ಈ ವರ್ಷದ ಅಜ್ಜರ ನೆನಪಿನ ಸಂಗೀತ ಸಂಜೆ ಬಹು ಅದ್ಭುತವಾಗಿ ಕೂಡಿಬಂತು.
ಎಂದಿಗೂ ಕನ್ನಡದಲ್ಲಿ ಭಾಷಣ ಮಾಡಿ ಅಭ್ಯಾಸವಿರದ ಶಿವರಾಮ ಭಟ್ (ಶಿವರಾಮಪಚ್ಚಿ) ಅವರು ಬಹು ಒಪ್ಪಟವಾಗಿ ಕಾರ್ಯಕ್ರಮದ ನಿರ್ವಹಣೆ ಕನ್ನಡದಲ್ಲೇ ಮಾಡಿದರು. :)
ಯಲ್ಲಾಪುರದ ಶ್ರೀ ಎಂ.ಎನ್.ಹೆಗಡೆಯವರು ಕಾರ್ಯಕ್ರಮದ ಕುರಿತು ಒಂದೆರಡು ಮಾತನ್ನಾಡಿದರು.
ಎಂದಿನಂತೆ ಕಾರ್ಯಕ್ರಮಗಳಿಗೆ ಜನ ಸೇರುವದು ತಡವಾಗಿ ಆದ್ದರಿಂದ, ಸಂಜೆ 5ಕ್ಕೆ ಶುರುವು ಆಗಬೇಕಾಗಿದ್ದ ಸಂಗೀತ 6 ಗಂಟೆಗೆ ಶುರುವಾಯಿತು.
ಮೊದಲಿಗೆ ನಮ್ಮ ಮನೆಯ ಲಿಗಾಡಿ ಮಕ್ಕಳಾದ ಸುಮಂತ ಮತ್ತು ಸುಜನಾ ಇಬ್ಬರೂ ಸಂಸ್ಕೃತ ಶ್ಲೋಕಗಳನ್ನು ಹೇಳಿ ಎಲ್ಲರನ್ನೂ ಅಚ್ಚರಿಪಡಿಸಿದರು:) ಮನೆಯವರ ಎದುರಿಗೆ ತಾವು ಕೇವಲ ಕಿಲಾಡಿ ಮಾಡುವ ಮಕ್ಕಳಷ್ಟೇ ಅಲ್ಲ, ಎಂದು ಸಾಬೀತುಪಡಿಸಿದರು :) (ಆದರೆ ನಂತರ ಬೇರೆಯವರು ಹಾಡುವಾಗ ಎಂದಿನಂತೆ ತಮ್ಮಿಬ್ಬರ ಕುಣಿತ-ಕಿಲಾಡಿಗಳನ್ನು ಮತ್ತೆ ಶುರುಮಾಡಿ, ಜನರೆಲ್ಲ ಬರೀ ಸಂಗೀತವನ್ನಷ್ಟೇ ಕೇಳದೇ, ತಮ್ಮ ಕಡೆಗೂ ಗಮನ ಹರಿಸುವಂತೆ ನೋಡಿಕೊಂಡರು :))
ಶುರುವಿನಲ್ಲಿ ವೈದ್ಯ ಹೆಗ್ಗಾರಿನ ಸ್ಪೂರ್ತಿ ವೈದ್ಯ ಹಾಗೂ ಕೊಡ್ಲಗದ್ದೆಯ ಪೂಜಾ ಹೆಗಡೆ ಎಂಬ ಪುಟಾಣಿಗಳು ತಮ್ಮ ಸ್ವಾಗತ ಗೀತೆಗಳಿಂದ ಎಲ್ಲರ ಮನವನ್ನು ಮುದಗೊಳಿಸಿದರು.
ನಂತರದಲ್ಲಿ ರಮೇಶ ಭಾಗ್ವತ್ ಕವಾಳೆ ಇವರು, ಮಾರುಬಿಹಾಗ್ ರಾಗವನ್ನು ಹಾಗೂ ಒಂದು ಭಜನೆಯನ್ನು ಹಾಡಿ ಎಲ್ಲರನ್ನೂ ರಂಜಿಸಿದರು. ಇವರಿಗೆ ತಬಲಾದಲ್ಲಿ ಗಣೆಶ ಭಾಗ್ವತ್ ಗುಂಡ್ಕಲ್ ಹಾಗೂ ಸಂವಾದಿನಿಯಲ್ಲಿ ದತ್ತಾತ್ರೇಯ ಗಾಂವ್ಕರ್ ಚಿಟ್ಟೇಪಾಲ್ ಇವರು ಸಾಥಿಯನ್ನು ನೀಡಿದರು. ರಮೇಶ ಇವರ ಯಕ್ಷಗಾನ ಮದ್ದಳೆ ನುಡಿಸುವದು, ಯಕ್ಷಗಾನ ಭಾಗವತಿಗೆ ಮಾಡುವದು, ಯಕ್ಷಗಾನ ಹೆಜ್ಜೆಗಳನ್ನಷ್ಟೇ ನೋಡಿದ್ದ ನಮ್ಮ ಊರಿನ ಜನರು, ಇವರ ಶಾಸ್ತ್ರೀಯ ಸಂಗೀತದ ಕಲೆಯನ್ನೂ ನೋಡಿ, ಕೇಳಿ ಆನಂದಭರಿತರಾದರು.
ಕೊನೆಯದಾಗಿ ಓಂಕಾರನಾಥ್ ಹವಾಲ್ದಾರ್ ಇವರು, ಬಹು ಅದ್ಭುತವಾದ ಪುರಿಯಾ ಕಲ್ಯಾಣ್, ದುರ್ಗಾ, ಅಭಂಗ ಹಾಗೂ ಭೈರವಿ ಯನ್ನು ಕರ್ಣಾನಂದಕರವಾಗಿ ಹಾಡಿ ಸಂಗೀತದ ಕೇಳುಗರನ್ನು ಮಂತ್ರಮುಗ್ಧಗೊಳಿಸಿಬಿಟ್ಟರು. ಅವರಿಗೆ ತಬಲಾದಲ್ಲಿ ಸಿರಸಿಯ ಅನಂತ ಹೆಗಡೆ ಹಾಗೂ ಸಂವಾದಿನಿಯಲ್ಲಿ ಭರತ್ ಹೆಗಡೆ ಸಾಥ್ ನೀಡಿದರು. ಓಂಕಾರನಾಥ್ ಅವರಿಗೆ ಭಜನೆ ಹಾಡುವಾಗ ತಾಳದಲ್ಲಿ ನಾಗೇಂದ್ರ ವೈದ್ಯ ಹೆಗ್ಗಾರು ಇವರು ತಾಳವಾದ್ಯ ಸಹಕಾರ ನೀಡಿದರು.
ಓಂಕಾರನಾಥ್ ಅವರು ತಾನ್ ಗಳನ್ನು ಹಾಡುತ್ತಿದ್ದಂತೆಯೇ ಅವರ ಗಾಯನದಲ್ಲಿ ಮುಳುಗಿದ್ದ ಜನರ ಚಪ್ಪಾಳೆಗಳೂ, ಸಂತಸದ ಆಹಾಕಾರಗಳೂ ಭರಪೂರವಾಗಿ ಹೊಮ್ಮಿದವು. ದುರ್ಗಾ ರಾಗದ 'ಆಡಲು ಪೋಗೋಣ ಬಾರೋ ರಂಗಾ' ಎಂಬ ದಾಸರ ಪದವೂ, ಕನ್ನಡದಲ್ಲಿ ಹಾಡಿದ ಅಭಂಗ ಹಾಗೂ ಭೈರವಿಯ 'ಕಾಯೋ ಕರುಣಾನಿಧೇ' ಗಾನಗಳು ಕೇಳುಗರ ಮನದಲ್ಲಿ ಅಚ್ಚೊತ್ತಿ ಉಳಿಯಿತು.
ಕೊನೆಯದಾಗಿ ದೊಡ್ಡಪ್ಪನವರಾದ ಜಿ.ಎಸ್.ಭಟ್ ಅವರು ವಂದನಾರ್ಪಣೆ ಮಾತುಗಳನ್ನು ಆಡಿದರು.'ಪರಿಶುದ್ಧ ಶಾಸ್ತ್ರೀಯ ಸಂಗೀತಕ್ಕಿರುವ ಆಳ ಉದ್ದಗಲಗಳನ್ನೆಲ್ಲ ಓಂಕಾರನಾಥ್ ಅವರು ಇಂದು ನಮಗೆಲ್ಲ ತೋರಿಕೊಟ್ಟರು' ಎಂದು ಜಿ.ಎಸ್ ಭಟ್
ಅವರು ಶ್ಲಾಘನೆಯ ಮಾತುಗಳನ್ನು ಆಡಿದರು.
ಅಡಿಕೆ ಭವನದ ಪ್ರಕಾಶ ಹೆಗಡೆ, ಮೈಕ್ ಸೆಟ್ಟಿನ ಪಿ.ಪಿ.ಹೆಗಡೆ, ಚಾ ಅಂಗಡಿಯ ಮಂಜಣ್ಣ, ಜನರೇಟರ್ ಮಾಚಣ್ಣ, ಟ್ಯಾಕ್ಸಿಯ ಗಾಂಕರ್ ಭಾವ, ಅವಿನಾಶಣ್ಣ ಇವರೆಲ್ಲ ನಮ್ಮ ಮೇಲಿಟ್ಟ ನಂಬಿಕೆ ಹಾಗೂ ಮಾಡಿದ ಸಹಾಯ ಮರೆಯಲಸಾಧ್ಯ. ಎಂದಿನಂತೆ ನನ್ನ ನೆಚ್ಚಿನ ಮುಂಡಗೋಡಿಮನೆ ಶ್ರೀಪತಿ ಅಣ್ಣ, ನಮ್ಮನೆಯ ವಿಶ್ವಣ್ಣ ಹಾಗೂ ಎಲ್ಲ ಗೆಳೆಯ ವೃಂದದವರಿಗೆ ಕೃತಜ್ನತೆ ಹೇಳಿ ಮುಗಿಸಲು ಸಾಧ್ಯವಿಲ್ಲ :)
ಒಟ್ಟಿನಲ್ಲಿ ಈ ವರ್ಷದ ಅಜ್ಜರ ನೆನಪಿನ ಸಂಗೀತ ಸಂಜೆ ಬಹು ಸುಮಧುರ ಸಂಗೀತದಿಂದ ತುಂಬಿ ತುಳುಕಿತು.
No comments:
Post a Comment