಓನರ್ ಆಂಟಿ "ತಮ್ಮ ಎಲ್ಲಿ..ಮನೆಗೆ ಬಂದಿಲ್ವಾ ಇನ್ನೂ..?" ಎಂದು ಕೇಳುತ್ತಾರೆ. ನಾನು ಎಂದಿನಂತೆ 'ಇದ್ಯಾವ ತಮ್ಮನಪ್ಪಾ' ಎಂದು ಒಂದು ಕ್ಷಣ ಕನವರಿಸಿ,..ಆಮೇಲೆ ಈ ತಮ್ಮನ ನೆನಪಾಗಿ ..."ಓ ಇಲ್ಲಾ ಆಂಟಿ, ಇನ್ನು ಬಂದಿಲ್ಲಾ..." ಎನ್ನುತ್ತೇನೆ:)

ಮೊನ್ನೆ ಸುನೀಲನ ಅಪ್ಪ ಮನೆಗೆ ಬಂದಿದ್ದರಂತೆ, ಆ ವಿಷಯ ನನಗೆ ತಿಳಿದಿರಲಿಲ್ಲ. ಮನೆಗೆ ಬಂದಕೂಡಲೇ ಆಂಟಿ ಕೇಳಿದರು, "ಸತೀಶ್ ತಂದೆಯವರು ಬಂದಿದ್ದ್ರಲ್ಲಾ, ಇದಾರಾ ಇನ್ನೂ..?" ಅಂತ. ನಾನು ಥಟಕ್ಕನೇ .."ತಂದೆ...? ಯಾವ ತಂದೆ..? ಯಾರ ತಂದೆ ಬಂದಿದ್ದ್ರು...?" ಅಂತ ಕೇಳಿಬಿಟ್ಟೆ !!! ಅದನ್ನು ಕೇಳಿದ ಆಂಟಿ ಕೂಡಲೇ "ನಿಮ್ಮ ತಂದೆ ಬಂದಿರೋದು ನಿನಗೇ ಗೊತ್ತಿಲ್ವಾ..ನಿನ್ನ ತಮ್ಮ ಪರಿಚಯ ಮಾಡಿಸಿಕೊಟ್ಟ...!" ಎಂದು ಹೇಳುತ್ತಾ ನನ್ನೆಡೆಗೆ ವಿಚಿತ್ರವಾಗಿ ನೋಡಿದರು... ಕೂಡಲೇ ನನ್ನಿಂದ ಆದ ಎಡವಟ್ಟನ್ನು ಸರಿಮಾಡಲು, "ಓ..ಓ..ಮರೆತೇಹೋಗಿತ್ತು ಆಂಟಿ, ತುಂಬಾ ಕೆಲ್ಸ ಅಲ್ವಾ..ತಲೆ ಎಲ್ಲೋ ಇರತ್ತೆ..." ಎಂದು ಸಮಜಾಯಿಸಿ ನೀಡಿದೆ. ಅದಕ್ಕೆ ಅವರು,"ಏನಪ್ಪಾ ನೀವು..." ಎಂದು ಹೇಳುತ್ತಾ ಹೊರಟುಹೋದರು. ಸದ್ಯ ನಮ್ಮಿಬ್ಬರ ಅಣ್ಣ-ತಮ್ಮ ನಾಟಕ ಬಯಲಾಗಲಿಲ್ಲವಲ್ಲ ಅಂತ ನಿಟ್ಟುಸಿರು ಬಿಟ್ಟು ಅಂತೂ ಬೀಸುವ ದೊಣ್ಣೆಯೊಂದು ತಪ್ಪಿತು ಎಂದುಕೊಂಡೆ.

ನಮ್ಮ ಆಫೀಸಿನಲ್ಲಿ ಮೊನ್ನೆ ಫ್ಯಾಮಿಲಿ ಡೇ ಇತ್ತು. ನಮ್ಮ ಅಣ್ಣ-ತಮ್ಮಂದಿರ ಕಥೆ ಗೊತ್ತಿರುವದರಿಂದ ಆಫೀಸಿನಲ್ಲಿ ಎಲ್ಲರೂ 'ನಿನ್ನ ತಮ್ಮನನ್ನು' ಫ್ಯಾಮಿಲಿ ಡೇ ಗೆ ಕರೆದುಕೊಂಡು ಬಾ ಎಂದು ದಂಬಾಲು ಬೀಳುತ್ತಾ ಕಾಡಿಸುತ್ತಿದ್ದರು. :)

Friday, February 14, 2014

ಅಜ್ಜರ ನೆನಪಿನಲ್ಲಿ ಯಲ್ಲಾಪುರದಲ್ಲೊಂದು ಸಂಗೀತ ಸಂಜೆ


ಈ ವರ್ಷದ ಅಜ್ಜರ ನೆನಪಿನ ಸಂಗೀತ ಸಂಜೆ ಬಹು ಅದ್ಭುತವಾಗಿ ಕೂಡಿಬಂತು.

ಎಂದಿಗೂ ಕನ್ನಡದಲ್ಲಿ ಭಾಷಣ ಮಾಡಿ ಅಭ್ಯಾಸವಿರದ ಶಿವರಾಮ ಭಟ್ (ಶಿವರಾಮಪಚ್ಚಿ) ಅವರು ಬಹು ಒಪ್ಪಟವಾಗಿ ಕಾರ್ಯಕ್ರಮದ ನಿರ್ವಹಣೆ ಕನ್ನಡದಲ್ಲೇ ಮಾಡಿದರು.  :)

ಯಲ್ಲಾಪುರದ ಶ್ರೀ ಎಂ.ಎನ್.ಹೆಗಡೆಯವರು ಕಾರ್ಯಕ್ರಮದ ಕುರಿತು ಒಂದೆರಡು ಮಾತನ್ನಾಡಿದರು.

ಎಂದಿನಂತೆ ಕಾರ್ಯಕ್ರಮಗಳಿಗೆ ಜನ ಸೇರುವದು ತಡವಾಗಿ ಆದ್ದರಿಂದ, ಸಂಜೆ 5ಕ್ಕೆ ಶುರುವು ಆಗಬೇಕಾಗಿದ್ದ ಸಂಗೀತ 6 ಗಂಟೆಗೆ ಶುರುವಾಯಿತು.












ಮೊದಲಿಗೆ ನಮ್ಮ ಮನೆಯ ಲಿಗಾಡಿ ಮಕ್ಕಳಾದ ಸುಮಂತ ಮತ್ತು ಸುಜನಾ ಇಬ್ಬರೂ ಸಂಸ್ಕೃತ ಶ್ಲೋಕಗಳನ್ನು ಹೇಳಿ ಎಲ್ಲರನ್ನೂ ಅಚ್ಚರಿಪಡಿಸಿದರು:) ಮನೆಯವರ ಎದುರಿಗೆ ತಾವು ಕೇವಲ ಕಿಲಾಡಿ ಮಾಡುವ ಮಕ್ಕಳಷ್ಟೇ ಅಲ್ಲ, ಎಂದು ಸಾಬೀತುಪಡಿಸಿದರು :) (ಆದರೆ ನಂತರ ಬೇರೆಯವರು ಹಾಡುವಾಗ ಎಂದಿನಂತೆ ತಮ್ಮಿಬ್ಬರ ಕುಣಿತ-ಕಿಲಾಡಿಗಳನ್ನು ಮತ್ತೆ ಶುರುಮಾಡಿ, ಜನರೆಲ್ಲ ಬರೀ ಸಂಗೀತವನ್ನಷ್ಟೇ ಕೇಳದೇ, ತಮ್ಮ ಕಡೆಗೂ ಗಮನ ಹರಿಸುವಂತೆ ನೋಡಿಕೊಂಡರು :))

ಶುರುವಿನಲ್ಲಿ ವೈದ್ಯ ಹೆಗ್ಗಾರಿನ ಸ್ಪೂರ್ತಿ ವೈದ್ಯ ಹಾಗೂ ಕೊಡ್ಲಗದ್ದೆಯ ಪೂಜಾ ಹೆಗಡೆ ಎಂಬ ಪುಟಾಣಿಗಳು ತಮ್ಮ ಸ್ವಾಗತ ಗೀತೆಗಳಿಂದ ಎಲ್ಲರ ಮನವನ್ನು ಮುದಗೊಳಿಸಿದರು.








ನಂತರದಲ್ಲಿ ರಮೇಶ ಭಾಗ್ವತ್ ಕವಾಳೆ ಇವರು, ಮಾರುಬಿಹಾಗ್ ರಾಗವನ್ನು ಹಾಗೂ ಒಂದು ಭಜನೆಯನ್ನು ಹಾಡಿ ಎಲ್ಲರನ್ನೂ ರಂಜಿಸಿದರು. ಇವರಿಗೆ ತಬಲಾದಲ್ಲಿ ಗಣೆಶ ಭಾಗ್ವತ್ ಗುಂಡ್ಕಲ್ ಹಾಗೂ ಸಂವಾದಿನಿಯಲ್ಲಿ ದತ್ತಾತ್ರೇಯ ಗಾಂವ್ಕರ್ ಚಿಟ್ಟೇಪಾಲ್ ಇವರು ಸಾಥಿಯನ್ನು ನೀಡಿದರು. ರಮೇಶ ಇವರ ಯಕ್ಷಗಾನ ಮದ್ದಳೆ ನುಡಿಸುವದು, ಯಕ್ಷಗಾನ ಭಾಗವತಿಗೆ ಮಾಡುವದು, ಯಕ್ಷಗಾನ ಹೆಜ್ಜೆಗಳನ್ನಷ್ಟೇ ನೋಡಿದ್ದ ನಮ್ಮ ಊರಿನ ಜನರು, ಇವರ ಶಾಸ್ತ್ರೀಯ ಸಂಗೀತದ ಕಲೆಯನ್ನೂ ನೋಡಿ, ಕೇಳಿ ಆನಂದಭರಿತರಾದರು.


ಕೊನೆಯದಾಗಿ ಓಂಕಾರನಾಥ್ ಹವಾಲ್ದಾರ್ ಇವರು, ಬಹು ಅದ್ಭುತವಾದ ಪುರಿಯಾ ಕಲ್ಯಾಣ್, ದುರ್ಗಾ, ಅಭಂಗ ಹಾಗೂ ಭೈರವಿ ಯನ್ನು ಕರ್ಣಾನಂದಕರವಾಗಿ ಹಾಡಿ ಸಂಗೀತದ ಕೇಳುಗರನ್ನು ಮಂತ್ರಮುಗ್ಧಗೊಳಿಸಿಬಿಟ್ಟರು. ಅವರಿಗೆ ತಬಲಾದಲ್ಲಿ ಸಿರಸಿಯ ಅನಂತ ಹೆಗಡೆ ಹಾಗೂ ಸಂವಾದಿನಿಯಲ್ಲಿ ಭರತ್ ಹೆಗಡೆ ಸಾಥ್ ನೀಡಿದರು. ಓಂಕಾರನಾಥ್ ಅವರಿಗೆ ಭಜನೆ ಹಾಡುವಾಗ ತಾಳದಲ್ಲಿ ನಾಗೇಂದ್ರ ವೈದ್ಯ ಹೆಗ್ಗಾರು ಇವರು ತಾಳವಾದ್ಯ ಸಹಕಾರ ನೀಡಿದರು.



ಓಂಕಾರನಾಥ್ ಅವರು ತಾನ್ ಗಳನ್ನು ಹಾಡುತ್ತಿದ್ದಂತೆಯೇ ಅವರ ಗಾಯನದಲ್ಲಿ ಮುಳುಗಿದ್ದ ಜನರ ಚಪ್ಪಾಳೆಗಳೂ, ಸಂತಸದ ಆಹಾಕಾರಗಳೂ ಭರಪೂರವಾಗಿ ಹೊಮ್ಮಿದವು. ದುರ್ಗಾ ರಾಗದ 'ಆಡಲು ಪೋಗೋಣ ಬಾರೋ ರಂಗಾ' ಎಂಬ ದಾಸರ ಪದವೂ, ಕನ್ನಡದಲ್ಲಿ ಹಾಡಿದ ಅಭಂಗ ಹಾಗೂ ಭೈರವಿಯ 'ಕಾಯೋ ಕರುಣಾನಿಧೇ' ಗಾನಗಳು ಕೇಳುಗರ ಮನದಲ್ಲಿ ಅಚ್ಚೊತ್ತಿ ಉಳಿಯಿತು.






ಕೊನೆಯದಾಗಿ ದೊಡ್ಡಪ್ಪನವರಾದ ಜಿ.ಎಸ್.ಭಟ್ ಅವರು ವಂದನಾರ್ಪಣೆ ಮಾತುಗಳನ್ನು ಆಡಿದರು.'ಪರಿಶುದ್ಧ ಶಾಸ್ತ್ರೀಯ ಸಂಗೀತಕ್ಕಿರುವ ಆಳ ಉದ್ದಗಲಗಳನ್ನೆಲ್ಲ ಓಂಕಾರನಾಥ್ ಅವರು ಇಂದು ನಮಗೆಲ್ಲ ತೋರಿಕೊಟ್ಟರು' ಎಂದು ಜಿ.ಎಸ್ ಭಟ್
ಅವರು ಶ್ಲಾಘನೆಯ ಮಾತುಗಳನ್ನು ಆಡಿದರು.

ಅಡಿಕೆ ಭವನದ ಪ್ರಕಾಶ ಹೆಗಡೆ, ಮೈಕ್ ಸೆಟ್ಟಿನ ಪಿ.ಪಿ.ಹೆಗಡೆ, ಚಾ ಅಂಗಡಿಯ ಮಂಜಣ್ಣ, ಜನರೇಟರ್ ಮಾಚಣ್ಣ, ಟ್ಯಾಕ್ಸಿಯ ಗಾಂಕರ್ ಭಾವ, ಅವಿನಾಶಣ್ಣ ಇವರೆಲ್ಲ ನಮ್ಮ ಮೇಲಿಟ್ಟ ನಂಬಿಕೆ ಹಾಗೂ ಮಾಡಿದ ಸಹಾಯ ಮರೆಯಲಸಾಧ್ಯ. ಎಂದಿನಂತೆ ನನ್ನ ನೆಚ್ಚಿನ ಮುಂಡಗೋಡಿಮನೆ ಶ್ರೀಪತಿ ಅಣ್ಣ, ನಮ್ಮನೆಯ ವಿಶ್ವಣ್ಣ ಹಾಗೂ ಎಲ್ಲ ಗೆಳೆಯ ವೃಂದದವರಿಗೆ ಕೃತಜ್ನತೆ ಹೇಳಿ ಮುಗಿಸಲು ಸಾಧ್ಯವಿಲ್ಲ :)


ಒಟ್ಟಿನಲ್ಲಿ ಈ ವರ್ಷದ ಅಜ್ಜರ ನೆನಪಿನ ಸಂಗೀತ ಸಂಜೆ ಬಹು ಸುಮಧುರ ಸಂಗೀತದಿಂದ ತುಂಬಿ ತುಳುಕಿತು.

Sunday, February 9, 2014

ಹರೀಸಾ ಮತ್ತು ಆತನ ಪಿಸ್ತೋಲು

ಹರೀಶ ಸಿದ್ದಿ, ಎಂಬುದು ಹರೀಸನ ನಿಜವಾದ ಹೆಸರು. ಅವನು ಸಣ್ಯಾ ಸಿದ್ದಿಯ ಮೊಮ್ಮಗ. ಹರೀಸನ ಅಪ್ಪನ ಹೆಸರು ಪರುಷರಾಮ ಎಂದಾಗಿದ್ದರೂ ಊರ ಜನರೆಲ್ಲ ಸೇರಿ ಅದನ್ನು 'ಪರ್ಸು' ಎಂದು ಮಾಡಿಬಿಟ್ಟಿದ್ದರು.
ಮಳಲಗಾಂವಿನ ಶಾಲೆಯ ಹತ್ತಿರ ಅಡವಿಯಲ್ಲಿ ಪರ್ಸುವಿನ ಮನೆ ಇದೆ. ಸಂಜೆ ಹೊತ್ತು ಇಡೀ ಅಡವಿಗೇ ಕೇಳುವಷ್ಟು ಎತ್ತರದ ಸದ್ದು ಮಾಡುತ್ತಾ ಆತನ ಟೇಪ್-ರೆಕಾರ್ಡ ನಲ್ಲಿ ಹಿಂದಿ-ಕನ್ನಡ ಸಿನೆಮಾ ಪದ್ಯಗಳು ಮೊಳಗತೊಡಗುತ್ತವೆ. ಹರೀಸಾ ನಾಲ್ಕನೇ ಇಯತ್ತೆಯವರೆಗು ಶಾಲೆಗೆ ಹೋಗಿದ್ದು ಹಾಗೂ ಇನ್ನೂ ಹೋಗುತ್ತಲೇ ಇರುವದು ಪರ್ಸುವಿಗೆ ಬಹು ಅಚ್ಚರಿಯ ವಿಷಯ. ಯಾಕೆಂದರೆ ಸಣ್ಯಾ ಎಷ್ಟೇ ಹೊಡ್ತಾ ಹಾಕಿದರೂ ಪರ್ಸು ಶಾಲೆಗೆ ಹೋಗುತ್ತಿರಲಿಲ್ಲ. ತನ್ನ ಮಗ ಮಾತ್ರ ಶಾಲೆ ಇನ್ನೂ ಬಿಡಲಿಲ್ಲವಲ್ಲ ಎಂಬುದು ಪರ್ಸು ವಿನ ಸಹಜವಾದ ಕುತೂಹಲ. ಆದರೆ ಇತ್ತೀಚೆಗೆ, ಅಷ್ಟಷ್ಟು ದಿನಕ್ಕೆ ತಾನು ಶಾಲೆಗೆ ಹೋಗುವದಿಲ್ಲ, ಟೀಚರು ಹೊಡ್ತಾ ಹಾಕ್ತ್ರು ಅಂತ ರಗಳೆ ಮಾಡಿ, ಅಡವಿಯಲ್ಲಿ ಎಲ್ಲಾದರು ಅಡಗಿ ಕುಳಿತಿರುವುದೂ, ಪರ್ಸು ಹರೀಸನನ್ನು ದಿನಗಟ್ಟಲೇ ಅಡವಿಯಲ್ಲಿ ಹುಡುಕಿ, ಅಂತೂ ಹಿಡಿದು ಹೊಡ್ತಾ ಹಾಕುವದೂ ಒಂದು ಸಾಮಾನ್ಯದ ವಿಷಯ. ಅದೇನೇ ಇದ್ದರೂ ಊರವರಿಗೆಲ್ಲ ಹರೀಸಾ ಅಂದರೆ ಬಹಳ ಪ್ರೀತಿ. ಆತನನ್ನು ಕಾಡಿಸುವದು ಎಂದರೆ ಎಲ್ಲರಿಗೂ ಏನೋ ಒಂದು ಥರಹದ ಸಂತಸ.



ಕಳೆದ ಗಣೇಶ ಚೌತಿಗೆ ಊರಿಗೆ ಹೋದಾಗ ನನಗೆ ಹರೀಸನ ಒಳಗಿರುವ ಇನ್ನೊಂದು ಪ್ರತಿಭೆ ಅನುಭವಕ್ಕೆ ಬಂತು. ಹಬ್ಬಕ್ಕೆ ಅಂತ ಆತನಿಗೆ ಪರ್ಸು ಒಂದು ಆಟಿಕೆಯ ಪಿಸ್ತೋಲು ಕೊಡಿಸಿದ್ದ. ಅದರಲ್ಲಿ ಹಾಕುವ ಗುಂಡಿಗೆ ಕೇಪು ಎನ್ನುತ್ತಾರೆ. ಪರ್ಸು ಕೊಡಿಸಿದ್ದ ಕೇಪುಗಳನ್ನೆಲ್ಲಾ ಒಂದೇ ಸಮನೇ ಉಮೇದಿಯಲ್ಲಿ ಖಾಲಿಮಾಡಿ, ಮತ್ತೆ ಕೇಪು ಬೇಕೆಂದು ಹಠವನ್ನೂ ಮಾಡಿ, ಪರ್ಸು ವಿನ ಹತ್ತಿರ ಸಣ್ಣದೊಂದು ಹೊಡ್ತಾ ತಿಂದು, ನಮ್ಮ ಮನೆಯಲ್ಲಿ ಹಾಜರಾಗಿದ್ದ.

ಅಷ್ಟರಲ್ಲಿ ವಿಶ್ವಣ್ಣ ಮತ್ತು ನಾನು ನಮ್ಮ ಊರ ಹತ್ತಿರದಲ್ಲಿ ಯಾವುದೋ ಒಂದು ಭತ್ತದ ಗದ್ದೆ ಮಾರಲಿಕ್ಕಿದೆ ಎಂಬ ಸುದ್ದಿಯನ್ನು ಕೇಳಿ ಅದನ್ನು ನೋಡಲು ಹೊರಟಿದ್ದೆವು. ಆದರೆ ದಾರಿ ಸರಿಯಾಗಿ ಗೊತ್ತಿರಲಿಲ್ಲ. ಹರೀಸನ ದೊಡ್ಡಜ್ಜ ಅದೇ ಗದ್ದೆಯಲ್ಲಿ ಕೆಲಸಕ್ಕಿದ್ದು ವಾಸವಾಗಿದ್ದ. ಆದ್ದರಿಂದ ಹರೀಸನಿಗೆ ಅಲ್ಲಿಯ ದಾರಿ ಸರಿಯಾಗಿ ತಿಳಿದಿತ್ತು. ಹರೀಸ ಬಂದಿದ್ದೂ, ನಾವು ಹೊರಟಿದ್ದೂ ಒಟ್ಟಿಗೇ ಆದ್ದರಿಂದ ಆತನನ್ನು ನಮ್ಮ ಕಾರಿನ ಹಿಂಬದಿಯಲ್ಲಿ ಕೂಡ್ರಿಸಿಕೊಂಡು ಹೊರಟೆವು. ಹರೀಸನ ಮುಖವು ತನಗೆ ಇವರ ಜೊತೆ ಹೋದರೆ ಪಿಸ್ತೋಲಿಗೆ ಒಂದಷ್ಟು ಕೇಪು ಸಿಗಬಹುದು ಎಂಬ ಅಸೆಯಿಂದ ಫಳಫಳನೇ ಹೊಳೆಯುತ್ತಿತ್ತು.

ನಾವು ಸಿರಸಿ-ಯೆಲ್ಲಾಪುರ ಮುಖ್ಯ ರಸ್ತೆಗೆ ಸೇರಿ ಮತ್ತೂ ಮುಂದುವರೆದು ಹುತ್ಖಂಡ ಎಂಬ ಊರ ಹತ್ತಿರ ಹೋಗಬೇಕಿತ್ತು. ಹರೀಸನ ಗಮನ ಮಾತ್ರ ಕಾರಿನಲ್ಲಿ ಕುಳಿತಿದ್ದರೂ ತನ್ನ ಪಿಸ್ತೋಲಿನ ಬಗ್ಗೆಯೇ ಇತ್ತು. ಪಿಸ್ತೋಲನ್ನು ವಿಧವಿಧವಾಗಿ ಹಿಡಿದುಕೊಳ್ಳುತ್ತಾ, ಆಚೆ ಈಚೆ ತಿರುಗಿಸುತ್ತಾ, ಪೋಲಿಸರು ಕಳ್ಳನನ್ನು ಹಿಡಿದಾಗ "ಹ್ಯಾಂಡ್ಸ್ ಅಪ್" ಎಂದು ಹೇಳುವಂತೆ ನಟನೆ ಮಾಡುತ್ತಾ, ದಾರಿಯಲ್ಲಿ ಹೋಗುವವರಿಗೆಲ್ಲಾ ಪಿಸ್ತೋಲು ಗುರಿ ತೊರಿಸುತ್ತಾ ತನ್ನದೇ ಆದ ರೀತಿಯಲ್ಲಿ ಖುಷಿಯ ಉತ್ತುಂಗದಲ್ಲಿದ್ದ. ಆತ ಕಳೆದ ಎರಡು ದಿನಗಳಿಂದ ಪಿಸ್ತೋಲನ್ನು ಕೈಯಿಂದ ಬಿಟ್ಟಿರಲಿಲ್ಲ ಎನಿಸುತ್ತದೆ.

ಸ್ವಲ್ಪ ಸಮಯದಲ್ಲೇ ಹುತ್ಖಂಡ ಊರಿನ ಅಡ್ಡರಸ್ತೆ ಬಂದು, ಮುಂದಿನ ದಾರಿ ನಮಗೆ ಗೊತ್ತಿಲ್ಲದ ಕಾರಣ, ಹರೀಸ ದಾರಿ ತೋರಿಸಲು ಕಾರಿನ ತೆರೆದ ಕಿಟಕಿಯಿಂದ ಕೈ ಹೊರಗೆ ಹಾಕಿ ಬಲಕ್ಕೆ ತಿರುಗಲು ಕೈಸನ್ನೆ ಮಾಡುತ್ತಿದ್ದ. ಆದರೆ ಪಿಸ್ತೋಲು ಮಾತ್ರ ಕೈನಲ್ಲಿ ಹಾಗೇ ಇತ್ತು. ಸಲ್ಪ ದಿನದ ಹಿಂದೆ ಯಾವುದೋ ಒಂದಷ್ಟು ಭೂಗತ ಪಾತಕಿಗಳು ಯೆಲ್ಲಾಪುರದಲ್ಲಿ ಪಿಸ್ತೋಲಿನಿಂದ ಯಾರಿಗೋ ಹೊಡೆಯುವ ಗುಂಡು ಗುರಿತಪ್ಪಿ ಇನ್ಯಾರಿಗೋ ತಗುಲಿ ದೊಡ್ಡ ಅವಾಂತರವಾಗಿ, ದೊಡ್ಡ ಸುದ್ದಿಯಾಗಿತ್ತು. ಆದ್ದರಿಂದ ನಮ್ಮ ರಸ್ತೆಯಲ್ಲಿ ಏನೂ ಭಯವಿಲ್ಲ ಎಂದು ಅರಾಮವಾಗಿ ಇಷ್ಟು ದಿನ ತಿರುಗಾಡಿಕೊಂಡಿದ್ದ ಭಾವಂದಿರೆಲ್ಲ ಈಗ ಅತೀ ಎಚ್ಚರಿಕೆಯಿಂದ ತಿರುಗಲು ಶುರುಮಾಡಿದ್ದರು.

ಇದೆಲ್ಲ ಹಿನ್ನೆಲೆಯಿಂದ ಆವತ್ತು ನಡೆದ ಘಟನೆ ಬಹಳ ಅಚ್ಚರಿಯಿಂದ ಕೂಡಿತ್ತು. ದೊಣ್ಣೆಮನೆ ಮಾಚಣ್ಣ ಮತ್ತು ಅವನ ಭಾವ ಇಬ್ಬರೂ ಬೈಕಿನಲ್ಲಿ ಯೆಲ್ಲಾಪುರಕ್ಕೆ ಹೋಗುತ್ತಿದ್ದರು. ಅಷ್ಟರಲ್ಲೇ ನಮ್ಮ ಕಾರಿಗೆ ರಸ್ತೆಯಿಂದ ಬಲಕ್ಕೆ ತಿರುಗಲು ಹರೀಸ ಪಿಸ್ತೋಲು ಹಿಡಿದ ಕೈಯನ್ನು ಹೊರಹಾಕಿ ಬಲಕ್ಕೆ ದಾರಿತೋರಿದ್ದೂ, ಮಾಚಣ್ಣನ ಬೈಕು ಹಿಂದಿನಿಂದ ವೇಗವಾಗಿ ಬಂದಿದ್ದೂ ಏಕಕಾಲಕ್ಕೆ ನಡೆಯಿತು. ನಮ್ಮ ಕಾರು ಸಹಜವಾಗಿ ವೇಗ ಕಡಿಮೆಯಾಗಿ, ಮಾಚಣ್ಣನ ಬೈಕು ಮುಂದೆ ಹೋದಮೇಲೆ ಬಲಕ್ಕೆ ತಿರುಗಲು ಕಾಯುತ್ತಿತ್ತು. ಆದರೆ ವೇಗವಾಗಿ ಬರುತ್ತಿದ್ದ ಮಾಚಣ್ಣನಿಗೆ ಮುಂದೆ ನಿಂತಿರುವ ಕಾರಿನ ಕಿಟಕಿಯಿಂದ ಹೊರಗೆ ಬಂದ ಪಿಸ್ತೋಲು ಹಿಡಿದ ಕೈ ಕಂಡಿತು. ಅದನ್ನು ನೋಡಿ ಅವಾಕ್ಕಾದ ಮಾಚಣ್ಣ ಕೂಡಲೇ ಬೈಕನ್ನು ಬ್ರೇಕ್ ಹಾಕಿ ನಿಲ್ಲಿಸಿಯೇ ಬಿಟ್ಟ. ಮಾಚಣ್ಣ ಮತ್ತು ಅವನ ಭಾವ ಇಬ್ಬರೂ ಮುಂದೆ ನಿಂತಿರುವ ಕಾರಿನಲ್ಲಿ ಯಾವುದೋ ಭೂಗತ ಪಾತಕಿಗಳು ಇದ್ದಾರೆ ಎಂದು ಭಾವಿಸಿ ಕಂಗಾಲಾಗಿಹೋದರು. ಇನ್ನು ಕೆಲವೇ ಕ್ಷಣಗಳಲ್ಲಿ ಮಾಚಣ್ಣ ತನ್ನ ಬೈಕನ್ನು ಹಿಂತಿರುಗಿಸಿ ಪಾರಾಗುತ್ತಿದ್ದನೇನೋ. ಅವನೇನಾದರೂ ತಿರುಗಿ ಹೋಗಿಬಿಟ್ಟಿದ್ದರೆ, ಕೂಡಲೇ ಯೆಲ್ಲಾಪುರ ಪೋಲೀಸ್ ಠಾಣೆಗೆ ಫೋನಾಯಿಸುತ್ತಿದ್ದ.!!!

ವಿಶ್ವಣ್ಣ ಕ್ಷಣಮಾತ್ರದಲ್ಲಿ ಆಗಬಹುದಾಗಿದ್ದ ಗಂಡಾಂತರವನ್ನು ಗ್ರಹಿಸಿ ಕೂಡಲೇ ಕಾರಿನಿಂದ ಇಳಿದು, "ಏ ಮಾಚಣ್ಣ, ಏ ಮಾಚಣ್ಣ, ಯಂಗವೇಯೋ...." ಎಂದು ದೊಡ್ಡದಾಗಿ ಕರೆದ. ಆದರೂ ಮಾಚಣ್ಣನಿಗೆ ಆದ ಆಘಾತ ಮತ್ತು ಹೆದರಿಕೆಯಿಂದ ಹೊರಬಂದು ವಿಶ್ವಣ್ಣನನ್ನು ಗುರುತು ಹಿಡಿಯಲು ಸುಮಾರು ಸಮಯವೇ ಬೇಕಾಯಿತು. ಕೊನೆಗೆ ಅಂತೂ, "ಏ ಯಾರೋ ಖರೇ ಪಿಸ್ತೋಲ್ ಹಿಡ್ಕಂಡ ರೌಡಿಗ ಬೈಂದ ಅಂದ್ಕಂಡ್ನಲ್ರೋ...ಥೋ..ಥೋ...ಮಾರಾಯಾ.." ಎಂದು ನಗುತ್ತಾ, ಕಾರಿನ ಹತ್ತಿರ ಬಂದ. ಪಿಸ್ತೋಲು ಧಾರಿಯಾದ ಹರೀಸನ ಮುಖವನ್ನು ನೋಡಿ, ಅಷ್ಟು ಚಿಕ್ಕ ಹುಡುಗನಿಂದ ತಾನು ಭಯಬಿದ್ದುದನ್ನು ನೆನೆಸಿಕೊಂಡು ನಗತೊಡಗಿದ.

ಹರೀಸನಿಗೆ ತನ್ನ ಪಿಸ್ತೋಲಿನಿಂದ ಯಾರಾದರೂ ನಿಜವಾಗಲೂ ಭಯಭೀತರಾದರಲ್ಲಾ, ಎಂದು ಬಹಳ ಸಂತಸದಿಂದ ಬೀಗತೊಡಗಿದ. ಹುತ್ಖಂಡದಿಂದ ತಿರುಗಿ ಬರುವಾಗ, ವಿಶ್ವಣ್ಣ ಹರೀಸನಿಗೆ ಕೇಳಿದ, "ಹರೀಸಾ ದೊಡ್ಡ ಆದ್ಮೇಲೆ ಎಂತಾ ಅಪ್ಪವ್ನೋ..." ಅಂತ. ಹರೀಸ ಗಂಭೀರವಾಗಿ, ಪಿಸ್ತೋಲನ್ನು ಕೈಯಲ್ಲಿ ಹಿಡಿದು ಆಕಾಶದತ್ತ ಗುರಿತೋರುತ್ತಾ, "ನಾ ಪೋಲೀಸ್ ಆಗವಾ, ಕಳ್ಳಂಗೋಕೆ ಗುಂಡು ಹೊಡ್ಯವಾ... " ಅಂದ....


Saturday, October 19, 2013

ಬ್ಲುಜೀನ್ಸ್ (Bluejeans) ಕಥೆಗಳು

ಸ್ವಲ್ಪ ದಿನಗಳ ಹಿಂದೆ ನಾನು ಬ್ಲುಜೀನ್ಸ್ ಎಂಬ ಕಂಪೆನಿಗೆ ಕೆಲಸಕ್ಕೆ ಸೇರಿಕೊಂಡೆ. ಈಗೀಗ ಕಂಪೆನಿಯ ಬಾಸುಗಳು ಕಂಪೆನಿ ಶುರು ಮಾಡಿದಾಗ ಅದಕ್ಕೆ ವಿಚಿತ್ರ ಹೆಸರುಗಳನ್ನು ಇಡುತ್ತಾರೆ. ಹೆಸರು ವಿಚಿತ್ರವಾಗಿದ್ದರೆ ಜನರ ಮನಸ್ಸಿನಲ್ಲಿ ಅದು ಅಚ್ಚೊತ್ತಿ ಉಳಿಯುತ್ತದೆ ಎಂಬುದು ಅವರ ಆಂಬೋಣ. ಮಾಡುವದು ಸಾಫ್ಟ್ ವೇರ ಕೆಲಸವಾದರೂ, 'ಒಳ್ಳೆಯ' ಹಾಗೂ 'ವಿಚಿತ್ರ' ಹೆಸರು ಇಡಬೇಕೆಂದು ನಿರ್ಧರಿಸಿ ನಮ್ಮ ಕಂಪನಿಗೆ 'ಬ್ಲುಜೀನ್ಸ್' ಎಂದು ನಾಮಕರಣ ಮಾಡಿಬಿಟ್ಟರು. ಅಲ್ಲಿಂದ ಶುರುವಾಯಿತು ನಮ್ಮ ಬ್ಲುಜೀನ್ಸ್ ಕಥೆಗಳು...:)

ನಾನು ಯಾವ ಕಂಪೆನಿಯಲ್ಲಿ ಕೆಲಸ ಮಾಡುತ್ತೇನೆ, ಅಲ್ಲಿ ಎಷ್ಟು ಸಂಬಳ, ಊಟ ಫ್ರೀಯಾಗಿ ಕೊಡುತ್ತಾರೋ ಇಲ್ಲವೋ ಇತ್ಯಾದಿ ವಿಚಾರಗಳು ನಾನು ದಿನಾಲೂ ಕುಡಿಯುವ ಟೀ ಅಂಗಡಿಯ ಮಲ್ಲುವಿಗೆ ನನಗಿಂತಲೂ ಚೆನ್ನಾಗಿ ತಿಳಿದಿರುತ್ತದೆ.!!  ನನ್ನ ಹಳೆಯ ಕಂಪೆನಿ ಮುಚ್ಚಿ, ನಾನು ಹೊಸ ಕಂಪೆನಿಗೆ ಸೇರಿದ್ದು ಈ ಮಲ್ಲುವಿಗೆ ಹೇಗೆ ತಿಳಿಯಿತೋ ಗೊತ್ತಿಲ್ಲ, ಆಸಾಮಿ ಒಂದು ದಿನ ಟೀ ಕೊಡುತ್ತಾ ಕೇಳಿದ, "ಸಾರು ನಿಮ್ಮ ಈ ಹೊಸಾ ಕಂಪೆನಿ ಹೆಸರೇನು?" ಅಂತ. ನಾನು "ಬ್ಲುಜೀನ್ಸ್" ಎಂದೆ. ಅಷ್ಟೇ ಆಗಿದ್ದು. ಆತ ಮುಂದೇನೂ ಕೇಳಲಿಲ್ಲ. ನಮ್ಮ ಏರಿಯಾದ ಚಾ ದೋಸ್ತರುಗಳಿಗೆ, ನನಗೆ ಬಾಡಿಗೆ ಮನೆ ಕೊಡಿಸಿದ ರಿಯಲ್ ಎಸ್ಟೇಟ್ ಏಜೆಂಟನಿಗೆ, ಅದೆಲ್ಲಾ ಬಿಡಿ ನಮ್ಮ ಓನರಿಗೂ ಹೇಳಿದನಂತೆ, 'ಸತೀಶ್ ಸಾರು ಸಾಫ್ಟ್ ವೇರು ಕೆಲಸದಲ್ಲಿ ದುಡ್ಡು ಹಾಕಿ ಎಲ್ಲಾ ಕಳಕೊಂಡು ಈಗ ಗಾರ್ಮೆಂಟ್ ಫ್ಯಾಕ್ಟರಿಗೆ ಸೇರಿಕೊಂಡ್ರಂತೆ, ಪಾಪ ಅವರಿಗೆ ಈ ಪರಿಸ್ಥಿತಿ ಬರಬಾರದಿತ್ತು!' ಎಂತೆಲ್ಲಾ :) ಆತನಿಗೆ ನಮ್ಮ ಕಂಪೆನಿ ಸಾಫ್ಟ್ ವೇರು ಕೆಲ್ಸಾನೇ ಮಾಡತ್ತೆ ಅಂತ ಎಷ್ಟೇ ಸಮಜಾಯಿಸಿ ಹೇಳಿದರೂ, ಟೀ ಕೊಡುವಾಗ ಮೊದಲು ಕೊಡುವಷ್ಟು ಮರ್ಯಾದೆ ಈಗ ಕೊಡುವದಿಲ್ಲ ಆತ!

ಈ ಕಾಟನ್ ಪ್ಯಾಂಟ್ ಗಳಿಗೆ ಸ್ವಲ್ಪ ಮಣ್ಣಾದರೂ ತೊಳೆಯಬೇಕು, ಅಷ್ಟಷ್ಟು ದಿನಕ್ಕೆ ಇಸ್ತ್ರಿ ಮಾಡಬೇಕು ಎಂಬಿತ್ಯಾದಿ ಕಾರಣಗಳಿಂದ ಬೇಸತ್ತು, ಇದ್ಯಾವ ಗೊಡವೆಗಳಿರದ ಜೀನ್ಸ್ ಪ್ಯಾಂಟ್ ಕೊಳ್ಳಲು ಒಂದು ಅಂಗಡಿಗೆ ಹೋದೆ. ಅಂಗಡಿಯವನಿಗೆ "ಒಳ್ಳೇ ನೀಲಿ ಬಣ್ಣದ ಎರಡು ಜೀನ್ಸ್ ಪ್ಯಾಂಟ್ ಕೊಡಿ" ಎಂದೆ. ಅದಕ್ಕೆ ಆತ, "ಸಾರ್ ನೀವು ಎಲ್ಲಿ ಕೆಲ್ಸಾ ಮಾಡ್ತೀರಾ, ಕಾರ್ಪೋರೇಟ್ ಡಿಸ್ಕೌಂಟ್ ಇದೆ, ನಿಮ್ಮ ಕಂಪೆನಿ ಲೀಸ್ಟ್ ಆಗಿದ್ರೆ ಕಡ್ಮೆ ಮಾಡ್ಕೊಡ್ತೀನಿ" ಎಂದು ಹೇಳಿದ. ನಾನು "ಬ್ಲುಜೀನ್ಸ್" ಎಂದೆ. ಅಷ್ಟು ಹೇಳಿದ್ದೇ ತಡ, ಆತನ ಮುಖಚಹೆರೆಯೇ ಬದಲಾಯಿತು. "ಸಾರ್ ನಮ್ಗೂ ಸಲ್ಪ ಸಪ್ಲೈ ಕೊಡಿ ಸಾರ್, ಒಳ್ಳೆ ಬುಸಿನೆಸ್ಸ್ ನಡೀತಾ ಇದೆ ನಮ್ಮ್ ಅಂಗಡೀಲಿ, ಮಾರ್ಜಿನ್ ಕಡ್ಮೆ ಕೊಟ್ರೂ ಪರ್ವಾಗಿಲ್ಲ" ಎನ್ನಬೇಕೇ !!! ಅವನ ಮಾತನ್ನು ಕೇಳಿ ನಾನು ತಬ್ಬಿಬ್ಬಾಗಿ, "ಇಲ್ಲಾ ನಾನು ಅಲ್ಲಿ ಕೆಲ್ಸಾ ಮಾಡ್ತೀನಿ ಅಷ್ಟೇ ..." ಎಂದು ಹೇಳುವಷ್ಟರಲ್ಲಿ, ನನಗೆ ಮುಂದೆ ಮಾತನಾಡಲೂ ಕೊಡದೇ ಹಾಸ್ಯವಾಗಿ, "ಊಹೋ ಯುನಿಫಾರಂ ತಗೋಳಕ್ಕೆ ಬಂದ್ರಾ ಸಾರ್" ಎಂದ! ನಾನು ಮರುಮಾತನಾಡದೇ ಅವನು ಹೇಳಿದಷ್ಟು ದುಡ್ಡು ಕೊಟ್ಟು ಜೀನ್ಸ್ ಪ್ಯಾಂಟ್ ಕೊಂಡು ಕೂಡಲೇ ಅಲ್ಲಿಂದ ಜಾಗ ಖಾಲಿ ಮಾಡಿದೆ :)

ಇಷ್ಟರಲ್ಲೇ ನಾನು 'ಬ್ಲುಜೀನ್ಸ್'ಗೆ ಸೇರಿದ್ದ ಸುದ್ದಿ ನನ್ನ ಪ್ರಯತ್ನಕ್ಕೂ ಮೀರಿ ಎಲ್ಲೆಡೆ ಪಸರಿಸಿತ್ತು. ನನ್ನ ಊರಿನ ಹುಡುಗನೊಬ್ಬ ನನಗೆ ಫೋನಾಯಿಸಿ, "ಸತೀಶಣ್ಣ ನಿನಗೆ ಕಂಪೆನಿ ಡಿಸ್ಕೌಂಟ್ ಸಿಗತ್ತಲ್ವಾ, ಕಡಿಮೆ ದುಡ್ಡಲ್ಲಿ ನಂಗೂ ನಿಮ್ಮ ಕಂಪೆನಿಯ ಜೀನ್ಸ್ ಪ್ಯಾಂಟ್ ಕೊಡ್ಸಿಕೊಡು ಪ್ಲೀಸ್" ಎಂದ !. ನಾನು ನೇರವಾಗಿ, "ಆಯ್ತು ಕೊಡ್ಸೋಣ, ನಿನ್ನ ಸೈಜ್ ಕೊಡಪ್ಪ, ಸ್ಪೆಷಲ್ ಪ್ಯಾಂಟ್ ಮಾಡ್ಸಿಕೊಡೋಣ" ಎಂದೆ! :)

ಬೆಂಗಳೂರಲ್ಲಿ ಜಾಗ ತಗೋಬೇಕು, ಸ್ವಲ್ಪ ಸಾಲ ಕೊಡಿ ಎಂದು ಬ್ಯಾಂಕ್ ಗೆ ಫೋನ್ ಮಾಡಿದೆ. ಅವರ ಮೊದಲ ಪ್ರಶ್ನೆ, "ಸಾರ್ ನೀವು ಎಲ್ಲಿ ಕೆಲ್ಸಾ ಮಾಡ್ತೀರಾ?", ನಾನು-"ಬ್ಲುಜೀನ್ಸ್", ಬ್ಯಾಂಕ್-"ಸಾರ್ ಇದು ಯಾವ್ ಥರಾ ಕಂಪೆನಿ ಸಾರ್ ಇದು, ಗಾರ್ಮೆಂಟ್ಸಾ?"!!, ಅದಕ್ಕೆ ನಾನು-"ಇಲ್ಲಾ ಸಾಫ್ಟ್ ವೇರು", ಬ್ಯಾಂಕ್-"ಓಹ್ ಹೀಗೂ ಹೆಸರು ಇರತ್ತಾ ಸಾರ್, ಯಾವ್ದಕ್ಕೂ ನಾವು ವೆರಿಫೈ ಮಾಡಿ ನಿಮಗೆ ಹೇಳ್ತೀವಿ ಸಾರ್."!!. ಆ ಬ್ಯಾಂಕಿನವ್ರು ಕೊನೆಗೂ ನನಗೆ ತಿರುಗಿ ಫೋನ್ ಮಾಡಲೇ ಇಲ್ಲ. ! :)

ನಮ್ಮ ಹಳ್ಳಿಹಳ್ಳಿಯ ಮೂಲೆಗಳಿಂದಲೂ ಇನ್ಫೋಸಿಸ್-ವಿಪ್ರೋ ಕಂಪೆನಿಗಳಿಗೆ ಜನ ಕೆಲಸಕ್ಕೆ ಸೇರಿದ್ದರಿಂದ, ನಮ್ಮ ಊರಿನ ಎಲ್ಲ ಹಿರಿಯರಿಗೂ ಸಾಫ್ಟ್ ವೇರಿನ ಬಗ್ಗೆ ಮಾಹಿತಿ ಚೆನ್ನಾಗಿಯೇ ಇದೆ. ಅವರಿಗೆ C, C++, Java ಗೊತ್ತಿಲ್ಲ ಅನ್ನೋದು ಬಿಟ್ಟರೆ, ಸಾಫ್ಟ್ ವೇರು ಕಂಪೆನಿಗಳ ಬಗ್ಗೆ ಧಾರಾಳವಾಗಿ ಗೊತ್ತು. ಊರಿಗೆ ಹಬ್ಬ ಹರಿದಿನಗಳಿಗೆ ಹೋದರೆ ಎಲ್ಲರೂ ಕೇಳುವದು, "ಒಹ್ ಬೆಂಗ್ಳೂರು ಬಸ್ಸಿಗೆ ಬಂದ್ಯಾ, ಯಾವ್ ಕಂಪೆನಿ?". ಹಾಗೇ ನಮ್ಮ ಊರ ಹತ್ತಿರದ ಒಬ್ಬ ಅಜ್ಜ, ಗಣಪಜ್ಜ ನಂಗೆ ಅದನ್ನೇ ಕೇಳಿದ. ನಾನು "ಬ್ಲುಜೀನ್ಸ್" ಎಂದೆ.  ನಾನು ಇನ್ಫೋಸಿಸ್ ನಲ್ಲಿ ಕೆಲ್ಸ ಮಾಡುತ್ತಿಲ್ಲ ಎಂದು ಆತನಿಗೆ ತಿಳಿದು ನನ್ನೆಡೆಗೆ ಒಂದು ವಿಚಿತ್ರವಾದ ನೋಟವನ್ನು ಬೀರಿದ. ಆ ನೋಟದ ಮರ್ಮ ವನ್ನು ಅರಿತ ನಾನು ಕೂಡಲೇ ಅವನಿಗೆ ನಮ್ಮ ಕಂಪೆನಿ ಎನೇನು ಮಾಡುತ್ತದೆ ಎಂದೂ ಹೇಳಿದೆ. ಆದರೆ ನನ್ನ ಉತ್ತರದ ಮೊದಲ ಶಬ್ದ ಆತನ ಮನದಲ್ಲಿ ಅಚ್ಚೊತ್ತಿಬಿಟ್ಟಿತ್ತು. ನನ್ನ ಮಾತು ಮುಗಿದ ಮೇಲೆ, "ಎಲ್ಲಾ ಬಿಟ್ಟು ಪ್ಯಾಂಟು ಮಾಡ ಕೆಲ್ಸಕ್ಕೆ ಸೇರ್ಕ್ಯಂಡ್ಯಲ್ಲ ಮಾರಾಯಾ, ನಿಂಗೋಕೆಲ್ಲಾ ಬರೀ ಬೆಂಗ್ಳೂರು ಹುಚ್ಚು, ಅಂತಾ ಕೆಲ್ಸ ಮಾಡ ಬದ್ಲು ಊರಲ್ಲಿ ತೋಟ ಗದ್ದೆ ಮಾಡದು ಸಾವ್ರ ಪಾಲು ಚೊಲೊ, ವಿಚಾರ ಮಾಡು ಇನ್ನಾದ್ರುವಾ, ಊರಿಗೆ ಬಂದ್ ಬುಡು" ಎಂದ.!!! ನಾನು ಸುಮ್ಮನೆ "ಆಯ್ತು ಅಡ್ಡಿಲ್ಲೆ" ಎಂದೆ :) ಈಗ ಗಣಪಜ್ಜ ಊರಿಗೆಲ್ಲ ಈ ವಿಷಯವನ್ನ ಡಂಗುರ ಬಡಿದು ಸಾರಿದ್ದರಿಂದ, ನನ್ನ ಈ ಕ್ಲಿಷ್ಟಕರವಾದ ಕಂಪೆನಿಯ ಹೆಸರನ್ನು ಯಾರ ಹತ್ತಿರವೂ ಹೇಳುವಂತಿಲ್ಲ :)

ನಾಡಿದ್ದು ನಮ್ಮ ಕಂಪೆನಿಯ ದೊಡ್ಡ ಬಾಸು ಅಮೇರಿಕೆಯಿಂದ ಬೆಂಗಳೂರಿಗೆ ಬರುತ್ತಾರಂತೆ. ಅವರು ನಂಗೆ "ಸತೀಶಾ ನಿಂಗೆ ಏನು ಬೇಕು ನನ್ನಿಂದ" ಎಂದೇನಾದ್ರು ಕೇಳಿದರೆ!!, "ದಯವಿಟ್ಟು ಕಂಪೆನಿ ಹೆಸರು ಬದಲಾಯಿಸಿ" ಎಂದು ಕೇಳೋಣ ಎಂದುಕೊಂಡೆ :)

Tuesday, August 20, 2013

ಬಿಳಿ ಅಂಗಿ ಹಾಗೂ ಮಡಿಕೇರಿಯ ಬ್ಯಾಂಕ್ ಮ್ಯಾನೇಜರ್ರು

ನಾನು ಹಾಗೂ ನನ್ನ ಆಪ್ತ ಮಿತ್ರ ಗೋಣಿಕೊಪ್ಪದ ಆಕಾಶ್ ಗಣಪತಿ(ನಾವೆಲ್ಲ ಪ್ರೀತಿಯಿಂದ ಗಣಪ ಎಂದು ಕರೆಯುತ್ತೇವೆ ಅವನಿಗೆ) ಆವತ್ತು ಮೈಸೂರಿನ ಅವನ ಬಾಡಿಗೆ ಮನೆಯಲ್ಲಿ ಒಂದು ಕಪ್ ಕಾಫಿ ಹೀರುತ್ತ ಕುಳಿತಿದ್ದೆವು. ಆದಿನ ಗಣಪ ನನಗೆ ಬಿಳಿ ಅಂಗಿಯನ್ನು ಧರಿಸುವದರ ಮಹತ್ವದ ಬಗ್ಗೆ ವಿವರಣೆ ಕೊಡುತ್ತಿದ್ದ. ಎಲ್ಲಾ ರಾಜಕೀಯ ಪುಢಾರಿಗಳೂ, ಗವರ್ನಮೆಂಟ್ ಅಧಿಕಾರಿಗಳೂ ಬಿಳಿಯ ಅಂಗಿ ಹಾಕಿದ್ದರಿಂದಲೇ ಒಂದು ಹಂತಕ್ಕೆ ಜನರೆದುರಿಗೆ ತಾವೇನೋ ದೊಡ್ಡ ಜನ ಎಂದು ಬಿಂಬಿಸಿಕೊಳ್ಳುತ್ತಾರೆ ಎಂಬುದು ಆತನ ವಾದವಾಗಿತ್ತು. ಬಿಳಿಯ ಅಂಗಿಗೆ ಬಹಳ ಪವರ್ ಇರುವುದಾಗಿಯೂ ಆದ್ದರಿಂದ ತಾನು ಒಟ್ಟಿಗೇ 4 ಬಿಳಿಯ ಅಂಗಿಯ ಸೆಟ್ ಖರೀದಿಸಿರುವುದಾಗಿಯೂ ಆತ ಹೇಳಿದ. ಎಲ್ಲಾ ಗವರ್ನಮೆಂಟ್ ಕಛೇರಿಗಳಿಗೆ, ಬ್ಯಾಂಕುಗಳಿಗೆ ತಾನು ಬಿಳಿಯ ಅಂಗಿ ಹಾಕಿ ಹೋಗುವದರಿಂದಲೇ ತನ್ನ ಎಲ್ಲಾ ಕೆಲಸಗಳೂ ಸಾರಾಸಗಟಾಗಿ ಮುಗಿಯುತ್ತದೆ ಎಂಬಿತ್ಯಾದಿ ವಿವರಗಳನ್ನೂ ಆತ ಕೊಟ್ಟ. ಎಲ್ಲವನ್ನು ಕೇಳಿದ ಮೇಲೆ ನನಗೆ ಹೊಳೆದಿದ್ದು, ಆವತ್ತು ಆಶ್ಚರ್ಯವೆಂಬಂತೆ ನನ್ನ ಬ್ಯಾಗಿನಲ್ಲೂ ಒಂದು ಬಿಳಿಯ ಅಂಗಿ ಇತ್ತೆಂಬುದು.!!

ಗಣಪ ಒಂದು ವಿಚಿತ್ರವಾದ ಸಮಸ್ಯೆಯಲ್ಲಿ ಸಿಕ್ಕಿಕೊಂಡಿದ್ದ. ಆ ಸಂಕೀರ್ಣ ಸಮಸ್ಯೆಯ ಆಳ ಮತ್ತು ಅಗಲ ಬಹಳವಾಗಿತ್ತು. ಕರ್ನಾಟಕದ ಸಿಎಮ್ಮು ಮರಳು ಸಾಗಾಟನೆಯನ್ನು ರಾತ್ರೋರಾತ್ರಿ ನಿಷೇಧಿಸಿದ್ದರಿಂದ ಆತ ಕಟ್ಟಿಸುತ್ತಿದ್ದ ಮನೆಗೆ ಮರಳು ಸಿಗದೇ ಮನೆಯ ನಿರ್ಮಾಣ ಅರ್ಧಕ್ಕೇ ನಿಂತುಬಿಟ್ಟಿತ್ತು. ಮನೆ ಕಟ್ಟುವ ಮೇಸ್ತ್ರಿ ಇದೇ ಸಮಯದ ಪ್ರಯೋಜನ ಪಡೆಯಲು, ಇದೆಲ್ಲಾ "ಸ್ಯಾಂಡ್ ಮಾಫಿಯಾ"ದವರ ಕುತಂತ್ರವಾಗಿರುವುದಾಗಿಯೂ, ಎಲ್ಲಾ ಮರಳು ಲಾರಿಗಳನ್ನೂ ಮೈಸೂರಿಗೆ ಬರುತ್ತಲೇ ಪೋಲೀಸರು ಹಿಡಿದು ಒಳಗೆ ಹಾಕುತ್ತಿರುವುದಾಗಿಯೂ, ಎಲ್ಲರಿಗೂ ಮಾಮೂಲು ಹೊಂದಿಸಲು ಇನ್ನೂ ಹೆಚ್ಚು ಕ್ಯಾಷು ಕೊಡಬೇಕಾಗಿಯೂ ಸತಾಯಿಸುತ್ತಿದ್ದ. ಅಷ್ಟರಲ್ಲೇ ಆತನ ಹೊಸಮನೆಯ ಕ್ಯೂರಿಂಗ್ ಮಾಡುವ ಶಿವಣ್ಣ ಯಾಕೋ ಇತ್ತೀಚೆಗೆ ಮೈಗಳ್ಳತನವನ್ನು ರೂಢಿಮಾಡಿಕೊಂಡು, ಹೊಸ ಸಿಮೆಂಟ್ ಗೆ ನೀರು ಹಾಕದೇ ಅಲ್ಲಲ್ಲಿ ಸುಮ್ಮನೇ ಅಲೆದಾಡಿಕೊಂಡಿದ್ದ. ಇದರಿಂದ ಬೇಸರಗೊಂಡಿದ್ದ ಗಣಪನ ಪ್ರಕಾರ ಇವರಿಗೆಲ್ಲ ಸ್ವಲ್ಪ ಬಿಳಿ ಅಂಗಿಯ ಬಿಸಿತಟ್ಟಿಸಿದರೆ ಸರಿಯಾಗುತ್ತದೆ ಎಂಬುದಾಗಿತ್ತು. ಆದ್ದರಿಂದ ಆದಿನ ನಾನು ತಂದಿದ್ದ ಬಿಳಿಯ ಅಂಗಿಯನ್ನು ತೊಟ್ಟು "ಮಡಿಕೇರಿಯಿಂದ ಬಂದ ಬ್ಯಾಂಕ್ ಮ್ಯಾನೇಜರ್ರ್ ಸಾರ್" ನ ಪಾತ್ರ ಧರಿಸಬೇಕಾಯಿತು.

ಗಣಪನ ಜೊತೆ ಬಿಳಿ ಅಂಗಿಯ ತೊಟ್ಟ ನಾನು ಬ್ಯಾಂಕ್ ಮ್ಯಾನೇಜರ್ ಆಗಲು ಮುಖವನ್ನು ಗಂಟಿಕ್ಕಿಕೊಂಡು ಮನೆ ಕಟ್ಟುತ್ತಿದ್ದ ಜಾಗಕ್ಕೆ ಹೋದೆ. "ಮಡಿಕೇರಿಯಿಂದ ಬ್ಯಾಂಕ್ ಮ್ಯಾನೇಜರ್ರ್ ಸಾಹೇಬ್ರು ಬಂದುಬಿಟ್ಟಿದ್ದಾರೆ, ಮನೆ ಕಟ್ಟಲು ತಡವಾದ್ದರಿಂದ ವಿಚಾರಣೆಗೆ ಆರ್ಡರ್ ಆಗಿದೆ" ಎಂದು ಇಳಿ ದನಿಯಲ್ಲಿ ಗಣಪ ಶಿವಣ್ಣನಿಗೆ ಹೇಳಿದ. ಹೌಹಾರಿದ ಶಿವಣ್ಣ ನನಗೆ "ನಮಸ್ಕಾರಾ ಸಾರ್" ಎನ್ನುತ್ತಾ ಏನೋ ತಪ್ಪು ಮಾಡಿದವರಂತೆ ಕೈಕಟ್ಟಿ ದೂರದಲ್ಲಿ ನಿಂತುಕೊಂಡ. ಮ್ಯಾನೇಜರ್ರು ಬಂದ ವಿಷಯ ಗೊತ್ತಾಗಿ ಮೇಸ್ತ್ರಿ ಸ್ವಾಮಿಯೂ ಬಂದ. "ಎಲ್ಲಾ ಸೇರಿ ಬ್ಯಾಂಕ್ ಮನೆ ಕಟ್ಟಲು ಅಂತಾ ಕೊಟ್ಟಿರೋ ಹಣಾನ ನುಂಗಿ ನೀರು ಕುಡೀತಾ ಇದೀರಾ, ಹೀಗೇ ಆದರೆ ಈ ಮನೆ ನಾ ಸೀಜ್ ಮಾಡ್ಬೇಕಾಗತ್ತೆ" ಎಂದು ಹೇಳುತ್ತಾ ನನ್ನ ಮೊಬೈಲ್ ಫೋನಿನಲ್ಲಿ ಕಟ್ಟುತ್ತಿದ್ದ ಮನೆಯ ಫೋಟೊಗಳನ್ನು ತೆಗೆದೆ. ಅಷ್ಟೊತ್ತಿಗೆ ಬಿಳಿ ಅಂಗಿ ಹಾಕಿದ್ದ ನನ್ನಲ್ಲಿ ನಿಜವಾಗಿಯೂ ಯಾವುದೋ ಮ್ಯಾನೇಜರ್ರ್ ನ ಆತ್ಮ ಪ್ರವೇಶವಾದಂತಾಯಿತು.:) ಮತ್ತೂ ಮುಖವನ್ನು ಗಂಟು ಹಾಕಿಕೊಂಡು ಗಣಪನಿಗೆ "ಏನು ಗಣಪತಿ ಅವರೇ ಬೇಗಾ ಮನೆ ಕಟ್ಟಲಿಲ್ಲಾ ಅಂದರೆ ಮೇಲಿನವರಿಗೆ ರಿಪೋರ್ಟ್ ಹೋಗತ್ತೆ ನೋಡಿ. ಆಮೇಲೆ ಸ್ಟ್ರಿಕ್ಟ್ ಆಕ್ಶನ್ ತಗೋಬೇಕಾಗತ್ತೆ" ಎಂದೆಲ್ಲಾ ಏನೇನೋ ಹೇಳಿದೆ. ಮರಳು ತಂದು ಕೆಲಸ ಮುಂದುವರಿಯವರೆಗೂ ಹೊಸದಾಗಿ ಬ್ಯಾಂಕಿನಿಂದ ದುಡ್ಡನ್ನು ರಿಲೀಸ್ ಮಾಡಲಿಕ್ಕೆ ಆಗುವದಿಲ್ಲ ಎಂದೂ ಖಡಾಖಂಡಿತವಾಗಿ ಹೇಳಿದೆ. ಇದನ್ನೆಲ್ಲಾ ನೋಡಿ ಒಂದು ಹದಕ್ಕೆ ಬಂದಿದ್ದ ಮೇಸ್ತ್ರಿ "ಸಾಮಿ, ಚೆಕ್ ಪೋಸ್ಟ್ ನವ್ರಿಗೆ, ಪೋಲೀಸ್ ನೋರಿಗೆ ಎಲ್ಲಾ ಮಾಮೂಲು ಕೊಟ್ಟು ಮೈಸೂರ್ ಗೆ ಮರಳು ಲಾರಿ ಟ್ರಿಪ್ ಬರ್ತಾ ಐತೆ, ಅದರಲ್ಲಿ ನಾನು ಒಂದು ಟ್ರಿಪ್ ತರ್ತೀನಿ, ದುಡ್ಡು ಹೆಂಗೋ ಹೊಂದ್ಸ್ಕೋತೀನಿ ಬುಡಿ" ಅಂದ. ಶಿವಣ್ಣ ತಾನೂ ಇನ್ನು ನಿಯತ್ತಿನಿಂದ ಕ್ಯೂರಿಂಗ್ ಮಾಡುತ್ತೇನೆ ಎಂದು ವಚನ ನೀಡಿದ. ಒಟ್ಟಿನಲ್ಲಿ ಗಣಪನ ಸಮಸ್ಯೆ ಆ ಕ್ಷಣಕ್ಕೆ ಶಾಂತವಾಯಿತು.

ತಿರುಗಿ ಮನೆಗೆ ಬರುತ್ತಾ ಗಣಪ ಬಿಳಿ ಅಂಗಿಗಿರುವ ಶಕ್ತಿ ಹಾಗೂ ಮಹತ್ವವನ್ನು ಸವಿವರವಾಗಿ ಮತ್ತೆ ಮತ್ತೆ ವರ್ಣಿಸಿದ. ಅದಕ್ಕೇ ಈಗ ಆಫೀಸಿನಲ್ಲಿ ಮ್ಯಾನೇಜರ್ ಜೊತೆ ಮೀಟಿಂಗ್ ಇರುವಾಗ ಬಿಳಿಯ ಅಂಗಿ ತೊಟ್ಟೇ ಹೋಗುತ್ತೇನೆ!!!

Thursday, August 15, 2013

ಹೊಂಡದಲ್ಲಿ ಬಿದ್ದ ಹೋಂಡಾ

ಅಂದು ಶನಿವಾರ. ನಮ್ಮ ಐಟಿ ಕಂಪನಿಗಳ ರಜೆಯ ದಿನ. ಎಲ್ಲಾ ಟೆಕ್ಕಿಗಳೂ ಬಾಲಬಿಚ್ಚಿ ತಮ್ಮ ಇತರೆ ಇತರೆ ಕಾರ್ಯಗಳಲ್ಲಿ ಮಗ್ನರಾಗುವ ದಿನ. ನನಗೆ ಇತ್ತೀಚೆಗೆ ಯಾಕೋ ಫಾರಂ ಹೌಸ್ ನ ಚಟ ಬಡಿದು, ಅಂತರ್ಜಾಲದಲ್ಲಿ ಕಂಡ ಕಂಡ ರಿಯಲ್ ಎಸ್ಟೇಟ್ ಏಜೆಂಟರುಗಳಿಗೆ ಫೋನಾಯಿಸುತ್ತಾ ಇದ್ದೆ. ಅಷ್ಟರಲ್ಲೇ ನನ್ನ ಅಡ್ವೋಕೇಟ್ ಗೆಳೆಯ ವಿನೀತ್ ಫೋನಾಯಿಸಿದ. ಆತನ ಪ್ಲಾನ್ ನಂತೆ, ನಮಗೆಲ್ಲ ಚಿರಪರಿಚಿತರಾದ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಅವರ ಫಾರಂ ಹೌಸ್ ಗೆ ಹೊರಟೆವು. ಅಲ್ಲಿಗೆ ಹೋಗುವ ದಾರಿ ಗೊತ್ತಿರದ ನಾನು, ಕಕ್ಕಾಬಿಕ್ಕಿಯಾಗಿ ಅತ್ತ ಇತ್ತ ನೋಡುತ್ತ ಗಾಡಿಯನ್ನು ಓಡಿಸುತ್ತಿದ್ದೆ. ಪಕ್ಕದಲ್ಲಿ ಕುಂತಿದ್ದ ವಿನೀತನಿಗೆ ಎಂದಿನಂತೆ ಸಾವಿರಾರು ಫೋನ್ ಕರೆಗಳು ಬಂದೂ ಬಂದೂ ಸತಾಯಿಸುತ್ತಲೇ ಇದ್ದವು. ಆತ ಒಂದು ಕಡೆ ಫೋನಿನಲ್ಲಿ ಮಾತನಾಡುತ್ತಲೂ, ಇನ್ನೊಂದು ಕಡೆ ದಾರಿ ಗೊತ್ತಿರದ ನನಗೆ ದಾರಿಯನ್ನು ಕೈ ಸನ್ನೆ ಮಾಡಿ ತೋರುತ್ತಲೂ ಇದ್ದ.

ಕೆಂಗೇರಿಯ ರಾಮೋಹಳ್ಳಿಯಲ್ಲಿ ಬಲಕ್ಕೆ ತಿರುಗಬೇಕಾಗಿದ್ದ ಗಾಡಿ ದಾರಿತಪ್ಪಿ ದೊಡ್ಡ ಆಲದಮರವನ್ನು ದಾಟಿ ಮಂಚಿನಬೆಲೆ ಡ್ಯಾಮ್ ಹತ್ತಿರ ಹೋಗಿಬಿಟ್ಟಿತು. ವಿನೀತನಿಗೂ ದಾರಿ ಸರಿಯಾಗಿ ಗೊತ್ತಿರಲಿಲ್ಲ ಎಂದು ನನಗೆ ಆಗ ತಿಳಿಯಿತು. ವಿನೀತ ಮಾತ್ರ ಫೋನಿನಲ್ಲಿಯೇ ಮಗ್ನನಾಗಿದ್ದ. ಏನಪ್ಪಾ ಇದು ಎಂದು ಕನವರಿಸಿ, ಗೂಗಲ್ ನ ಮ್ಯಾಪಿಗೆ ಕೈಮುಗಿದು ಅದರಲ್ಲಿ ಕಣ್ಣಾಡಿಸಿ ಅಂತೂ ಸರಿದಾರಿಯನ್ನು ಹುಡುಕಿ, ವಿನೀತನಿಗೆ ಫೋನ್ ಮಾಡಿದವರಿಗೆ ಮನಸ್ಸಿನಲ್ಲಿಯೇ ಬೈಯುತ್ತಾ ಗಾಡಿಯನ್ನು ವಾಪಸ್ಸು ತಿರುಗಿಸಿದೆ. ಮಾಡಿದ ತಪ್ಪು ಮತ್ತೆ ಮಾಡಬಾರದೆಂದು ಕಂಡಕಂಡವರಿಗೆಲ್ಲಾ ರಾಮೋಹಳ್ಳಿಯ ದಾರಿ ಕೇಳುತ್ತಾ, ಕೇಳಿದ್ದನ್ನು ಗೂಗಲ್ ಮ್ಯಾಪಿನಲ್ಲಿ ನೋಡಿ ಖಚಿತಪಡಿಸಿಕೊಳ್ಳುತ್ತಾ, ಒಂದು ಚಿಕ್ಕದಾದ ಡಾಂಬರು ರಸ್ತೆಯಲ್ಲಿ ಗಾಡಿ ಓಡಿಸುತ್ತಾ ಇದ್ದೆ.

ನೋಡನೋಡುತ್ತಲೇ ರಾಮೋಹಳ್ಳಿಯ ಕಿರಿದಾದ ಡಾಂಬರು ರಸ್ತೆಯಲ್ಲಿ, ಹಾಲ್ಟಿಂಗ್ ಎಶ್ಟಿ ಗಾಡಿ (ST: State Transport ಬಸ್ಸಿಗೆ ನನ್ನ ಅಜ್ಜ ಹಾಗೂ ಅಜ್ಜಿ ಬಳಸುತ್ತಿದ್ದ ಶಾರ್ಟ್ ಫಾರಂ ಶಬ್ದ!) ಎದುರಿಗೆ ಬಂದುಬಿಟ್ಟಿತು. ಅಷ್ಟು ಚಿಕ್ಕ ರಸ್ತೆಯಲ್ಲಿ ನಾನು ಗಾಡಿಯನ್ನು ಪಕ್ಕಕ್ಕೆ ಇಳಿಸುವಂತೆಯೇ ಇರಲಿಲ್ಲ. ಬಸ್ಸಿನ ಡ್ರೈವರನೂ ಸಹಾ ಹಳೇ ಕಾಲದ ಪುಂಗಿ ಹಾರನ್ನ್ ನ್ನು ಊದುತ್ತಾ 'ದಾರಿಕೊಡು' ಎಂದು ನನ್ನನ್ನು ಕಣ್ಸನ್ನೆಯಲ್ಲೇ ಬೆದರಿಸಿದ. ಅಷ್ಟರಲ್ಲಿ ಪಕ್ಕದಲ್ಲಿ ಮತ್ತೆ ಇನ್ನೊಂದು ಫೋನಿನಲ್ಲಿ ಮಾತನಾಡುತ್ತ ಕುಳಿತಿದ್ದ ವಿನೀತನಿಗೆ ಆರನೇ ಸೆನ್ಸ್ ಜಾಗೃತವಾದಂತೆ ಪಕ್ಕಕ್ಕೆ ಗಾಡಿ ತಿರುಗಿಸುವಂತೆ ಕೈಸನ್ನೆ ಮಾಡಿದ. ಎಡಗಡೆ ಒಂದು ಗೇಟ್ ಇತ್ತು. ಇದೂ ಒಂದು ಫಾರಂ ಹೌಸ್ ನ ಗೇಟ್ ಇರಬೇಕು ಎಂದು ಭಾಸವಾಗಿ ಕಣ್ಣು ಮುಚ್ಚಿಕೊಂಡು ಎಡಗಡೆ ಗಾಡಿಯನ್ನು ತಿರುಗಿಸಿಬಿಟ್ಟೆ. ಅಷ್ಟೇ ಆದದ್ದು...

ಗಾಡಿ ಹೊಂಡದಲ್ಲಿ ಬಿದ್ದುಬಿಟ್ಟಿತ್ತು.! ಹೊಂಡದಲ್ಲಿ ಮಳೆಗೆ ಚೆನ್ನಾಗಿ ಹುಲ್ಲು ಬೆಳೆದಿತ್ತು. ಆಳದಲ್ಲಿದ್ದ ಗಾಡಿ ಮುಂದೂ ಹೋಗಲಾರದೇ ಹಿಂದೂ ಬರಲಾರದೇ ಒದ್ದಾಡುತ್ತಿತ್ತು. ವಿನೀತನ ಫೋನು ನಿಂತು ಆತನ ಕಕ್ಕಾಬಿಕ್ಕಿಯಾದ ಮುಖ ನನ್ನನ್ನೇ ನೋಡುತ್ತಿತ್ತು. ಅದೇ ಹೊತ್ತಿಗೆ ನಾಗೇಶ್ ಹೆಗಡೆ ಅಂಕಲ್ ಫೋನ್ ಮಾಡಿ 'ಎಲ್ಲಿದೀರ್ರೋ' ಎಂದು ಕೇಳಿದರು. "ಅಂಕಲ್ ಹೊಂಡದಲ್ಲಿ ಇದ್ಯ, ಕಡೀಗೆ ಮಾಡ್ತೆ" ಎಂದು ಹೇಳಿ ಫೋನ್ ಇಟ್ಟೆ.!

ಅಷ್ಟರಲ್ಲಿ ಎದುರಿಗೆ ನಿಂತಿದ್ದ ಬಸ್ಸಿನಿಂದ ಒಬ್ಬೊಬ್ಬರಾಗಿ ಇಳಿದು ಬರತೊಡಗಿದರು. ನಾಲ್ಕಾರು ಹುಡುಗರು ಬಂದು ಸ್ಥಳಪರೀಕ್ಷೆ ಮಾಡಿ, "ಸಾರ್, ಹೊಂಡದಲ್ಲಿ ಬಿದ್ದೊಗಯ್ತೆ ಕಾರು, ಕಟಿಂಗ್ ತಗೋವಾಗ ನೋಡ್ಕೋಬಾರ್ದಾ ಸಾರ್" ಎನ್ನತೊಡಗಿದರು. ಇನ್ನೂ ಕೆಲವರು ಕಾರಿನ ಮಾಡೆಲ್ಲು, ಹೆಸರು, ಕಂಪೆನಿ ಇತ್ಯಾದಿಗಳನ್ನು ಪರೀಕ್ಷಿಸಿ, "ಅಯ್ಯೋ ಹೋಂಡಾ ಬೇರೆ, ಹೊಂಡದಲ್ಲಿ ಬಿದ್ದೊಯ್ತಲ್ಲಾ" ಎಂದರು.!!!

ಅಷ್ಟರಲ್ಲಿ ಎಶ್ಟಿ ಗಾಡಿಯ ಡ್ರೈವರನೂ ಕಂಡಕ್ಟರನೂ ಇಳಿದು ಬಂದು ನನ್ನ ಅಸಹಾಯಕ ಮುಖವನ್ನು ನೋಡಿ ಕನಿಕರದಿಂದ, "ಸಾರ್ ಎಲ್ಲಾ ಸೇರಿ ಎತ್ತಿಬಿಡೋಣಾ ಗಾಡೀನಾ, ಬೇರೆ ದಾರಿ ಇಲ್ಲಾ ಬುಡಿ" ಎಂದರು. ಸುಮಾರು 15 ಜನ ಸೇರಿ ಬಹುಪ್ರಯತ್ನದಿಂದ ಗಾಡಿಯನ್ನು ಹೊಂಡದಿಂದ ಮೇಲೆತ್ತಿದರು. ಇಲ್ಲವಾದಲ್ಲಿ ಹೋಂಡಾ ಕ್ಕೆ ಇನ್ನೆಷ್ಟು ದಿನ ಹೊಂಡದಲ್ಲಿ ಮುಳುಗಿರುವ ಭಾಗ್ಯವಿತ್ತೇನೋ. ಆ ಕ್ಷಣಕ್ಕೆ, ಎಲ್ಲಾ ಟ್ಯಾಕ್ಸಿಯವರು "ತಂದೆ ತಾಯಿಯ ಕೃಪೆ" ಎಂದು ಹಿಂದಿನ ಗಾಜಿನ ಮೇಲೆ ಬರೆಸಿದಂತೆ, ನಾನೂ ಸಹಾ "ರಾಮೋಹಳ್ಳಿಯ ಜನರ ಕೃಪೆ" ಎಂದು ಬರೆಸಬೇಕೆಂದುಕೊಂಡೆ.!!

 

Thursday, January 3, 2013

ಕಿಶೋರ್ ಮಾಸ್ತರ್ರು ಹಾಗೂ ಭತ್ತದ ಕಾಳು



ನನ್ನ ಅತಿ ಪ್ರೀತಿಯ ಸರ್ ಅವರು. ನನಗೆ 1,2,3 ನೇ ಇಯತ್ತೆ ಕಲಿಸಿದವರು. ಏನೂ ಕಲಿಸದೇ ಬಹುಪ್ರೀತಿಯಿಂದ ಪರೀಕ್ಷೆಯಲ್ಲಿ ಪಾಸು ಮಾಡಿದವರು :) ಅವರಂಥಹಾ ಶಿಕ್ಷಕರು ಇನ್ನು ಸಿಗುವದು ಕಷ್ಟ ಬಿಡಿ.

ಮೊಳಗೊಮ್ಮೆ ಶಾಲೆ. ನಮ್ಮೂರಿನ ಸುತ್ತಮುತ್ತಲ 10km ಕಾಡಿಗೆ ಅದೊಂದೇ ಶಾಲೆ. ಊರ ಹೆಸರು ಮಳಲಗಾಂವ್ ಅಂತಾದರೂ ಎಲ್ಲರ ಬಾಯಲ್ಲಿ ಅದಕ್ಕೆ ಮೊಳಗೊಮ್ಮೆ ಶಾಲೆ ಎಂದೇ ಹೆಸರು. ನಮ್ಮ ಅಜ್ಜ ಶುರುಮಾಡಿದ ಶಾಲೆ. ಅಲ್ಲಿ ಕಲಿಸುತ್ತಾ ಇದ್ದಿದ್ದು ಕೇವಲ 5ನೇ ಇಯತ್ತೆವರೆಗೆ ಮಾತ್ರ. ಶಾಲೆಯಲ್ಲಿ ಇದ್ದವರೇ 15-20 ಮಂದಿ ಮಕ್ಕಳು. ಅದಕ್ಕೆ ಕಿಶೋರ್ ಸರ್ ಹಾಗೂ ಭಯಾನಕ ಸಿಟ್ಟಿನ ಜ್ನಾನದೇವ್ ಸರ್ ಎಂಬಂಥಾ ಎರಡು ಜನ ಶಿಕ್ಷಕರು.

ಕಿಶೋರ್ ಮಾಸ್ತರರು ಆಗ ಶಾಲೆಗೆ ಹಿರಿಯ ಶಿಕ್ಷಕರು. ಗುರುಗಳ ಬಗ್ಗೆ ಈ ರೀತಿ ಹೇಳಬಾರದು. ಆದರೂ ಎಲ್ಲರಿಗೂ ಗೊತ್ತಿರುಂತೆ ಅವರು ಮಹಾನ್ ಕುಡುಕರು :) ಅವರ ಹೆಂಡತಿ ಅವರನ್ನು ಬಿಟ್ಟು ಯಾರದೋ ಜೊತೆ ಓಡಿ ಹೋಗಿದ್ದಳಂತೆ. ಅದಾದ ಮೇಲೆ ಮಾನಿನಿಯ ಸಹವಾಸಕ್ಕೆ ಹೋಗದೇ ಮದ್ಯಪಾನದಲ್ಲಿ ಅನುರಕ್ತರಾದವರು ಇನ್ನೂ ಹಾಗೆಯೇ ಇದ್ದಾರೆ :)

ಆಗ ನಾನು ಒಂದನೇ ಇಯತ್ತೆಯಲ್ಲಿ ಇದ್ದೆ. ಕಿಶೋರ್ ಸರ್ ಪ್ರತಿದಿನ ಬೆಳಿಗ್ಗೆ ಶಾಲೆಗೆ ಅಪ್ಪಟ ಇಸ್ತ್ರಿ ಮಾಡಿದ ಬಿಳೀ ಅಂಗಿ & ಕರೀ ಪ್ಯಾಂಟು ಧರಿಸಿ ಸರಿಯಾದ ಸಮಯಕ್ಕೆ ಹಾಜರಾಗಿರುತ್ತಿದ್ದರು. ಅವರೆಂದರೆ ಮಕ್ಕಳಿಗೆಲ್ಲಾ ಪ್ರಾಣ. ಯಾಕೆಂದರೆ ಅವರು ಏನನ್ನೂ ಕಲಿಸುತ್ತಿರಲಿಲ್ಲ. ಯಾರಿಗೂ ಹೊಡೆದು ಬಯ್ದು ಮಾಡಿ ಗೊತ್ತಿದ್ದವರಲ್ಲ. ಬೆಳಿಗ್ಗೆಯಿಂದಲೇ ಪಾನಸೇವನೆ ಮಾಡಿ, ಎಲ್ಲೋ ನೋಡುತ್ತಾ, ಯಾವುದೋ ವಿಚಿತ್ರವಾದ ಮಂದಹಾಸವನ್ನು ಮುಖದ ಮೇಲೆ ಧರಿಸಿ ಮರದ ಖುರ್ಚಿಯ ಮೇಲೆ ಸದಾ ಸುಖಾಸೀನರಾಗಿರುತ್ತಿದ್ದರು. ಕ್ಲಾಸಿನಲ್ಲಿ ನಾವೆಲ್ಲ ಮಕ್ಕಳು ನಮಗೆ ಬೇಕಾದ ಆಟವಾಡಿಕೊಂಡು ಇರುತ್ತಿದ್ದೆವು.

ಶಾಲೆಗೆ ಹೋದ ಕೂಡಲೇ, ಚಿಕ್ಕವನಾಗಿದ್ದ ನನ್ನನ್ನು ಕರೆದು, "ಬಾರೋ ಚಚಿ ಇಲ್ಲಿ" ಎಂದು ಪ್ರೀತಿಯಿಂದ ಅವರ ಹೆಗಲ ಮೇಲೆ ಕೂರಿಸಿಕೊಳ್ಳುತ್ತಿದ್ದರು. ಬಹಳ ಸೌಂದರ್ಯಪ್ರಜ್ನೆಯವರಾಗಿದ್ದರಿಂದ ಅವರಿಗೆ ತಲೆಯಲ್ಲಿ ಬಿಳಿಯ ಕೂದಲು ಹುಟ್ಟಿದರೆ ಸುತಾರಾಂ ಆಗುತ್ತಿರಲಿಲ್ಲ. ಅದಕ್ಕೇ ಅವರ ಹೆಗಲ ಮೇಲೆ ನನ್ನ ಕೂರಿಸಿಕೊಂಡು, ಒಂದು ಭತ್ತದ ಕಾಳನ್ನು ಕೊಟ್ಟು, ಅವರ ಕೇಶರಾಶಿಯಲ್ಲಿ ಅಲ್ಲಲ್ಲಿ ಇರುತ್ತಿದ್ದ ಬಿಳಿಯ ಕೂದಲನ್ನು ಹೆಕ್ಕಿ ಕಿತ್ತು ತೆಗೆಯಲು ಹೇಳುತ್ತಿದ್ದರು. ನಾನಂತೂ ಬಹು ಆನಂದದಿಂದ ಆ ಕೆಲಸವನ್ನು ಗಮನಕೊಟ್ಟು ಬಹು ಮುತುವರ್ಜಿಯಿಂದ ಮಾಡುತ್ತಿದ್ದೆ. ಎಲ್ಲ ಮಲೆನಾಡಿನ ಮನೆಗಳಂತೆಯೇ ನಮ್ಮ ಮನೆಯಲ್ಲಿ ಸಹಾ ಯಾರೂ ಶಾಲೆಯಲ್ಲಿ ನಮ್ಮ ಮಕ್ಕಳು ಏನು ಕಲಿಯುತ್ತಿದ್ದಾರೆ ಎಂದು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಶಾಲೆಯಲ್ಲಿ ಕಿಶೋರ್ ಸರ್ ಅವರ ಬಿಳಿ ಕೂದಲು ಕೀಳುವದು, ಮನೆಯಲ್ಲಿ ಸುಬ್ಬಣ್ಣನ ಜೊತೆ ಗಿಲ್ಲಿ-ದಾಂಡು ಆಡುವದು. ಆಹಾ ಎಂಥ ಸುಂದರ ಜೀವನ :) ನಾನಂತೂ 3ನೇ ಇಯತ್ತೆಯವರೆಗೆ ಅ,ಆ ವನ್ನೂ ಕಲಿತಿರಲಿಲ್ಲ !!!

ನಾನು 3ನೇ ಇಯತ್ತೆವರೆಗೂ, "ಇದನ್ನೇ" ಕಲಿಯಲು ಎಲ್ಲರೂ ಶಾಲೆಗೆ ಹೋಗುತ್ತಾರೆ ಅಂದುಕೊಂಡಿದ್ದೆ !!!

ಕಿಶೋರ್ ಸರ್ ನಮ್ಮ ಮನೆಯ ಕೆರೆಯಲ್ಲಿ ಪಾನಮತ್ತರಾಗಿ ಈಜುತ್ತಾರೆ, ಎಲ್ಲಾದರೂ ಅವಘಡವಾದೀತು ಎಂದು ಎಲ್ಲ ಸೇರಿ ಅವರನ್ನು ಟ್ರಾನ್ಸ್-ಫರ್ ಮಾಡಿಸಿಬಿಟ್ಟರು. ಆ ದಿನ ನಮ್ಮೂರಿನ ಎಲ್ಲಾ ಮಕ್ಕಳ ಪಾಲಿಗೆ ಕರಾಳ ದಿನ.
ನಾನಂತೂ "ಮಾಸ್ತರ್ರು ಬೇರೆ ಆಯ್ದ್ರು, ಮಗ್ಗಿ ಕೇಳ್ತ್ರು, ಯನ್ಗೆ ಹೊಟ್ಟೆ ನೋಯ್ತು, ಶಾಲ್ಗೆ ಹೋಗ್ತ್ನಿಲ್ಲೆ" ಎಂದು ಸುಮಾರು ದಿನಗಳವರೆಗೆ ಗೋಳೊ ಎಂದು ಅಳುತ್ತಾ ಶಾಲೆಯನ್ನು ತಪ್ಪಿಸಿದ್ದೆ.

ಈಗೆಲ್ಲಾ Lkg,Ukg, ಯಲ್ಲೇ kgಗಟ್ಟಲೇ ಪುಸ್ತಕ ಹೊತ್ತು, ಸದಾ ಶಾಲೆಯ ಟ್ಯೂಷನ್ನು, ಹೋಮ್-ವರ್ಕು ಗಳ ಬಗ್ಗೆ ಚಿಂತಿಸುವ ಮಕ್ಕಳನ್ನು ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ. ಕನ್ನಡ ಶಾಲೆಯಲ್ಲಿ ನಮ್ಮ ಅಮಾಯಕತೆಗೆ ಏನೂ ಕುಂದು ತರದೇ, ಪಾಸು ಮಾಡಿಸಿ, ಶಾಲೆ "ಕಲಿಸಿದ", ಇಂದಿಗೂ ಒಂದು ಕಾಲದ ಮೊಳಗೊಮ್ಮೆ ಶಾಲೆಯ ಮಕ್ಕಳ ನೆಚ್ಚಿನ ಕಿಶೊರ್ ಮಾಸ್ತರ್ ರಿಗೆ ಈ ಬ್ಲಾಗ್ ಪೋಸ್ಟ್ ಅರ್ಪಿಸುತ್ತಿದ್ದೇನೆ...

Thursday, January 26, 2012

ಯಾಕ್ ಧಾಳಿ

2011ರ ಜೂನ್ ನಲ್ಲಿ ನಾವೆಲ್ಲ ರೂಪಿನ್ ಪಾಸ್ ಎಂಬ ಹಿಮಾಲಯನ್ ಟ್ರೆಕ್ ಗೆ ಹೋದಾಗ ನಡೆದ  ಘಟನೆ... ಉತ್ತರಾಖಂಡದ ದೌಲಾದಿಂದ 5 ದಿನ ಸತತವಾಗಿ ಹಿಮಾಲಯದ ಪರ್ವತಗಳನ್ನು ಹತ್ತಿ ಬಹಳ ಕಷ್ಟದಲ್ಲಿ ರೂಪಿನ್ ಪಾಸ್ (15,250 feet altitude) ಅನ್ನು ದಾಟಿ ಹಿಮಾಚಲ ಪ್ರದೇಶದ ರೌಂತಿಗಢ್ ದಿಕ್ಕಿನಲ್ಲಿ ಸಾಗಿದೆವು. ರೂಪಿನ್ ಪಾಸ್-ನ ಕೊನೆಯ ಏರನ್ನು ಏರಿದ ಕ್ಷಣಗಳು ಮಾತ್ರ ಬಹಳ ಭಯಾನಕವಾಗಿದ್ದವು. ಸ್ವಲ್ಪ ಎಡವಿದರೂ ಕಾಲು ಜಾರಿ ನೀವು ಎಂದೂ ಯಾರೂ ಹುಡುಕಲಾಗದ ಕಂದಕಕ್ಕೆ ಜಾರಿ ಬೀಳುತ್ತೀರಿ. ಅಲ್ಲಿಗೆ ನಿಮ್ಮ ಕಥೆ ಮುಕ್ತಾಯವಾದಂತೆ !!!

ಯಾವ ಚಾರಣವಾದರೂ ಸರಿ, ಒಮ್ಮೆ ಪರ್ವತದ ಏರನ್ನು ಮುಟ್ಟಿ ತಿರುಗಿ ಇಳಿಯುವಾಗ, ಅಂತೂ ಕಷ್ಟದ ಚಾರಣ ಮುಗಿಯಿತೆಂದು ನೀವು ಅತಿ ನಿರಾಳರಾಗಿರುತ್ತೀರಿ.  ನಿಮ್ಮ ಕಾಲುಗಳು ಬಳಲಿ ಸೋತು ಶಕ್ತಿಹೀನವಾಗಿ ಜೋಲುತ್ತಿರುತ್ತವೆ. ಅಂತೂ ಇಂತೂ ಕೆಳಗೆ ಮುಟ್ಟಿ ನಿಮ್ಮ ವಾಹನವನ್ನೋ ಇಲ್ಲ ಮುಂದಿನ ಕ್ಯಾಂಪ್ ಅನ್ನೋ ಮುಟ್ಟಿದರೆ ಸಾಕು ಎಂಬ ತುಡಿತ ಮನದಲ್ಲಿ ತುಂಬಿರುತ್ತದೆ. ಹಾಗೆಯೇ ನಮ್ಮ ಗುಂಪಿನ ಕೃಷ್ಣ, ಮಿಥುನ್, ಸಂದೀಪ್ (ಚಿಕ್ ಹುಡುಗ), ಅರುಣ್, ರಸೂಲ್ ಹಾಗೂ ಇತರ ಚಾರಣಿಗರು ಎಲ್ಲರೂ ನಮ್ಮ ನಮ್ಮ ಪಾಡಿಗೆ ಏನೇನೋ ಹರಟುತ್ತಾ ರೂಪಿನ್ ಪಾಸಿನ ಪರ್ವತದ ಇಳಿಜಾರಿನಲ್ಲಿ ಇಳಿಯುತ್ತಿದ್ದೆವು. ಹಿಮ ಕರಗಿದ ಪರ್ವತಗಳ ಮೈಮೇಲೆ ತೆಳ್ಳನೆಯ ಹಸಿರು ಹುಲ್ಲಿನ ಹೊದಿಕೆ ಸುತ್ತಿಕೊಂಡಿದ್ದರಿಂದ ಬಹುದೂರದವರೆಗಿನ ದೃಶ್ಯಗಳು ಗೋಚರಿಸುತ್ತಿದ್ದವು.

ಹಿಮಾಲಯದ ಹುಲ್ಲಿನಿಂದಾವೃತವಾದ ಬೆಟ್ಟಗಳಲ್ಲಿ ಯಾಕ್ ಮೃಗಗಳು ಗೋಚರಿಸುವದು ಸಾಮಾನ್ಯ. ಆದ್ದರಿಂದ ದೂರದಲ್ಲಿ ನಮ್ಮೆಡೆಗೇ ನೋಡುತ್ತಾ ನಿಂತಿದ್ದ 2 ಬೃಹತ್ ಯಾಕ್ ಮೃಗಗಳನ್ನು ನೋಡಿದರೂ ನಮಗೆ ಅದು ಅಂಥಹಾ ವಿಶೇಷವೆಂದೆನಿಸಲಿಲ್ಲ. ಹಾಗೇ ನಮ್ಮ ಸಹಚಾರಣಿಗರಿಂದ ಸ್ವಲ್ಪ ದೂರದಲ್ಲಿ ನಡೆಯುತ್ತಿದ್ದ ನಮಗೆ "ಹೇ ..ಹೇ... ಓಡ್ರೋ...  ಓಡ್ರೋ... ಯಾಕ್ ನಮ್ಮ್ ಕಡೇನೇ ಓಡಿ ಬರ್ತಾ ಇದೆ ಕಣ್ರೋ...!!!" ಎಂದು ಕೂಗುತ್ತಾ ನಮ್ಮೆಡೆಗೆ ಓಡಿ ಬರುತ್ತಿರುವ ಗೆಳೆಯರು ಕಂಡರು... ಅವರ ಹಿಂದೆ ಬೆನ್ನಟ್ಟಿ ಬರುತ್ತಿದ್ದ ಯಾಕ್ ಗಳನ್ನ ನೋಡಿ ನಾವೂ ಕಿತ್ತಾಬಿದ್ದು ಇರುವ ಒಂದೇ ಕಾಲುದಾರಿಯಲ್ಲಿ ಓಡಿದೆವು... ಆದರೆ ಎಲ್ಲೆಂದು ಓಡುವದು? ಒಂದೆಡೆ ಕಡಿದಾದ ಪ್ರಪಾತ. ಇನ್ನೊಂದೆಡೆ ನಮ್ಮಿಂದ ಹತ್ತಲಾಗದ ಬೆಟ್ಟ.!!!

ಪುಣ್ಯಕ್ಕೆ ಸ್ವಲ್ಪದರಲ್ಲೇ ಕುರಿಕಾಯುವ ಕುರುಬರು ಛಳಿಗಾಲಕ್ಕೆಂದು ಮಾಡಿಕೊಂಡಿದ್ದ ಕಲ್ಲಿನ ಮನೆಯೊಂದು ಸಿಕ್ಕಿತು. ನಾನು ಅದರಲ್ಲಿ ಹೊಕ್ಕುತ್ತಿದ್ದಂತೆಯೇ ಅಟ್ಟಿಬರುತ್ತಿದ್ದ ಒಂದು ಬೃಹತ್ ಯಾಕ್ ಓಡಿ ಬರುತ್ತಿದ್ದ ಕೃಷ್ಣನಿಂದ ಒಂದೇ ಮೀಟರ್ ದೂರದಲ್ಲಿ ಇತ್ತು !!!! ಕೂಡಲೇ ಕೈಗೆ ಸಿಕ್ಕಿದ ಒಂದು ದೊಡ್ಡ ಕಲ್ಲನ್ನು ಆ ಯಾಕ್ ಕಡೆಗೆ ಎಸೆದೆ. ಏನಾಯಿತೋ ಏನೊ, ಹತ್ತಾರು ಮನುಷ್ಯರನ್ನು ಅಟ್ಟಿಕೊಂಡು ಬರುತ್ತಿದ್ದ ಎರಡೂ ಯಾಕ್ ಗಳು ನಾವು ಮುಂದೆ ಹೋಗಬೇಕಾಗಿದ್ದ  ದಾರಿಯಲ್ಲಿ ಓಡಿದವು. 

ಮರುಜೀವ ಸಿಕ್ಕಂತಾದ ನಾವೆಲ್ಲ ಸ್ವಲ್ಪ ಸಮಯ ನಾವೆಲ್ಲ ಸುಧಾರಿಸಿಕೊಂಡು ಯಾಕ್ ಗಳು ಎಲ್ಲಿ ಹೋದವೆಂದು ನೋಡಲು ಸ್ವಲ್ಪ ಮುಂದೆ ಹೋದೆವು. ಆದರೆ ದಿಬ್ಬದ ಆಚೆ ನಿಂತಿದ್ದ ಅವುಗಳು ಮತ್ತೆ ವಿರುದ್ಧ ದಿಕ್ಕಿನಲ್ಲಿ ನಮ್ಮೆಡೆಗೆ ಓಡಿಬರಲಾರಂಭಿಸಿದವು !!! ನಾವೆಲ್ಲಾ ಕೈನಲ್ಲಿ ಕಲ್ಲುಗಳು, ನಮ್ಮ ಚಾರಣದ ಕೋಲುಗಳನ್ನ ಎತ್ತಿತೋರಿಸುತ್ತಾ  ಪುರಾತನಕಾಲದ ಸೈನಿಕರಂತೆ "ಹೋಯ್ ಹೋಯ್ ಹೋಯ್ ಹೋಯ್" ಎಂದು ಭಯ-ರುದ್ರಾವೇಷದಲ್ಲಿ  ಕಿರುಚತೊಡಗಿದೆವು...!!! ಆದರೂ ಆ ಯಾಕ್ ಗಳು ಏನೂ ಹೆದರದೆ ನಮ್ಮನ್ನೇ ದಿಟ್ಟಿಸಿ ನೋಡುತ್ತಾ ನಿಂತಿದ್ದವು...

ಪರಿಸ್ಥಿತಿ ಹಾಗೇ ಇದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ!. ನಮ್ಮ ಕಿರುಚಾಟವನ್ನು ಕೇಳಿದ ನಮ್ಮ ಗೈಡ್ ದೂರದಿಂದ ತಿರುಗಿ ಓಡಿಬಂದು ಎರಡೂ ಯಾಕ್ ಗಳನ್ನು ಬೆಟ್ಟದ ಮೇಲೆಡೆಗೆ ಓಡಿಸಿದ..

ನಮ್ಮ ಗೈಡ್ ಹೇಳಿದ್ದು, "ಇಲ್ಲಿ ಹಳ್ಳಿಯವರು ಯಾಕ್ ಗಳಿಗೆ ತಿನ್ನಲು ಉಪ್ಪನ್ನು ಕೊಡುತ್ತಾರೆ. ಉಪ್ಪು ಎಂದರೆ ಅವಕ್ಕೆ ಎಲ್ಲಿಲ್ಲದ ಪ್ರೀತಿ. ಆದ್ದರಿಂದ ಅವು ನಿಮ್ಮೆಡೆಗೆ ಓಡಿಬಂದಿರಬೇಕು" ಎಂದು. ಅವರು ಕೊಟ್ಟ ಕಾರಣ ಸಮಂಜಸವಾದರೂ ಒಪ್ಪಿಕೊಳ್ಳುವದು ಅಸಾಧ್ಯವಾಗಿತ್ತು. ಆ ದಿನ ಯಾಕ್ ಗಳು ನಮ್ಮನ್ನು ಅರ್ಥಾತ್ ಅಟ್ಟಿಸಿಕೊಂಡೇ ಬಂದಿದ್ದವು ಎಂಬುದು ನಮ್ಮ ಅನಿಸಿಕೆ. ಯಾಕೆಂದು ಗೊತ್ತಿಲ್ಲ.

ಕಡಿದಾದ ಇಳಿಜಾರು ಪರ್ವತಗಳ ಕಾಲುಹಾದಿಯಲ್ಲಿ, ಬೇಡವಾಗಿದ್ದ ಯಾಕ್ ನ ನಿರೀಕ್ಷೆಯಲ್ಲಿ ಮತ್ತೆ ಮತ್ತೆ ಹಿಂತಿರುಗಿ ಭಯದಿಂದ ನೋಡುತ್ತಾ ನಮ್ಮ ಮುಂದಿನ ಕ್ಯಾಂಪ್ ಕಡೆಗೆ ತೆರಳಿದೆವು.... ಇಂದಿಗೂ ಆ ಘಟನೆಯನ್ನು ನೆನೆಸಿಕೊಂಡರೆ ಕೈಯಲ್ಲಿ ಆಯುಧಗಳಿಲ್ಲದ ಮನುಷ್ಯ ಎಷ್ಟು ನಿಸ್ಸಹಾಯಕ ಎಂಬುದು ಅರಿವಾಗುತ್ತದೆ... 
       

Saturday, November 12, 2011

ಯೋಗಾಚಾರ್ಯ ಬಿ ಕೆ ಎಸ್ ಅಯ್ಯಂಗಾರ್

ಯೋಗಾಚಾರ್ಯ ಬಿ ಕೆ ಎಸ್ ಅಯ್ಯಂಗಾರ್ ... ಇವರ ಬಗ್ಗೆ ನಾನೇನೂ ಹೊಸದಾಗಿ ಪರಿಚಯ ಮಾಡಿಕೊಡಬೇಕಾಗಿಲ್ಲ... ಕೆಲದಿನಗಳ ಹಿಂದೆ ಪುಣೆ ನಗರಿಗೆ ಹೊಸ ಕೆಲಸಕ್ಕೆ ಸೇರಿದ ನಂತರ ಪುಣೆಯಲ್ಲಿರುವ “ರಮಾಮಣಿ ಯೋಗ ಕೇಂದ್ರ”ಕ್ಕೆ ಯೋಗ ಕಲಿಯಲು ಸೇರಿಕೊಂಡೆ.

ಇದರ ಸ್ಥಾಪಕರು ಸುಪ್ರಸಿದ್ಧ ಯೋಗಾಚಾರ್ಯ ಬಿ ಕೆ ಎಸ್ ಅಯ್ಯಂಗಾರ್ ಅವರು. ಅವರು ಎಲ್ಲರ ಮಾತಿನಲ್ಲಿ ಪ್ರೀತಿಯ ಗುರೂಜಿ ಎನಿಸಿಕೊಳ್ಳುತ್ತಾರೆ. ಎಲ್ಲ ಯೋಗಾರ್ಥಿಗಳಿಗೆ ಕಣ್ಣೆದುರಿಗಿನ ದೇವರೇ ಅವರು. ಕಣ್ಣೆದುರಿಗೆ ಬಂದು ನಿಂತರೆ ಸಿಂಹವೇ ನಿಮ್ಮ ಎದುರಿಗೆ ನಿಂತು ಘರ್ಜಿಸುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ!!!. ಅಂಥಹ ಅಜಾನುಬಾಹು ಶಾರೀರ ಹಾಗೂ ವ್ಯಕ್ತಿತ್ವ ಅವರದು. ವಯಸ್ಸು 93 ಆದರೂ ಪ್ರತೀದಿನ 3-4 ಗಂಟೆಗಳ ಕಾಲ ಯೋಗಭ್ಯಾಸ ನಡೆಸಿಯೇ ಇರುತ್ತಾರೆ.
     ರಮಾಮಣಿ ಯೋಗ ಕೇಂದ್ರಕ್ಕೆ ನೀವು ಕಾಲಿಡುತ್ತಿದ್ದಂತೆಯೇ ಗುರೂಜಿಯವರ ಅನೇಕ ಯೋಗಾಸನಗಳ ಭಂಗಿಯ ಮೂರ್ತಿಯನ್ನು ಕಾಣುತ್ತೀರಿ. ಒಳಗೆ ಹೋದಂತೆ ಅವರಿಗೆ ಸಿಕ್ಕಿದ ಸಾವಿರಾರು ಪ್ರಶಸ್ತಿ ಪತ್ರಗಳನ್ನು ಗೋಡೆಯ ಮೇಲೆ ಕಾಣಬಹುದು. ಯೋಗದ ಕ್ಲಾಸಿಗೆಂದು ಇರುವ ಹಾಲ್ ಗಳಲ್ಲಿ ಗುರೂಜಿಯವರ ಎಲ್ಲ ಯೋಗ ಭಂಗಿಗಳ ಚಿತ್ರಪಟಗಳು ಇವೆ. ನಿಮಗೆ ಬೇಕಾದ ಯೋಗಸಂಬಂಧ ಪುಸ್ತಕಗಳನ್ನೂ ಇಲ್ಲಿ ಕೊಂಡು ಓದಬಹುದು. ಯೋಗಾರ್ಥಿಗಳಲ್ಲಿ ಇತರೆ ದೇಶದವರೇ ಹೆಚ್ಚು.  
 
ವರ್ಷದಲ್ಲಿ 5 ಸಲ ಅವರು ಯೋಗದ ಬಗ್ಗೆ ಮಕ್ಕಳಿಗೆ ತಮ್ಮ ಅನಿಸಿಕೆಗಳನ್ನು ಹೇಳುತ್ತಾರೆ. ಅವರ ಮಾತಿನಲ್ಲಿ ಉತ್ತರಗಳಿಗಿಂತ ಪ್ರಶ್ನೆಗಳೇ ಜಾಸ್ತಿ. ಅದೇ ನಿಜವಾದ ಗುರುವಿನ ಲಕ್ಷಣವೆಂದೆನಿಸುತ್ತದೆ. ಯೋಗದ ವಿವಿಧ ಅಂಗಗಳು ಯಾವುವು, ಅವುಗಳನ್ನು ಶಿಸ್ತುಬದ್ಧವಾಗಿ ಹೇಗೆ ಅಭ್ಯಸಿಸಬೇಕು ಮುಂತಾದುವುಗಳ ಬಗ್ಗೆ ಅವರ ಮಾತಿನಲ್ಲಿಯೇ ನೀವು ಕೇಳಬೇಕು. ಅವರ ಎದುರಿಗೆ ನಿಂತರೆ ನಿಮಗಿರುವ  ಅನೇಕಾನೇಕ ಯೋಗದ ಮೇಲಿನ ಪ್ರಶ್ನೆಗಳು ಮತ್ತು ಅನುಮಾನಗಳು ಮಾಯವಾಗಿಬಿಡುತ್ತವೆ. ಮೊನ್ನೆ ಅವರು ಪತಂಜಲಿ ಯೋಗಸೂತ್ರಗಳ ಬಗ್ಗೆ ನೀಡಿದ 2ಗಂಟೆಗಳ ಭಾಷಣವನ್ನು ಕೇಳಿ ಯೋಗಕೇಂದ್ರದ ಮಕ್ಕಳೆಲ್ಲಾ ದಂಗಾಗಿ ಹೋಗಿದ್ದರು. ಒಂದು ವ್ಯಕ್ತಿ ಒಂದು ಜೀವಮಾನದ ಅವಧಿಯಲ್ಲಿ ಇಷ್ಟೆಲ್ಲ ಜ್ನಾನವನ್ನು ಗಳಿಸಲು ಸಾಧ್ಯವೇ ಎಂದು.  

ಗುರೂಜಿಯವರ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ಯೋಗದ ಹೆಸರಿನಲ್ಲಿ ದುಡ್ಡು ಮಾಡುವ ದಂಧೆಗೆ ಇಳಿದಿರುವ ಇಂದಿನ ಕಾಲದಲ್ಲಿ ಇಂಥಹ ಮಹಾನ್ ಗುರುಗಳು ಪ್ರಂಪಂಚದಲ್ಲಿ ಸಿಗುವದೇ ವಿರಳ..
ಇಂಥಹ ಯೋಗಾಚಾರ್ಯರನ್ನು ನೋಡುವ ಅವರ ಯೋಗಕೇಂದ್ರದಲ್ಲಿ ಕಲಿಯುವ ಅವಕಾಶ ಸಿಕ್ಕಿದ್ದು ನನ್ನ ಜೀವನದ ಮಹಾನ್ ಭಾಗ್ಯದ ವಿಚಾರ.

Tuesday, June 14, 2011

ಮತ್ತೆ ಮತ್ತೇಕೆ ಓಡಿ ಬರುವೆ ನಾ

ಮತ್ತೆ ಮತ್ತೇಕೆ ಓಡಿ ಬರುವೆ ನಾ
ನಿನ್ನಾ ಮಡಿಲಿಗೆ,

ಮರೆತಿದ್ದೆ ನಿನ್ನಾ ತಣ್ಣೀರಿನ
ಪ್ರೀತಿಯ ಸ್ಪರ್ಶ,
ಅದೆಲ್ಲಿ ಕಳೆದಿದ್ದೆ ನಿನ್ನಲ್ಲಾಡಿದ
ಉಸಿರಿನ ಪುಳಕ,
ಕಳೆದಿದ್ದೆ ನೀಲಾಬಾನಿನ
ತಂಪನೆಯ ನೋಟ,
ಮರೆತಿದ್ದೆ ದಟ್ಟಾರಣ್ಯದ
ಹಕ್ಕಿಗಳ ಚಿಲಿಪಿಲಿ ನಾದ,

ಕಾಣದ ದಾರಿಗೆ,
ಗುರಿಯಿರದ ಬದುಕಿಗೆ,
ಹುಚ್ಚು ಓಟದ ಮನಕೆ,
ಜೀವ ನೀಡಲು ಕೈ
ಎಳೆದು ಕರೆಯುವೆ ನೀ,

ಮತ್ತೆ ಮತ್ತೇಕೆ ಓಡಿ ಬರುವೆ ನಾ
ಓ ಹಿಮಾಲಯವೇ ನಿನ್ನಾ ಮಡಿಲಿಗೆ,
ತಬ್ಬಲಿಯ ಮಗುವಿನಂತೆ...

Tuesday, May 10, 2011

ಒಳಪ್ಯಾಡ್ಲ ಸೈಕಲ್ಲು

ಮಲೆನಾಡಿನ ಮಕ್ಕಳ ಸೈಕಲ್ ನ ಕಥೆಗಳು ಯಾವತ್ತೂ ರೋಚಕ. (ಈಗ ನೇರವಾಗಿ ಬೈಕು ಏರುತ್ತಾರೆ ಬಿಡಿ...) ಇದು ಸುಮಾರು 1990 ರ ನಂತರದ ಕಥೆ.ನಮ್ಮ ಊರುಗಳಲ್ಲಿ ಎಲ್ಲರ ಮನೆಗಳಲ್ಲೂ ಸಾಮಾನ್ಯವಾಗಿ ಇರುತ್ತಿದ್ದ 24 ಇಂಚಿನ ಹೀರೋ ಸೈಕಲ್ಲನ್ನು ಯಶಸ್ವಿಯಾಗಿ ಓಡಿಸುವದು ಮಕ್ಕಳಿಗೆಲ್ಲಾ ಒಂದು ಪ್ರತಿಷ್ಠೆಯ ಮಾತಾಗಿತ್ತು. ಸಾಮಾನ್ಯವಾಗಿ ಒಂದನೆಯ ಕ್ಲಾಸಿನ ಮಕ್ಕಳಿಂದ ಏಳನೆಯತ್ತೆವರೆಗಿನ ಮಕ್ಕಳಿಗೂ ಅಷ್ಟು ದೊಡ್ಡ ಸೈಕಲ್ಲ ಸೀಟಿನ ಮೇಲೇರಿ ಸವಾರಿ ಮಾಡುವುದು ಸಾಧ್ಯವಿರಲಿಲ್ಲ. ಹಾಗೇನಾದರೂ ಸೊಕ್ಕುಮಾಡಿ ಹತ್ತಿದರೆ ಸ್ವಲ್ಪ ದೂರ ಹೋಗುವಷ್ಟರಲ್ಲಿ ಬಿದ್ದು ನೆಲದ ಪಾಲಾಗುತ್ತಿದ್ದುದು ಹೊಸ ವಿಷಯವಾಗಿರಲಿಲ್ಲ.

ಆದ್ದರಿಂದ ಮಕ್ಕಳೆಲ್ಲ ತಮ್ಮ ಎರಡು ಪಟ್ಟು ದೊಡ್ಡದಿರುವ ಸೈಕಲ್ಲನ್ನು ಮಣಿಸಿ ಓಡಿಸಲು "ಒಳಪ್ಯಾಡ್ಲು" ಎಂಬ ನೂತನ ವಿಧಾನವನ್ನು ಬಳಸುತ್ತಾರೆ. ಬಹುಷ: ಸೈಕಲ್ಲು ಕಂಡುಹಿಡಿದವನಿಗೂ ಈ ಥರಹ ಸೈಕಲ್ಲನ್ನು ಓಡಿಸಬಹುದು ಎಂದು ಅನಿಸಿರಲಿಕ್ಕಿಲ್ಲ.!!! ಒಂದು ಕಾಲನ್ನು ಎಡಕಿನ ಪೆಡಲ್ಲಿನ ಮೇಲಿಟ್ಟು, ದಂಡಿಗೆಯ ಒಳಗಿಂದ ಕಾಲನ್ನು ಒಳತೂರಿ ಆಚೆಯ ಪ್ಯಾಡ್ಲ ಮೇಲಿಟ್ಟು ತುಳಿಯುತ್ತಾ, ಎಡಕಿನ ಕೈಯಿಂದ ಸೈಕಲ್ಲಿನ ದಿಕ್ಕನ್ನು ನಿಭಾಯಿಸುತ್ತಾ, ಬಲಕೈಯನ್ನು ಸೀಟಿನ ಮೇಲಿಟ್ಟು ಬ್ಯಾಲೆನ್ಸ್ ಮಾಡುವ ರೀತಿ ಅತ್ಯದ್ಭುತ.. ದುರದೃಷ್ಟವಶಾತ್ ನನ್ನಲ್ಲಿ ಅದರ ಫೋಟೋಗಳಿಲ್ಲ...

ಸಾಮಾನ್ಯವಾಗಿ ಮಕ್ಕಳು ಸೈಕಲ್ಲು ಕಲಿಯುತ್ತಾ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಾರೆ ಎಂದು, ನಮಗೆಲ್ಲಾ ಸೈಕಲ್ಲು ಸವಾರಿ ನಿಷಿದ್ಧವಾಗಿತ್ತು. ಆದರೂ ಮಧ್ಯಾಹ್ನ ಊಟವಾದ ನಂತರ ಮಲಗಿ ಗೊರಕೆ ಹೊಡೆಯುತ್ತಿದ್ದ ನಮ್ಮ ಹಿರಿಯರ ಕಣ್ಣು ತಪ್ಪಿಸಿ ಮೇಲಿನಮನೆ ಶ್ರೀಕಾಂತ ಹಾಗೂ ನಾನು ಕದ್ದು ಸೈಕಲ್ಲನ್ನು ಒಳಪ್ಯಾಡ್ಲಿನಲ್ಲಿ ಓಡಿಸಲು ಹರಸಾಹಸಪಡುತ್ತಿದ್ದೆವು. ಆದರೆ ಪ್ರತೀಸಲವೂ ನಾವು ನಾಕುದಾರಿ ಎಂಬ ಜಾಗದಲ್ಲಿದ್ದ ಸ್ವಲ್ಪ ದೂರದ ಮರಳಿನ ರಸ್ತೆಯನ್ನು ದಾಟಿಯೇ ಹೋಗಬೇಕಾಗಿತ್ತು. ಮರಳಿದ್ದಲ್ಲಿ ಸೈಕಲ್ಲಿನವರು ಉದುರಿ ಬೀಳುವದು ಸಾಮಾನ್ಯ :) ನಾವಂತೂ ಎಷ್ಟು ಸಲ ಬಿದ್ದೆವೋ ಗೊತ್ತಿಲ್ಲ. ಆದರೆ ಸೈಕಲ್ಲಿನ ಮೇಲಿಂದ ಬಿದ್ದೆವೆಂದು ಹೇಳಿದರೆ ಬೈಗುಳ ಗ್ಯಾರಂಟಿ. ಅದಕ್ಕೇ ಯಾರಲ್ಲೂ ಈ ಮಾತನ್ನು ಹೇಳುವಂತಿರಲಿಲ್ಲ.

ಆ ಮರಳಿನ ದಾರಿಯಲ್ಲಿ ಹಲವಾರು ಸಲ ಒಳಪ್ಯಾಡ್ಲ್ ಸೈಕಲ್ಲ ಮೇಲಿಂದ ಬಿದ್ದ ಮೇಲೆ, ನಾನು ಶ್ರೀಕಾಂತ ಇಬ್ಬರೂ ಒಂದು ಅಭಿಪ್ರಾಯಕ್ಕೆ ಬಂದೆವು. "ನಮ್ಮೂರಿನ ಪ್ರತಿಯೊಬ್ಬ ಸೈಕಲ್ಲ್ ಹೊಡಿಯುವವನೂ ನಾಕು ದಾರಿಯ ಮರಳಿನ ಜಾಗದಲ್ಲಿ ಒಂದು ಸಲವಾದರೂ ಬಿದ್ದೇ ನಂತರ ಎದ್ದು ಮುಂದೆ ಹೋಗುತ್ತಾನೆ" ಎಂದು !!! ಆದ್ದರಿಂದ ನಾವು ಸೈಕಲ್ಲು ಹೊಡಿಯುವಾಗ ನಾಕುದಾರಿ ಬಂದೊಡನೆ ತನ್ನಿಂತಾನೇ ಸೈಕಲ್ಲಿನ ಕೂಡೆ ಬಿದ್ದುಬಿಡುವ ಆಚರಣೆಯನ್ನು ಮಾಡಿಕೊಂಡೆವು ...ಒಂದು ದಿನ ನನ್ನ ಅಣ್ಣ ನನ್ನನ್ನು ಆತನ ಸೈಕಲ್ಲ ಮೇಲೆ ಕೂಡ್ರಿಸಿಕೊಂಡು ನಾಕುದಾರಿಯಲ್ಲಿ ಹೋದ. ನಾನು ನಿರೀಕ್ಷಿಸಿದಂತೆ ಅವನು ಬೀಳಲೇ ಇಲ್ಲ..ನಾನು ಆಶ್ಚರ್ಯಚಕಿತನಾಗಿ ಕೇಳಿದೆ, "ಏನಣ್ಣಾ ನೀನು ಜೋರಿದ್ದೆ, ನಾಕುದಾರಿಯಲ್ಲಿ ಬೀಳಲೇ ಇಲ್ಲ....?" ...!!!

ಒಳಪ್ಯಾಡ್ಲಿನ ಸೈಕಲ್ಲ ಮೇಲೆ ರೇಸು ಮಾಡಿ ಬಿದ್ದು ಮನೆಗೆ ಬಂದಿದ್ದು ನೆನಪಿಗೆ ಬಂತು..ಹಾಗೇ ಈ ಬರಹ...

Thursday, May 5, 2011

ಅಜ್ಜನ ನೆನಪಿನಲ್ಲಿ - ಕೊಳಲು ನಾದದ ಒಂದು ಸಂಜೆ.

೨೦೧೧ ಮೇ 7 ಕ್ಕೆ ನನ್ನ ಅಜ್ಜ ’ಸುಬ್ರಾಯ ಗಣಪಯ್ಯ ಮಳಲಗಾಂವ’ ಇವರ ಸ್ಮರಣಾರ್ಥ ಒಂದು ಬಾನ್ಸುರಿ ಜುಗಲ್ಬಂದಿ ಕಾರ್ಯಕ್ರಮವನ್ನು, ಕವಡೀಕೆರೆ ದೇವಸ್ಥಾನದ ಆವರದಲ್ಲಿ ಆಯೋಜಿಸಿದ್ದೆವು.

ಕವಡೀಕೆರೆ ಒಂದು ಅದ್ಭುತವಾದ ಪಾರಿಸರಿಕ ಸೌಂದರ್ಯದ ಸ್ಥಳ. ಪಕ್ಕದಲ್ಲಿ ವಿಶಾಲವಾದ ಕೆರೆ, ಇನ್ನೊಂದೆಡೆ ಅಡಿಕೆಯ ತೋಟ, ಇತ್ಯಾದಿ. ಅದಕ್ಕೆ ಎಲ್ಲರಿಗೂ ಸುಂದರ ಪರಿಸರದ ಮಡಿಲಲ್ಲಿ ಸಕ್ಕರೆಯ ಪಾನಕದಂಥಾ ಕೊಳಲಿನ ನಾದದ ಜುಗಲ್ಬಂದಿಯನ್ನು ಕೇಳುವ ಸದವಕಾಶ ಸೃಷ್ಟಿಯಾಗಿತ್ತು.

ಸಮೀರ್ ರಾವ್ - ಭುವನೇಶ್ವರ ಹಾಗೂ ಕಿರಣ ಹೆಗಡೆ ಮುಂಬೈ ಇವರೀರ್ವರ ಬಾನ್ಸುರಿಯ ನಾದಕ್ಕೆ ಗುರುಮೂರ್ತಿ ವೈದ್ಯ ಅವರ ತಬಲಾ ಸಾಥ್ ನೀಡಿದರು. ಸುಮಾ ತಂಬೂರಿ ಸಹಕಾರ ನೀಡಿದರು. ಭೂಪಾಲಿಯೊಂದಿಗೆ ಶುರುವಾದ ಕೊಳಲಿನ ದನಿ, ಜೋಗ್ ರಾಗ, ಪಿಲೂ, ಹಾಗೂ ರಾಮಭಜನೆ, ಆರತಿ ಭಜನೆಗಳೊಂದಿಗೆ ಮುಕ್ತಾಯವಾಯಿತು. 500ಕ್ಕೂ ಮಿಗಿಲಾಗಿ ಸೇರಿದ್ದ ಜನರು ಕಾರ್ಯಕ್ರಮದ ಕೊನೆಯವರೆಗೂ ಆಲಿಸಿದರು. ಕರ್ಣಾನಂದಕರವಾಗಿದ್ದ ಸಂಗೀತ ಜನರನ್ನು ಮಂತ್ರಮುಗ್ಧರನ್ನಾಗಿಸಿತ್ತು.

ಕಾರ್ಯಕ್ರಮವನ್ನು ಇಷ್ಟು ದೂರದ ಊರಿನಲ್ಲಿ ಕುಳಿತು ಆಯೋಜಿಸುವದು ಸುಲಭವಲ್ಲ. ಇದಕ್ಕೆಲ್ಲಾ ನನ್ನ ಮಿತ್ರವ್ರುಂದದ ಅಪಾರ ಸ್ನೇಹ, ನಂಬಿಕೆ, ಪ್ರೋತ್ಸಾಹ ಇತ್ಯಾದಿಗಳೇ ಕಾರಣ ಎನ್ನಬಹುದು. ಕಲಾವಿದರುಗಳಾದ ಸಮೀರ ರಾವ್,ಕಿರಣ ಹೆಗ್ಡೆ, ಗುರುಮೂರ್ತಿ ವೈದ್ಯ, ಮುಂಡಗೋಡಿಮನೆ ಶ್ರೀಪತಿ ಭಟ್, ಈಶ್ವರ್ ಭಟ್, ಗುರ್ತೆಗದ್ದೆ ಸುಬ್ರಹ್ಮಣ್ಯ ಭಟ್, ಲಕ್ಷ್ಮೀನಾರಾಯಣ ಭಟ್ ಇವರೆಲ್ಲರುಗಳ ಪ್ರೀತಿಯನ್ನು ಹಾಗೂ ಪ್ರೋತ್ಸಾಹಗಳನ್ನು ನಾನೆಂದೂ ಮರೆಯಲಾರೆ.

Audio Recording of this concert is here http://www.esnips.com/web/Sameer-Kiran-jugalbandi

Sunday, November 21, 2010

ಅಮವಾಸ್ಯೆಯ ಬೆಂಕಿ ಸೂಡಿ ಹಾಗೂ ರಂಗನ ಪರದಾಟ.

ನಮ್ಮ ದೊಡ್ಡಣ್ಣನಾದ ಸುಬ್ಬಣ್ಣನ ಮದುವೆಗೆಂದು ಮೈಸೂರಿನಿಂದ ಸಹಪಾಠಿಗಳಾದ ಕಾರ್ತಿಕ್, ರಂಗ, ಕಾವಾ, ಅಜಿತ್ ಇವರು ಮಳಲಗಾಂವ್ ಗೆ ಬಂದಾಗಿನ ಕಥೆ.

ಮಲೆನಾಡ ನೋಡಬೇಕು, ಅಲ್ಲಿನ ಸೌಂದರ್ಯವನ್ನು ಸವಿಯಬೇಕೆಂಬ ಆಸೆ ಅವರದು. ಅದರಂತೇ ಗಾಂವ್ಕಾರ ಭಾವನ ಜೀಪಿನಲ್ಲಿ ಸಾತೊಡ್ಡಿ, ಮಾಗೋಡು ಜಲಪಾತಗಳನ್ನು ಸುತ್ತಿದ್ದೂ ಆಯಿತು. ಮದುವೆ ಹಿಂದಿನ ದಿನ ರಾತ್ರಿ 10 ಗಂಟೆ ಆಗಿರಬಹುದು. "ಮಗಾ ಇಲ್ಲೇ ಒಂದು ಕಿಲೋಮೀಟರ್ ನಡೆದು ಡಾಂಬರ್ ರಸ್ತೆಯ ಬಳಿಗೆ ಒಂದು ವಾಕ್ ಹೋಗಿ ಬರೋಣ್ವಾ? ಅಲ್ಲಿ ಪರ್ಸು ಅಂತ ನಮ್ಮ ಕೆಲಸದವನ ಬಿಡಾರ ಇದೆ. ಅವನು ಸೈಕಲ್ ಟೈರ್ ನ ಪಂಜು (ಸೂಡಿ) ಮಾಡಿಕೊಡುತ್ತಾನೆ. ಅದನ್ನು ಹಿಡಿದುಕೊಂಡು ಅದರ ಬೆಳಕಿನಲ್ಲೇ ತಿರುಗಿ ನಡೆದು ಬರೋಣ" ಎಂದು ಎಲ್ಲರನ್ನೂ ಕೇಳಿದೆ. ಮನೆಯಲ್ಲಿ ಎಲ್ಲರೂ ನನ್ನ ಯೋಜನೆಯನ್ನು ಕಿತ್ತುಹಾಕಿ, "ನಿಂಗೆ ಬ್ಯಾರೆ ಕೆಲ್ಸ ಇಲ್ಲೆ, ಸುಮ್ನೆ ಮನ್ಕ್ಯಳಿ" ಎಂದು ಬಯ್ದೇಬಿಟ್ಟರು. ಯಾಕೆಂದರೆ ಅದೊಂದು ವಿಚಿತ್ರವಾದ ಪ್ರಶ್ನೆಯಾಗಿತ್ತು.!!!

ನಮ್ಮೂರಿನ ಬಸ್ಟಾಪಿನಿಂದ 1ಕಿಮಿ ದಟ್ಟವಾದ ಕಪ್ಪು ಕಾಡಿನಲ್ಲಿ ನಡೆದು ಹೋದರೆ ನಮ್ಮ ಮನೆ ಸಿಗುತ್ತದೆ. ಆ ಕಾಡಿನ ಹಾದಿಯಲ್ಲಿ ನಡೆದು ಹೊರಟರೆ ಖಾಯಂ ತಿರುಗುವ ಜನರಿಗೂ ಕೆಲವೊಮ್ಮೆ ಭಯ ಕಾಡುತ್ತದೆ. ಹತ್ತಿರದಲ್ಲೇ ಕೆಲವೊಮ್ಮೆ ಗುರ್-ಗುಡುವ ಹುಲಿ, ಅಕಾಸ್ಮಾತ್ರ್ ಬೆಂಬತ್ತಿ ಓಡಿಸಿಕೊಂಡು ಬರುವ ಕರಡಿಗಳು, ಕಾಡೆಮ್ಮೆಗಳ ಓಡಾಟ ಇತ್ಯಾದಿ. ಸುಮ್ಮನೇ ಒಂದು ಕಾಡುಕೋಳಿ ಚರಪರ ಸದ್ದು ಮಾಡಿದರೂ ಅಂಜಿಕೆ. ದೂರದಲ್ಲಿ ಮೇಯುತ್ತಿರುವ ದನವನ್ನೇ ಹುಲಿ ಎಂದು ಗ್ರಹಿಸಿ ಓಟಕಿತ್ತಿದ್ದು ತುಂಬಾ ಸಲ ಇದೆ. ಮನೆಗೆ ಬಂದು ಮುಟ್ಟುವವರೆಗೂ ಕಂಡೂ ಕಾಣದ ಭಯ ನಮ್ಮ ಹೆಗಲ ಮೇಲಿರುತ್ತದೆ. ಇಂಥಾ ದಾರಿಯಲ್ಲಿ ಅಮಾವಾಸ್ಯೆಯ ರಾತ್ರಿಯಲ್ಲಿ ’ವಾಕ್’ ಹೋಗುವದರ ಬಗ್ಗೆ ಊಹಿಸಿಕೊಳ್ಳಿ.!!!

ಸದಾ ಹುಮ್ಮಸ್ಸಿನಲ್ಲಿರುವ ಕಾರ್ತಿಕ್ ಕೂಡಲೇ ಇದಕ್ಕೆ ಒಪ್ಪಿದ. ರಂಗನನ್ನು ಒಪ್ಪಿಸಲು ಹರಸಾಹಸಪಟ್ಟೆವು. ಆದರೆ ರಂಗ ಹೊರಡುವ ಮೊದಲೇ ಇವರಿಬ್ಬರೂ ತಮ್ಮ ಹುಚ್ಚಾಟಗಳಿಂದ ತನ್ನ ಪ್ರಾಣಕ್ಕೇ ಸಂಚಕಾರ ತರುತ್ತಾರೆ ಎಂದು ಅವಲತ್ತುಕೊಳ್ಳುತ್ತಾ ಹೊರಟ. ಕಾವಾ ಮತ್ತು ಅಜಿತ್ ಸುಖನಿದ್ರೆಗೆ ಜಾರಿದ್ದರು. ಕೈನಲ್ಲಿ ಒಂದು ಕರೆಂಟು ಬ್ಯಾಟ್ರಿ ಹಿಡಿದು ಮೂರೂ ಜನ ಕಡುಕಪ್ಪಿನಲ್ಲಿ ಎಡವುತ್ತಾ ನಡೆದು ಹೊರಟೆವು. ನಾನು ಕಾರ್ತಿಕ್ ಗೆ ಮಳಲಗಾಂವ್ ನ ಪ್ರಾಣಿಗಳ ಕಥೆಗಳನ್ನು ಹೇಳತೊಡಗಿದೆ. ’ನಮ್ಮ ದೂರದ ಸಂಬಂಧಿಕರೊಬ್ಬರನ್ನು ಹುಲಿ ಕೊಂದ ಕಥೆ, ಅಚ್ಚೇಕೇರಿ ಗೋಪಣ್ಣನನ್ನು ಹಂದಿ ಓಡಿಸಿಕೊಂಡು ಬಂದ ಕಥೆ, ಕುಟ್ಟಪ್ಪನ ಸೈಕಲ್ ಅನ್ನು ಕರಡಿ ಓಡಿಸಿಕೊಂಡು ಹೋದ ಕಥೆ...’ ಇತ್ಯಾದಿ. ರಂಗ ಮಾತ್ರ ತನ್ನ ರಂಗಿನಾಟಗಳನ್ನೆಲ್ಲಾ ಬಂದುಮಾಡಿ ಗುಮ್ಮನಂತೆ ನಾನು ಹೇಳುತ್ತಿದ್ದ ಕಥೆಗಳನ್ನೇ ಕೇಳುತ್ತಾ ಒಳಗೊಳಗೇ ಅಳುಕತೊಡಗಿದ.

ಕತ್ತಲಲ್ಲಿ ಕಗ್ಗಾಡಿನಲ್ಲಿ ನಡೆಯುತ್ತಿದ್ದರೆ ಕಿವಿ ಎಷ್ಟೇ ಹಿರಿದು ಮಾಡಿದರೂ ಎನೇನೂ ಕೇಳಿಸದ ನಿಶ್ಯಬ್ಧತೆ, ನಗರದ ಜೀವನದಲ್ಲಿ ಎಂದೆಂದೂ ಕಂಡಿರದ ದಟ್ಟ ಕಾಡಿನ ಕತ್ತಲು, ಕೂಗಿದರೂ ಯಾರೂ ನಮ್ಮ ಸಹಾಯಕ್ಕಿಲ್ಲ ಎಂಬ ಅಸಹಾಯಕತೆ.... ಇವೆಲ್ಲಾ ಭಯವನ್ನು ಮೂರ್ಪಟ್ಟು ಮಾಡಿಬಿಡುತ್ತವೆ. ಆಗ ಎಲ್ಲಾದರೂ ಒಂದೇ ಒಂದು ಸಣ್ಣ ಸದ್ದಾದರೂ ಸಾಕು, ಮೈಮೇಲಿನ ರೋಮಗಳು ಎದ್ದು ನಿಲ್ಲುತ್ತವೆ. ಅಂಥಾ ಕ್ಷಣಗಳು, ಈ ಭೂಮಿಯ ಮೇಲೆ ನಮಗಂಟಿಕೊಂಡಿರುವ ಜಾತಿ, ಭಾಷೆ, ಡಿಗ್ರಿಗಳು, ಸಂಬಂಧಗಳು, ಬ್ಯಾಂಕಿನಲ್ಲಿರುವ ಹಣ... ಇವೆಲ್ಲವುಗಳನ್ನು ಮರೆಸಿ, ನಾವೂ ಎಲ್ಲಾ ಪ್ರಾಣಿಗಳಂತೆಯೇ ಒಂದು ಪ್ರಾಣಿಯ ವರ್ಗ ಎಂಬುದನ್ನು ನೆನಪಿಸಿಕೊಡುತ್ತವೆ.

ಅವರಿಬ್ಬರೂ ಮೈಸೂರಿನಲ್ಲೇ ಹುಟ್ಟಿ ಬೆಳೆದವರು. ಅದೂ ರಂಗನಿಗೆ ಕಾಡಿನ ಪರಿಚಯ ಕಡಿಮೆ. ಅದರಲ್ಲೂ ಒಮ್ಮೆಲೇ ಅಂಥಾ ಕಾಡಿನಲ್ಲಿ ರಾತ್ರಿ ಓಡಾಟ ರಂಗನಿಗೆ ಸಹಜವಾಗಿ ನಡುಕ ಹುಟ್ಟಿಸಿತು. "ನಾನು ಸಾಯ್ಬೇಕು ಅಂತಿದ್ರೆ ಮೈಸೂರಲ್ಲೇ ಸಾಯುತ್ತಿದ್ದೆ. ಅಂತೂ ನಂಗೆ ಸತೀಶನ ಊರಲ್ಲೇ ಸಾಯ್ಬೇಕು ಅಂತಾ ಹಣೆಬರಹ ಇದೆ ಅನ್ಸತ್ತೆ. ಈ ಕತ್ತಲಲ್ಲಿ ಯಾವುದಾದ್ರು ಪ್ರಾಣಿ ಬಂದು ನನ್ನ ತಿಂದುಬಿಟ್ಟರೆ...ಮಕ್ಳಾ ಜಿಮ್ ಕಾರ್ಬೆಟ್ ಕಥೆ ಎಲ್ಲಾ ಹೇಳ್ಬೇಡ್ರೋ.. ಇಂದು ನನ್ನ ಹುಲಿ ತಿಂದುಬಿಟ್ರೆ ನನ್ ಬಾಡಿನ ಮೈಸೂರ್ ಗೆ ತಗೊಂಡು ಹೋಗ್ರೋ...", ಹೀಗೇ ತನ್ನ ಪ್ರಾಣ ಯಾವ ಯಾವ ರೀತಿ ಹೋಗಬಹುದೆಂದು ಕಲ್ಪಿಸುತ್ತಾ ಗಡಗಡಿಸತೊಡಗಿದ !!... ಗಡಗಡನೆ ನಡುಗುತ್ತಾ, ಬೆವರುತ್ತಿದ್ದ ರಂಗನಿಗೆ ನರಭಕ್ಷಕ ಹುಲಿಗಳ ಕಥೆಗಳನ್ನು ಇನ್ನಷ್ಟು ಹೇಳಿದೆವು. ನಾವು ಬಸ್ಟಾಪಿನ ಹತ್ತಿರದ ಪರ್ಸುವಿನ ಮನೆ ಮುಟ್ಟುವದರಲ್ಲಿ ರಂಗನ ಮಾತೇ ನಿಂತಿತ್ತು.

ಪರ್ಸುವಿನ ಮನೆಯಲ್ಲಿ ಸೈಕಲ್ ಟೈರ್ ನ ಬೆಂಕಿಯ ಪಂಜುಗಳನ್ನ ಮಾಡಿಸಿ, ಅದನ್ನೇ ಭೂತದ ಧಾರಾವಾಹಿಗಳಲ್ಲಿ ತೋರಿಸುವಂತೆ ಹಿಡಿದು ತಿರುಗಿ ಮನೆಯ ಕಡೆ ಹೊರಟರೆ, ರಂಗ "ಎಯ್ ಮಕ್ಳಾ ನಾನಂತೂ ಬರಲ್ಲಾ.. ಈಗ 11 ಗಂಟೆ ರಾತ್ರಿ ಆಯ್ತು.. ನಾನು ಇಲ್ಲೇ ಮಲ್ಕೋತೀನಿ" ಅಂತ ಹಠ ಹಿಡಿದ. ಅಂತೂ ಬೆಂಕಿ ಇರುವದರಿಂದ ಯಾವ ಪ್ರಾಣಿಯೂ ನಮ್ಮ ತಂಟೆಗೆ ಬರುವದಿಲ್ಲ ಎಂದು ಅವನ ಮನವೊಲಿಸಿ ಮನೆಗೆ ತಿರುಗಿ ಬಂದೆವು.

ರಂಗನಿಗೆ ಪ್ರಾಣ ಹೋಗಿ ಮತ್ತೊಮ್ಮೆ ಬಂದಂತಾಯಿತು!!!
ಆವತ್ತಿನ ರಾತ್ರಿಯ ಆ ’ವಾಕ್’ ಅನ್ನು ಕಾರ್ತಿಕ್, ರಂಗ ಹಾಗೂ ನಾನು ಎಂದಿಗೂ ಮರೆಯಲಸಾಧ್ಯ.

Friday, August 20, 2010

ಗೋಳಿಯ ಕಾಡೆಮ್ಮೆ ಹಾಗೂ ದತ್ತಾತ್ರಿಯ ಶ್ಲೋಕ.

ಬೇಡ್ತಿ ನದಿ ನಮ್ಮೂರಿಗೆ 3 ಕಿಮಿ ದೂರದಲ್ಲಿ ಹರಿದುಸಾಗಿ ಮಾಗೋಡು ಜಲಧಾರೆಯಾಗಿ ಧುಮುಕಿ ಮುಂದೆ ಸಾಗುತ್ತದೆ. ಬೇಡ್ತಿ ನದಿಯಿಂದ ದಾಂಡೇಲಿಯವರೆಗೂ ಆವರಿಸಿರುವ ನಿತ್ಯಹರಿದ್ವರ್ಣ ದಟ್ಟ ಕಾಡು ಅನೇಕ ಪ್ರಾಣಿಪಕ್ಷಿಗಳ ಜೀವಧಾಮವಾಗಿದೆ.
ಹುಲಿ, ಕಾಡೆಮ್ಮೆ, ಕರಡಿ, ಆನೆ, ಜಿಂಕೆ ಇತ್ಯಾದಿ ಇತ್ಯಾದಿ ಪ್ರಾಣಿಗಳನ್ನು ನೀವಲ್ಲಿ ಕಾಣಬಹುದು...

ಅಂದು ನಾನು ಸುಮಾರು 2ನೇ ಇಯತ್ತೆ ಇರಬಹುದು. ೫ನೇ ಇಯತ್ತೆಯ ದತ್ತಾತ್ರಯ (ದತ್ತಾತ್ರಿ) ನಮ್ಮ ಶಾಲೆಯ ಮಕ್ಕಳ ಗುಂಪಿನ ಧುರೀಣ. ಸುಮಾರು ಹತ್ತು ಮಕ್ಕಳಿದ್ದ ಗುಂಪು ಪ್ರತೀ ದಿನವೂ 1.5 km ದೂರ ಮನೆಯಿಂದ ದಟ್ಟ ಕಾಡಿನ ಮಧ್ಯ ನಡೆದು ಚಲಿಸಿ ಶಾಲೆಗೆ ಸೇರಬೇಕಿತ್ತು. ಹಳ್ಳಿಯ ಮಕ್ಕಳಿಗೆ ಕಾಡು ಪ್ರಾಣಿಗಳ ಭಯ ಅಷ್ಟಾಗಿ ಇರುವದಿಲ್ಲ. ಆದರೂ ಎಲ್ಲರೂ ಕೂಡಿಯೇ ಶಾಲೆಗೆ ಹೋಗುವದು ವಾಡಿಕೆ. ಎಲ್ಲ ಮಕ್ಕಳನ್ನೂ ಮನೆಯಿಂದ ಶಾಲೆಗೆ - ಶಾಲೆಯಿಂದ ಮನೆಗೆ ತಲುಪಿಸುವ ಜವಾಬ್ದಾರಿ ಮಕ್ಕಳಲ್ಲಿ ಹಿರಿಯನಾದ ದತ್ತಾತ್ರಿಯದೇ ಸಹಜವಾಗಿ ಆಗಿತ್ತು. ದಾರಿಯಿಂದ ಬರುತ್ತಾ ಹುಲ್ಲು ಮೇಯಲು ಬಿಟ್ಟಿದ್ದ ಯಾರದ್ದಾದರೂ ಮನೆಯ ಆಕಳೋ ಎಮ್ಮೆಯೋ ಸಿಕ್ಕರೆ ಅದನ್ನು ಮನೆಗೆ ಹೊಡೆದು ತರುವದು ನಮ್ಮ ಹಳ್ಳಿ ಶಾಲೆಯ ಮಕ್ಕಳಿಗೆ ಸಾಮಾನ್ಯವಾದ ಜವಾಬ್ದಾರಿ.

ಅಂದು ಸಂಜೆ ಎಲ್ಲ ಮಕ್ಕಳೂ ಶಾಲೆ ಬಿಟ್ಟೊಡೊನೆ ಒಟ್ಟಿಗೇ ಹೊರಟು ನಡೆದು ಬರುತ್ತಿದ್ದೆವು. ಮಣ್ಣುರಸ್ತೆಯ ಎರಡೂ ಕಡೆ ದಟ್ಟವಾದ ಅಡವಿ. ಸ್ವಲ್ಪ ದೂರದಲ್ಲಿ ಒಂದು ಬೃಹದಾಕಾರದ ಎಮ್ಮೆ ಕಾಡಿನಿಂದ ರಸ್ತೆಗೆ ಇಳಿದು ಇನ್ನೊಂದು ಕಡೆಯತ್ತ ತೆರಳಿತ್ತು. ಅದರ ನಾಲಕ್ಕೂ ಕಾಲಿನ ಬಿಳಿಯ ಪಟ್ಟಿ ನನಗೆ ನಮ್ಮ ಮನೆಯ ಬಿಳಿ ಎಮ್ಮೆಯ ನೆನಪು ತರಿಸಿತು.

ಕೂಡಲೇ ನಾನು, "ಏ ನಮ್ಮನೆ ಬಿಳಿ ಎಮ್ಮೆ ಅಡವಿಗೆ ಎಂತಕ್ಕೆ ಹೋಗ್ತಾ ಇದ್ದು..? ಮನೆ ಬದಿಗೆ ಹೊಡ್ಯೋ ಅದ್ರಾ..." ಎನ್ನುತ್ತಾ ಅದರೆಡೆಗೆ ಓಡಿದೆ. ನನ್ನ ಜೊತೆ ಇನ್ನೂ ಎರಡು ಜನ ಓಡಿ ಬಂದರು. ಆದರೆ ಹತ್ತಿರ ಸಮೀಪಿಸಿದಂತೆ ನಮಗೆ ಧಸಕ್ಕೆಂದು ಭಾಸವಾದದ್ದು, ಅದು ಕಾಡೆಮ್ಮೆ ಎಂದು!!!!. ನೋಡಲು ನಮ್ಮ ಮನೆಯ ಎಮ್ಮೆಯ ಥರವೇ ಇದ್ದರೂ ಹತ್ತಿರದಿಂದ ಕಂಡ ಅದರ ದೈತ್ಯ ಸ್ವರೂಪ ನಮ್ಮನ್ನು ಬೆಚ್ಚಿಬೀಳಿಸಿತು. "ಹೇ...ಅದು ಕಾಡೆಮ್ಮೆ ಮಾರಾಯಾ...ಬಿಳಿ ಎಮ್ಮೆ ಅಲ್ದೋ.." ಎಂದು ಕೂಗುತ್ತಾ ನಾವು ತಿರುಗಿ ಓಡಿಬರುತ್ತಿರುವದನ್ನು ಕಂಡ ನಮ್ಮ ನಾಯಕ ದತ್ತಾತ್ರಿ ದಂಗಾದ.

ಎಲ್ಲರೂ ಓಡದೇ ಬೇರೆ ದಾರಿಯೇ ಇರಲಿಲ್ಲ. ದತ್ತಾತ್ರಿ ನಮಗೆಲ್ಲ ಕೂಡಲೇ ಒಂದು ಶ್ಲೋಕ(ಮಂತ್ರ)ವನ್ನು ಹೇಳಿಕೊಟ್ಟ. " ಈ ಮಂತ್ರವನ್ನು ಹೇಳುತ್ತಾ ಓಡಿ, ಹಾಗಾದರೆ ಕಾಡೆಮ್ಮೆ ಹತ್ತಿರ ಬತ್ತಿಲ್ಲೆ..ಇಲ್ಲಾ ಅಂದ್ರೆ ನಾವು ಎಷ್ಟೇ ದೂರ ಇದ್ರೂ ಎಮ್ಮೆ ತನ್ನ ಸಿಂಬಳವನ್ನು ಬಂದೂಕಿನ ಗುಂಡಿನ ಥರಹ ಬಿಟ್ಟು ನಮ್ಮ ಮೈಗೆ ಹಾಕ್ತು. ಅಕಾಸ್ಮಾತ್ರ್ ಕಾಡೆಮ್ಮೆ ಸಿಂಬಳ ತಾಗಿದ್ರೆ ಯಾರಿಗೂ ಓಡಲಾಗ್ತಿಲ್ಲೆ..ಲಗು ಓಡ್ರೋ" ಎಂದು ಎಲ್ಲರಿಗೂ ಧೈರ್ಯ ತುಂಬಿದ!!!. ಅಂದು ಒಂದನೇ ಕ್ಲಾಸಿನಿಂದ ಐದನೇ ಕ್ಲಾಸಿನ ಎಲ್ಲಾ ಮಕ್ಕಳೂ ಕಿತ್ತಾಬಿದ್ದು ಮನೆಯ ಕಡೆಗೆ ಓಡಿದವು....!!!!

ಅಂದು ನಾವು ಓಟಕಿತ್ತ ಜಾಗದ ಹೆಸರು ಗೋಳಿ ಕತ್ರಿ ಎಂದು. ಮನೆಗೆ ಹೋಗುವಾಗೆಲ್ಲ ಗೋಳಿ ಕತ್ರಿ ಸಿಗುತ್ತದೆ. ಇಂದು ಆವಾಗಿನಷ್ಟು ಕಾಡೆಮ್ಮೆಗಳು ರಸ್ತೆಯಲ್ಲಿ ಸಿಗುವದಿಲ್ಲ. ಆದರೆ ಆ ದಿನದ ನಮ್ಮ ಓಟ ಮಾತ್ರ ನೆನಪಾಗಿ ನಗು ಗೊಳ್ಳೆಂದು ಹೊರಬರುತ್ತದೆ. :-)

Tuesday, July 27, 2010

ಅಚ್ಚೆತಡಿಯ ಕಾಡುನಾಯಿ

ಅಚ್ಚೆತಡಿ (ಗದ್ದೆ ಅಥವಾ ತೋಟದ ಆಚೆಯ ದಡ - ಮಲೆನಾಡಿನ ಆಡುಭಾಷೆ.) ಅಂದರೆ ನಮ್ಮ ಮನೆಯ ಭತ್ತದ ಗದ್ದೆಯ ಕೊನೆಯ ಅಂಚು.ನಮ್ಮೂರಿನ ಕೊನೆಯ ಜಾಗ ಅದು. ಅಲ್ಲಿಂದ ಮುಂದೆ ಬೇಡ್ತಿ ನದಿಯನ್ನು ಆವರಿಸಿರುವ ದಟ್ಟವಾದ ಕಾಡು ಮಾತ್ರ ನಿಮಗೆ ಸಿಗುತ್ತದೆ. ಅಚ್ಚೆತಡಿಯಲ್ಲಿರುವ ಸಣ್ಣ ಹಳ್ಳ ಮಳೆಗಾಲದಲ್ಲಿ ಮಾತ್ರ ಆಚೀಚೆಯ ಗುಡ್ಡಗಳ ನೀರಿನಿಂದ ತುಂಬಿ ಹರಿಯುತ್ತದೆ. ಬೇರೆಯ ಸಮಯದಲ್ಲಿ ಮೇಲಿನ ಕೆರೆಯಿಂದ ಹರಿದುಬರುವ ನೀರು ಮಾತ್ರ ಹಳ್ಳದ ಹೊಂಡಗಳಲ್ಲಿ ತುಂಬಿರುತ್ತದೆ. ಸುತ್ತಲಿನ ಕಾಡುಪ್ರಾಣಿಗಳಿಗೆ ಸಹಜವಾಗಿ ಅದೊಂದು ನೀರು ಕುಡಿಯುವ ಜಾಗ. ನಮ್ಮ ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ಆ ಹಳ್ಳದ ಅಂಚಿಗೆ ಗದ್ದೆಯ ತುದಿಯನ್ನು ಆವರಿಸಿ ಅರ್ಧ ಆಳಿನ ಎತ್ತರದ ಕಲ್ಲಿನ ಕಟ್ಟೆ ಕಟ್ಟಿದ್ದರು.

ನನಗೆ ಆಗ ಸುಮಾರು ೫-೬ ವರ್ಷವಿರಬಹುದು. ಬೇಸಿಗೆ ರಜೆಯಲ್ಲಿ ಆದವಾನಿಯಿಂದ ನಮ್ಮ ದೊಡ್ಡಪ್ಪ - ದೊಡ್ಡಮ್ಮನವರ ಜೊತೆ ಅಣ್ಣಂದಿರಾದ ಸುಬ್ಬಣ್ಣ,ತಿರುಮಲಣ್ಣ ಬರುತ್ತಿದ್ದರು. ಮನೆಯಲ್ಲಿರುತ್ತಿದ್ದ ವಿಶ್ವಣ್ಣ ಹಾಗೂ ನಮಗೆ ಅದು ಆಟ-ಓಟಗಳ ಉತ್ತುಂಗದ ಸಮಯ. ಎಲ್ಲ ಮೊಮ್ಮಕ್ಕಳು ಸೇರಿ ಅಸಾಧ್ಯವಾದ ಕೆಲಸಗಳನ್ನು ಮಾಡುವ ಹುಮ್ಮಸ್ಸು. ಅಚ್ಚೆತಡಿಯ ಹಳ್ಳಕ್ಕೆ ಡ್ಯಾಮು ಕಟ್ಟುವದು ವಿಶ್ವಣ್ಣನ ಮಹದಾಸೆಯ ಪ್ರಾಜೆಕ್ಟ್ ಆಗಿತ್ತು. ಸುತ್ತಲಿನ ಕಲ್ಲುಗಳನ್ನು ಸೇರಿಸಿ, ಹಳ್ಳದ ಪಕ್ಕದ ಹಸಿ ಮಣ್ಣನ್ನು ಹಾಕಿ ಸಣ್ಣದೊಂದು ಡ್ಯಾಮು ಮಾಡಲು ಒಂದು ಮಕ್ಕಳ ಗುಂಪೇ ಸೇರುತ್ತಿತ್ತು. ಆದರೆ ಆ ಡ್ಯಾಮು ಕಟ್ಟಿದರೆ ಅದು ಗದ್ದೆಯ ಕಲ್ಲಿನ ಕಟ್ಟೆಯನ್ನು ಸಡಿಲಗೊಳಿಸಿ, ಕಟ್ಟೆ ಒಡೆಯುತ್ತದೆ ಎಂಬುದು ಹಿರಿಯರ ವಾದ. ನಮ್ಮ ಮನೆಯ ಸಣ್ಣ ಅಜ್ಜರು (ಅಜ್ಜರ ತಮ್ಮ) ನಮ್ಮ ಅಣ್ಣಂದಿರ ಮಹದಾಸೆಯ ಈ ಪ್ರಾಜೆಕ್ಟ್ ಗೆ ಭಾರೀ ವಿರೋಧಿಯಾಗಿದ್ದರು :-). ಅದಕ್ಕೇ ಮಧ್ಯಾಹ್ನ ಊಟವಾದ ನಂತರ ಎಲ್ಲ ಹಿರಿಯರೂ ಕವಳ ಹಾಕಿ ಸಣ್ಣ ನಿದ್ರೆಗೆ ಜಾರಿದ ಮೇಲೆ ಮಕ್ಕಳ ಗುಂಪು ಅಚ್ಚೆತಡಿಯತ್ತ ಕಳ್ಳ ಓಟ ಓಡುತ್ತಿತ್ತು.

ಅಂದು ಮಧ್ಯಾಹ್ನ ನಾವೆಲ್ಲ ಅಚ್ಚೆತಡಿಯ ಕಡೆಗೆ ಹೊರಟೆವು. ಹಳ್ಳ ಹತ್ತಿರ ಬರುತ್ತಿದ್ದಂತೆ ಅಲ್ಲಿ ಒಂದು ನಾಯಿ ನೀರು ಕುಡಿಯುತ್ತಿರುದು ಎಲ್ಲರಿಗೂ ಕಂಡಿತು. ಯಾರೋ ಹೇಳಿದರು, "ಹೇ, ಹಳ್ಳದಲ್ಲಿ ನಮ್ಮ ಮನೆ ಕಾಳು (ನಮ್ಮ ಸಾಕು ನಾಯಿ) ನೀರು ಕುಡೀತಾ ಇದ್ದಾ....". ಎಲ್ಲ ಹುಡುಗರ ಗುಂಪು ಹಳ್ಳಕ್ಕೆ ತುಂಬಾ ಹತ್ತಿರ ಹೋಗುತ್ತಲೇ ಇತ್ತು. ಅಷ್ಟರಲ್ಲಿ ಮತ್ಯಾರೋ ಆತಂಕದಿಂದ ಹೇಳಿದರು, "ಅದು ಕಾಳು ಅಲ್ಲಾ, ಕಾಡುಕುನ್ನಿ...!!!!"

ಹೌದು!!!. ಅಂದು ಕಾಡುನಾಯಿಗೆ ಕೆಲವೇ ಅಡಿಗಳ ಅಂತರದಲ್ಲಿ ನಾವೆಲ್ಲ ಮಕ್ಕಳೂ ಇದ್ದೆವು. ಅಲ್ಲಿ ಇನ್ನೂ ಎಷ್ಟು ನಾಯಿಗಳಿದ್ದವು ಎಂಬುದನ್ನು ನೋಡಲು ಯಾರಿಗೂ ವ್ಯವಧಾನವಿರಲಿಲ್ಲ. ಕೆಲವೇ ಕ್ಷಣಗಳಲ್ಲಿ ಡ್ಯಾಮು ಕಟ್ಟುವ ಮಕ್ಕಳ ಸೇನೆ ಮನೆಯಕಡೆಗೆ ಓಟಕಿತ್ತಿತು. ನಾನು ಬಹಳ ಚಿಕ್ಕವನಾಗಿದ್ದರಿಂದ ಬಹಳ ವೇಗವಾಗಿ ಓಡಲಾಗುತ್ತಿರಲಿಲ್ಲ.ತಿರುಮಲಣ್ಣನಿಗೆ ಅದು ಕೂಡಲೇ ಅರಿವಾಗಿ ಹಿಂದಿನಿಂದ ಅಳುತ್ತಾ ಓಡಿ ಬರುತ್ತಿದ್ದ ನನ್ನನ್ನು ಅವನ ಬೆನ್ನ ಮೇಲೆ ಉಪ್ಪಿನಮೂಟೆ ಮಾಡಿ ಹೊತ್ತುಕೊಂಡು ಓಡಿದ. ಅಂತೂ ಎಲ್ಲರೂ ಕೂದಲೆಳೆಯಲ್ಲಿ ಅಪಾಯದಿಂದ ಬಚಾವಾಗಿದ್ದೆವು.!

ಆವತ್ತಿನ ಓಟ ಇಂದಿಗೂ ಹಾಗೆಯೇ ನೆನಪಿದೆ. ಆವತ್ತು ತಿರುಮಲಣ್ಣ ನನ್ನ ಎತ್ತಿಕೊಂಡು ಓಡದೇ ಇದ್ದಿದ್ದರೆ ಏನಾಗುತ್ತಿತ್ತೋ. ಇಂದಿಗೂ ನೆನೆಸಿದರೆ ಮೈ ಜುಂ ಎನ್ನುತ್ತದೆ. ಹಾಗೂ ತಿರುಮಲಣ್ಣನ ಸಹಾಯ, ಸಮಯಪ್ರಜ್ನೆ ಹಾಗೂ ಧೈರ್ಯಕ್ಕೆ ಏನು ಕೊಟ್ಟರೂ ಕೊಡಬಹುದೆಂದೆನಿಸುತ್ತದೆ.

Sunday, June 13, 2010

ರೂಪಕುಂಡ್ ಸರೋವರ ಚಾರಣ : ಡೈರಿಯ ಪುಟಗಳಿಂದ

ಪ್ರಕೃತಿಯ ನಿಕಟತೆ ಎಂಥಹ ಮನುಷ್ಯನನ್ನೂ ವಿನೀತನನ್ನಾಗಿಸುತ್ತದೆ. ಮನುಷ್ಯನ ಎಲ್ಲ ಥರಹದ ಬೇಕುಬೇಡಗಳು ಪ್ರಕೃತಿಯ ಸಹಜತೆಯ ಸೌಂದರ್ಯದಲ್ಲಿ ಗೌಣವಾಗಿಬಿಡುತ್ತದೆ. ದಿನಂಪ್ರತಿಯ ಓಟ, ಯಾಂತ್ರಿಕ ಬದುಕು, ನಗರಗಳ ಕಲ್ಮಶ ವಾತಾವರಣ, ಭಾವನಾವಿನಿಮಯಕ್ಕೆ ಸಮಾನಮನಸ್ಕರ ಗೈರು, ಪ್ರಕೃತಿಯ ಒಡನಾಟವೇ ಇಲ್ಲದಿರುವಿಕೆ....ಇತ್ಯಾದಿ ಇತ್ಯಾದಿಗಳಿಂದ ಮನುಷ್ಯ ಆನಂದದ ಅನುಭೂತಿಯನ್ನು ಅನುಭವಿಸುವ ತನ್ನ ಭಾವನಾತೀವ್ರತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತಾನೆ.ನಗರಗಳಲ್ಲಿ ವಾಸಿಸುವ ನಮಗೆ ಆಗಾಗ ಒಂದೆರಡು ಚಾರಣಕ್ಕಾದರೂ ಹೋಗುವ ಅದಮ್ಯ ಮನೋಬಯಕೆ ಉಕ್ಕುತ್ತಲೇ ಇರುತ್ತದೆ.
ಹಿಮಾಚಲ ಪ್ರದೇಶದ ಸರ್ ಪಾಸ್ ಚಾರಣದ ನಂತರ ಸತತವಾಗಿ ತುಡಿಯುತ್ತಿದ್ದ ಇನ್ನೊಂದು ಹಿಮಾಲಯದ ಚಾರಣದ ಆಸೆ ಈ ವರ್ಷದ ರೂಪಕುಂಡ್ (www.roopkund.com) ಚಾರಣದಲ್ಲಿ ಈಡೇರಿತು. ಮಿಥುನ್, ಕೃಷ್ಣ, ಸಂದೀಪ್ ಜೊತೆಗೂಡಿ ಬೆಂಗಳೂರಿನ ಇಂಡಿಯಾಹೈಕ್ಸ್ (www.indiahikes.in) ಎಂಬ ಚಾರಣದ ಆಯೋಜಕರ ಯೋಜನೆಯಂತೆ ಉತ್ತರಾಖಂಡದ ಲೋಹಾಜಂಗ್ ಊರಿನಲ್ಲಿ ಇನ್ನೂ ೧೬ ಚಾರಣಿಗರನ್ನು ಕೂಡಿಕೊಂಡೆವು. ಅಲ್ಲಿಗೆ ತಲುಪಿದ ವಿವರಗಳು ಇಲ್ಲಿ ಅಪ್ರಸ್ತುತವೆಂದೆನಿಸುತ್ತದೆ.

ದಿನ ೧: ಲೋಹಾಜಂಗ್ ನಿಂದ ದಿದನಾ.
ದಿನ ೨: ದಿದನಾ ಇಂದ ಬೆದನಿ ಬುಗ್ಯಾಲ್ (ಅಲಿ ಬುಗ್ಯಾಲ್ ಮೂಲಕ).
ದಿನ ೩: ಬೆದನಿ ಬುಗ್ಯಾಲ್ ಇಂದ ಗೋರಾ ಲೊಟನಿ.
ದಿನ ೪: ಗೋರಾ ಲೊಟನಿ ಇಂದ ಬಾಗುಭಾಸಾ.
ದಿನ ೫: ಬಾಗುಭಾಸಾ ಇಂದ ರೂಪಕುಂಡ. ಮರಳಿ ಬೆದನಿ ಬುಗ್ಯಾಲ್ ಗೆ.
ದಿನ ೬: ಬೆದನಿ ಬುಗ್ಯಾಲ್ ಇಂದ ವಾನ ಗ್ರಾಮ.

Thursday, April 22, 2010

ಹಸಿರು..


ಅಂತೂ ಬಹಳ ದಿನಗಳ ನಂತರ ಮನೆಯಲ್ಲಿ ಗಿಡ ಬೆಳೆಸುವ ನಮ್ಮ ಯೋಜನೆ ಇಂದು ಶುರು ಆಯಿತು. ಇಂದು "Earth Day" ಆಗಿರುವದಕ್ಕೂ, ನಮ್ಮ ರೂಮಿಗೆ ಚೆಂದದ ಗಿಡವೊಂದು ಆಗಮಿಸಿದ್ದಕ್ಕೂ ತಾಳೆಯಾಗುತ್ತಿದ್ದಂತೆ ನಮ್ಮಲ್ಲಿ ಹರ್ಷ ಮೂಡಿತು.

Tuesday, December 15, 2009

ಬಸವರಾಜ ಮೇಷ್ಟ್ರು

"ಓ ಬಸವರಾಜ ಮೇಷ್ಟ್ರು..... ಗ್ರೇಟ್ ಪರ್ಸನಾಲಿಟಿ.... ಅದ್ರ ಬಗ್ಗೆ ಎರಡನೇ ಪ್ರಶ್ನೇನೇ ಇಲ್ಲಾ.." ... ಹೀಗೆಲ್ಲಾ ಅವರೊಡನೆ ಒಡನಾಡಿದ ಜನರ ಅಭಿಪ್ರಾಯವಾದರೆ ಅದರಲ್ಲಿ ಅತಿಶಯ ಏನೂ ಇಲ್ಲ.

ಸದ್ಯಕ್ಕೆ ಇವರ ವಯಸ್ಸು 72. ಊರು ಚಿತ್ರದುರ್ಗ. ತಮ್ಮ ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದಮೇಲೆ ಪ್ರಕೃತಿಯೊಡನೆ ಸತತವಾದ ಒಡನಾಟವನ್ನು ತಮ್ಮ ಸಾಹಸಭರಿತವಾದ ಚಾರಣಗಳ ಮೂಲಕ ಗಳಿಸಿಕೊಂಡವರು. ನಿಸರ್ಗದ ಜೊತೆಗಿನ ನಿಕಟತೆಯೇ ಮನುಷ್ಯನ ಉನ್ನತಿಯ ಮಾರ್ಗ ಎಂಬುದನ್ನು ಇಂದಿಗೂ ಯುವಕರಿಗೆ ಸಾಧಿಸಿ ತೋರಿಸುತ್ತಿರುವವರು.

ನಾವು ಸರ್-ಪಾಸ್ ಹಿಮಾಲಯ ಶ್ರೇಣಿಯಲ್ಲಿ ’ಯುಥ್ ಹಾಸ್ಟೇಲ್’ ಚಾರಣದಲ್ಲಿ ಭಾಗವಹಿಸಿದ್ದಾಗ ಬಸವರಾಜ್ ಅಂಕಲ್ ನಮ್ಮ ಸಹ ಚಾರಣಿಗರು. ಈ ಇಳಿವಯಸ್ಸಿನಲ್ಲೂ 14000 ಅಡಿ ಹತ್ತುವ ಅದ್ಭುತವಾದ ಸಾಹಸಕ್ಕೆ ಕೈ ಹಾಕುವವರನ್ನು ಅಲ್ಲಿಯವರೆಗೆ ನಾನೂ ನೋಡಿರಲಿಲ್ಲ. ಪ್ರತಿದಿನ ಉದಯದಲ್ಲಿ ಯೋಗಾಭ್ಯಾಸ, ಪ್ರತಿದಿನ ಡೈರಿಯಲ್ಲಿ ಅಂದಂದಿನದ ಅನುಭವಗಳನ್ನು ದಾಖಲಿಸುದು, ನಮ್ಮಂಥ ಯುವ ಚಾರಣಿಗರನ್ನು ಹುರಿದುಂಬಿಸುವ ರೀತಿ,,, ಎಲ್ಲವನ್ನು ನೋಡಿ ಅವಾಕ್ಕಾದೆ!!!

ದಿನ .... ಕಸೋಲಿನಲ್ಲಿ ಬಸವರಾಜ ಅಂಕಲ್ ಸರ್-ಪಾಸ್ ಚಾರಣಕ್ಕೆ ಬಂದ ಇಸ್ರೇಲಿನ ಯುವಕನೊಬ್ಬನಿಗೆ ಹೇಳುತ್ತಿದ್ದರು, "ಭಾರತದಲ್ಲಿ ಒಂದು ಹಳೆಯ ಹೇಳಿಕೆ ಇದೆ. ನೀವು ಸಮುದ್ರವನ್ನೂ ಮತ್ತು ಹಿಮಾಲಯವನ್ನೂ ಕಣ್ಣಾರೆ ನೋಡಿದ ವಿನಹ ಅವುಗಳ ಗಾಂಭೀರ್ಯತೆ, ವಿಶಾಲತೆ, ಆಳವನ್ನು ಅಳೆಯಲಾಗಲೀ ವರ್ಣಿಸಲಾಗಲೀ ಸಾಧ್ಯವಿಲ್ಲ" ಎಂದು. ಅವರ ಮಾತುಗಳೇ ಹಾಗೆ. ಕೇಳುತ್ತಿರುವವರಿಗೆ ಕರ್ಣಾನಂದ, ಹಿತಕರ, ಮಾಹಿತಿದಾಯಕ, ಪ್ರೀತಿಪೂರ್ವಕ ಇತ್ಯಾದಿ ಇತ್ಯಾದಿ.





ಇಲ್ಲಿಯವರೆಗೆ ಅಂಕಲ್ 12 ಸಲ ಹಿಮಾಲಯದ ಶಿಖರಗಳಲ್ಲಿ ಚಾರಣ ಮಾಡಿದ್ದಾರೆ. ಹಿಮಾಲಯದ ಅನೇಕ ಕಣಿವೆಗಳಲ್ಲಿ ಸುತ್ತಾಡಿದ್ದಾರೆ. ಒಮ್ಮೆಯಂತೂ 10,000 ಅಡಿಯ ಮೇಲಿನ ಹಿಮಾಲಯದ ಬೆಟ್ಟವೊಂದರಲ್ಲಿ ಒಂದು ತಿಂಗಳು ಏಕಾಂತವಾಸ ಮಾಡಿದ್ದಾರೆ.!!!!
ಪಶ್ಚಿಮ ಘಟ್ಟಗಳಲ್ಲಂತೂ ಇವರು ಚಾರಣಿಸದ ಬೆಟ್ಟ ಗುಡ್ಡಗಳೇ ಇಲ್ಲ ಎನ್ನಬಹುದು. ಬೆನ್ನಿಗೊಂದು ಟೆಂಟು ಏರಿಸಿ
ಕಾಡಿನಲ್ಲಿ ಹೊರಟರೆ ಅದಕ್ಕಿಂತ ಖುಷಿ ಅವರಿಗೆ ಇನ್ನೊಂದಿಲ್ಲ.

ಅಂಕಲ್ ಮೂರು ತಿಂಗಳ ಹಿಂದೆ ಕೊಲ್ಲೂರಿನಲ್ಲಿ ಬೆಟ್ಟ ಹತ್ತುವಾಗ ಕಾಲು ಉಳುಕಿಸಿಕೊಂಡು 2 ತಿಂಗಳು ಬೆಡ್ ರೆಸ್ಟ್ ಅಂತ ಕೇಳಿದಾಗ ನಮ್ಮೆಲ್ಲರಿಗೆ ಆದ ನೋವು ಅಷ್ಟಿಷ್ಟಲ್ಲ. ಆದರೂ ಇತ್ತೀಚೆಗೆ ಬಸವರಾಜ ಅಂಕಲ್ ಸಾಗರದಿಂದ ದಿನಾಲೂ 25 km ಗಳು ನಡೆಯುತ್ತಾ, ರಾತ್ರಿ ಅಡಿಕೆ ತೋಟಗಳಲ್ಲಿ ಮಲಗಿ, ಮತ್ತೆ ನಡೆಯುತ್ತಾ ಗೋಕರ್ಣ ತಲುಪಿ ಅಲ್ಲಿನ ಬೀಚ್ ಗಳಲ್ಲಿ ಚಾರಣವನ್ನು ಮಾಡಿ ಬಂದರು!!!!.

ಮೊನ್ನೆ ಅವರಿಗೆ ಫೋನ್ ಮಾಡಿದಾಗ ಕೇಳಿದರು, ’ಸತೀಶ್ ಮತ್ತೆ ಎಲ್ಲಾದ್ರೂ ಟ್ರೆಕ್ ಹೋಗಿದ್ರಾ?’...
ನಾನಂದೆ, ’ಇಲ್ಲಾ ಅಂಕಲ್ ಯಾಕೋ ಎಲ್ಲಿಗೂ ಹೋಗ್ಲಿಕ್ಕೇ ಆಗ್ಲಿಲ್ಲಾ.. ಬೊಯ್ಸ್ ಎಲ್ರೂ ಬ್ಯುಸಿ ಆಗ್ಬಿಟ್ಟಿದಾರೆ’.
ಅದಕ್ಕೆ ಅವರು ಥಟ್ ಅಂತ, ’ಇಲ್ಲಾ ಸತೀಶ್ ನಿಮ್ಮ್ ಸಾಫ್ಟ್ ವೇರ್ ಲೈಫ್ ನಲ್ಲಿ ದುಡ್ಡಿದೆ. ಆದ್ರೆ ಬದುಕು ಇಲ್ಲ. Go back to nature. ಇಲ್ಲಾ ಅಂದ್ರೆ ಹದಿನೈದು ದಿನಕ್ಕಾದ್ರೂ ಎಲ್ಲಾದ್ರು ಹೋಗಿಬನ್ನಿ’ ಅಂದರು. ಕಾಂಕ್ರೀಟ್ ಕಾಡಿನ ನನ್ನ ಬರಡು ಜೀವನಕ್ಕೆ ಅದು ಸಂಪೂರ್ಣ ಸತ್ಯವೆನಿಸಿತು.







ಬಸವರಾಜ ಅಂಕಲ್ ಅವರ ಅದ್ಭುತವಾದ ಜೀವನಾನುಭವಗಳು, ಅವರ ಚಾರಣಗಳ ಸಾಹಸ ಕಥೆಗಳೂ, ಆಗಾಗೀಗೊಮ್ಮೆ ಚಿಮ್ಮುವ ಹಾಸ್ಯ ಚಟಾಕಿಗಳೂ, ವಯಸ್ಸು 72 ಆದರೂ ಹದಿನಾರರ ಹರೆಯದ ಆ ಅದಮ್ಯ ಉತ್ಸಾಹದ ಬುಗ್ಗೆಯೂ, ನಿಸರ್ಗದ ನಿಕಟತೆಯಲ್ಲಿ ಅವರಿಗೇ ಅರಿವಿಲ್ಲದಂತೆ ಹೆಮ್ಮರದಂತೆ ಬೆಳೆದಿರುವ ಅವರ ವಿಶ್ವಮಾನವತೆಯೂ........ ಹೀಗೇ....ಜೀವನದಲ್ಲಿ ನಾವು ಕಂಡ ಅದ್ಭುತ ವ್ಯಕ್ತಿಗಳ ಮೆಲುಕಿನಲ್ಲಿ ಭುಗ್ಗೆಂದು ಮೇಲೆದ್ದು ಬರುತ್ತಾರೆ ನಮ್ಮ ಪ್ರೀತಿಯ ಬಸವರಾಜ ಅಂಕಲ್.


ಸರ್ - ಪಾಸ್ ಚಾರಣದ ತುತ್ತತುದಿಯಲ್ಲಿ ಬಸವರಾಜ್ ಅಂಕಲ್ ಅವರ ಮಾತು...




ಈಗ 77ರ ಹರೆಯದ ಬಸವರಾಜ್ ಅಂಕಲ್. ಮೊನ್ನೆ ಚಿತ್ರದುರ್ಗಕ್ಕೆ ಹೋದಾಗ ಕೋಟೆಯ ಮೇಲೆ ತೆಗೆದ ಫೋಟೋ


ಮತ್ತೆ ಈ ವರ್ಷ (2013) 77ನೇ ವಯಸ್ಸಿನಲ್ಲಿಯೂ ಹಿಮಾಲಯದ ಚಾರಣಕ್ಕೆ ಹೊರಟಿರುವ ಅಂಕಲ್ ಗೆ ಎಂದಿನಂತೆ ಪ್ರೋತ್ಸಾಹ ನೀಡುತ್ತಿರುವ ಆಂಟಿಯ ಜೊತೆ...

Friday, October 30, 2009

ಪಾಕಶಾಸ್ತ್ರ ಮಹಿಮೆ

" ಏಯ್ ತಮಾ... ಕುಕ್ಕರ್ ನಲ್ಲಿ ಬರೀ ಅಕ್ಕಿ ಅಷ್ಟೇ ಇಟ್ಟು ಒಲೆ ಮೇಲೆ ಇಟ್ರೆ ಅನ್ನ ಹೆಂಗಾಗವೋ ಮಾರಾಯಾ....:-) ... ಅಕ್ಕಿಗೆ ನೀರು ಯಾರು ಹಾಕ್ತ್ವ ಮಾರಾಯಾ " ....ಇದು ನನ್ನ ಅಣ್ಣನ ಧಾರವಾಡದ ಗೆಳೆಯರ ರೂಮಿನಲ್ಲಿ ಇದ್ದಾಗ ನಡೆದ ಕಥೆ.
ನನ್ನ ಅಡುಗಾಪ್ರಮಾದದ ಪ್ರಥಮ ಅನುಭವ!!!!!

* * *

ಅಲ್ಲಿಯವರೆಗೂ ನನಗೆ ಅಡುಗೆ ಮಾಡುವದು ಅಂದ್ರೆ ಇಷ್ಟೆಲ್ಲಾ ಕಷ್ಟದ ಕೆಲಸ ಎಂಬ ಕಲ್ಪನೆಯೇ ಇರಲಿಲ್ಲ. ಅಡುಗೆ ಮನೆಗೆ ಹೋದರೆ ತಿನ್ನಲು ಏನಾದರೊಂದು ಸಿಕ್ಕುತ್ತದೆ ಎಂದಷ್ಟೇ ನನ್ನ ಅಂದಾಜಾಗಿತ್ತು. ಆದರೆ ನೀವು ಯಾವುದೇ ಅಡುಗೆಮನೆಯಲ್ಲಿ ಕಾಲಿರಿಸಿ, ಅಲ್ಲಿ ಅವರು ಅಡುಗೆ ಮಾಡುವದನ್ನು ಗಮನಿಸಿದರೆ ಅವರೆಲ್ಲಾ ಎಂಥಹಾ ಬುದ್ಧಿಜೀವಿಗಳು ಎಂಬ ಸತ್ಯ ಅರಿವಿಗೆ ಬರುತ್ತದೆ.

* * *

ಮಲೆನಾಡಿನಲ್ಲಿ ಅಪ್ಪೇಹುಳಿ ಎನ್ನುವ ಅಡುಗೆ ಪದಾರ್ಥ (ರುಚಿ : ನಿಂಬೆಕಾಯಿ, ಹುಳಿಕಂಚಿಕಾಯಿ ಇತ್ಯಾದಿ ಹುಳಿ ಪದಾರ್ಥಗಳನ್ನು ಉಪಯೋಗಿಸುವದರಿಂದ ಹುಳಿಹುಳಿಯಾಗಿರತ್ತದೆ, ಅನ್ನದ ಜೊತೆ ಕಲಸಿ ತಿನ್ನಬಹುದು ಅಥವಾ ಹಾಗೇ ಕುಡಿಯಬಹುದು. ನಂತರ ಬರುವ ಸುಖನಿದ್ರೆಗೆ ಸಾಟಿಯಿಲ್ಲ) ಹಿಮಾಲಯದ ಹಿಮದಷ್ಟೇ ಪ್ರಖ್ಯಾತ.

ನಾವು ಮೈಸೂರಿನಲ್ಲಿದ್ದಾಗ ನನ್ನ ರೂಮ್ ಮೇಟ್ ಗಳಾದ ಕಿರಣ ಹಾಗೂ ಪಡ್ಡಿ (ಪ್ರದೀಪ್) ಇಬ್ಬರೂ ’ನಿನ್ನ ಊರಿನ ಅಪ್ಪೇಹುಳಿ ಮಾಡು’ ಎಂದು ದಂಬಾಲು ಬಿದ್ದರು. ಕೂಡಲೇ ಎಲ್ಲೋ ಕೇಳಿ ನೆನಪಿಗೆ ಬಂದಂತೆ ನೀರಿಗೆ ಒಂದು ಒಗ್ಗರಣೆ ಕೊಟ್ಟೆ. ಆದರೆ ಅಷ್ಟೇ ಮಾಡಿದರೆ ಅಪ್ಪೇಹುಳಿ ಆಗಲಾರದೆಂದು ಕಲ್ಪನೆಯೇ ಇರಲಿಲ್ಲ. ಪಡ್ಡಿ ಮತ್ತು ಕಿರಣ ಇಬ್ಬರೂ ನನ್ನ ಹೊಸರುಚಿಯ ರುಚಿ ನೋಡಿ ಮುಖ ಹುಳಿ ಮಾಡಿದರು. ಮರುದಿನದವರೆಗೆ ಹಾಗೆಯೇ ಇಟ್ಟ ಅಪ್ಪೇಹುಳಿ ಹೊಸಥರಹದ ರುಚಿಗೆ ಮೂಡಿತು. ಮರುದಿನ ರೂಮಿಗೆ ಬಂದ ನಮ್ಮ ಇನ್ನೊಬ್ಬ ದೊಸ್ತ ಅಜುವಿಗೆ ಅಪ್ಪೇಹುಳಿಯ ವರ್ಣನೆ ಮಾಡಿದ ಕೂಡಲೇ ಆತ ಅಡುಗೆ ಮನೆಗೆ ಹೋಗಿ ಉಳಿದಿದ್ದ ಅಪ್ಪೇಹುಳಿಯನ್ನು ಗಟಗಟನೆ ಕುಡಿದೇಬಿಟ್ಟ!!! ’ ಆಹಾ... ಎನ್ ಸೂಪರ್ ಮಾಡಿದೀಯೋ ಮಗಾ.... " ಎಂದು ಹೇಳುತ್ತಾ ಆನಂದದ ಪರಾಕಾಷ್ಠೆಗೆ ತಲುಪಿಬಿಟ್ಟ.

* * *

ಹೀಗೇ ನಡೆದ ನನ್ನ ಅಡುಗೆಯ ಪ್ರಯೋಗಗಳಲ್ಲಿ ಅನೇಕ ಸತ್ಯವನ್ನು ಕಂಡುಕೊಂಡಿದ್ದೇನೆ. ನನ್ನ ಸಹನೆ, ನೆನಪಿನಶಕ್ತಿ ಎಲ್ಲವನ್ನೂ ಓರೆಗಲ್ಲಿಗೆ ಹಚ್ಚಿದ್ದೇನೆ. ಅದರಲ್ಲಿ ಪ್ರಥಮ ಸತ್ಯವೆಂದರೆ ’ನಾನು ಹಾಲು ಕಾಯಿಸಲು ಅಯೊಗ್ಯ, ಅದು ನನ್ನಿಂದ ಸಾಧ್ಯವಿಲ್ಲ’ ಎಂದು.

* * *

ನನ್ನ ಅಡುಗೆಮನೆಯ 6 ವರ್ಷಗಳ ಅನುಭವವ ಹೊರತಾಗಿಯೂ ವಾರಕ್ಕೆ 4 - 5 ದಿನ ಒಲೆಯ ಮೇಲಿಟ್ಟ ಹಾಲು ಉಕ್ಕಿ ಒಲೆಯನ್ನೆಲ್ಲಾ ಆವರಿಸಿಬಿಡುವದೂ, ನಂತರ ನಾನು ಅದನ್ನು ಅಸಾಧ್ಯವಾದ ನೋವಿನಿಂದ ಒರೆಸುವುದೂ ಒಂದು ಸಾಮಾನ್ಯ ವಿಷಯ. ಆದರೆ ಮೊನ್ನೆಯ ಒಂದು ಘಟನೆ ನನಗೆ ಪ್ರಥಮ ಸತ್ಯದರ್ಶನವನ್ನು ಮಾಡಿಸಿತು. ಒಲೆಯ ಮೇಲಿಟ್ಟ ಹಾಲು ಸತತವಾಗಿ 3-4 ಗಂಟೆಗಳ ಕಾಲ ಕುದಿದು.... ಬಿಳಿಯ ಹಾಲು ಕಪ್ಪಾಗಿ... ಫಳಫಳ ಹೊಳೆಯುತ್ತಿದ್ದ ಪಾತ್ರೆಯೂ ಕಪ್ಪಾಗಿ....ರೂಮಿನ ತುಂಬಾ ಹೊಗೆ ಆವರಿಸಿಬಿಟ್ಟಿತು... ಆದರೆ ನನ್ನ ಕೊಳಲ ಜೊತೆಯಲ್ಲಿದ್ದ ಮನಸ್ಸಿಗೆ ಇದ್ಯಾವುದರ ಪರಿವೆಯೇ ಆಗದೇ,... ಹೀಗೇ ಅವಾಂತರಗಳ ಸರಮಾಲೆ.....


* * *
 ಸಿರಸಿಯಿಂದ ತಂದ ಹೊಸ ದೋಸೆ ಬಂಡಿಯಲ್ಲಿ ತೆಳ್ಳವ್ ದೋಸೆ ಮಾಡೋಣವೆಂದು ಆಸೆಪಟ್ಟು ಒಂದು ಕೆ.ಜಿ. ದೋಸೆಹಿಟ್ಟು ಮನೆಗೆ ತಂದು, ಒಂದು ಪಾತ್ರೆಯಲ್ಲಿ ಹಾಕಿ ಹದಮಾಡಿದೆ. ದೋಸೆ ಬಂಡಿಯನ್ನು ಬಿಸಿಗೆ ಇಟ್ಟು ಪಕ್ಕದಲ್ಲಿ ಬಿಸಿಬಿಸಿಯಾದ ಚಾ ಮಾಡೋಣ ಎಂದು ಹಾಲನ್ನು ಕಾಯಿಸಲು ಇಟ್ಟಿದ್ದೆ. ಚಹಾ ಮಾಡಿದ ನಂತರ ದೋಸೆ ಹಿಟ್ಟಿನ ಪಾತ್ರೆಯನ್ನು ಬಂಡಿಯ ಪಕ್ಕದ ಒಲೆಯಮೇಲೆ ಇಟ್ಟುಕೊಂಡು ಪಕ್ಕದ ಉರಿಯಲ್ಲಿ ದೋಸೆ ಎರೆಯಲು ಶುರು ಮಾಡಿದೆ. ಒಂದು ದೋಸೆಯೇನೋ ಚಟಪಟ ಸದ್ದು ಮಾಡುತ್ತಾ ಮೇಲೆದ್ದು ಬಂತು. ಆದರೆ ಸ್ವಲ್ಪ ಹೊತ್ತಿನಲ್ಲೇ ದೋಸೆ ಹಿಟ್ಟಿನ ಪಾತ್ರೆಯಲ್ಲಿದ್ದ ದೋಸೆ ಹಿಟ್ಟು ಗಟ್ಟಿಯಾಗಿ ಹೊಗೆ ಬಿಡತೊಡಗಿತ್ತು.  ಇದೇನಪ್ಪಾ ಹೊಸತು ಎಂದು ಬಗ್ಗಿ ನೋಡಿದರೆ - ಚಹಾ ಮಾಡಲು ಹಚ್ಚಿದ್ದ ಬೆಂಕಿ ಆರಿಸಲು ಮರೆತೇ ಬಿಟ್ಟಿದ್ದೆ !!!!   ದೋಸೆ ಹಿಟ್ಟಿನ ಪಾತ್ರೆಯಲ್ಲಿದ್ದ ಹಿಟ್ಟು ಗಟ್ಟಿಯಾಗಿ ಮುದ್ದೆಯಾಗಿಬಿಟ್ಟಿತ್ತು :( .... ಹಾಗೇ ನನ್ನ ತೆಳ್ಳವ್ ದೋಸೆ ಮಾಡುವ ಆಸೆ ನನಸಾಗಲೇ ಇಲ್ಲ :(
* * *

ಅಡುಗೆಮನೆ ಎಂದರೆ ಅದೊಂದು ಎಲ್ಲಾ ಥರಹದ ಜೀವಿಗಳಿಗೆ ಆಶ್ರಯತಾಣ. ಅಲ್ಲಿ ಮನುಷ್ಯನೇ ಅಲ್ಪಸಂಖ್ಯಾತ. ರಾತ್ರಿ ಲೈಟ್ ಆಫ್ ಮಾಡಿದಕೂಡಲೇ ಹೊರಬರುವ ಸಾವಿರಾರು ಜಿರಲೆಗಳು... ನಮ್ಮ ಕಸದಬುಟ್ಟಿಯಲ್ಲಿ ಸದಾ ಮನೆ ಮಾಡಿರುವ ಇಲಿಗಳು... ನಮ್ಮ ರೂಮಿನಲ್ಲಿ ಕಾಯಿಸುವ ಹಾಲಿನ ಮೇಲೆ ಸದಾ ಕಣ್ಣಿಟ್ಟಿರುವ ಬೀದಿಯ ಬೆಕ್ಕು...ಊರಿಂದ ತರುವ ಬೆಲ್ಲದ ಡಬ್ಬಿಗೆ ನೇರ ದಾಪುಗಾಲು ಹಾಕುವ ಇರುವೆಗಳು... ಇವೆಲ್ಲರೂ ನಮ್ಮ ಆಜನ್ಮ ವೈರಿಗಳಂತೆ ಭಾಸವಾಗುತ್ತಾರೆ.

ಇಷ್ಟೆಲ್ಲಾ ಕಷ್ಟಗಳನ್ನು ನಿಭಾಯಿಸಿ ರುಚಿಕರವಾದ ಅಡುಗೆ ತಯಾರುಮಾಡುವದು ಸುಲಭಸಾಮಾನ್ಯವೇ?

Tuesday, July 7, 2009


With my Guruji Vidwan Shri K Prabhakar Upadhyaya,mysore.(He is well known as KP Upadhyaya.)


Saturday, December 27, 2008

ದೀಪವೂ ನಿನ್ನದೇ... ಗಾಳಿಯೂ ನಿನ್ನದೇ..
























ಸ್ಥಳ: ಭುವನಗಿರಿ ದೇವಸ್ಥಾನ. ಸಿದ್ದಾಪುರ.ಉತ್ತರ ಕನ್ನಡ.

Monday, December 8, 2008

ದಬ್ಬೆ ಜಲಪಾತ

ದಬ್ಬೆ ಜಲಪಾತ / ಕೆಪ್ ಜೋಗ :

ಬೆಂಗಳೂರಿನಲ್ಲಿ ದಿನವಿಡೀ ಕಂಪ್ಯೂಟರನ್ನು ಎವೆಯಿಕ್ಕದೇ ನೋಡುತ್ತಿರುವ ಕಣ್ಣುಗಳಿಗೆ, ದಿನವಿಡೀ ವಾಹನಗಳು ಕಾರುವ ಹೊಗೆಯನ್ನು ಕುಡಿಯುವ ಶ್ವಾಸನಾಳಗಳಿಗೆ, ವರ್ಷವಿಡೀ ಕಿವಿ ಹರಿದುಹೋಗುವಷ್ಟು ಶಬ್ದಾಘಾತಗಳಿಂದ ತತ್ತರಿಸಿಹೋಗುವ ಕಿವಿಗಳಿಗೆ ಏನಾದರೂ ಸಾಂತ್ವನವನ್ನೀಯುವ ಬಗೆ ಬೇಕೇ ಬೇಕಿತ್ತು.

ಕೃಷ್ಣ, ಪ್ರವೀಣ ನಾರಾ, ಮಿಥುನ್ ಯು, ಪ್ರದೀಪ ಕೊಪ್ಪಾ, ಪ್ರಮೋದ nc, ಪವನ್ ಶಾಸ್ತ್ರಿ ಎಲ್ಲಾ ಕೂಡಿಕೊಂಡು ದಬ್ಬೆ ಜಲಪಾತದೆಡೆಗೆ ಹೊರಟೆವು. ಈ ಮೊದಲೇ ಇಲ್ಲಿಗೆ ಚಾರಣಿಸಿದ್ದ ಶ್ರೀಕಾಂತ್ ಅವರ ಮಾರ್ಗದರ್ಶನ ಇದ್ದಿದ್ದರಿಂದ ನಮ್ಮ ಪ್ರಯಾಣದ ಎಲ್ಲಾ ಪೂರ್ವಯೋಜನೆಗಳು ಸುಲಲಿತವಾದವು. ’ನಕ್ಸಲರ ಕಾಟ’ ಎಂಬ ಭಯ ಎಲ್ಲ ಕಡೆ ಆವರಿಸಿರುವದರಿಂದ,”ಶಿವಮೊಗ್ಗದ ಕಡೆ ಕಾಡು ತಿರುಗಲು ಹೊರಟಿದ್ದೇವೆ”, ಎಂದ ಕೂಡಲೇ ನನ್ನ ಅಮ್ಮ ನನಗೊಮ್ಮೆ ಎಚ್ಚರಿಕೆಯ ಸುರಿಮಳೆಗೈದಳು. ’ಪೇಟೆಯಲ್ಲಿ ಭಯೋತ್ಪಾದಕರ ಕಾಟ, ಕಾಡಿನಲ್ಲಿ ನಕ್ಸಲರ ಕಾಟ. ಎಲ್ಲಿ ಹೋದರೂ ಇದ್ದರೂ ತೊಂದರೆ ತಪ್ಪಿದ್ದಲ್ಲ’, ಎಂದು ಹೇಳಿ ನಾನೂ ಕೈ ತೊಳೆದುಕೊಂಡೆ:-)




ರಾತ್ರಿಯ ಶಿವಮೊಗ್ಗೆಯ ರೈಲು ಬಳಸಿ, ಸಾಗರದಲ್ಲಿ ತಿಂಡಿ ತಿಂದು, ಕಾರ್ಗಲ್(ಸಾಗರದಿಂದ ಜೋಗದ ರಸ್ತೆ, 20km) ಎಂಬ ಊರಿಗೆ ಬಸ್ಸಿನಲ್ಲಿ ಬಂದೆವು. ಇಲ್ಲಿಂದ ಭಟ್ಕಳ ರಸ್ತೆಯಲ್ಲಿ ಹೊಸಗದ್ದೆ (ಕಾರ್ಗಲ್ ನಿಂದ 20km, ಭಟ್ಕಳದ ಕಡೆಗೆ) ಎಂಬ ಊರಿನಲ್ಲಿ ಇಳಿದುಕೊಂಡು ಸುಮಾರು ಆರು ಕಿಮಿ ಇರುವ ದಬ್ಬೆಯ ಜೋಗದ ಕಡೆ ನಡೆದೆವು.

ದಾರಿಯುದ್ದಕ್ಕೂ ಸಿಕ್ಕುತ್ತಿದ್ದ ಹರಣಿ ನೀರಿನಲ್ಲಿ ಆಟವಾಡುತ್ತಾ, ಕಿರು ಜಲಪಾತಗಳನ್ನು ಛಾಯಾಚಿತ್ರಗಳಲ್ಲಿ ಸೆರೆಹಿಡಿಯುತ್ತಾ ಮುಂದೆ ಸಾಗುತ್ತಿದ್ದೆವು. ಆದರೆ ದಾರಿಯುದ್ದಕ್ಕೂ ಇದ್ದ ಅನೇಕ ತಿರುವುಗಳು ನಮ್ಮನ್ನು ಬಹಳ ಸುಲಭವಾಗಿ ದಾರಿತಪ್ಪಿಸುವಂತಿದ್ದವು. ದಬ್ಬೆ ಜಲಪಾತದಷ್ಟೇ ಹೆಸರು ಮಾಡಿದವರೆಂದರೆ ದಬ್ಬೆಮನೆಯ ಮಂಜುನಾಥ ಗೌಡರು. ಇವರ ಮನೆಯ ಎದುರಿನ ಗದ್ದೆಯಂಚಿನಲ್ಲೇ ಕೆಳಗಡೆ ಜಲಪಾತವಿರುವದರಿಂದ, ಬಂದ ಚಾರಣಿಗರಿಗೆ ಊಟ, ವಸತಿ ಇತ್ಯಾದಿ ಇವರ ಮನೆಯಲ್ಲೇ ನೆರವೇರುತ್ತದೆ. ಆದ್ದರಿಂದ ದಾರಿಯುದ್ದಕ್ಕೂ ಕಂಡಕಂಡವರಲ್ಲೆಲ್ಲಾ "ಹೊಯ್... ಮಾರಯ್ರೆ...ಗೌಡ್ರ ಮನೆಗೆ ದಾರಿ ಹೆಂಗೆ...?" ಎಂದು ವಿಚಾರಿಸುತ್ತಿದ್ದೆವು.

ಅಂತೂ ಗೌಡರ ಮನೆಗೆ ಬರುವಷ್ಟರಲ್ಲೇ ಮಧ್ಯಾಹ್ನವಾಗಿತ್ತು. ’ಕೊನೆಯಲ್ಲಿ ಬೇಕಾಗಬಹುದು’ ಎಂದು ಗೌಡರು ಕೊಟ್ಟ ಹಗ್ಗವನ್ನು ಹೆಗಲಿಗೆ ಏರಿಸಿ ಭತ್ತದ ಗೆದ್ದೆಯ ತುದಿಯಿಂದ ಕೆಳಗೆ ಇಳಿಯಲು ಶುರು ಮಾಡಿದೆವು. ಸುಮಾರು ಅರ್ಧ ಕಿಮಿಯಷ್ಟು ಲಂಬವಾಗಿ ಗದ್ದೆಯ ನೆತ್ತಿಯಿಂದ ಇಳಿಯಬೇಕು. ಕೇವಲ ಮರಗಳ ಹಾಗೂ ಬಳ್ಳಿಗಳ ಕಾಂಡದ ಸಹಾಯದಿಂದ ಕೆಳಗೆ ಸಾವಧಾನವಾಗಿ ಇಳಿಯುತ್ತಿದ್ದ ಅನುಭವವಂತೂ ’ಸಖತ್’. ಕೆಲವೊಮ್ಮೆ ನೀವು ಕೈಯಲ್ಲಿ ಹಿಡಿದಿರುವದು ಬಳ್ಳಿಯೋ ಅಥವಾ ಹಾವೋ ಎಂದು ಗೊಂದಲವಾಗುತ್ತಿತ್ತು.!!! ದಾರಿಯುದ್ದಕ್ಕೂ ಹಾವಿನ ಹಾಗೂ ಯಾವಾಗ ಬೇಕಾದರೂ ಆಕ್ರಮಣ ಮಾಡಬಲ್ಲಂತಹ ಕರಡಿಯ ಅಸ್ತಿತ್ವದ ಬಗ್ಗೆ ಒಂದು ಲಕ್ಷ್ಯವನ್ನಿಟ್ಟುಕೊಂಡೇ ಕೆಳಗೆ ಇಳಿದೆವು.



ದಬ್ಬೆಯ ವೈಶಿಷ್ಟ್ಯವೆಂದರೆ ಕೆಳವರೆಗೆ ನೀವು ಇಳಿಯುವವರೆಗೂ ಜಲಪಾತ ಗೋಚರಿಸುವದಿಲ್ಲ. ಆದರೆ ಸುಮಾರು 20-30 ಅಡಿಗಳಷ್ಟು ಎತ್ತರ ಬಾಕಿ ಇರುವಾಗ ಇದು ಹಠಾತ್ತಾಗಿ ಗೋಚರಿಸುತ್ತದೆ. ಆ ದೃಶ್ಯದ ವೈಭವವನ್ನು ಅಲ್ಲಿಗೆ ಹೋಗಿಯೇ ಅನುಭವಿಸಬೇಕು. ಪ್ರದೀಪ ಹೇಳುವಂತೆ, ’’God levellu magaa... God levallu..."!!!.




ಎಲ್ಲರೂ ಉತ್ಸಾಹಭರಿತರಾಗಿ ನೀರಿನಲ್ಲಿ ಆಟ-ಸ್ನಾನಗಳನ್ನು ಮುಗಿಸಿ ಸ್ವಲ್ಪ ಸಮಯ ಪೃಕೃತಿಯ ಸವಿಯನ್ನು ಸವಿಯುತ್ತಾ ಅಲ್ಲೇ ಕಳೆದೆವು.
ದಬ್ಬೆ ಜೋಗದ ಹತ್ತಿರದ ನೋಟ.
ಗಾಳಿಯ ರಭಸಕ್ಕೆ
ನೀರು ಸಿಡಿಯುವದರಿಂದ
ಹತ್ತಿರದವರೆಗೆ
ಕ್ಯಾಮೆರಾ
ತರಲಾಗುವದಿಲ್ಲ.







ಮತ್ತೆ ತಿರುಗಿ ಬೆಟ್ಟವನ್ನು ಹತ್ತಿ ಬರುವಷ್ಟರಲ್ಲಿ ಎಲ್ಲರ ಹೊಟ್ಟೆ ನಿರ್ವಾತವಾಗಿದ್ದರೂ, ಮನಸ್ಸು ಮಾತ್ರ ಗೌಡರ ಮನೆಯಲ್ಲಿ ಆಗಲೇ ತಯಾರಾಗಿದ್ದ ಬಿಸಿಬಿಸಿ ಅನ್ನ-ಸಾರು, ಮಜ್ಜಿಗೆ, ಕಡಿ ಉಪ್ಪು, ಮಿಡಿ ಉಪ್ಪಿನಕಾಯಿ ಇವನ್ನೆಲ್ಲಾ ಮೇಯುವ ಆಸೆಯಿಂದ ಉಲ್ಲಸಿತವಾಗಿತ್ತು.


ಗೌಡರ ಮನೆಯ ಗದ್ದೆಯಲ್ಲಿ ಕ್ಲಿಕ್ಕಿಸಿದ ಭತ್ತದ ತೆನೆ >>










<< ಗೌಡರ ಮನೆಯ ಹಸಿ ಅಡಿಕೆ.


ಒಟ್ಟಿನಲ್ಲಿ ದಬ್ಬೆಜೋಗ ಒಂದು ದಿನದ ಚಾರಣಕ್ಕೆ ಅತಿಸೂಕ್ತವಾದ ಜಾಗ. ಬೇಕಷ್ಟು ನಡಿಗೆ, ಕಾಡು, ಇಳಿಯುವದು, ಹತ್ತುವದು, ಕೆಲವೊಂದು ಕಡೆ ಸವಾಲುಹಾಕುವಷ್ಟು. ಒಟ್ಟಿನಲ್ಲಿ ನಮಗಿರುವ ಪೃಕೃತಿಯ ಜೊತೆಗಿನ ಒಡನಾಟದ ಬಯಕೆ ಕೊಂಚವಾದರೂ ಈಡೇರುವದರಲ್ಲಿ ಸಂಶಯವಿಲ್ಲ.


ಹಾಗೆಯೇ ನಮ್ಮ ಮುಂದಿನ ಹವಣಿಕೆಯ ಪ್ರಕಾರ ಮತ್ತೆ ಸಾಗರದತ್ತ ಪ್ರಯಾಣಿಸಲು, ವ್ಯಾನೊಂದನ್ನು ಬಾಡಿಗೆಗೆ ಪಡೆಯಲು ಪಕ್ಕದ ಊರಾದ ಕೊಡ್ಲಕೆರೆಯ ಇನ್ನೊಂದು ಗೌಡರ ಮನೆಯತ್ತ ಬೆಳದಿಂಗಳಿನಲ್ಲಿ ನಡೆದೆವು.

ದಬ್ಬೆ ಜೋಗಕ್ಕೆ ನೀವೂ ಹೋಗಿಬನ್ನಿ. ಆನಂದಿಸಿ.