Showing posts with label ಮಳಲಗಾಂವ. Show all posts
Showing posts with label ಮಳಲಗಾಂವ. Show all posts

Saturday, September 5, 2015

ನಾಕುದಾರಿಯಲ್ಲೊಂದು ಮರದ ಕಥೆ

ದಟ್ಟನೆಯ ಎತ್ತರೆತ್ತರದ ಮರಗಳ ಕಾಡು, ಅದರ ಜೊತೆಗೂಡಿದ ಜಲಪಾತಗಳ ಸೊಬಗು... ಪರಿಶುದ್ಧ ಗಾಳಿ... ಮಳೆಗಾಲದ ಎಡೆಯಿಲ್ಲದ ಮಳೆ... ಮಲೆನಾಡಿನ ಮಡಿಲಲ್ಲಿರುವ ನಮ್ಮ ಊರಿನ ನಿತ್ಯಹರಿದ್ವರ್ಣ ಕಾಡಿನ ವರ್ಣನೆ ಮಾಡುತ್ತಾ ಹೊರಟರೆ ಅದಕ್ಕೆ ಕೊನೆಯಿಲ್ಲ.

ದುರಾದೃಷ್ಟವೆಂದರೆ ಮರಗಳ್ಳರ ಕಾಟ ನಮ್ಮೂರನ್ನೂ ಬಿಟ್ಟಿಲ್ಲ. ಫಾರೆಸ್ಟನ ಕಣ್ಣು ತಪ್ಪಿಸಿ ಮರಗಳಿಗೆ ಬೆಂಕಿ ಹಚ್ಚಿ ಬೀಳಿಸಿ, ನಂತರ ಉಳಿದ ಮರವನ್ನು ಕಡಿದು ಸಾಗಿಸುವದು ಸಾಮಾನ್ಯ. ಮಾವಿನ ಮರದ ಕಾಯಿ ಬೇಕೆಂದರೆ ಬುಡಗೂಡಿ ಮರವನ್ನೇ ಕಡಿಯುವುದೂ, ರಾತ್ರೋರಾತ್ರಿ ಮನೆಯಂಗಳಕ್ಕೇ ನುಗ್ಗಿ ಗಂಧದ ಮರವನ್ನು ಕಡಿದು ಸಾಗಿಸುವದೂ, ಬೀಟೆ ತೇಗದ ಮರಗಳ ಕಳ್ಳತನಗಳೂ, ಇವೆಲ್ಲ ನಿರಂತರವಾಗಿ ನಡೇದೇ ಇರುವ ಅವಾಂತರಗಳು.

ನಾಕುದಾರಿ ಎಂಬಲ್ಲಿ ನಮ್ಮ ಊರಿನ ಕಾಡುದಾರಿ ಬೇರೆಬೇರೆ ಮನೆಗಳಿಗೆ ಹೋಗಲು ಕವಲೊಡೆಯುತ್ತದೆ. ಹಾಗೆಯೇ ಕನ್ನಡ ಶಾಲೆಯ ಮಕ್ಕಳೆಲ್ಲ ನಾವೊಂದು ದಿನ ಮಳಲಗಾಂವ ಶಾಲೆಯಿಂದ ಸಂಜೆ ಕಾಡುದಾರಿಯಲ್ಲಿ ಮನೆಗೆ ನಡೆದು ಬರುತ್ತಿದ್ದೆವು. ಯಾವ ಕಾರಣಕ್ಕೋ ಏನೋ, ದಾರಿಯ ಪಕ್ಕದಲ್ಲಿನ ಒಂದು ಬಹು ಎತ್ತರದ ದಪ್ಪನೆಯ ಮರದ ಬುಡಕ್ಕೆ ಬೆಂಕಿ ಹೊತ್ತಿತ್ತು. ತುಂಬಾ ಎತ್ತರವಿದ್ದ ಆ ಮರ ಸುಮಾರು  300 ವರ್ಷ ಹಳೆಯದೇ ಇದ್ದಿರಬಹುದು. ಯಾರೋ ಮರಗಳ್ಳರು ಬೇಕೆಂದೇ ಬೆಂಕಿ ಹಚ್ಚಿದ್ದು ಸ್ಪಷ್ಟವಾಗಿತ್ತು. ಅದನ್ನು ನೋಡಿ ಏನಾದರೂ ಮಾಡಲೇಬೇಕೆಂದು ಎಲ್ಲಾ ಮಕ್ಕಳೂ ಮನೆಗೆ ಕಿತ್ತಾಬಿದ್ದು ಓಡಿದೆವು.

ನಮ್ಮ ಮನೆಯ ವಿಶ್ವಣ್ಣ ನಮ್ಮೂರಿಗೇ ಹೆಸರಾಂತ ಪರಿಸರಪ್ರೇಮಿ. ಯಾರಾದರೂ ಒಂದು ಚಿಕ್ಕ ಗಿಡವನ್ನು ಕಡಿದರೂ ಸರಿ, ಅವರಿಗೆ ಪರಿಸರದ ಬಗ್ಗೆ, ಮರಗಳ ಸಂರಕ್ಷಣೆಯ ಬಗ್ಗೆ ತಿಳಿಸಿ,ಮನವೊಲಿಸಿ, ಮತ್ತೊಮ್ಮೆ ಹಾಗಾಗದಂತೆ ನೋಡಿಕೊಳ್ಳುತ್ತಾನೆ.

ನಾನು ಓಡೋಡಿ ಮನೆಗೆ ಬಂದವನೇ, "ವಿಶ್ವಣ್ಣಾ, ಯಾರೋ ನಾಕುದಾರಿಯ ದೊಡ್ಡ ಮರಕ್ಕೆ ಬೆಂಕಿ ಹಚ್ಚಿದ್ದ... ಎಂಥಾ ಮಾಡವೋ..." ಎಂದು ಕೇಳಿದೆ. ಕೂಡಲೇ ವಿಶ್ವಣ್ಣ ಎಂದಿನಂತೆ ಸಟಕ್ಕನೇ ಒಂದು ಉಪಾಯ ಹೂಡಿದ. ಮನೆಯಿಂದ ಸುಮಾರು ಅರ್ಧ ಕಿಮಿ ದೂರದಲ್ಲಿನ ಕಾಡಿನ ಬೆಂಕಿಯನ್ನು ಆರಿಸುವುದು ಸುಲಭದ ಕೆಲಸವಾಗಿರಲಿಲ್ಲ. ಮನೆಯಲ್ಲಿದ್ದ ಟ್ರಾಕ್ಟರಿನ ಟ್ರಾಲಿಯಲ್ಲಿ ಒಂದು ದೊಡ್ಡ ನೀರಿನ ಹಂಡೆಯನ್ನು ತಂದು ಕೂಡಿಸಿದೆವು. ದನದ ಕೊಟ್ಟಿಗೆಯಿಂದ ನೀರಿನ ಹಂಡೆಯಲ್ಲಿ ನೀರು ತುಂಬಿಸಿ, ಇಬ್ಬರೂ ಟ್ರಾಕ್ಟರಿನಲ್ಲಿ ನಾಕುದಾರಿಯ ಕಡೆಗೆ ಹೊರಟೆವು.

ಒಂದೇ ಹಂಡೆಯ ನೀರು ಸಾಲದೇ ಇನ್ನೂ ಎರಡು ಸಲ ದನದ ಕೊಟ್ಟಿಗೆಗೆ ನೀರು ತರಲು ಟ್ರಾಕ್ಟರಿನಲ್ಲಿ ತಿರುಗಿದೆವು. ಸುಮಾರು ಹೊತ್ತು ಸತತವಾಗಿ 3 ಹಂಡೆಯ ನೀರನ್ನು ಉರಿಯುತ್ತಿದ್ದ ಮರದ ಬುಡಕ್ಕೆ ಹಾಕಿ, ಅಂತೂ ಬೆಂಕಿಯನ್ನು ನಂದಿಸಿದೆವು. ಆವತ್ತಿಗೆ ನಾವು ಆ ಮರದ ಬೆಂಕಿಯನ್ನು ಆರಿಸಿರದಿದ್ದರೆ, ಉರಿಯುತ್ತಿದ್ದ ಬೆಂಕಿ ಕಾಳ್ಗಿಚ್ಚಾಗಿ ಹಬ್ಬಿ ಎಷ್ಟು ಮರಗಳನ್ನು ಸುಡುತ್ತಿತ್ತೋ ಏನೋ...

ಇಂದಿಗೂ ನಮ್ಮೂರಿಗೆ ಹೋಗುವಾಗ ಆ ಮರ ಕಾಣುತ್ತದೆ. ನಾನು ವಿಶ್ವಣ್ಣ ಒಟ್ಟಿಗೇ ಇದ್ದರಂತೂ ಆ ಮರದ ಬಳಿ ನಿಂತು, ಆ ದಿನದ ನಮ್ಮ ಟ್ರಾಕ್ಟರಿನ ಸಾಹಸವನ್ನು ನೆನೆಸಿಕೊಳ್ಳುತ್ತೇವೆ.

ಇಂಥ ಸಾವಿರಾರು ಗಿಡ ಮರಗಳು ನಮಗಿಂದು ಉಸಿರಾಡುವ ಗಾಳಿಯನ್ನೂ - ಬದುಕನ್ನೂ ನೀಡಿವೆ. ಆದರೆ ನಾವೆಷ್ಟು ಅವಕ್ಕೆ ಮರಳಿ ನೀಡಿದ್ದೇವೆ...?

Friday, February 14, 2014

ಅಜ್ಜರ ನೆನಪಿನಲ್ಲಿ ಯಲ್ಲಾಪುರದಲ್ಲೊಂದು ಸಂಗೀತ ಸಂಜೆ


ಈ ವರ್ಷದ ಅಜ್ಜರ ನೆನಪಿನ ಸಂಗೀತ ಸಂಜೆ ಬಹು ಅದ್ಭುತವಾಗಿ ಕೂಡಿಬಂತು.

ಎಂದಿಗೂ ಕನ್ನಡದಲ್ಲಿ ಭಾಷಣ ಮಾಡಿ ಅಭ್ಯಾಸವಿರದ ಶಿವರಾಮ ಭಟ್ (ಶಿವರಾಮಪಚ್ಚಿ) ಅವರು ಬಹು ಒಪ್ಪಟವಾಗಿ ಕಾರ್ಯಕ್ರಮದ ನಿರ್ವಹಣೆ ಕನ್ನಡದಲ್ಲೇ ಮಾಡಿದರು.  :)

ಯಲ್ಲಾಪುರದ ಶ್ರೀ ಎಂ.ಎನ್.ಹೆಗಡೆಯವರು ಕಾರ್ಯಕ್ರಮದ ಕುರಿತು ಒಂದೆರಡು ಮಾತನ್ನಾಡಿದರು.

ಎಂದಿನಂತೆ ಕಾರ್ಯಕ್ರಮಗಳಿಗೆ ಜನ ಸೇರುವದು ತಡವಾಗಿ ಆದ್ದರಿಂದ, ಸಂಜೆ 5ಕ್ಕೆ ಶುರುವು ಆಗಬೇಕಾಗಿದ್ದ ಸಂಗೀತ 6 ಗಂಟೆಗೆ ಶುರುವಾಯಿತು.












ಮೊದಲಿಗೆ ನಮ್ಮ ಮನೆಯ ಲಿಗಾಡಿ ಮಕ್ಕಳಾದ ಸುಮಂತ ಮತ್ತು ಸುಜನಾ ಇಬ್ಬರೂ ಸಂಸ್ಕೃತ ಶ್ಲೋಕಗಳನ್ನು ಹೇಳಿ ಎಲ್ಲರನ್ನೂ ಅಚ್ಚರಿಪಡಿಸಿದರು:) ಮನೆಯವರ ಎದುರಿಗೆ ತಾವು ಕೇವಲ ಕಿಲಾಡಿ ಮಾಡುವ ಮಕ್ಕಳಷ್ಟೇ ಅಲ್ಲ, ಎಂದು ಸಾಬೀತುಪಡಿಸಿದರು :) (ಆದರೆ ನಂತರ ಬೇರೆಯವರು ಹಾಡುವಾಗ ಎಂದಿನಂತೆ ತಮ್ಮಿಬ್ಬರ ಕುಣಿತ-ಕಿಲಾಡಿಗಳನ್ನು ಮತ್ತೆ ಶುರುಮಾಡಿ, ಜನರೆಲ್ಲ ಬರೀ ಸಂಗೀತವನ್ನಷ್ಟೇ ಕೇಳದೇ, ತಮ್ಮ ಕಡೆಗೂ ಗಮನ ಹರಿಸುವಂತೆ ನೋಡಿಕೊಂಡರು :))

ಶುರುವಿನಲ್ಲಿ ವೈದ್ಯ ಹೆಗ್ಗಾರಿನ ಸ್ಪೂರ್ತಿ ವೈದ್ಯ ಹಾಗೂ ಕೊಡ್ಲಗದ್ದೆಯ ಪೂಜಾ ಹೆಗಡೆ ಎಂಬ ಪುಟಾಣಿಗಳು ತಮ್ಮ ಸ್ವಾಗತ ಗೀತೆಗಳಿಂದ ಎಲ್ಲರ ಮನವನ್ನು ಮುದಗೊಳಿಸಿದರು.








ನಂತರದಲ್ಲಿ ರಮೇಶ ಭಾಗ್ವತ್ ಕವಾಳೆ ಇವರು, ಮಾರುಬಿಹಾಗ್ ರಾಗವನ್ನು ಹಾಗೂ ಒಂದು ಭಜನೆಯನ್ನು ಹಾಡಿ ಎಲ್ಲರನ್ನೂ ರಂಜಿಸಿದರು. ಇವರಿಗೆ ತಬಲಾದಲ್ಲಿ ಗಣೆಶ ಭಾಗ್ವತ್ ಗುಂಡ್ಕಲ್ ಹಾಗೂ ಸಂವಾದಿನಿಯಲ್ಲಿ ದತ್ತಾತ್ರೇಯ ಗಾಂವ್ಕರ್ ಚಿಟ್ಟೇಪಾಲ್ ಇವರು ಸಾಥಿಯನ್ನು ನೀಡಿದರು. ರಮೇಶ ಇವರ ಯಕ್ಷಗಾನ ಮದ್ದಳೆ ನುಡಿಸುವದು, ಯಕ್ಷಗಾನ ಭಾಗವತಿಗೆ ಮಾಡುವದು, ಯಕ್ಷಗಾನ ಹೆಜ್ಜೆಗಳನ್ನಷ್ಟೇ ನೋಡಿದ್ದ ನಮ್ಮ ಊರಿನ ಜನರು, ಇವರ ಶಾಸ್ತ್ರೀಯ ಸಂಗೀತದ ಕಲೆಯನ್ನೂ ನೋಡಿ, ಕೇಳಿ ಆನಂದಭರಿತರಾದರು.


ಕೊನೆಯದಾಗಿ ಓಂಕಾರನಾಥ್ ಹವಾಲ್ದಾರ್ ಇವರು, ಬಹು ಅದ್ಭುತವಾದ ಪುರಿಯಾ ಕಲ್ಯಾಣ್, ದುರ್ಗಾ, ಅಭಂಗ ಹಾಗೂ ಭೈರವಿ ಯನ್ನು ಕರ್ಣಾನಂದಕರವಾಗಿ ಹಾಡಿ ಸಂಗೀತದ ಕೇಳುಗರನ್ನು ಮಂತ್ರಮುಗ್ಧಗೊಳಿಸಿಬಿಟ್ಟರು. ಅವರಿಗೆ ತಬಲಾದಲ್ಲಿ ಸಿರಸಿಯ ಅನಂತ ಹೆಗಡೆ ಹಾಗೂ ಸಂವಾದಿನಿಯಲ್ಲಿ ಭರತ್ ಹೆಗಡೆ ಸಾಥ್ ನೀಡಿದರು. ಓಂಕಾರನಾಥ್ ಅವರಿಗೆ ಭಜನೆ ಹಾಡುವಾಗ ತಾಳದಲ್ಲಿ ನಾಗೇಂದ್ರ ವೈದ್ಯ ಹೆಗ್ಗಾರು ಇವರು ತಾಳವಾದ್ಯ ಸಹಕಾರ ನೀಡಿದರು.



ಓಂಕಾರನಾಥ್ ಅವರು ತಾನ್ ಗಳನ್ನು ಹಾಡುತ್ತಿದ್ದಂತೆಯೇ ಅವರ ಗಾಯನದಲ್ಲಿ ಮುಳುಗಿದ್ದ ಜನರ ಚಪ್ಪಾಳೆಗಳೂ, ಸಂತಸದ ಆಹಾಕಾರಗಳೂ ಭರಪೂರವಾಗಿ ಹೊಮ್ಮಿದವು. ದುರ್ಗಾ ರಾಗದ 'ಆಡಲು ಪೋಗೋಣ ಬಾರೋ ರಂಗಾ' ಎಂಬ ದಾಸರ ಪದವೂ, ಕನ್ನಡದಲ್ಲಿ ಹಾಡಿದ ಅಭಂಗ ಹಾಗೂ ಭೈರವಿಯ 'ಕಾಯೋ ಕರುಣಾನಿಧೇ' ಗಾನಗಳು ಕೇಳುಗರ ಮನದಲ್ಲಿ ಅಚ್ಚೊತ್ತಿ ಉಳಿಯಿತು.






ಕೊನೆಯದಾಗಿ ದೊಡ್ಡಪ್ಪನವರಾದ ಜಿ.ಎಸ್.ಭಟ್ ಅವರು ವಂದನಾರ್ಪಣೆ ಮಾತುಗಳನ್ನು ಆಡಿದರು.'ಪರಿಶುದ್ಧ ಶಾಸ್ತ್ರೀಯ ಸಂಗೀತಕ್ಕಿರುವ ಆಳ ಉದ್ದಗಲಗಳನ್ನೆಲ್ಲ ಓಂಕಾರನಾಥ್ ಅವರು ಇಂದು ನಮಗೆಲ್ಲ ತೋರಿಕೊಟ್ಟರು' ಎಂದು ಜಿ.ಎಸ್ ಭಟ್
ಅವರು ಶ್ಲಾಘನೆಯ ಮಾತುಗಳನ್ನು ಆಡಿದರು.

ಅಡಿಕೆ ಭವನದ ಪ್ರಕಾಶ ಹೆಗಡೆ, ಮೈಕ್ ಸೆಟ್ಟಿನ ಪಿ.ಪಿ.ಹೆಗಡೆ, ಚಾ ಅಂಗಡಿಯ ಮಂಜಣ್ಣ, ಜನರೇಟರ್ ಮಾಚಣ್ಣ, ಟ್ಯಾಕ್ಸಿಯ ಗಾಂಕರ್ ಭಾವ, ಅವಿನಾಶಣ್ಣ ಇವರೆಲ್ಲ ನಮ್ಮ ಮೇಲಿಟ್ಟ ನಂಬಿಕೆ ಹಾಗೂ ಮಾಡಿದ ಸಹಾಯ ಮರೆಯಲಸಾಧ್ಯ. ಎಂದಿನಂತೆ ನನ್ನ ನೆಚ್ಚಿನ ಮುಂಡಗೋಡಿಮನೆ ಶ್ರೀಪತಿ ಅಣ್ಣ, ನಮ್ಮನೆಯ ವಿಶ್ವಣ್ಣ ಹಾಗೂ ಎಲ್ಲ ಗೆಳೆಯ ವೃಂದದವರಿಗೆ ಕೃತಜ್ನತೆ ಹೇಳಿ ಮುಗಿಸಲು ಸಾಧ್ಯವಿಲ್ಲ :)


ಒಟ್ಟಿನಲ್ಲಿ ಈ ವರ್ಷದ ಅಜ್ಜರ ನೆನಪಿನ ಸಂಗೀತ ಸಂಜೆ ಬಹು ಸುಮಧುರ ಸಂಗೀತದಿಂದ ತುಂಬಿ ತುಳುಕಿತು.

Sunday, February 9, 2014

ಹರೀಸಾ ಮತ್ತು ಆತನ ಪಿಸ್ತೋಲು

ಹರೀಶ ಸಿದ್ದಿ, ಎಂಬುದು ಹರೀಸನ ನಿಜವಾದ ಹೆಸರು. ಅವನು ಸಣ್ಯಾ ಸಿದ್ದಿಯ ಮೊಮ್ಮಗ. ಹರೀಸನ ಅಪ್ಪನ ಹೆಸರು ಪರುಷರಾಮ ಎಂದಾಗಿದ್ದರೂ ಊರ ಜನರೆಲ್ಲ ಸೇರಿ ಅದನ್ನು 'ಪರ್ಸು' ಎಂದು ಮಾಡಿಬಿಟ್ಟಿದ್ದರು.
ಮಳಲಗಾಂವಿನ ಶಾಲೆಯ ಹತ್ತಿರ ಅಡವಿಯಲ್ಲಿ ಪರ್ಸುವಿನ ಮನೆ ಇದೆ. ಸಂಜೆ ಹೊತ್ತು ಇಡೀ ಅಡವಿಗೇ ಕೇಳುವಷ್ಟು ಎತ್ತರದ ಸದ್ದು ಮಾಡುತ್ತಾ ಆತನ ಟೇಪ್-ರೆಕಾರ್ಡ ನಲ್ಲಿ ಹಿಂದಿ-ಕನ್ನಡ ಸಿನೆಮಾ ಪದ್ಯಗಳು ಮೊಳಗತೊಡಗುತ್ತವೆ. ಹರೀಸಾ ನಾಲ್ಕನೇ ಇಯತ್ತೆಯವರೆಗು ಶಾಲೆಗೆ ಹೋಗಿದ್ದು ಹಾಗೂ ಇನ್ನೂ ಹೋಗುತ್ತಲೇ ಇರುವದು ಪರ್ಸುವಿಗೆ ಬಹು ಅಚ್ಚರಿಯ ವಿಷಯ. ಯಾಕೆಂದರೆ ಸಣ್ಯಾ ಎಷ್ಟೇ ಹೊಡ್ತಾ ಹಾಕಿದರೂ ಪರ್ಸು ಶಾಲೆಗೆ ಹೋಗುತ್ತಿರಲಿಲ್ಲ. ತನ್ನ ಮಗ ಮಾತ್ರ ಶಾಲೆ ಇನ್ನೂ ಬಿಡಲಿಲ್ಲವಲ್ಲ ಎಂಬುದು ಪರ್ಸು ವಿನ ಸಹಜವಾದ ಕುತೂಹಲ. ಆದರೆ ಇತ್ತೀಚೆಗೆ, ಅಷ್ಟಷ್ಟು ದಿನಕ್ಕೆ ತಾನು ಶಾಲೆಗೆ ಹೋಗುವದಿಲ್ಲ, ಟೀಚರು ಹೊಡ್ತಾ ಹಾಕ್ತ್ರು ಅಂತ ರಗಳೆ ಮಾಡಿ, ಅಡವಿಯಲ್ಲಿ ಎಲ್ಲಾದರು ಅಡಗಿ ಕುಳಿತಿರುವುದೂ, ಪರ್ಸು ಹರೀಸನನ್ನು ದಿನಗಟ್ಟಲೇ ಅಡವಿಯಲ್ಲಿ ಹುಡುಕಿ, ಅಂತೂ ಹಿಡಿದು ಹೊಡ್ತಾ ಹಾಕುವದೂ ಒಂದು ಸಾಮಾನ್ಯದ ವಿಷಯ. ಅದೇನೇ ಇದ್ದರೂ ಊರವರಿಗೆಲ್ಲ ಹರೀಸಾ ಅಂದರೆ ಬಹಳ ಪ್ರೀತಿ. ಆತನನ್ನು ಕಾಡಿಸುವದು ಎಂದರೆ ಎಲ್ಲರಿಗೂ ಏನೋ ಒಂದು ಥರಹದ ಸಂತಸ.



ಕಳೆದ ಗಣೇಶ ಚೌತಿಗೆ ಊರಿಗೆ ಹೋದಾಗ ನನಗೆ ಹರೀಸನ ಒಳಗಿರುವ ಇನ್ನೊಂದು ಪ್ರತಿಭೆ ಅನುಭವಕ್ಕೆ ಬಂತು. ಹಬ್ಬಕ್ಕೆ ಅಂತ ಆತನಿಗೆ ಪರ್ಸು ಒಂದು ಆಟಿಕೆಯ ಪಿಸ್ತೋಲು ಕೊಡಿಸಿದ್ದ. ಅದರಲ್ಲಿ ಹಾಕುವ ಗುಂಡಿಗೆ ಕೇಪು ಎನ್ನುತ್ತಾರೆ. ಪರ್ಸು ಕೊಡಿಸಿದ್ದ ಕೇಪುಗಳನ್ನೆಲ್ಲಾ ಒಂದೇ ಸಮನೇ ಉಮೇದಿಯಲ್ಲಿ ಖಾಲಿಮಾಡಿ, ಮತ್ತೆ ಕೇಪು ಬೇಕೆಂದು ಹಠವನ್ನೂ ಮಾಡಿ, ಪರ್ಸು ವಿನ ಹತ್ತಿರ ಸಣ್ಣದೊಂದು ಹೊಡ್ತಾ ತಿಂದು, ನಮ್ಮ ಮನೆಯಲ್ಲಿ ಹಾಜರಾಗಿದ್ದ.

ಅಷ್ಟರಲ್ಲಿ ವಿಶ್ವಣ್ಣ ಮತ್ತು ನಾನು ನಮ್ಮ ಊರ ಹತ್ತಿರದಲ್ಲಿ ಯಾವುದೋ ಒಂದು ಭತ್ತದ ಗದ್ದೆ ಮಾರಲಿಕ್ಕಿದೆ ಎಂಬ ಸುದ್ದಿಯನ್ನು ಕೇಳಿ ಅದನ್ನು ನೋಡಲು ಹೊರಟಿದ್ದೆವು. ಆದರೆ ದಾರಿ ಸರಿಯಾಗಿ ಗೊತ್ತಿರಲಿಲ್ಲ. ಹರೀಸನ ದೊಡ್ಡಜ್ಜ ಅದೇ ಗದ್ದೆಯಲ್ಲಿ ಕೆಲಸಕ್ಕಿದ್ದು ವಾಸವಾಗಿದ್ದ. ಆದ್ದರಿಂದ ಹರೀಸನಿಗೆ ಅಲ್ಲಿಯ ದಾರಿ ಸರಿಯಾಗಿ ತಿಳಿದಿತ್ತು. ಹರೀಸ ಬಂದಿದ್ದೂ, ನಾವು ಹೊರಟಿದ್ದೂ ಒಟ್ಟಿಗೇ ಆದ್ದರಿಂದ ಆತನನ್ನು ನಮ್ಮ ಕಾರಿನ ಹಿಂಬದಿಯಲ್ಲಿ ಕೂಡ್ರಿಸಿಕೊಂಡು ಹೊರಟೆವು. ಹರೀಸನ ಮುಖವು ತನಗೆ ಇವರ ಜೊತೆ ಹೋದರೆ ಪಿಸ್ತೋಲಿಗೆ ಒಂದಷ್ಟು ಕೇಪು ಸಿಗಬಹುದು ಎಂಬ ಅಸೆಯಿಂದ ಫಳಫಳನೇ ಹೊಳೆಯುತ್ತಿತ್ತು.

ನಾವು ಸಿರಸಿ-ಯೆಲ್ಲಾಪುರ ಮುಖ್ಯ ರಸ್ತೆಗೆ ಸೇರಿ ಮತ್ತೂ ಮುಂದುವರೆದು ಹುತ್ಖಂಡ ಎಂಬ ಊರ ಹತ್ತಿರ ಹೋಗಬೇಕಿತ್ತು. ಹರೀಸನ ಗಮನ ಮಾತ್ರ ಕಾರಿನಲ್ಲಿ ಕುಳಿತಿದ್ದರೂ ತನ್ನ ಪಿಸ್ತೋಲಿನ ಬಗ್ಗೆಯೇ ಇತ್ತು. ಪಿಸ್ತೋಲನ್ನು ವಿಧವಿಧವಾಗಿ ಹಿಡಿದುಕೊಳ್ಳುತ್ತಾ, ಆಚೆ ಈಚೆ ತಿರುಗಿಸುತ್ತಾ, ಪೋಲಿಸರು ಕಳ್ಳನನ್ನು ಹಿಡಿದಾಗ "ಹ್ಯಾಂಡ್ಸ್ ಅಪ್" ಎಂದು ಹೇಳುವಂತೆ ನಟನೆ ಮಾಡುತ್ತಾ, ದಾರಿಯಲ್ಲಿ ಹೋಗುವವರಿಗೆಲ್ಲಾ ಪಿಸ್ತೋಲು ಗುರಿ ತೊರಿಸುತ್ತಾ ತನ್ನದೇ ಆದ ರೀತಿಯಲ್ಲಿ ಖುಷಿಯ ಉತ್ತುಂಗದಲ್ಲಿದ್ದ. ಆತ ಕಳೆದ ಎರಡು ದಿನಗಳಿಂದ ಪಿಸ್ತೋಲನ್ನು ಕೈಯಿಂದ ಬಿಟ್ಟಿರಲಿಲ್ಲ ಎನಿಸುತ್ತದೆ.

ಸ್ವಲ್ಪ ಸಮಯದಲ್ಲೇ ಹುತ್ಖಂಡ ಊರಿನ ಅಡ್ಡರಸ್ತೆ ಬಂದು, ಮುಂದಿನ ದಾರಿ ನಮಗೆ ಗೊತ್ತಿಲ್ಲದ ಕಾರಣ, ಹರೀಸ ದಾರಿ ತೋರಿಸಲು ಕಾರಿನ ತೆರೆದ ಕಿಟಕಿಯಿಂದ ಕೈ ಹೊರಗೆ ಹಾಕಿ ಬಲಕ್ಕೆ ತಿರುಗಲು ಕೈಸನ್ನೆ ಮಾಡುತ್ತಿದ್ದ. ಆದರೆ ಪಿಸ್ತೋಲು ಮಾತ್ರ ಕೈನಲ್ಲಿ ಹಾಗೇ ಇತ್ತು. ಸಲ್ಪ ದಿನದ ಹಿಂದೆ ಯಾವುದೋ ಒಂದಷ್ಟು ಭೂಗತ ಪಾತಕಿಗಳು ಯೆಲ್ಲಾಪುರದಲ್ಲಿ ಪಿಸ್ತೋಲಿನಿಂದ ಯಾರಿಗೋ ಹೊಡೆಯುವ ಗುಂಡು ಗುರಿತಪ್ಪಿ ಇನ್ಯಾರಿಗೋ ತಗುಲಿ ದೊಡ್ಡ ಅವಾಂತರವಾಗಿ, ದೊಡ್ಡ ಸುದ್ದಿಯಾಗಿತ್ತು. ಆದ್ದರಿಂದ ನಮ್ಮ ರಸ್ತೆಯಲ್ಲಿ ಏನೂ ಭಯವಿಲ್ಲ ಎಂದು ಅರಾಮವಾಗಿ ಇಷ್ಟು ದಿನ ತಿರುಗಾಡಿಕೊಂಡಿದ್ದ ಭಾವಂದಿರೆಲ್ಲ ಈಗ ಅತೀ ಎಚ್ಚರಿಕೆಯಿಂದ ತಿರುಗಲು ಶುರುಮಾಡಿದ್ದರು.

ಇದೆಲ್ಲ ಹಿನ್ನೆಲೆಯಿಂದ ಆವತ್ತು ನಡೆದ ಘಟನೆ ಬಹಳ ಅಚ್ಚರಿಯಿಂದ ಕೂಡಿತ್ತು. ದೊಣ್ಣೆಮನೆ ಮಾಚಣ್ಣ ಮತ್ತು ಅವನ ಭಾವ ಇಬ್ಬರೂ ಬೈಕಿನಲ್ಲಿ ಯೆಲ್ಲಾಪುರಕ್ಕೆ ಹೋಗುತ್ತಿದ್ದರು. ಅಷ್ಟರಲ್ಲೇ ನಮ್ಮ ಕಾರಿಗೆ ರಸ್ತೆಯಿಂದ ಬಲಕ್ಕೆ ತಿರುಗಲು ಹರೀಸ ಪಿಸ್ತೋಲು ಹಿಡಿದ ಕೈಯನ್ನು ಹೊರಹಾಕಿ ಬಲಕ್ಕೆ ದಾರಿತೋರಿದ್ದೂ, ಮಾಚಣ್ಣನ ಬೈಕು ಹಿಂದಿನಿಂದ ವೇಗವಾಗಿ ಬಂದಿದ್ದೂ ಏಕಕಾಲಕ್ಕೆ ನಡೆಯಿತು. ನಮ್ಮ ಕಾರು ಸಹಜವಾಗಿ ವೇಗ ಕಡಿಮೆಯಾಗಿ, ಮಾಚಣ್ಣನ ಬೈಕು ಮುಂದೆ ಹೋದಮೇಲೆ ಬಲಕ್ಕೆ ತಿರುಗಲು ಕಾಯುತ್ತಿತ್ತು. ಆದರೆ ವೇಗವಾಗಿ ಬರುತ್ತಿದ್ದ ಮಾಚಣ್ಣನಿಗೆ ಮುಂದೆ ನಿಂತಿರುವ ಕಾರಿನ ಕಿಟಕಿಯಿಂದ ಹೊರಗೆ ಬಂದ ಪಿಸ್ತೋಲು ಹಿಡಿದ ಕೈ ಕಂಡಿತು. ಅದನ್ನು ನೋಡಿ ಅವಾಕ್ಕಾದ ಮಾಚಣ್ಣ ಕೂಡಲೇ ಬೈಕನ್ನು ಬ್ರೇಕ್ ಹಾಕಿ ನಿಲ್ಲಿಸಿಯೇ ಬಿಟ್ಟ. ಮಾಚಣ್ಣ ಮತ್ತು ಅವನ ಭಾವ ಇಬ್ಬರೂ ಮುಂದೆ ನಿಂತಿರುವ ಕಾರಿನಲ್ಲಿ ಯಾವುದೋ ಭೂಗತ ಪಾತಕಿಗಳು ಇದ್ದಾರೆ ಎಂದು ಭಾವಿಸಿ ಕಂಗಾಲಾಗಿಹೋದರು. ಇನ್ನು ಕೆಲವೇ ಕ್ಷಣಗಳಲ್ಲಿ ಮಾಚಣ್ಣ ತನ್ನ ಬೈಕನ್ನು ಹಿಂತಿರುಗಿಸಿ ಪಾರಾಗುತ್ತಿದ್ದನೇನೋ. ಅವನೇನಾದರೂ ತಿರುಗಿ ಹೋಗಿಬಿಟ್ಟಿದ್ದರೆ, ಕೂಡಲೇ ಯೆಲ್ಲಾಪುರ ಪೋಲೀಸ್ ಠಾಣೆಗೆ ಫೋನಾಯಿಸುತ್ತಿದ್ದ.!!!

ವಿಶ್ವಣ್ಣ ಕ್ಷಣಮಾತ್ರದಲ್ಲಿ ಆಗಬಹುದಾಗಿದ್ದ ಗಂಡಾಂತರವನ್ನು ಗ್ರಹಿಸಿ ಕೂಡಲೇ ಕಾರಿನಿಂದ ಇಳಿದು, "ಏ ಮಾಚಣ್ಣ, ಏ ಮಾಚಣ್ಣ, ಯಂಗವೇಯೋ...." ಎಂದು ದೊಡ್ಡದಾಗಿ ಕರೆದ. ಆದರೂ ಮಾಚಣ್ಣನಿಗೆ ಆದ ಆಘಾತ ಮತ್ತು ಹೆದರಿಕೆಯಿಂದ ಹೊರಬಂದು ವಿಶ್ವಣ್ಣನನ್ನು ಗುರುತು ಹಿಡಿಯಲು ಸುಮಾರು ಸಮಯವೇ ಬೇಕಾಯಿತು. ಕೊನೆಗೆ ಅಂತೂ, "ಏ ಯಾರೋ ಖರೇ ಪಿಸ್ತೋಲ್ ಹಿಡ್ಕಂಡ ರೌಡಿಗ ಬೈಂದ ಅಂದ್ಕಂಡ್ನಲ್ರೋ...ಥೋ..ಥೋ...ಮಾರಾಯಾ.." ಎಂದು ನಗುತ್ತಾ, ಕಾರಿನ ಹತ್ತಿರ ಬಂದ. ಪಿಸ್ತೋಲು ಧಾರಿಯಾದ ಹರೀಸನ ಮುಖವನ್ನು ನೋಡಿ, ಅಷ್ಟು ಚಿಕ್ಕ ಹುಡುಗನಿಂದ ತಾನು ಭಯಬಿದ್ದುದನ್ನು ನೆನೆಸಿಕೊಂಡು ನಗತೊಡಗಿದ.

ಹರೀಸನಿಗೆ ತನ್ನ ಪಿಸ್ತೋಲಿನಿಂದ ಯಾರಾದರೂ ನಿಜವಾಗಲೂ ಭಯಭೀತರಾದರಲ್ಲಾ, ಎಂದು ಬಹಳ ಸಂತಸದಿಂದ ಬೀಗತೊಡಗಿದ. ಹುತ್ಖಂಡದಿಂದ ತಿರುಗಿ ಬರುವಾಗ, ವಿಶ್ವಣ್ಣ ಹರೀಸನಿಗೆ ಕೇಳಿದ, "ಹರೀಸಾ ದೊಡ್ಡ ಆದ್ಮೇಲೆ ಎಂತಾ ಅಪ್ಪವ್ನೋ..." ಅಂತ. ಹರೀಸ ಗಂಭೀರವಾಗಿ, ಪಿಸ್ತೋಲನ್ನು ಕೈಯಲ್ಲಿ ಹಿಡಿದು ಆಕಾಶದತ್ತ ಗುರಿತೋರುತ್ತಾ, "ನಾ ಪೋಲೀಸ್ ಆಗವಾ, ಕಳ್ಳಂಗೋಕೆ ಗುಂಡು ಹೊಡ್ಯವಾ... " ಅಂದ....


Thursday, January 3, 2013

ಕಿಶೋರ್ ಮಾಸ್ತರ್ರು ಹಾಗೂ ಭತ್ತದ ಕಾಳು



ನನ್ನ ಅತಿ ಪ್ರೀತಿಯ ಸರ್ ಅವರು. ನನಗೆ 1,2,3 ನೇ ಇಯತ್ತೆ ಕಲಿಸಿದವರು. ಏನೂ ಕಲಿಸದೇ ಬಹುಪ್ರೀತಿಯಿಂದ ಪರೀಕ್ಷೆಯಲ್ಲಿ ಪಾಸು ಮಾಡಿದವರು :) ಅವರಂಥಹಾ ಶಿಕ್ಷಕರು ಇನ್ನು ಸಿಗುವದು ಕಷ್ಟ ಬಿಡಿ.

ಮೊಳಗೊಮ್ಮೆ ಶಾಲೆ. ನಮ್ಮೂರಿನ ಸುತ್ತಮುತ್ತಲ 10km ಕಾಡಿಗೆ ಅದೊಂದೇ ಶಾಲೆ. ಊರ ಹೆಸರು ಮಳಲಗಾಂವ್ ಅಂತಾದರೂ ಎಲ್ಲರ ಬಾಯಲ್ಲಿ ಅದಕ್ಕೆ ಮೊಳಗೊಮ್ಮೆ ಶಾಲೆ ಎಂದೇ ಹೆಸರು. ನಮ್ಮ ಅಜ್ಜ ಶುರುಮಾಡಿದ ಶಾಲೆ. ಅಲ್ಲಿ ಕಲಿಸುತ್ತಾ ಇದ್ದಿದ್ದು ಕೇವಲ 5ನೇ ಇಯತ್ತೆವರೆಗೆ ಮಾತ್ರ. ಶಾಲೆಯಲ್ಲಿ ಇದ್ದವರೇ 15-20 ಮಂದಿ ಮಕ್ಕಳು. ಅದಕ್ಕೆ ಕಿಶೋರ್ ಸರ್ ಹಾಗೂ ಭಯಾನಕ ಸಿಟ್ಟಿನ ಜ್ನಾನದೇವ್ ಸರ್ ಎಂಬಂಥಾ ಎರಡು ಜನ ಶಿಕ್ಷಕರು.

ಕಿಶೋರ್ ಮಾಸ್ತರರು ಆಗ ಶಾಲೆಗೆ ಹಿರಿಯ ಶಿಕ್ಷಕರು. ಗುರುಗಳ ಬಗ್ಗೆ ಈ ರೀತಿ ಹೇಳಬಾರದು. ಆದರೂ ಎಲ್ಲರಿಗೂ ಗೊತ್ತಿರುಂತೆ ಅವರು ಮಹಾನ್ ಕುಡುಕರು :) ಅವರ ಹೆಂಡತಿ ಅವರನ್ನು ಬಿಟ್ಟು ಯಾರದೋ ಜೊತೆ ಓಡಿ ಹೋಗಿದ್ದಳಂತೆ. ಅದಾದ ಮೇಲೆ ಮಾನಿನಿಯ ಸಹವಾಸಕ್ಕೆ ಹೋಗದೇ ಮದ್ಯಪಾನದಲ್ಲಿ ಅನುರಕ್ತರಾದವರು ಇನ್ನೂ ಹಾಗೆಯೇ ಇದ್ದಾರೆ :)

ಆಗ ನಾನು ಒಂದನೇ ಇಯತ್ತೆಯಲ್ಲಿ ಇದ್ದೆ. ಕಿಶೋರ್ ಸರ್ ಪ್ರತಿದಿನ ಬೆಳಿಗ್ಗೆ ಶಾಲೆಗೆ ಅಪ್ಪಟ ಇಸ್ತ್ರಿ ಮಾಡಿದ ಬಿಳೀ ಅಂಗಿ & ಕರೀ ಪ್ಯಾಂಟು ಧರಿಸಿ ಸರಿಯಾದ ಸಮಯಕ್ಕೆ ಹಾಜರಾಗಿರುತ್ತಿದ್ದರು. ಅವರೆಂದರೆ ಮಕ್ಕಳಿಗೆಲ್ಲಾ ಪ್ರಾಣ. ಯಾಕೆಂದರೆ ಅವರು ಏನನ್ನೂ ಕಲಿಸುತ್ತಿರಲಿಲ್ಲ. ಯಾರಿಗೂ ಹೊಡೆದು ಬಯ್ದು ಮಾಡಿ ಗೊತ್ತಿದ್ದವರಲ್ಲ. ಬೆಳಿಗ್ಗೆಯಿಂದಲೇ ಪಾನಸೇವನೆ ಮಾಡಿ, ಎಲ್ಲೋ ನೋಡುತ್ತಾ, ಯಾವುದೋ ವಿಚಿತ್ರವಾದ ಮಂದಹಾಸವನ್ನು ಮುಖದ ಮೇಲೆ ಧರಿಸಿ ಮರದ ಖುರ್ಚಿಯ ಮೇಲೆ ಸದಾ ಸುಖಾಸೀನರಾಗಿರುತ್ತಿದ್ದರು. ಕ್ಲಾಸಿನಲ್ಲಿ ನಾವೆಲ್ಲ ಮಕ್ಕಳು ನಮಗೆ ಬೇಕಾದ ಆಟವಾಡಿಕೊಂಡು ಇರುತ್ತಿದ್ದೆವು.

ಶಾಲೆಗೆ ಹೋದ ಕೂಡಲೇ, ಚಿಕ್ಕವನಾಗಿದ್ದ ನನ್ನನ್ನು ಕರೆದು, "ಬಾರೋ ಚಚಿ ಇಲ್ಲಿ" ಎಂದು ಪ್ರೀತಿಯಿಂದ ಅವರ ಹೆಗಲ ಮೇಲೆ ಕೂರಿಸಿಕೊಳ್ಳುತ್ತಿದ್ದರು. ಬಹಳ ಸೌಂದರ್ಯಪ್ರಜ್ನೆಯವರಾಗಿದ್ದರಿಂದ ಅವರಿಗೆ ತಲೆಯಲ್ಲಿ ಬಿಳಿಯ ಕೂದಲು ಹುಟ್ಟಿದರೆ ಸುತಾರಾಂ ಆಗುತ್ತಿರಲಿಲ್ಲ. ಅದಕ್ಕೇ ಅವರ ಹೆಗಲ ಮೇಲೆ ನನ್ನ ಕೂರಿಸಿಕೊಂಡು, ಒಂದು ಭತ್ತದ ಕಾಳನ್ನು ಕೊಟ್ಟು, ಅವರ ಕೇಶರಾಶಿಯಲ್ಲಿ ಅಲ್ಲಲ್ಲಿ ಇರುತ್ತಿದ್ದ ಬಿಳಿಯ ಕೂದಲನ್ನು ಹೆಕ್ಕಿ ಕಿತ್ತು ತೆಗೆಯಲು ಹೇಳುತ್ತಿದ್ದರು. ನಾನಂತೂ ಬಹು ಆನಂದದಿಂದ ಆ ಕೆಲಸವನ್ನು ಗಮನಕೊಟ್ಟು ಬಹು ಮುತುವರ್ಜಿಯಿಂದ ಮಾಡುತ್ತಿದ್ದೆ. ಎಲ್ಲ ಮಲೆನಾಡಿನ ಮನೆಗಳಂತೆಯೇ ನಮ್ಮ ಮನೆಯಲ್ಲಿ ಸಹಾ ಯಾರೂ ಶಾಲೆಯಲ್ಲಿ ನಮ್ಮ ಮಕ್ಕಳು ಏನು ಕಲಿಯುತ್ತಿದ್ದಾರೆ ಎಂದು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಶಾಲೆಯಲ್ಲಿ ಕಿಶೋರ್ ಸರ್ ಅವರ ಬಿಳಿ ಕೂದಲು ಕೀಳುವದು, ಮನೆಯಲ್ಲಿ ಸುಬ್ಬಣ್ಣನ ಜೊತೆ ಗಿಲ್ಲಿ-ದಾಂಡು ಆಡುವದು. ಆಹಾ ಎಂಥ ಸುಂದರ ಜೀವನ :) ನಾನಂತೂ 3ನೇ ಇಯತ್ತೆಯವರೆಗೆ ಅ,ಆ ವನ್ನೂ ಕಲಿತಿರಲಿಲ್ಲ !!!

ನಾನು 3ನೇ ಇಯತ್ತೆವರೆಗೂ, "ಇದನ್ನೇ" ಕಲಿಯಲು ಎಲ್ಲರೂ ಶಾಲೆಗೆ ಹೋಗುತ್ತಾರೆ ಅಂದುಕೊಂಡಿದ್ದೆ !!!

ಕಿಶೋರ್ ಸರ್ ನಮ್ಮ ಮನೆಯ ಕೆರೆಯಲ್ಲಿ ಪಾನಮತ್ತರಾಗಿ ಈಜುತ್ತಾರೆ, ಎಲ್ಲಾದರೂ ಅವಘಡವಾದೀತು ಎಂದು ಎಲ್ಲ ಸೇರಿ ಅವರನ್ನು ಟ್ರಾನ್ಸ್-ಫರ್ ಮಾಡಿಸಿಬಿಟ್ಟರು. ಆ ದಿನ ನಮ್ಮೂರಿನ ಎಲ್ಲಾ ಮಕ್ಕಳ ಪಾಲಿಗೆ ಕರಾಳ ದಿನ.
ನಾನಂತೂ "ಮಾಸ್ತರ್ರು ಬೇರೆ ಆಯ್ದ್ರು, ಮಗ್ಗಿ ಕೇಳ್ತ್ರು, ಯನ್ಗೆ ಹೊಟ್ಟೆ ನೋಯ್ತು, ಶಾಲ್ಗೆ ಹೋಗ್ತ್ನಿಲ್ಲೆ" ಎಂದು ಸುಮಾರು ದಿನಗಳವರೆಗೆ ಗೋಳೊ ಎಂದು ಅಳುತ್ತಾ ಶಾಲೆಯನ್ನು ತಪ್ಪಿಸಿದ್ದೆ.

ಈಗೆಲ್ಲಾ Lkg,Ukg, ಯಲ್ಲೇ kgಗಟ್ಟಲೇ ಪುಸ್ತಕ ಹೊತ್ತು, ಸದಾ ಶಾಲೆಯ ಟ್ಯೂಷನ್ನು, ಹೋಮ್-ವರ್ಕು ಗಳ ಬಗ್ಗೆ ಚಿಂತಿಸುವ ಮಕ್ಕಳನ್ನು ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ. ಕನ್ನಡ ಶಾಲೆಯಲ್ಲಿ ನಮ್ಮ ಅಮಾಯಕತೆಗೆ ಏನೂ ಕುಂದು ತರದೇ, ಪಾಸು ಮಾಡಿಸಿ, ಶಾಲೆ "ಕಲಿಸಿದ", ಇಂದಿಗೂ ಒಂದು ಕಾಲದ ಮೊಳಗೊಮ್ಮೆ ಶಾಲೆಯ ಮಕ್ಕಳ ನೆಚ್ಚಿನ ಕಿಶೊರ್ ಮಾಸ್ತರ್ ರಿಗೆ ಈ ಬ್ಲಾಗ್ ಪೋಸ್ಟ್ ಅರ್ಪಿಸುತ್ತಿದ್ದೇನೆ...

Tuesday, May 10, 2011

ಒಳಪ್ಯಾಡ್ಲ ಸೈಕಲ್ಲು

ಮಲೆನಾಡಿನ ಮಕ್ಕಳ ಸೈಕಲ್ ನ ಕಥೆಗಳು ಯಾವತ್ತೂ ರೋಚಕ. (ಈಗ ನೇರವಾಗಿ ಬೈಕು ಏರುತ್ತಾರೆ ಬಿಡಿ...) ಇದು ಸುಮಾರು 1990 ರ ನಂತರದ ಕಥೆ.ನಮ್ಮ ಊರುಗಳಲ್ಲಿ ಎಲ್ಲರ ಮನೆಗಳಲ್ಲೂ ಸಾಮಾನ್ಯವಾಗಿ ಇರುತ್ತಿದ್ದ 24 ಇಂಚಿನ ಹೀರೋ ಸೈಕಲ್ಲನ್ನು ಯಶಸ್ವಿಯಾಗಿ ಓಡಿಸುವದು ಮಕ್ಕಳಿಗೆಲ್ಲಾ ಒಂದು ಪ್ರತಿಷ್ಠೆಯ ಮಾತಾಗಿತ್ತು. ಸಾಮಾನ್ಯವಾಗಿ ಒಂದನೆಯ ಕ್ಲಾಸಿನ ಮಕ್ಕಳಿಂದ ಏಳನೆಯತ್ತೆವರೆಗಿನ ಮಕ್ಕಳಿಗೂ ಅಷ್ಟು ದೊಡ್ಡ ಸೈಕಲ್ಲ ಸೀಟಿನ ಮೇಲೇರಿ ಸವಾರಿ ಮಾಡುವುದು ಸಾಧ್ಯವಿರಲಿಲ್ಲ. ಹಾಗೇನಾದರೂ ಸೊಕ್ಕುಮಾಡಿ ಹತ್ತಿದರೆ ಸ್ವಲ್ಪ ದೂರ ಹೋಗುವಷ್ಟರಲ್ಲಿ ಬಿದ್ದು ನೆಲದ ಪಾಲಾಗುತ್ತಿದ್ದುದು ಹೊಸ ವಿಷಯವಾಗಿರಲಿಲ್ಲ.

ಆದ್ದರಿಂದ ಮಕ್ಕಳೆಲ್ಲ ತಮ್ಮ ಎರಡು ಪಟ್ಟು ದೊಡ್ಡದಿರುವ ಸೈಕಲ್ಲನ್ನು ಮಣಿಸಿ ಓಡಿಸಲು "ಒಳಪ್ಯಾಡ್ಲು" ಎಂಬ ನೂತನ ವಿಧಾನವನ್ನು ಬಳಸುತ್ತಾರೆ. ಬಹುಷ: ಸೈಕಲ್ಲು ಕಂಡುಹಿಡಿದವನಿಗೂ ಈ ಥರಹ ಸೈಕಲ್ಲನ್ನು ಓಡಿಸಬಹುದು ಎಂದು ಅನಿಸಿರಲಿಕ್ಕಿಲ್ಲ.!!! ಒಂದು ಕಾಲನ್ನು ಎಡಕಿನ ಪೆಡಲ್ಲಿನ ಮೇಲಿಟ್ಟು, ದಂಡಿಗೆಯ ಒಳಗಿಂದ ಕಾಲನ್ನು ಒಳತೂರಿ ಆಚೆಯ ಪ್ಯಾಡ್ಲ ಮೇಲಿಟ್ಟು ತುಳಿಯುತ್ತಾ, ಎಡಕಿನ ಕೈಯಿಂದ ಸೈಕಲ್ಲಿನ ದಿಕ್ಕನ್ನು ನಿಭಾಯಿಸುತ್ತಾ, ಬಲಕೈಯನ್ನು ಸೀಟಿನ ಮೇಲಿಟ್ಟು ಬ್ಯಾಲೆನ್ಸ್ ಮಾಡುವ ರೀತಿ ಅತ್ಯದ್ಭುತ.. ದುರದೃಷ್ಟವಶಾತ್ ನನ್ನಲ್ಲಿ ಅದರ ಫೋಟೋಗಳಿಲ್ಲ...

ಸಾಮಾನ್ಯವಾಗಿ ಮಕ್ಕಳು ಸೈಕಲ್ಲು ಕಲಿಯುತ್ತಾ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಾರೆ ಎಂದು, ನಮಗೆಲ್ಲಾ ಸೈಕಲ್ಲು ಸವಾರಿ ನಿಷಿದ್ಧವಾಗಿತ್ತು. ಆದರೂ ಮಧ್ಯಾಹ್ನ ಊಟವಾದ ನಂತರ ಮಲಗಿ ಗೊರಕೆ ಹೊಡೆಯುತ್ತಿದ್ದ ನಮ್ಮ ಹಿರಿಯರ ಕಣ್ಣು ತಪ್ಪಿಸಿ ಮೇಲಿನಮನೆ ಶ್ರೀಕಾಂತ ಹಾಗೂ ನಾನು ಕದ್ದು ಸೈಕಲ್ಲನ್ನು ಒಳಪ್ಯಾಡ್ಲಿನಲ್ಲಿ ಓಡಿಸಲು ಹರಸಾಹಸಪಡುತ್ತಿದ್ದೆವು. ಆದರೆ ಪ್ರತೀಸಲವೂ ನಾವು ನಾಕುದಾರಿ ಎಂಬ ಜಾಗದಲ್ಲಿದ್ದ ಸ್ವಲ್ಪ ದೂರದ ಮರಳಿನ ರಸ್ತೆಯನ್ನು ದಾಟಿಯೇ ಹೋಗಬೇಕಾಗಿತ್ತು. ಮರಳಿದ್ದಲ್ಲಿ ಸೈಕಲ್ಲಿನವರು ಉದುರಿ ಬೀಳುವದು ಸಾಮಾನ್ಯ :) ನಾವಂತೂ ಎಷ್ಟು ಸಲ ಬಿದ್ದೆವೋ ಗೊತ್ತಿಲ್ಲ. ಆದರೆ ಸೈಕಲ್ಲಿನ ಮೇಲಿಂದ ಬಿದ್ದೆವೆಂದು ಹೇಳಿದರೆ ಬೈಗುಳ ಗ್ಯಾರಂಟಿ. ಅದಕ್ಕೇ ಯಾರಲ್ಲೂ ಈ ಮಾತನ್ನು ಹೇಳುವಂತಿರಲಿಲ್ಲ.

ಆ ಮರಳಿನ ದಾರಿಯಲ್ಲಿ ಹಲವಾರು ಸಲ ಒಳಪ್ಯಾಡ್ಲ್ ಸೈಕಲ್ಲ ಮೇಲಿಂದ ಬಿದ್ದ ಮೇಲೆ, ನಾನು ಶ್ರೀಕಾಂತ ಇಬ್ಬರೂ ಒಂದು ಅಭಿಪ್ರಾಯಕ್ಕೆ ಬಂದೆವು. "ನಮ್ಮೂರಿನ ಪ್ರತಿಯೊಬ್ಬ ಸೈಕಲ್ಲ್ ಹೊಡಿಯುವವನೂ ನಾಕು ದಾರಿಯ ಮರಳಿನ ಜಾಗದಲ್ಲಿ ಒಂದು ಸಲವಾದರೂ ಬಿದ್ದೇ ನಂತರ ಎದ್ದು ಮುಂದೆ ಹೋಗುತ್ತಾನೆ" ಎಂದು !!! ಆದ್ದರಿಂದ ನಾವು ಸೈಕಲ್ಲು ಹೊಡಿಯುವಾಗ ನಾಕುದಾರಿ ಬಂದೊಡನೆ ತನ್ನಿಂತಾನೇ ಸೈಕಲ್ಲಿನ ಕೂಡೆ ಬಿದ್ದುಬಿಡುವ ಆಚರಣೆಯನ್ನು ಮಾಡಿಕೊಂಡೆವು ...ಒಂದು ದಿನ ನನ್ನ ಅಣ್ಣ ನನ್ನನ್ನು ಆತನ ಸೈಕಲ್ಲ ಮೇಲೆ ಕೂಡ್ರಿಸಿಕೊಂಡು ನಾಕುದಾರಿಯಲ್ಲಿ ಹೋದ. ನಾನು ನಿರೀಕ್ಷಿಸಿದಂತೆ ಅವನು ಬೀಳಲೇ ಇಲ್ಲ..ನಾನು ಆಶ್ಚರ್ಯಚಕಿತನಾಗಿ ಕೇಳಿದೆ, "ಏನಣ್ಣಾ ನೀನು ಜೋರಿದ್ದೆ, ನಾಕುದಾರಿಯಲ್ಲಿ ಬೀಳಲೇ ಇಲ್ಲ....?" ...!!!

ಒಳಪ್ಯಾಡ್ಲಿನ ಸೈಕಲ್ಲ ಮೇಲೆ ರೇಸು ಮಾಡಿ ಬಿದ್ದು ಮನೆಗೆ ಬಂದಿದ್ದು ನೆನಪಿಗೆ ಬಂತು..ಹಾಗೇ ಈ ಬರಹ...

Thursday, May 5, 2011

ಅಜ್ಜನ ನೆನಪಿನಲ್ಲಿ - ಕೊಳಲು ನಾದದ ಒಂದು ಸಂಜೆ.

೨೦೧೧ ಮೇ 7 ಕ್ಕೆ ನನ್ನ ಅಜ್ಜ ’ಸುಬ್ರಾಯ ಗಣಪಯ್ಯ ಮಳಲಗಾಂವ’ ಇವರ ಸ್ಮರಣಾರ್ಥ ಒಂದು ಬಾನ್ಸುರಿ ಜುಗಲ್ಬಂದಿ ಕಾರ್ಯಕ್ರಮವನ್ನು, ಕವಡೀಕೆರೆ ದೇವಸ್ಥಾನದ ಆವರದಲ್ಲಿ ಆಯೋಜಿಸಿದ್ದೆವು.

ಕವಡೀಕೆರೆ ಒಂದು ಅದ್ಭುತವಾದ ಪಾರಿಸರಿಕ ಸೌಂದರ್ಯದ ಸ್ಥಳ. ಪಕ್ಕದಲ್ಲಿ ವಿಶಾಲವಾದ ಕೆರೆ, ಇನ್ನೊಂದೆಡೆ ಅಡಿಕೆಯ ತೋಟ, ಇತ್ಯಾದಿ. ಅದಕ್ಕೆ ಎಲ್ಲರಿಗೂ ಸುಂದರ ಪರಿಸರದ ಮಡಿಲಲ್ಲಿ ಸಕ್ಕರೆಯ ಪಾನಕದಂಥಾ ಕೊಳಲಿನ ನಾದದ ಜುಗಲ್ಬಂದಿಯನ್ನು ಕೇಳುವ ಸದವಕಾಶ ಸೃಷ್ಟಿಯಾಗಿತ್ತು.

ಸಮೀರ್ ರಾವ್ - ಭುವನೇಶ್ವರ ಹಾಗೂ ಕಿರಣ ಹೆಗಡೆ ಮುಂಬೈ ಇವರೀರ್ವರ ಬಾನ್ಸುರಿಯ ನಾದಕ್ಕೆ ಗುರುಮೂರ್ತಿ ವೈದ್ಯ ಅವರ ತಬಲಾ ಸಾಥ್ ನೀಡಿದರು. ಸುಮಾ ತಂಬೂರಿ ಸಹಕಾರ ನೀಡಿದರು. ಭೂಪಾಲಿಯೊಂದಿಗೆ ಶುರುವಾದ ಕೊಳಲಿನ ದನಿ, ಜೋಗ್ ರಾಗ, ಪಿಲೂ, ಹಾಗೂ ರಾಮಭಜನೆ, ಆರತಿ ಭಜನೆಗಳೊಂದಿಗೆ ಮುಕ್ತಾಯವಾಯಿತು. 500ಕ್ಕೂ ಮಿಗಿಲಾಗಿ ಸೇರಿದ್ದ ಜನರು ಕಾರ್ಯಕ್ರಮದ ಕೊನೆಯವರೆಗೂ ಆಲಿಸಿದರು. ಕರ್ಣಾನಂದಕರವಾಗಿದ್ದ ಸಂಗೀತ ಜನರನ್ನು ಮಂತ್ರಮುಗ್ಧರನ್ನಾಗಿಸಿತ್ತು.

ಕಾರ್ಯಕ್ರಮವನ್ನು ಇಷ್ಟು ದೂರದ ಊರಿನಲ್ಲಿ ಕುಳಿತು ಆಯೋಜಿಸುವದು ಸುಲಭವಲ್ಲ. ಇದಕ್ಕೆಲ್ಲಾ ನನ್ನ ಮಿತ್ರವ್ರುಂದದ ಅಪಾರ ಸ್ನೇಹ, ನಂಬಿಕೆ, ಪ್ರೋತ್ಸಾಹ ಇತ್ಯಾದಿಗಳೇ ಕಾರಣ ಎನ್ನಬಹುದು. ಕಲಾವಿದರುಗಳಾದ ಸಮೀರ ರಾವ್,ಕಿರಣ ಹೆಗ್ಡೆ, ಗುರುಮೂರ್ತಿ ವೈದ್ಯ, ಮುಂಡಗೋಡಿಮನೆ ಶ್ರೀಪತಿ ಭಟ್, ಈಶ್ವರ್ ಭಟ್, ಗುರ್ತೆಗದ್ದೆ ಸುಬ್ರಹ್ಮಣ್ಯ ಭಟ್, ಲಕ್ಷ್ಮೀನಾರಾಯಣ ಭಟ್ ಇವರೆಲ್ಲರುಗಳ ಪ್ರೀತಿಯನ್ನು ಹಾಗೂ ಪ್ರೋತ್ಸಾಹಗಳನ್ನು ನಾನೆಂದೂ ಮರೆಯಲಾರೆ.

Audio Recording of this concert is here http://www.esnips.com/web/Sameer-Kiran-jugalbandi

Friday, August 20, 2010

ಗೋಳಿಯ ಕಾಡೆಮ್ಮೆ ಹಾಗೂ ದತ್ತಾತ್ರಿಯ ಶ್ಲೋಕ.

ಬೇಡ್ತಿ ನದಿ ನಮ್ಮೂರಿಗೆ 3 ಕಿಮಿ ದೂರದಲ್ಲಿ ಹರಿದುಸಾಗಿ ಮಾಗೋಡು ಜಲಧಾರೆಯಾಗಿ ಧುಮುಕಿ ಮುಂದೆ ಸಾಗುತ್ತದೆ. ಬೇಡ್ತಿ ನದಿಯಿಂದ ದಾಂಡೇಲಿಯವರೆಗೂ ಆವರಿಸಿರುವ ನಿತ್ಯಹರಿದ್ವರ್ಣ ದಟ್ಟ ಕಾಡು ಅನೇಕ ಪ್ರಾಣಿಪಕ್ಷಿಗಳ ಜೀವಧಾಮವಾಗಿದೆ.
ಹುಲಿ, ಕಾಡೆಮ್ಮೆ, ಕರಡಿ, ಆನೆ, ಜಿಂಕೆ ಇತ್ಯಾದಿ ಇತ್ಯಾದಿ ಪ್ರಾಣಿಗಳನ್ನು ನೀವಲ್ಲಿ ಕಾಣಬಹುದು...

ಅಂದು ನಾನು ಸುಮಾರು 2ನೇ ಇಯತ್ತೆ ಇರಬಹುದು. ೫ನೇ ಇಯತ್ತೆಯ ದತ್ತಾತ್ರಯ (ದತ್ತಾತ್ರಿ) ನಮ್ಮ ಶಾಲೆಯ ಮಕ್ಕಳ ಗುಂಪಿನ ಧುರೀಣ. ಸುಮಾರು ಹತ್ತು ಮಕ್ಕಳಿದ್ದ ಗುಂಪು ಪ್ರತೀ ದಿನವೂ 1.5 km ದೂರ ಮನೆಯಿಂದ ದಟ್ಟ ಕಾಡಿನ ಮಧ್ಯ ನಡೆದು ಚಲಿಸಿ ಶಾಲೆಗೆ ಸೇರಬೇಕಿತ್ತು. ಹಳ್ಳಿಯ ಮಕ್ಕಳಿಗೆ ಕಾಡು ಪ್ರಾಣಿಗಳ ಭಯ ಅಷ್ಟಾಗಿ ಇರುವದಿಲ್ಲ. ಆದರೂ ಎಲ್ಲರೂ ಕೂಡಿಯೇ ಶಾಲೆಗೆ ಹೋಗುವದು ವಾಡಿಕೆ. ಎಲ್ಲ ಮಕ್ಕಳನ್ನೂ ಮನೆಯಿಂದ ಶಾಲೆಗೆ - ಶಾಲೆಯಿಂದ ಮನೆಗೆ ತಲುಪಿಸುವ ಜವಾಬ್ದಾರಿ ಮಕ್ಕಳಲ್ಲಿ ಹಿರಿಯನಾದ ದತ್ತಾತ್ರಿಯದೇ ಸಹಜವಾಗಿ ಆಗಿತ್ತು. ದಾರಿಯಿಂದ ಬರುತ್ತಾ ಹುಲ್ಲು ಮೇಯಲು ಬಿಟ್ಟಿದ್ದ ಯಾರದ್ದಾದರೂ ಮನೆಯ ಆಕಳೋ ಎಮ್ಮೆಯೋ ಸಿಕ್ಕರೆ ಅದನ್ನು ಮನೆಗೆ ಹೊಡೆದು ತರುವದು ನಮ್ಮ ಹಳ್ಳಿ ಶಾಲೆಯ ಮಕ್ಕಳಿಗೆ ಸಾಮಾನ್ಯವಾದ ಜವಾಬ್ದಾರಿ.

ಅಂದು ಸಂಜೆ ಎಲ್ಲ ಮಕ್ಕಳೂ ಶಾಲೆ ಬಿಟ್ಟೊಡೊನೆ ಒಟ್ಟಿಗೇ ಹೊರಟು ನಡೆದು ಬರುತ್ತಿದ್ದೆವು. ಮಣ್ಣುರಸ್ತೆಯ ಎರಡೂ ಕಡೆ ದಟ್ಟವಾದ ಅಡವಿ. ಸ್ವಲ್ಪ ದೂರದಲ್ಲಿ ಒಂದು ಬೃಹದಾಕಾರದ ಎಮ್ಮೆ ಕಾಡಿನಿಂದ ರಸ್ತೆಗೆ ಇಳಿದು ಇನ್ನೊಂದು ಕಡೆಯತ್ತ ತೆರಳಿತ್ತು. ಅದರ ನಾಲಕ್ಕೂ ಕಾಲಿನ ಬಿಳಿಯ ಪಟ್ಟಿ ನನಗೆ ನಮ್ಮ ಮನೆಯ ಬಿಳಿ ಎಮ್ಮೆಯ ನೆನಪು ತರಿಸಿತು.

ಕೂಡಲೇ ನಾನು, "ಏ ನಮ್ಮನೆ ಬಿಳಿ ಎಮ್ಮೆ ಅಡವಿಗೆ ಎಂತಕ್ಕೆ ಹೋಗ್ತಾ ಇದ್ದು..? ಮನೆ ಬದಿಗೆ ಹೊಡ್ಯೋ ಅದ್ರಾ..." ಎನ್ನುತ್ತಾ ಅದರೆಡೆಗೆ ಓಡಿದೆ. ನನ್ನ ಜೊತೆ ಇನ್ನೂ ಎರಡು ಜನ ಓಡಿ ಬಂದರು. ಆದರೆ ಹತ್ತಿರ ಸಮೀಪಿಸಿದಂತೆ ನಮಗೆ ಧಸಕ್ಕೆಂದು ಭಾಸವಾದದ್ದು, ಅದು ಕಾಡೆಮ್ಮೆ ಎಂದು!!!!. ನೋಡಲು ನಮ್ಮ ಮನೆಯ ಎಮ್ಮೆಯ ಥರವೇ ಇದ್ದರೂ ಹತ್ತಿರದಿಂದ ಕಂಡ ಅದರ ದೈತ್ಯ ಸ್ವರೂಪ ನಮ್ಮನ್ನು ಬೆಚ್ಚಿಬೀಳಿಸಿತು. "ಹೇ...ಅದು ಕಾಡೆಮ್ಮೆ ಮಾರಾಯಾ...ಬಿಳಿ ಎಮ್ಮೆ ಅಲ್ದೋ.." ಎಂದು ಕೂಗುತ್ತಾ ನಾವು ತಿರುಗಿ ಓಡಿಬರುತ್ತಿರುವದನ್ನು ಕಂಡ ನಮ್ಮ ನಾಯಕ ದತ್ತಾತ್ರಿ ದಂಗಾದ.

ಎಲ್ಲರೂ ಓಡದೇ ಬೇರೆ ದಾರಿಯೇ ಇರಲಿಲ್ಲ. ದತ್ತಾತ್ರಿ ನಮಗೆಲ್ಲ ಕೂಡಲೇ ಒಂದು ಶ್ಲೋಕ(ಮಂತ್ರ)ವನ್ನು ಹೇಳಿಕೊಟ್ಟ. " ಈ ಮಂತ್ರವನ್ನು ಹೇಳುತ್ತಾ ಓಡಿ, ಹಾಗಾದರೆ ಕಾಡೆಮ್ಮೆ ಹತ್ತಿರ ಬತ್ತಿಲ್ಲೆ..ಇಲ್ಲಾ ಅಂದ್ರೆ ನಾವು ಎಷ್ಟೇ ದೂರ ಇದ್ರೂ ಎಮ್ಮೆ ತನ್ನ ಸಿಂಬಳವನ್ನು ಬಂದೂಕಿನ ಗುಂಡಿನ ಥರಹ ಬಿಟ್ಟು ನಮ್ಮ ಮೈಗೆ ಹಾಕ್ತು. ಅಕಾಸ್ಮಾತ್ರ್ ಕಾಡೆಮ್ಮೆ ಸಿಂಬಳ ತಾಗಿದ್ರೆ ಯಾರಿಗೂ ಓಡಲಾಗ್ತಿಲ್ಲೆ..ಲಗು ಓಡ್ರೋ" ಎಂದು ಎಲ್ಲರಿಗೂ ಧೈರ್ಯ ತುಂಬಿದ!!!. ಅಂದು ಒಂದನೇ ಕ್ಲಾಸಿನಿಂದ ಐದನೇ ಕ್ಲಾಸಿನ ಎಲ್ಲಾ ಮಕ್ಕಳೂ ಕಿತ್ತಾಬಿದ್ದು ಮನೆಯ ಕಡೆಗೆ ಓಡಿದವು....!!!!

ಅಂದು ನಾವು ಓಟಕಿತ್ತ ಜಾಗದ ಹೆಸರು ಗೋಳಿ ಕತ್ರಿ ಎಂದು. ಮನೆಗೆ ಹೋಗುವಾಗೆಲ್ಲ ಗೋಳಿ ಕತ್ರಿ ಸಿಗುತ್ತದೆ. ಇಂದು ಆವಾಗಿನಷ್ಟು ಕಾಡೆಮ್ಮೆಗಳು ರಸ್ತೆಯಲ್ಲಿ ಸಿಗುವದಿಲ್ಲ. ಆದರೆ ಆ ದಿನದ ನಮ್ಮ ಓಟ ಮಾತ್ರ ನೆನಪಾಗಿ ನಗು ಗೊಳ್ಳೆಂದು ಹೊರಬರುತ್ತದೆ. :-)

Monday, November 24, 2008

ಹುಲಿಯ ಸಾನ್ನಿಧ್ಯ :: ಭಯದ ಓಟ !!!

ಸುಮಾರು ಹತ್ತು ವರುಷಗಳ ಹಿಂದಿನ ವೃತ್ತಾಂತ. ಅಂದು ಮುಗೀಬಾಯಿಯ ಯಂಕಣ್ಣ ಮತ್ತು ನಾನು ಇಬ್ಬರೇ ನಮ್ಮೂರಿನ ದೇವಸ್ಥಾನವಾದ ಚಂದಗುಳಿಯಿಂದ ನಮ್ಮ ಮನೆಗೆ ಹೊರಟಿದ್ದೆವು. ದೇವಸ್ಥಾನದಲ್ಲಿ ಮಧ್ಯಾಹ್ನದ ಪೂಜೆ ಮುಗಿಸಿ ಒಂದು ಕವಳ ಮೆದ್ದು, ಹಾಗೆಯೇ ಒಂದು ಸಣ್ಣ ನಿದ್ರೆ ತೆಗೆಯುವದರಲ್ಲಿ ಸಂಜೆ ಐದು ಆಗಿಹೋಗಿದ್ದು ನಮ್ಮ ಗಮನಕ್ಕೆ ಬಂದಿರಲಿಲ್ಲ.

ಅಲ್ಲಿಂದ ನಮ್ಮ ಮನೆ ಸುಮಾರು ನಾಲಕ್ಕು ಕಿಮಿ ಆಗಬಹುದು. ದಟ್ಟ ಕಾಡಿನ ಕಾಲುಹಾದಿ. ಕಾಲುಹಾದಿ ಅಂದರೆ ದಾರಿಯ ಎರಡೂ ಕಡೆ ಮುತ್ತಿಕೊಂಡಿದ್ದ ಅಡವಿ. ಸುಮಾರು ಒಂದು ಹತ್ತು ಹೆಜ್ಜೆ ಮುಂದೆ ಹಾಗೂ ಹಿಂದೆ ಮಾತ್ರ ದಾರಿ ಗೋಚರಿಸುತ್ತಿತ್ತು.
ನಮ್ಮ ಯಾವಾಗಿನ ರೂಢಿಯಂತೆ ಏನೇನೋ ಸುದ್ದಿಗಳನ್ನು ಹರಟುತ್ತಾ ನಡೆದಿದ್ದೆವು.

ಛಳಿಗಾಲವಾಗಿದ್ದರಿಂದ ಬೇಗನೇ ಕತ್ತಲು ಆವರಿಸತೊಡಗಿತ್ತು. ಸುಮಾರು ಒಂದು ಕಿಮಿ ನಡೆದಿರಬಹುದು, ಚಂದಗುಳಿ ಹಳ್ಳವನ್ನೂ ದಾಟಿಯಾಗಿತ್ತು. ಒಮ್ಮೇಲೇ ಮಂಗಗಳು ಕಿರುಚಾಡತೊಡಗಿದವು. ಅವುಗಳ ವಿಚಿತ್ರವಾದ ಕಿರುಚಾಟ, ಮರದಿಂದ ಮರಕ್ಕೆ ಭಯದಿಂದ ಹಾರುವ ರೀತಿ... ಇವುಗಳು ಸಾಮಾನ್ಯವಾಗಿ ದಟ್ಟಡವಿಗಳಲ್ಲಿ ತಿರುಗಾಡುವವರಿಗೆ ಭಾರೀ ಅಪಾಯದ ಮುನ್ಸೂಚನೆಯೇ ಸರಿ.

ಯಂಕಣ್ಣ ಕೂಡಲೇ ಹೇಳಿದ, "ಅಲ್ಲಿ ನೋಡು ಹುಲಿ ಹೆಜ್ಜೆ ಕಾಣ್ತಾ ಇದ್ದು"!!! ಆತ ಅಷ್ಟು ಹೆದರಿದ್ದನ್ನು ನಾನೆಂದೂ ನೋಡಿರಲಿಲ್ಲ.
ನಾವಿಬ್ಬರೂ ಭಯದಿಂದ ತತ್ತರಿಸಿಹೋಗಿದ್ದೆವು. ಹತ್ತಿರದಲ್ಲಿ ಜಗ್ಗೆಯ ಒಳಗೆ ಆಗುತ್ತಿರುವ ’ಚರಪರ’ ಸದ್ದು ಹುಲಿಯ ಇರುವಿಕೆಯನ್ನು ಖಚಿತಗೊಳಿಸಿತು. ಸುತ್ತಲೂ ಏನು ನಡೆಯುತ್ತಾ ಇದೆ ಎಂಬುದು ಒಮ್ಮೇಲೇ ಅರಿವಿಗೆ ಬಂದು ಜೀವ ಭಯ ಆವರಿಸಿಕೊಂಡಿತು.

"ಏ ಓಡೋ......." ....ಇಂದಿನವರೆಗೂ ಯಂಕಣ್ಣ ಕಿರುಚಿದ್ದು ಕಿವಿಯಲ್ಲಿ ರಣರಣಿಸುತ್ತಿದೆ.!!! ಅಂದು ಹೇಗೆ ಓಡಿದೆವೆಂದು ಗೊತ್ತಿಲ್ಲ. ಕೊರಕಲು ದಾರಿ, ಮಣ್ಕುಳಿಯ ಘಟ್ಟದ ಇಳಿಜಾರು, ಏನನ್ನೂ ಲೆಕ್ಕಿಸದೆ ಓಡಿದೆವು.

ಅಂದು ಹುಲಿ ನಮ್ಮ ಮೇಲೆ ಧಾಳಿ ಮಾಡುವ ಮನಸ್ಸುಮಾಡಿದ್ದರೆ ನಮ್ಮಿಬರ ಗತಿ ಏನಾಗುತ್ತಿತ್ತೋ....

ನೆನೆಸಿಕೊಂಡರೆ ಇಂದಿಗೂ ಮೈ ಒಮ್ಮೆ ಗಡಗಡ ನಡುಗುತ್ತದೆ.

Thursday, September 18, 2008

ಮಣ್ಕುಳಿ


ಮಣ್ಕುಳಿ. ಅಂದರೆ ಮಣ್ಣಿನ ಕುಳಿ ಅಥವಾ ಮಣ್ಣಿನ ಹೊಂಡ.
ನಮ್ಮೂರಾದ ಮಾಳಲಗಾಂವಿನ ಮೂಲೆಯಲ್ಲಿರುವ ಜಾಗ. ಇಲ್ಲಿರುವದು ಕೇವಲ ಮೂರು ಮನೆಗಳು ಮಾತ್ರ. ಎಲ್ಲಿ ನೋಡಿದರೂ ಮುಗಿಲೆತ್ತರದ ಮರಗಳು ತುಂಬಿರುವ ನಮ್ಮೂರಲ್ಲಿ, ಮಣ್ಕುಳಿಯ ಬೆಟ್ಟ ಅಂದರೆ ಚಾಮುಂಡಿ ಬೆಟ್ಟದಿಂದ ಮೈಸೂರನ್ನು ನೋಡುವ ವೀವ್ ಪಾಯಿಂಟ್ ಇದ್ದಂತೆ...:-) ಮಧ್ಯದಲ್ಲಿ ಹಚ್ಚಹಸಿರಿನ ಭತ್ತದ ಗದ್ದೆಗಳು ತುಂಬಿರುವ ಉದ್ದನೆಯ ಕಣಿವೆ, ಆಚೀಚೆ ಹಸಿರನೆಯ ಬೆಟ್ಟ. ದೂರದಲ್ಲಿ ಕಾಣುವ ಪರಮಣ್ಣನ ಹಾಗೂ ಕ್ರಷ್ಣಪ್ಪನ ಮನೆಯ ಹಂಚುಗಳು. ನಮ್ಮಜ್ಜ ಹೇಳುವ ಹಾಗೆ ಒಂದು ಕಾಲದಲ್ಲಿ ಈ ಮಣ್ಕುಳಿ ಸಂಪೂರ್ಣವಾಗಿ ಅಡವಿಯಿಂದ ತುಂಬಿತ್ತಂತೆ. ಆಗ ಕ್ರಷ್ಣಪ್ಪ ಇನ್ನೊಂದು ಊರಿನಿಂದ ಇಲ್ಲಿಗೆ ಬಂದು ಕಾಡು~ಬೆಟ್ಟ ಸವರಿ ತೋಟ~ಗದ್ದೆ ಮಾಡಿದನಂತೆ. ನಮ್ಮೂರಿನ ಎಲ್ಲರ ಅಭಿಪ್ರಾಯದಂತೆ ಈ ಮಣ್ಕುಳಿಯಲ್ಲಿ ಒಲೆ ಹೊತ್ತಿಸಿದ ಈ ಕ್ರಷ್ಣಪ್ಪ ಬಹಳ ಶ್ರಮಜೀವಿ. ಆತನಿಗೆ ಈಗ ಸುಮಾರು ಎಂಭತ್ತರ ಹರೆಯ. ಒಂದು ದಿನ ಅಲ್ಲೇ ಹತ್ತಿರವಿದ್ದ ಜೇನು ಮರದ ಕೆಳಗೆ ಬೆಂಕಿ ಹಾಕಿ, ಆಗ ಸಿಟ್ಟಿಗೆದ್ದ ನೊಣಗಳಿಂದ ಐವತ್ತು ಅರವತ್ತು ಕಡಿತಗಳನ್ನು ತಿಂದರೂ ಏನೂ ಆಗದವರಂತೆ ಸುಖವಾಗಿದ್ದ ಈ ಕ್ರಷ್ಣಪ್ಪನಿಗೆ ನಾನಂತೂ ಸಲಾಮು ಹೊಡೆಯುತ್ತೇನೆ....

ಈ ಮಣ್ಕುಳಿಯಲ್ಲಿ ಒಂದು ಜಲಪಾತವಿದೆ. ಅದರ ಹೆಸರು ’ನಾಗುಂದ ಹಳ್ಳ’.

ಮೊನ್ನೆ ಊರಿಗೆ ಹೋದಾಗ ನಾನು ಮತ್ತು ಶಿರ್ಯಪಚ್ಚಿ ಅಲ್ಲಿಗೆ ಹೋಗಿದ್ದೆವು. ಪರಮಣ್ಣನ ಮನೆಗೆ ಹೋಗಿ, ಇತ್ತೀಚೆಗೆ ಮದುವೆಯಾದ ಶ್ರೀಕಾಂತನನ್ನು ಮಾತನಾಡಿಸಿ, ಉಂಬಳದ ಕಡಿತವನ್ನು ಸಹಿಸಿ, ಹಳ್ಳದ ಮಳೆಗಾಲದ ಭೋರ್ಗರೆತವನ್ನು ನೋಡಿಬಂದೆವು. ಪರಮಣ್ಣ ಅವನ ಮನೆಗೆ ಇದೇ ಹಳ್ಳದಿಂದ ಹಣಿನೀರಿನ ಮೂಲಕ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾನೆ.

ನಾಗುಂದ ಹಳ್ಳ... ಎದುರಿನಿಂದ ಇದನ್ನು ನೋಡಲಸಾಧ್ಯ.
ಪಕ್ಕದಲ್ಲಿ ಇರುವ ಕಿರಿದಾದ ಕಾಲುವೆಯಲ್ಲಿ ನಿಂತು ಮಾತ್ರ ನೋಡಬಹುದು..
ಈ ಹಳ್ಳದಲ್ಲಿ ಬರುವ ನೀರಿನ ಹೊಡೆತಕ್ಕೆ ಒಂದು "Turbine" ಕೂರಿಸಿದರೆ ಆರಾಮಾಗಿ 10 ಮೆಗಾವ್ಯಾಟ್ ಕರೆಂಟು ಪಡೆಯಬಹುದು ಹಾಗೂ KEBಯವರ ಕಾಲು ಹಿಡಿಯುವದನ್ನು ತಪ್ಪಿಸಿಕೊಳ್ಳಬಹುದು ಎಂಬುದು ನಮ್ಮನೆಯ ವಿಶ್ವಣ್ಣನ ಅನೇಕ ವರ್ಷಗಳ ವಾದ.
ಪರಮಣ್ಣ ಮತ್ತು ಶಿರ್ಯಪಚ್ಚಿ.....



ಈ ಘಟ್ಟದ ಕೆಳಗಿರುವ ಮಣ್ಕುಳಿ ನೋಡಲು ಕಣ್ಣಿಗೆ ಸ್ವರ್ಗದಂತೆ ಭಾಸವಾದರೂ, ನಿಜಕ್ಕೂ ಅಲ್ಲಿನ ಬದುಕು ಕಷ್ಟಕರ. ಘಟ್ಟಗಳನ್ನು ಹತ್ತಿ ಇಳಿದು ಅಲ್ಲಿ ಹೋಗಿ ತಲುಪುವದೇ ಒಂದು ದೊಡ್ಡ ಸಾಹಸ.ಮೊನ್ನೆ ಪರಮಣ್ಣನ ಹೊಸ ಆಕಳೊಂದನ್ನು ಹುಲಿ ಹೊತ್ತೊಯ್ದಿದೆಯಂತೆ!!! ಹತ್ತಿರದಲ್ಲೇ ಹುಲಿ ಮತ್ತು ಕಪ್ಪುಚಿರತೆಗಳು ತಮ್ಮ ಇರುವನ್ನು ಸೂಚಿಸುತ್ತಾ ಗಸ್ತು ತಿರುಗುತ್ತಿರುವಾಗ, ಮನೆಯಲ್ಲಿ ಒಳಗಡೇ ಕುಳಿತಿರಲೂ ಭಯವೇ.

ಇದೇ ಮಣ್ಕುಳಿಯ ಘಟ್ಟದ ಮೂಲಕವಾಗಿ ಮೊದಲ ಸಲ ನಮ್ಮೂರಿಗೆ ಕರೆಂಟು ತರುವ ಹುಮ್ಮಸ್ಸಿನಲ್ಲಿ, ಮಣ್ಕುಳಿಯ ಕಾನನದಲ್ಲಿ ಕರೆಂಟು ಕಂಬಗಳನ್ನು ಎಳೆದು ತಂದು ನಿಲ್ಲಿಸಿ ತಂತಿ ಜೋಡಿಸಿದ ನಮ್ಮೂರಿನ ಎಲ್ಲರ ಶ್ರಮವೂ ನೆನಪಿಸಿಕೊಳ್ಳಬೇಕಾದ್ದೇ. KEB ಯವರು ತಲೆಹಾಕಿಯೂ ಮಲಗದಂಥಾ ದಿಕ್ಕಿನಲ್ಲಿರುವ ನಮ್ಮೂರಲ್ಲಿ ಎಲ್ಲರ ಮನೆಯವರೂ ಕರೆಂಟಿನ ಮೇಸ್ತ್ರಿಗಳೇ...!!!

ಮಣ್ಕುಳಿಯ ಘಟ್ಟ ಇಳಿಯುವ ದಾರಿ...

ನಮ್ಮೂರಿನ ದೇವಸ್ಥಾನ ಚಂದಗುಳಿಗೆ ಮೊದಲು ಕಾಲುಹಾದಿಯಲ್ಲೇ ಹೋಗುತ್ತಿದ್ದಾಗ ಮಣ್ಕುಳಿಯ ಘಟ್ಟಗಳು ಎಂದರೆ ಭಯವಾಗುತ್ತಿತ್ತು. ಸುತ್ತಲೂ ಆವರಿಸಿರುವ ಕರಿಯ ಅಡವಿ, ದಾರಿಯಲ್ಲಿ ರಕ್ತ ಹೀರುವ ಕೋಟಿಗಟ್ಟಲೇ ಉಂಬಳಗಳು. ಮೊಳಗೊಮ್ಮೆಯಲ್ಲಿ ಯಾರನ್ನಾದರೂ ಕೇಳಿ, ಮಣ್ಕುಳಿಯ ಬಗ್ಗೆ ಎಲ್ಲರಿಗೂ ವಿಶೇಷ ಆದರವಿದೆ.... ಎಲ್ಲಾ ದೃಷ್ಟಿಯಿಂದಲೂ....

Tuesday, December 18, 2007

ಮೊಳಗೊಮ್ಮೆ

ಅಥವಾ ಮಳಲಗಾಂವ.
ಪೋ: ಹುತ್ಖಂಡ.... ತಾ: ಯಲ್ಲಾಪುರ.....ಉತ್ತರ ಕನ್ನಡ ಜಿಲ್ಲೆ.....

ಯಲ್ಲಾಪುರದಿಂದ ಹತ್ತು ಕಿಮಿ. ಸಿರಸಿಯ ಕಡೆಗೆ.... ಒಂದು ಪುಟ್ಟ ಗ್ರಾಮ....
ಇಲ್ಲಿ ಹೆಚ್ಚೆಂದರೆ ಹತ್ತಿಪ್ಪತ್ತು ಮನೆಗಳಿರಬಹುದೇನೋ... ಏಳನೆ ಇಯತ್ತೆಯವರೆಗಿನ ಒಂದು ಶಾಲೆ....ಅದಕ್ಕೆ ಅರ್ಧಚಂದ್ರಾಕಾರದಲ್ಲಿ ಅರ್ಧ ಮಾತ್ರ ಕಟ್ಟಿದ ಕಂಪೌಂಡು....ದೂರದ ಪರ್ಸುವಿನ ಮನೆಯಲ್ಲಿ ಇಡೀ ಕಾಡಿಗೇ ಕೇಳುವಷ್ಟು ದೊಡ್ಡದಾಗಿ ಮೊಳಗುತ್ತಿರುವ ಟೇಪ್-ರೆಕಾರ್ಡರ್..

ಬಸ್ಸಿನಿಂದ ಇಳಿದು ಸ್ವಲ್ಪ ದೂರ ಹೋಗುವಷ್ಟರಲ್ಲೇ ದಾರಿಯಲ್ಲಿ ಸಿಗುವ ಯಂಕಣ್ಣ ... ಜೊತೆಗೇ ಸಿಗುವ ಅವನ ಕವಳದ(ತಾಂಬೂಲ) ಸಂಚಿ.... ಅದರಲ್ಲೂ ಕವಳದ ಸಂಚಿಯ ಮೂಲೆಯಲ್ಲಿ ಸಿಗುವ ಆ ಕಾಚಿನ ಪೌಡರು....ತುದಿಗಾಲಲ್ಲಿ ಮಣ್ಣು ರಸ್ತೆಯ ಕಾಲಿಗೆಯ ಪಕ್ಕದಲ್ಲಿ ಕುಳಿತು ಕವಳವನ್ನು ಮೆಲ್ಲಗೆ ಮೆಲ್ಲುವಾಗ..... ಆಹಾ.....

ಇನ್ನೂ ಸ್ವಲ್ಪ ಮುಂದಕ್ಕೆ ಗೊಳೀಕಾನು.... (ಬಲಕ್ಕೆ ಅಡವಿಯಲ್ಲಿ ಅಡವಿಯಲ್ಲಿ ನುಗ್ಗಿದರೆ ಸುಮಾರು ಒಂದು ಕಿಮಿ ದೂರದಲ್ಲಿ ಗ್ರಾಮದೇವತೆ ಹುಲಿಯ ಮೂರ್ತಿ....ಇಲ್ಲಿ ವರ್ಷಕ್ಕೊಮ್ಮೆ ಊರಿನ ಹಾಗೂ ಸುತ್ತಲಿನ ಊರ ಜನರೆಲ್ಲ ಸೇರಿ ತಮ್ಮ ಜಾನುವಾರುಗಳನ್ನು ರಕ್ಷಿಸುವ ದೇವತೆ ಹುಲಿಗೆ ಪೂಜೆ ಸಲ್ಲಿಸಿ ನಂತರ ಅಲ್ಲೇ ಭಕ್ಷ್ಯ-ಭೋಜ್ಯಗಳನ್ನ ತಯಾರಿಸಿ ಊಟಮಾಡುತ್ತಾರೆ. ದಟ್ಟ ಗೊಂಡಾರಣ್ಯದೊಳಗೆ ನೀವು ಪಾಯಸವನ್ನು ಗಟಗಟನೇ ಕುಡಿಯುತ್ತಿರುವುದನ್ನು ಕಲ್ಪಿಸಿಕೊಳ್ಳಿ:-)) ನೀವು ಹಾಗೇ ಮೊಳಗೊಮ್ಮೆಯ ಕಡಿಯ ರೋಡಿನಲ್ಲಿ ಮುಂದೆ ಸಾಗಿದಂತೆ ನಿಧಾನವಾಗಿ ಹಿಂದೆ ಮರೆಯಾಗುವ ಡಾಂಬರ್ ರೋಡು... ಅಷ್ಟರಲ್ಲಿ ಮುಂದೆ ಆವರಿಸಿಕೊಳ್ಳುವ ದಟ್ಟವಾದ ಕರಿಯ ಕಾಡು....ಕಿವಿ ಒಡೆಯುವಂತೆ ಕೂಗಿ ಕೂಗಿ ಪ್ರಾಣ ಬಿಡುವ ಜೀರುಂಡೆಗಳು....

ನಿಶ್ಯಬ್ಢ.....ಎದೆಯ ಬಡಿತ ಕೇಳುವಂತೆ... ಎಲ್ಲೋ ಚುರುಪುರು ಶಬ್ಧ ಮಾಡುವ ಕಾಡಿನ ಕೋಳಿ... ಅಪರೂಪವೆಂಬಂತೆ ಸಿಗುವ ಕಾನುಕುರಿ...ಜಿಂಕೆ... ಎಲ್ಲೋ ದೂರದಲ್ಲಿ ಮರದಿಂದ ಮರಕ್ಕೆ ಜಿಗಿಯುವ ಮಂಗನ ಆಟ... ನಾಕುದಾರಿ ಸಿಕ್ಕಂತೆ ಚಿಗುರಿದ ಅಶೋಕ ಹೂವಿನ ಮರಗಳ ಸಾಲು... ಅಷ್ಟರಲ್ಲೇ ಬುರ್ರ್..... ಎಂದು ಸೈಕಲ್ಲಿನಲ್ಲಿ ಶರವೇಗದಲ್ಲಿ ಎದುರಿಗೆ ಬರುವ ಪರ್ಸು.....ಕ್ಷಣಾರ್ಧದಲ್ಲೇ "ಯಾವಾಗಾ ಬಂದ್ರರೋ..." ಎಂದು ದೂರದಲ್ಲಿ ಕೇಳಿದಂತೆ ಅವನ ಕೂಗು...

ಬೇಡ್ತಿ ನದಿ ನಮ್ಮೂರಿನಿಂದ ಸ್ವಲ್ಪ ಮುಂದೆ ಕಾಡಲ್ಲಿ ತೆವಳಿ ಮಾಗೋಡು ಜಲಪಾತವಾಗಿ ಧುಮುಕುತ್ತದೆ. ಬೇಸಿಗೆಯಲ್ಲಿ ಒಂದು
ಚೊಂಬೂ ನೀರು ಸಿಗಲಾರದ ಈ ನದಿಗೆ ಆಣೆಕಟ್ಟು ಕಟ್ಟಿ ಕಾಡನ್ನೆಲ್ಲಾ ಮುಳುಗಿಸುವ ಸರ್ಕಾರದ ಹೊಂಚು ಸದ್ಯಕ್ಕೆ ನಿಂತಿದೆ.
ಇದರಿಂದಾಗಿ ಇಲ್ಲಿನ ಎಷ್ಟೋ ಬಡಜೀವಗಳು ಸದ್ಯಸದ್ಯಕ್ಕೆ ಬದುಕಿವೆ!
ಮಣ್ಕುಳಿ/ನಾಗುಂದ ಹಳ್ಳ ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆ. ಕಾಶ್ಮೀರದ ಯಾವುದೋ ಕಣಿವೆಯಂತಿರುವ ಈ ಮಣ್ಕುಳಿಗೆ ನೀವು ಒಮ್ಮೆ ಭೇಟಿ ಕೊಡಲೇಬೇಕು. ಜನರಿಗೆ ಹರಕೆ ಒಪ್ಪಿಸಲು ಪಕ್ಕದ ಊರಾದ ಚಂದುಗುಳಿಗೇ ಹೋಗಬೇಕು.

ಆದರೂ ಒಂದು ಕೊನೆಯ ವಿಷಾದದ ಸಂಗತಿ..ಹಳ್ಳಿಯ ಜೀವನವನ್ನು ಅದ್ಭುತವಾಗಿ ಬದುಕುವ ಅವಕಾಶವಿದ್ದರೂ ಮಲೆನಾಡಿನ ಜನ ಪೇಟೆಯ ಬದುಕಿಗೆ ಮನಸೋತು ನಗರಗಳ ಕಡೆಗೆ ಓಡುತ್ತಾರೆ. ಆದರೆ ಈ ಮಹಾನಗರದ ಹುಚ್ಚು ಓಟದ ಬದುಕಿನ ಬೇಗೆಯಲ್ಲಿ ಬೇಸತ್ತಿರುವ ನಮಗೆ ಮೊಳಗೊಮ್ಮೆಯಂಥಹಾ ಒಂದು ಊರು ಕೇವಲ ಕಲ್ಪನೆಯ ಕೂಸಾಗಿಯೇ ಉಳಿಯುತ್ತದೆ...

ಇದು ನಮ್ಮ ಊರು... ಎಷ್ಟು ಅಂತ ಬರೆಯಲಿ...?ಪದಗಳು ಕೊನೆಯಾಗುವ ಹೊತ್ತು...

ಇನ್ನೂ ಹೆಚ್ಚಿನ ವಿವರ ಮುಂಬರುವ ದಿನಗಳಲ್ಲಿ.......