Showing posts with label ಕಾಡಿನ ಕಥೆಗಳು. Show all posts
Showing posts with label ಕಾಡಿನ ಕಥೆಗಳು. Show all posts

Saturday, March 7, 2020

ಅಜ್ಜ ಹೇಳಿದ ಹುಲಿಯಪ್ಪನ ಕಥೆ

೧೯೫೦ ರ ಆಸುಪಾಸು ಇರಬಹುದು.  ನನ್ನ ಆಜ್ಜ ಹೇಳುತ್ತಿದ್ದ ಅವರು ಪ್ರಾಯಕಾಲದಲ್ಲಿರುವಾಗಿನ ಕಥೆ.

ಅಜ್ಜ ಯಲ್ಲಾಪುರದಿಂದ ಮನೆಗೆ ನಡೆದು ಬರುತ್ತಾ ಇದ್ದರಂತೆ. ನಮ್ಮೂರಿನ ದಟ್ಟವಾದ ನಿತ್ಯಹರಿದ್ವರ್ಣ ಕಾಡಿನಲ್ಲಿ ಹುಲಿಗಳು ಹೇರಳವಾಗಿದ್ದ ಕಾಲ ಅದು. ಮನೆಯ ಹತ್ತಿರದ ಗೋಳಿಕಾನಿನ ಹತ್ತಿರ ನಡೆದು ಬರುತ್ತಿರುವಾಗ, ಅಜ್ಜನ ಎದುರಿಗೇ ಹದಿನಾರು ಮೆಟ್ಟಿನ ಹುಲಿಯೊಂದು  ಗಾಂಭೀರ್ಯದಿಂದ ಕಾಡಿನ ಒಂದು ಕಡೆಯಿಂದ ರಸ್ತೆಗೆ ಇಳಿದು, ರಸ್ತೆಯನ್ನು ದಾಟಿ, ಮತ್ತೆ ಆತ್ತಕಡೆಯ ಕಾಡಿನೊಳಗೆ ಹೊಕ್ಕು ಹೊರಟು ಹೋಯಿತಂತೆ.... ಕಾಡಿನಲ್ಲಿಯೇ ಮನೆ ಮಾಡಿದ್ದರೂ ಅಷ್ಟು ದೊಡ್ಡ ಹುಲಿಯನ್ನು ಅಲ್ಲಿಯವರೆಗೆ ಅತಿ ಹತ್ತಿರದಲ್ಲಿ ಒಬ್ಬಂಟಿಯಾಗಿ ನೋಡಿರದಿದ್ದ ನನ್ನ ಅಜ್ಜ ಹಾಗೆಯೇ ಗರಬಡಿದು ಹೋದರಂತೆ. ಹೆದರಿ ಮನೆಗೆ ಬಂದು ಜ್ವರದಿಂದ ಮಲಗಿದವರು ಸುಧಾರಿಸಿಕೊಳ್ಳಲು ನಾಲ್ಕು ದಿನವಾದರೂ ಬೇಕಾಯಿತಂತೆ. !!!





ಶಿರಿ ಚಿಕ್ಕಪ್ಪ ಇನ್ನೊಂದು ಕಥೆ ಹೇಳಿದ. ಅಜ್ಜನ ಅಪ್ಪ - ದೊಡ್ಡಜ್ಜನ ಕಥೆ.

ಇದು ಇನ್ನೂ ಹಳೆಯ ಕಾಲದ ಕಥೆ.

ಅಡಿಕೆ ಕೆಲಸಕ್ಕೆ ಮನೆಗೆ ಬಂದಿದ್ದ ಆಳುಗಳು, ದೊಡ್ಡಜ್ಜನ ಹತ್ತಿರ, ಹುಲಿದೇವರ ಪೂಜಿಸುವದರ ಬಗ್ಗೆ ಅಪಹಾಸ್ಯ ಮಾಡಿದರಂತೆ. ಆಗ ದೊಡ್ಡಜ್ಜನಿಗೆ ಅಸಾಧ್ಯ ಸಿಟ್ಟು ಬಂದು, 'ನಿಮಗೆಲ್ಲಾ ಒಂದು ಬುದ್ದಿ ಕಲಿಸುತ್ತೇನೆ ' ಎಂದು ಹೇಳುತ್ತಾ ಒಳಗೆ ಹೋಗಿ ಹುಲಿದೇವರ ಪ್ರಾರ್ಥನೆ ಮಾಡುವಷ್ಟರಲ್ಲಿ,  ನಮ್ಮ ಮನೆಯ ಹತ್ತಿರ ತೋಟದ ಆಚೆ ಕಾಡಿನಲ್ಲಿ ಹುಲಿಯೊಂದು ಭಯಾನಕವಾಗಿ ಘರ್ಜಿಸಲು ಶುರು ಮಾಡಿತಂತೆ. ಆಗ ಹುಲಿದೇವರ ಬಗ್ಗೆ ಅಪಹಾಸ್ಯ ಮಾಡಿದ್ದ ಆಳುಗಳು ಹೆದರಿ ಕಂಗಾಲಾಗಿ, ದೊಡ್ಡಜ್ಜನ ಹತ್ತಿರ ತಾವು ಮಾಡಿದ್ದು ತಪ್ಪಾಯಿತೆಂದು ಅಂಗಲಾಚಿ ಕ್ಷಮೆ ಕೋರಿದ ನಂತರ, ದೊಡ್ಡಜ್ಜ ಮತ್ತೆ ಹುಲಿದೇವರ ಪ್ರಾರ್ಥನೆ ಮಾಡಿದರಂತೆ. ಆಗ ದೊಡ್ಡಜ್ಜನ ಮಂತ್ರಶಕ್ತಿ ಹಾಗೂ ಭಕ್ತಿಯಿಂದ ಸಂಪ್ರೀತವಾಗಿ ಆ ಹುಲಿ ಮತ್ತೆ ಕಾಡಿಗೆ ತೆರಳಿತಂತೆ.  !!!



ನಾವು ಚಿಕ್ಕವರಿದ್ದಾಗ ಈ ಕಥೆಗಳನ್ನು ಕೇಳಿ ತುಂಬಾ ರೋಮಾಂಚನ ಪಡುತ್ತಿದ್ದೆವು. ಕಾಡಿನ ದಾರಿಯಲ್ಲಿ ಶಾಲೆಗೆ ಒಬ್ಬಂಟಿಯಾಗಿ ನಡೆದು ಹೋಗುತ್ತಿರುವಾಗ ಭಯವಾದರೆ ಹುಲಿದೇವರ ಪ್ರಾರ್ಥನೆ ಮಾಡುತ್ತಿದ್ದೆವು. ಅಜ್ಜನ ಹತ್ತಿರ - "ನೀನು ಎಷ್ಟು ಹುಲಿ ನೋಡಿದ್ದೆ?"  ಎಂದು ಕೇಳಿದಾಗ, ಬೇರೆ ಬೇರೆ ಜಾಗಗಳಲ್ಲಿ ಹೇಗೆ ಆತನಿಗೆ ಹುಲಿ ಎದುರಾಗಿತ್ತು ಎಂಬ ಕಥೆಗಳನ್ನು ಹೇಳುತ್ತಿದ್ದ. !!!

ನಮ್ಮೂರಿನಲ್ಲಿ ಹುಲಿಯನ್ನು ಗ್ರಾಮದೇವತೆ ಎಂದು ಪೂಜಿಸುತ್ತಾರೆ.  ಊರಿನ ಜನ, ದನಕರು ಎಲ್ಲರಿಗೂ ಹುಲಿದೇವರ ರಕ್ಷೆ ಸಿಗಲಿ ಎಂಬುದೇ ಆಶಯ. ಊರಿನ ಹಾಗೂ ಸುತ್ತಲಿನ ಊರಿನ ಜನರೆಲ್ಲ ವರ್ಷಕ್ಕೆ ಎರಡು ಬಾರಿ ತಪ್ಪದೇ  ಹುಲಿಯಪ್ಪನ ಪೂಜೆ (ಹುಲಿಹಬ್ಬ) ಮಾಡುತ್ತಾರೆ. ಕಾಡಿನಲ್ಲೇ ಹುಲಿದೇವರ ಸಾನ್ನಿಧ್ಯದಲ್ಲಿ ಅಡುಗೆ ಮಾಡಿ ವನಭೋಜನ ಮಾಡುತ್ತಾರೆ. ತಲೆತಲಾಂತರದಿಂದ ಪೂಜೆ ಹಾಗೂ ಆಚರಣೆ ಮಾಡಿಕೊಂಡು ಬಂದ ಸಂಪ್ರದಾಯ ಹಾಗೇ ಮುಂದುವರಿಯಲಿ ಎಂಬುದೇ ಎಲ್ಲರ ಆಶಯ.




ಮೊನ್ನೆ ಊರಿಗೆ ಬಂದಾಗ ಪುಟಾಣಿ ಸ್ವರಾಳಿಗೆ ಹುಲಿದೇವರ ಹಾಗೂ ಅಜ್ಜನ ಕಥೆ ಹೇಳಿದೆ. ಅವಳು ಭಕ್ತಿಯಿಂದ ಕೈ ಮುಗಿದು - "ನಮ್ಮನ್ನೆಲ್ಲಾ ಕಾಪಾಡಪ್ಪಾ..ಹುಲಿಯಪ್ಪಾ" ಎಂದು  ಮುಗ್ಧವಾಗಿ ನಮಸ್ಕಾರ ಮಾಡಿದಳು !!!


Saturday, September 5, 2015

ನಾಕುದಾರಿಯಲ್ಲೊಂದು ಮರದ ಕಥೆ

ದಟ್ಟನೆಯ ಎತ್ತರೆತ್ತರದ ಮರಗಳ ಕಾಡು, ಅದರ ಜೊತೆಗೂಡಿದ ಜಲಪಾತಗಳ ಸೊಬಗು... ಪರಿಶುದ್ಧ ಗಾಳಿ... ಮಳೆಗಾಲದ ಎಡೆಯಿಲ್ಲದ ಮಳೆ... ಮಲೆನಾಡಿನ ಮಡಿಲಲ್ಲಿರುವ ನಮ್ಮ ಊರಿನ ನಿತ್ಯಹರಿದ್ವರ್ಣ ಕಾಡಿನ ವರ್ಣನೆ ಮಾಡುತ್ತಾ ಹೊರಟರೆ ಅದಕ್ಕೆ ಕೊನೆಯಿಲ್ಲ.

ದುರಾದೃಷ್ಟವೆಂದರೆ ಮರಗಳ್ಳರ ಕಾಟ ನಮ್ಮೂರನ್ನೂ ಬಿಟ್ಟಿಲ್ಲ. ಫಾರೆಸ್ಟನ ಕಣ್ಣು ತಪ್ಪಿಸಿ ಮರಗಳಿಗೆ ಬೆಂಕಿ ಹಚ್ಚಿ ಬೀಳಿಸಿ, ನಂತರ ಉಳಿದ ಮರವನ್ನು ಕಡಿದು ಸಾಗಿಸುವದು ಸಾಮಾನ್ಯ. ಮಾವಿನ ಮರದ ಕಾಯಿ ಬೇಕೆಂದರೆ ಬುಡಗೂಡಿ ಮರವನ್ನೇ ಕಡಿಯುವುದೂ, ರಾತ್ರೋರಾತ್ರಿ ಮನೆಯಂಗಳಕ್ಕೇ ನುಗ್ಗಿ ಗಂಧದ ಮರವನ್ನು ಕಡಿದು ಸಾಗಿಸುವದೂ, ಬೀಟೆ ತೇಗದ ಮರಗಳ ಕಳ್ಳತನಗಳೂ, ಇವೆಲ್ಲ ನಿರಂತರವಾಗಿ ನಡೇದೇ ಇರುವ ಅವಾಂತರಗಳು.

ನಾಕುದಾರಿ ಎಂಬಲ್ಲಿ ನಮ್ಮ ಊರಿನ ಕಾಡುದಾರಿ ಬೇರೆಬೇರೆ ಮನೆಗಳಿಗೆ ಹೋಗಲು ಕವಲೊಡೆಯುತ್ತದೆ. ಹಾಗೆಯೇ ಕನ್ನಡ ಶಾಲೆಯ ಮಕ್ಕಳೆಲ್ಲ ನಾವೊಂದು ದಿನ ಮಳಲಗಾಂವ ಶಾಲೆಯಿಂದ ಸಂಜೆ ಕಾಡುದಾರಿಯಲ್ಲಿ ಮನೆಗೆ ನಡೆದು ಬರುತ್ತಿದ್ದೆವು. ಯಾವ ಕಾರಣಕ್ಕೋ ಏನೋ, ದಾರಿಯ ಪಕ್ಕದಲ್ಲಿನ ಒಂದು ಬಹು ಎತ್ತರದ ದಪ್ಪನೆಯ ಮರದ ಬುಡಕ್ಕೆ ಬೆಂಕಿ ಹೊತ್ತಿತ್ತು. ತುಂಬಾ ಎತ್ತರವಿದ್ದ ಆ ಮರ ಸುಮಾರು  300 ವರ್ಷ ಹಳೆಯದೇ ಇದ್ದಿರಬಹುದು. ಯಾರೋ ಮರಗಳ್ಳರು ಬೇಕೆಂದೇ ಬೆಂಕಿ ಹಚ್ಚಿದ್ದು ಸ್ಪಷ್ಟವಾಗಿತ್ತು. ಅದನ್ನು ನೋಡಿ ಏನಾದರೂ ಮಾಡಲೇಬೇಕೆಂದು ಎಲ್ಲಾ ಮಕ್ಕಳೂ ಮನೆಗೆ ಕಿತ್ತಾಬಿದ್ದು ಓಡಿದೆವು.

ನಮ್ಮ ಮನೆಯ ವಿಶ್ವಣ್ಣ ನಮ್ಮೂರಿಗೇ ಹೆಸರಾಂತ ಪರಿಸರಪ್ರೇಮಿ. ಯಾರಾದರೂ ಒಂದು ಚಿಕ್ಕ ಗಿಡವನ್ನು ಕಡಿದರೂ ಸರಿ, ಅವರಿಗೆ ಪರಿಸರದ ಬಗ್ಗೆ, ಮರಗಳ ಸಂರಕ್ಷಣೆಯ ಬಗ್ಗೆ ತಿಳಿಸಿ,ಮನವೊಲಿಸಿ, ಮತ್ತೊಮ್ಮೆ ಹಾಗಾಗದಂತೆ ನೋಡಿಕೊಳ್ಳುತ್ತಾನೆ.

ನಾನು ಓಡೋಡಿ ಮನೆಗೆ ಬಂದವನೇ, "ವಿಶ್ವಣ್ಣಾ, ಯಾರೋ ನಾಕುದಾರಿಯ ದೊಡ್ಡ ಮರಕ್ಕೆ ಬೆಂಕಿ ಹಚ್ಚಿದ್ದ... ಎಂಥಾ ಮಾಡವೋ..." ಎಂದು ಕೇಳಿದೆ. ಕೂಡಲೇ ವಿಶ್ವಣ್ಣ ಎಂದಿನಂತೆ ಸಟಕ್ಕನೇ ಒಂದು ಉಪಾಯ ಹೂಡಿದ. ಮನೆಯಿಂದ ಸುಮಾರು ಅರ್ಧ ಕಿಮಿ ದೂರದಲ್ಲಿನ ಕಾಡಿನ ಬೆಂಕಿಯನ್ನು ಆರಿಸುವುದು ಸುಲಭದ ಕೆಲಸವಾಗಿರಲಿಲ್ಲ. ಮನೆಯಲ್ಲಿದ್ದ ಟ್ರಾಕ್ಟರಿನ ಟ್ರಾಲಿಯಲ್ಲಿ ಒಂದು ದೊಡ್ಡ ನೀರಿನ ಹಂಡೆಯನ್ನು ತಂದು ಕೂಡಿಸಿದೆವು. ದನದ ಕೊಟ್ಟಿಗೆಯಿಂದ ನೀರಿನ ಹಂಡೆಯಲ್ಲಿ ನೀರು ತುಂಬಿಸಿ, ಇಬ್ಬರೂ ಟ್ರಾಕ್ಟರಿನಲ್ಲಿ ನಾಕುದಾರಿಯ ಕಡೆಗೆ ಹೊರಟೆವು.

ಒಂದೇ ಹಂಡೆಯ ನೀರು ಸಾಲದೇ ಇನ್ನೂ ಎರಡು ಸಲ ದನದ ಕೊಟ್ಟಿಗೆಗೆ ನೀರು ತರಲು ಟ್ರಾಕ್ಟರಿನಲ್ಲಿ ತಿರುಗಿದೆವು. ಸುಮಾರು ಹೊತ್ತು ಸತತವಾಗಿ 3 ಹಂಡೆಯ ನೀರನ್ನು ಉರಿಯುತ್ತಿದ್ದ ಮರದ ಬುಡಕ್ಕೆ ಹಾಕಿ, ಅಂತೂ ಬೆಂಕಿಯನ್ನು ನಂದಿಸಿದೆವು. ಆವತ್ತಿಗೆ ನಾವು ಆ ಮರದ ಬೆಂಕಿಯನ್ನು ಆರಿಸಿರದಿದ್ದರೆ, ಉರಿಯುತ್ತಿದ್ದ ಬೆಂಕಿ ಕಾಳ್ಗಿಚ್ಚಾಗಿ ಹಬ್ಬಿ ಎಷ್ಟು ಮರಗಳನ್ನು ಸುಡುತ್ತಿತ್ತೋ ಏನೋ...

ಇಂದಿಗೂ ನಮ್ಮೂರಿಗೆ ಹೋಗುವಾಗ ಆ ಮರ ಕಾಣುತ್ತದೆ. ನಾನು ವಿಶ್ವಣ್ಣ ಒಟ್ಟಿಗೇ ಇದ್ದರಂತೂ ಆ ಮರದ ಬಳಿ ನಿಂತು, ಆ ದಿನದ ನಮ್ಮ ಟ್ರಾಕ್ಟರಿನ ಸಾಹಸವನ್ನು ನೆನೆಸಿಕೊಳ್ಳುತ್ತೇವೆ.

ಇಂಥ ಸಾವಿರಾರು ಗಿಡ ಮರಗಳು ನಮಗಿಂದು ಉಸಿರಾಡುವ ಗಾಳಿಯನ್ನೂ - ಬದುಕನ್ನೂ ನೀಡಿವೆ. ಆದರೆ ನಾವೆಷ್ಟು ಅವಕ್ಕೆ ಮರಳಿ ನೀಡಿದ್ದೇವೆ...?

Thursday, January 26, 2012

ಯಾಕ್ ಧಾಳಿ

2011ರ ಜೂನ್ ನಲ್ಲಿ ನಾವೆಲ್ಲ ರೂಪಿನ್ ಪಾಸ್ ಎಂಬ ಹಿಮಾಲಯನ್ ಟ್ರೆಕ್ ಗೆ ಹೋದಾಗ ನಡೆದ  ಘಟನೆ... ಉತ್ತರಾಖಂಡದ ದೌಲಾದಿಂದ 5 ದಿನ ಸತತವಾಗಿ ಹಿಮಾಲಯದ ಪರ್ವತಗಳನ್ನು ಹತ್ತಿ ಬಹಳ ಕಷ್ಟದಲ್ಲಿ ರೂಪಿನ್ ಪಾಸ್ (15,250 feet altitude) ಅನ್ನು ದಾಟಿ ಹಿಮಾಚಲ ಪ್ರದೇಶದ ರೌಂತಿಗಢ್ ದಿಕ್ಕಿನಲ್ಲಿ ಸಾಗಿದೆವು. ರೂಪಿನ್ ಪಾಸ್-ನ ಕೊನೆಯ ಏರನ್ನು ಏರಿದ ಕ್ಷಣಗಳು ಮಾತ್ರ ಬಹಳ ಭಯಾನಕವಾಗಿದ್ದವು. ಸ್ವಲ್ಪ ಎಡವಿದರೂ ಕಾಲು ಜಾರಿ ನೀವು ಎಂದೂ ಯಾರೂ ಹುಡುಕಲಾಗದ ಕಂದಕಕ್ಕೆ ಜಾರಿ ಬೀಳುತ್ತೀರಿ. ಅಲ್ಲಿಗೆ ನಿಮ್ಮ ಕಥೆ ಮುಕ್ತಾಯವಾದಂತೆ !!!

ಯಾವ ಚಾರಣವಾದರೂ ಸರಿ, ಒಮ್ಮೆ ಪರ್ವತದ ಏರನ್ನು ಮುಟ್ಟಿ ತಿರುಗಿ ಇಳಿಯುವಾಗ, ಅಂತೂ ಕಷ್ಟದ ಚಾರಣ ಮುಗಿಯಿತೆಂದು ನೀವು ಅತಿ ನಿರಾಳರಾಗಿರುತ್ತೀರಿ.  ನಿಮ್ಮ ಕಾಲುಗಳು ಬಳಲಿ ಸೋತು ಶಕ್ತಿಹೀನವಾಗಿ ಜೋಲುತ್ತಿರುತ್ತವೆ. ಅಂತೂ ಇಂತೂ ಕೆಳಗೆ ಮುಟ್ಟಿ ನಿಮ್ಮ ವಾಹನವನ್ನೋ ಇಲ್ಲ ಮುಂದಿನ ಕ್ಯಾಂಪ್ ಅನ್ನೋ ಮುಟ್ಟಿದರೆ ಸಾಕು ಎಂಬ ತುಡಿತ ಮನದಲ್ಲಿ ತುಂಬಿರುತ್ತದೆ. ಹಾಗೆಯೇ ನಮ್ಮ ಗುಂಪಿನ ಕೃಷ್ಣ, ಮಿಥುನ್, ಸಂದೀಪ್ (ಚಿಕ್ ಹುಡುಗ), ಅರುಣ್, ರಸೂಲ್ ಹಾಗೂ ಇತರ ಚಾರಣಿಗರು ಎಲ್ಲರೂ ನಮ್ಮ ನಮ್ಮ ಪಾಡಿಗೆ ಏನೇನೋ ಹರಟುತ್ತಾ ರೂಪಿನ್ ಪಾಸಿನ ಪರ್ವತದ ಇಳಿಜಾರಿನಲ್ಲಿ ಇಳಿಯುತ್ತಿದ್ದೆವು. ಹಿಮ ಕರಗಿದ ಪರ್ವತಗಳ ಮೈಮೇಲೆ ತೆಳ್ಳನೆಯ ಹಸಿರು ಹುಲ್ಲಿನ ಹೊದಿಕೆ ಸುತ್ತಿಕೊಂಡಿದ್ದರಿಂದ ಬಹುದೂರದವರೆಗಿನ ದೃಶ್ಯಗಳು ಗೋಚರಿಸುತ್ತಿದ್ದವು.

ಹಿಮಾಲಯದ ಹುಲ್ಲಿನಿಂದಾವೃತವಾದ ಬೆಟ್ಟಗಳಲ್ಲಿ ಯಾಕ್ ಮೃಗಗಳು ಗೋಚರಿಸುವದು ಸಾಮಾನ್ಯ. ಆದ್ದರಿಂದ ದೂರದಲ್ಲಿ ನಮ್ಮೆಡೆಗೇ ನೋಡುತ್ತಾ ನಿಂತಿದ್ದ 2 ಬೃಹತ್ ಯಾಕ್ ಮೃಗಗಳನ್ನು ನೋಡಿದರೂ ನಮಗೆ ಅದು ಅಂಥಹಾ ವಿಶೇಷವೆಂದೆನಿಸಲಿಲ್ಲ. ಹಾಗೇ ನಮ್ಮ ಸಹಚಾರಣಿಗರಿಂದ ಸ್ವಲ್ಪ ದೂರದಲ್ಲಿ ನಡೆಯುತ್ತಿದ್ದ ನಮಗೆ "ಹೇ ..ಹೇ... ಓಡ್ರೋ...  ಓಡ್ರೋ... ಯಾಕ್ ನಮ್ಮ್ ಕಡೇನೇ ಓಡಿ ಬರ್ತಾ ಇದೆ ಕಣ್ರೋ...!!!" ಎಂದು ಕೂಗುತ್ತಾ ನಮ್ಮೆಡೆಗೆ ಓಡಿ ಬರುತ್ತಿರುವ ಗೆಳೆಯರು ಕಂಡರು... ಅವರ ಹಿಂದೆ ಬೆನ್ನಟ್ಟಿ ಬರುತ್ತಿದ್ದ ಯಾಕ್ ಗಳನ್ನ ನೋಡಿ ನಾವೂ ಕಿತ್ತಾಬಿದ್ದು ಇರುವ ಒಂದೇ ಕಾಲುದಾರಿಯಲ್ಲಿ ಓಡಿದೆವು... ಆದರೆ ಎಲ್ಲೆಂದು ಓಡುವದು? ಒಂದೆಡೆ ಕಡಿದಾದ ಪ್ರಪಾತ. ಇನ್ನೊಂದೆಡೆ ನಮ್ಮಿಂದ ಹತ್ತಲಾಗದ ಬೆಟ್ಟ.!!!

ಪುಣ್ಯಕ್ಕೆ ಸ್ವಲ್ಪದರಲ್ಲೇ ಕುರಿಕಾಯುವ ಕುರುಬರು ಛಳಿಗಾಲಕ್ಕೆಂದು ಮಾಡಿಕೊಂಡಿದ್ದ ಕಲ್ಲಿನ ಮನೆಯೊಂದು ಸಿಕ್ಕಿತು. ನಾನು ಅದರಲ್ಲಿ ಹೊಕ್ಕುತ್ತಿದ್ದಂತೆಯೇ ಅಟ್ಟಿಬರುತ್ತಿದ್ದ ಒಂದು ಬೃಹತ್ ಯಾಕ್ ಓಡಿ ಬರುತ್ತಿದ್ದ ಕೃಷ್ಣನಿಂದ ಒಂದೇ ಮೀಟರ್ ದೂರದಲ್ಲಿ ಇತ್ತು !!!! ಕೂಡಲೇ ಕೈಗೆ ಸಿಕ್ಕಿದ ಒಂದು ದೊಡ್ಡ ಕಲ್ಲನ್ನು ಆ ಯಾಕ್ ಕಡೆಗೆ ಎಸೆದೆ. ಏನಾಯಿತೋ ಏನೊ, ಹತ್ತಾರು ಮನುಷ್ಯರನ್ನು ಅಟ್ಟಿಕೊಂಡು ಬರುತ್ತಿದ್ದ ಎರಡೂ ಯಾಕ್ ಗಳು ನಾವು ಮುಂದೆ ಹೋಗಬೇಕಾಗಿದ್ದ  ದಾರಿಯಲ್ಲಿ ಓಡಿದವು. 

ಮರುಜೀವ ಸಿಕ್ಕಂತಾದ ನಾವೆಲ್ಲ ಸ್ವಲ್ಪ ಸಮಯ ನಾವೆಲ್ಲ ಸುಧಾರಿಸಿಕೊಂಡು ಯಾಕ್ ಗಳು ಎಲ್ಲಿ ಹೋದವೆಂದು ನೋಡಲು ಸ್ವಲ್ಪ ಮುಂದೆ ಹೋದೆವು. ಆದರೆ ದಿಬ್ಬದ ಆಚೆ ನಿಂತಿದ್ದ ಅವುಗಳು ಮತ್ತೆ ವಿರುದ್ಧ ದಿಕ್ಕಿನಲ್ಲಿ ನಮ್ಮೆಡೆಗೆ ಓಡಿಬರಲಾರಂಭಿಸಿದವು !!! ನಾವೆಲ್ಲಾ ಕೈನಲ್ಲಿ ಕಲ್ಲುಗಳು, ನಮ್ಮ ಚಾರಣದ ಕೋಲುಗಳನ್ನ ಎತ್ತಿತೋರಿಸುತ್ತಾ  ಪುರಾತನಕಾಲದ ಸೈನಿಕರಂತೆ "ಹೋಯ್ ಹೋಯ್ ಹೋಯ್ ಹೋಯ್" ಎಂದು ಭಯ-ರುದ್ರಾವೇಷದಲ್ಲಿ  ಕಿರುಚತೊಡಗಿದೆವು...!!! ಆದರೂ ಆ ಯಾಕ್ ಗಳು ಏನೂ ಹೆದರದೆ ನಮ್ಮನ್ನೇ ದಿಟ್ಟಿಸಿ ನೋಡುತ್ತಾ ನಿಂತಿದ್ದವು...

ಪರಿಸ್ಥಿತಿ ಹಾಗೇ ಇದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ!. ನಮ್ಮ ಕಿರುಚಾಟವನ್ನು ಕೇಳಿದ ನಮ್ಮ ಗೈಡ್ ದೂರದಿಂದ ತಿರುಗಿ ಓಡಿಬಂದು ಎರಡೂ ಯಾಕ್ ಗಳನ್ನು ಬೆಟ್ಟದ ಮೇಲೆಡೆಗೆ ಓಡಿಸಿದ..

ನಮ್ಮ ಗೈಡ್ ಹೇಳಿದ್ದು, "ಇಲ್ಲಿ ಹಳ್ಳಿಯವರು ಯಾಕ್ ಗಳಿಗೆ ತಿನ್ನಲು ಉಪ್ಪನ್ನು ಕೊಡುತ್ತಾರೆ. ಉಪ್ಪು ಎಂದರೆ ಅವಕ್ಕೆ ಎಲ್ಲಿಲ್ಲದ ಪ್ರೀತಿ. ಆದ್ದರಿಂದ ಅವು ನಿಮ್ಮೆಡೆಗೆ ಓಡಿಬಂದಿರಬೇಕು" ಎಂದು. ಅವರು ಕೊಟ್ಟ ಕಾರಣ ಸಮಂಜಸವಾದರೂ ಒಪ್ಪಿಕೊಳ್ಳುವದು ಅಸಾಧ್ಯವಾಗಿತ್ತು. ಆ ದಿನ ಯಾಕ್ ಗಳು ನಮ್ಮನ್ನು ಅರ್ಥಾತ್ ಅಟ್ಟಿಸಿಕೊಂಡೇ ಬಂದಿದ್ದವು ಎಂಬುದು ನಮ್ಮ ಅನಿಸಿಕೆ. ಯಾಕೆಂದು ಗೊತ್ತಿಲ್ಲ.

ಕಡಿದಾದ ಇಳಿಜಾರು ಪರ್ವತಗಳ ಕಾಲುಹಾದಿಯಲ್ಲಿ, ಬೇಡವಾಗಿದ್ದ ಯಾಕ್ ನ ನಿರೀಕ್ಷೆಯಲ್ಲಿ ಮತ್ತೆ ಮತ್ತೆ ಹಿಂತಿರುಗಿ ಭಯದಿಂದ ನೋಡುತ್ತಾ ನಮ್ಮ ಮುಂದಿನ ಕ್ಯಾಂಪ್ ಕಡೆಗೆ ತೆರಳಿದೆವು.... ಇಂದಿಗೂ ಆ ಘಟನೆಯನ್ನು ನೆನೆಸಿಕೊಂಡರೆ ಕೈಯಲ್ಲಿ ಆಯುಧಗಳಿಲ್ಲದ ಮನುಷ್ಯ ಎಷ್ಟು ನಿಸ್ಸಹಾಯಕ ಎಂಬುದು ಅರಿವಾಗುತ್ತದೆ... 
       

Sunday, November 21, 2010

ಅಮವಾಸ್ಯೆಯ ಬೆಂಕಿ ಸೂಡಿ ಹಾಗೂ ರಂಗನ ಪರದಾಟ.

ನಮ್ಮ ದೊಡ್ಡಣ್ಣನಾದ ಸುಬ್ಬಣ್ಣನ ಮದುವೆಗೆಂದು ಮೈಸೂರಿನಿಂದ ಸಹಪಾಠಿಗಳಾದ ಕಾರ್ತಿಕ್, ರಂಗ, ಕಾವಾ, ಅಜಿತ್ ಇವರು ಮಳಲಗಾಂವ್ ಗೆ ಬಂದಾಗಿನ ಕಥೆ.

ಮಲೆನಾಡ ನೋಡಬೇಕು, ಅಲ್ಲಿನ ಸೌಂದರ್ಯವನ್ನು ಸವಿಯಬೇಕೆಂಬ ಆಸೆ ಅವರದು. ಅದರಂತೇ ಗಾಂವ್ಕಾರ ಭಾವನ ಜೀಪಿನಲ್ಲಿ ಸಾತೊಡ್ಡಿ, ಮಾಗೋಡು ಜಲಪಾತಗಳನ್ನು ಸುತ್ತಿದ್ದೂ ಆಯಿತು. ಮದುವೆ ಹಿಂದಿನ ದಿನ ರಾತ್ರಿ 10 ಗಂಟೆ ಆಗಿರಬಹುದು. "ಮಗಾ ಇಲ್ಲೇ ಒಂದು ಕಿಲೋಮೀಟರ್ ನಡೆದು ಡಾಂಬರ್ ರಸ್ತೆಯ ಬಳಿಗೆ ಒಂದು ವಾಕ್ ಹೋಗಿ ಬರೋಣ್ವಾ? ಅಲ್ಲಿ ಪರ್ಸು ಅಂತ ನಮ್ಮ ಕೆಲಸದವನ ಬಿಡಾರ ಇದೆ. ಅವನು ಸೈಕಲ್ ಟೈರ್ ನ ಪಂಜು (ಸೂಡಿ) ಮಾಡಿಕೊಡುತ್ತಾನೆ. ಅದನ್ನು ಹಿಡಿದುಕೊಂಡು ಅದರ ಬೆಳಕಿನಲ್ಲೇ ತಿರುಗಿ ನಡೆದು ಬರೋಣ" ಎಂದು ಎಲ್ಲರನ್ನೂ ಕೇಳಿದೆ. ಮನೆಯಲ್ಲಿ ಎಲ್ಲರೂ ನನ್ನ ಯೋಜನೆಯನ್ನು ಕಿತ್ತುಹಾಕಿ, "ನಿಂಗೆ ಬ್ಯಾರೆ ಕೆಲ್ಸ ಇಲ್ಲೆ, ಸುಮ್ನೆ ಮನ್ಕ್ಯಳಿ" ಎಂದು ಬಯ್ದೇಬಿಟ್ಟರು. ಯಾಕೆಂದರೆ ಅದೊಂದು ವಿಚಿತ್ರವಾದ ಪ್ರಶ್ನೆಯಾಗಿತ್ತು.!!!

ನಮ್ಮೂರಿನ ಬಸ್ಟಾಪಿನಿಂದ 1ಕಿಮಿ ದಟ್ಟವಾದ ಕಪ್ಪು ಕಾಡಿನಲ್ಲಿ ನಡೆದು ಹೋದರೆ ನಮ್ಮ ಮನೆ ಸಿಗುತ್ತದೆ. ಆ ಕಾಡಿನ ಹಾದಿಯಲ್ಲಿ ನಡೆದು ಹೊರಟರೆ ಖಾಯಂ ತಿರುಗುವ ಜನರಿಗೂ ಕೆಲವೊಮ್ಮೆ ಭಯ ಕಾಡುತ್ತದೆ. ಹತ್ತಿರದಲ್ಲೇ ಕೆಲವೊಮ್ಮೆ ಗುರ್-ಗುಡುವ ಹುಲಿ, ಅಕಾಸ್ಮಾತ್ರ್ ಬೆಂಬತ್ತಿ ಓಡಿಸಿಕೊಂಡು ಬರುವ ಕರಡಿಗಳು, ಕಾಡೆಮ್ಮೆಗಳ ಓಡಾಟ ಇತ್ಯಾದಿ. ಸುಮ್ಮನೇ ಒಂದು ಕಾಡುಕೋಳಿ ಚರಪರ ಸದ್ದು ಮಾಡಿದರೂ ಅಂಜಿಕೆ. ದೂರದಲ್ಲಿ ಮೇಯುತ್ತಿರುವ ದನವನ್ನೇ ಹುಲಿ ಎಂದು ಗ್ರಹಿಸಿ ಓಟಕಿತ್ತಿದ್ದು ತುಂಬಾ ಸಲ ಇದೆ. ಮನೆಗೆ ಬಂದು ಮುಟ್ಟುವವರೆಗೂ ಕಂಡೂ ಕಾಣದ ಭಯ ನಮ್ಮ ಹೆಗಲ ಮೇಲಿರುತ್ತದೆ. ಇಂಥಾ ದಾರಿಯಲ್ಲಿ ಅಮಾವಾಸ್ಯೆಯ ರಾತ್ರಿಯಲ್ಲಿ ’ವಾಕ್’ ಹೋಗುವದರ ಬಗ್ಗೆ ಊಹಿಸಿಕೊಳ್ಳಿ.!!!

ಸದಾ ಹುಮ್ಮಸ್ಸಿನಲ್ಲಿರುವ ಕಾರ್ತಿಕ್ ಕೂಡಲೇ ಇದಕ್ಕೆ ಒಪ್ಪಿದ. ರಂಗನನ್ನು ಒಪ್ಪಿಸಲು ಹರಸಾಹಸಪಟ್ಟೆವು. ಆದರೆ ರಂಗ ಹೊರಡುವ ಮೊದಲೇ ಇವರಿಬ್ಬರೂ ತಮ್ಮ ಹುಚ್ಚಾಟಗಳಿಂದ ತನ್ನ ಪ್ರಾಣಕ್ಕೇ ಸಂಚಕಾರ ತರುತ್ತಾರೆ ಎಂದು ಅವಲತ್ತುಕೊಳ್ಳುತ್ತಾ ಹೊರಟ. ಕಾವಾ ಮತ್ತು ಅಜಿತ್ ಸುಖನಿದ್ರೆಗೆ ಜಾರಿದ್ದರು. ಕೈನಲ್ಲಿ ಒಂದು ಕರೆಂಟು ಬ್ಯಾಟ್ರಿ ಹಿಡಿದು ಮೂರೂ ಜನ ಕಡುಕಪ್ಪಿನಲ್ಲಿ ಎಡವುತ್ತಾ ನಡೆದು ಹೊರಟೆವು. ನಾನು ಕಾರ್ತಿಕ್ ಗೆ ಮಳಲಗಾಂವ್ ನ ಪ್ರಾಣಿಗಳ ಕಥೆಗಳನ್ನು ಹೇಳತೊಡಗಿದೆ. ’ನಮ್ಮ ದೂರದ ಸಂಬಂಧಿಕರೊಬ್ಬರನ್ನು ಹುಲಿ ಕೊಂದ ಕಥೆ, ಅಚ್ಚೇಕೇರಿ ಗೋಪಣ್ಣನನ್ನು ಹಂದಿ ಓಡಿಸಿಕೊಂಡು ಬಂದ ಕಥೆ, ಕುಟ್ಟಪ್ಪನ ಸೈಕಲ್ ಅನ್ನು ಕರಡಿ ಓಡಿಸಿಕೊಂಡು ಹೋದ ಕಥೆ...’ ಇತ್ಯಾದಿ. ರಂಗ ಮಾತ್ರ ತನ್ನ ರಂಗಿನಾಟಗಳನ್ನೆಲ್ಲಾ ಬಂದುಮಾಡಿ ಗುಮ್ಮನಂತೆ ನಾನು ಹೇಳುತ್ತಿದ್ದ ಕಥೆಗಳನ್ನೇ ಕೇಳುತ್ತಾ ಒಳಗೊಳಗೇ ಅಳುಕತೊಡಗಿದ.

ಕತ್ತಲಲ್ಲಿ ಕಗ್ಗಾಡಿನಲ್ಲಿ ನಡೆಯುತ್ತಿದ್ದರೆ ಕಿವಿ ಎಷ್ಟೇ ಹಿರಿದು ಮಾಡಿದರೂ ಎನೇನೂ ಕೇಳಿಸದ ನಿಶ್ಯಬ್ಧತೆ, ನಗರದ ಜೀವನದಲ್ಲಿ ಎಂದೆಂದೂ ಕಂಡಿರದ ದಟ್ಟ ಕಾಡಿನ ಕತ್ತಲು, ಕೂಗಿದರೂ ಯಾರೂ ನಮ್ಮ ಸಹಾಯಕ್ಕಿಲ್ಲ ಎಂಬ ಅಸಹಾಯಕತೆ.... ಇವೆಲ್ಲಾ ಭಯವನ್ನು ಮೂರ್ಪಟ್ಟು ಮಾಡಿಬಿಡುತ್ತವೆ. ಆಗ ಎಲ್ಲಾದರೂ ಒಂದೇ ಒಂದು ಸಣ್ಣ ಸದ್ದಾದರೂ ಸಾಕು, ಮೈಮೇಲಿನ ರೋಮಗಳು ಎದ್ದು ನಿಲ್ಲುತ್ತವೆ. ಅಂಥಾ ಕ್ಷಣಗಳು, ಈ ಭೂಮಿಯ ಮೇಲೆ ನಮಗಂಟಿಕೊಂಡಿರುವ ಜಾತಿ, ಭಾಷೆ, ಡಿಗ್ರಿಗಳು, ಸಂಬಂಧಗಳು, ಬ್ಯಾಂಕಿನಲ್ಲಿರುವ ಹಣ... ಇವೆಲ್ಲವುಗಳನ್ನು ಮರೆಸಿ, ನಾವೂ ಎಲ್ಲಾ ಪ್ರಾಣಿಗಳಂತೆಯೇ ಒಂದು ಪ್ರಾಣಿಯ ವರ್ಗ ಎಂಬುದನ್ನು ನೆನಪಿಸಿಕೊಡುತ್ತವೆ.

ಅವರಿಬ್ಬರೂ ಮೈಸೂರಿನಲ್ಲೇ ಹುಟ್ಟಿ ಬೆಳೆದವರು. ಅದೂ ರಂಗನಿಗೆ ಕಾಡಿನ ಪರಿಚಯ ಕಡಿಮೆ. ಅದರಲ್ಲೂ ಒಮ್ಮೆಲೇ ಅಂಥಾ ಕಾಡಿನಲ್ಲಿ ರಾತ್ರಿ ಓಡಾಟ ರಂಗನಿಗೆ ಸಹಜವಾಗಿ ನಡುಕ ಹುಟ್ಟಿಸಿತು. "ನಾನು ಸಾಯ್ಬೇಕು ಅಂತಿದ್ರೆ ಮೈಸೂರಲ್ಲೇ ಸಾಯುತ್ತಿದ್ದೆ. ಅಂತೂ ನಂಗೆ ಸತೀಶನ ಊರಲ್ಲೇ ಸಾಯ್ಬೇಕು ಅಂತಾ ಹಣೆಬರಹ ಇದೆ ಅನ್ಸತ್ತೆ. ಈ ಕತ್ತಲಲ್ಲಿ ಯಾವುದಾದ್ರು ಪ್ರಾಣಿ ಬಂದು ನನ್ನ ತಿಂದುಬಿಟ್ಟರೆ...ಮಕ್ಳಾ ಜಿಮ್ ಕಾರ್ಬೆಟ್ ಕಥೆ ಎಲ್ಲಾ ಹೇಳ್ಬೇಡ್ರೋ.. ಇಂದು ನನ್ನ ಹುಲಿ ತಿಂದುಬಿಟ್ರೆ ನನ್ ಬಾಡಿನ ಮೈಸೂರ್ ಗೆ ತಗೊಂಡು ಹೋಗ್ರೋ...", ಹೀಗೇ ತನ್ನ ಪ್ರಾಣ ಯಾವ ಯಾವ ರೀತಿ ಹೋಗಬಹುದೆಂದು ಕಲ್ಪಿಸುತ್ತಾ ಗಡಗಡಿಸತೊಡಗಿದ !!... ಗಡಗಡನೆ ನಡುಗುತ್ತಾ, ಬೆವರುತ್ತಿದ್ದ ರಂಗನಿಗೆ ನರಭಕ್ಷಕ ಹುಲಿಗಳ ಕಥೆಗಳನ್ನು ಇನ್ನಷ್ಟು ಹೇಳಿದೆವು. ನಾವು ಬಸ್ಟಾಪಿನ ಹತ್ತಿರದ ಪರ್ಸುವಿನ ಮನೆ ಮುಟ್ಟುವದರಲ್ಲಿ ರಂಗನ ಮಾತೇ ನಿಂತಿತ್ತು.

ಪರ್ಸುವಿನ ಮನೆಯಲ್ಲಿ ಸೈಕಲ್ ಟೈರ್ ನ ಬೆಂಕಿಯ ಪಂಜುಗಳನ್ನ ಮಾಡಿಸಿ, ಅದನ್ನೇ ಭೂತದ ಧಾರಾವಾಹಿಗಳಲ್ಲಿ ತೋರಿಸುವಂತೆ ಹಿಡಿದು ತಿರುಗಿ ಮನೆಯ ಕಡೆ ಹೊರಟರೆ, ರಂಗ "ಎಯ್ ಮಕ್ಳಾ ನಾನಂತೂ ಬರಲ್ಲಾ.. ಈಗ 11 ಗಂಟೆ ರಾತ್ರಿ ಆಯ್ತು.. ನಾನು ಇಲ್ಲೇ ಮಲ್ಕೋತೀನಿ" ಅಂತ ಹಠ ಹಿಡಿದ. ಅಂತೂ ಬೆಂಕಿ ಇರುವದರಿಂದ ಯಾವ ಪ್ರಾಣಿಯೂ ನಮ್ಮ ತಂಟೆಗೆ ಬರುವದಿಲ್ಲ ಎಂದು ಅವನ ಮನವೊಲಿಸಿ ಮನೆಗೆ ತಿರುಗಿ ಬಂದೆವು.

ರಂಗನಿಗೆ ಪ್ರಾಣ ಹೋಗಿ ಮತ್ತೊಮ್ಮೆ ಬಂದಂತಾಯಿತು!!!
ಆವತ್ತಿನ ರಾತ್ರಿಯ ಆ ’ವಾಕ್’ ಅನ್ನು ಕಾರ್ತಿಕ್, ರಂಗ ಹಾಗೂ ನಾನು ಎಂದಿಗೂ ಮರೆಯಲಸಾಧ್ಯ.

Tuesday, December 18, 2007

ಮಲೆನಾಡಿನ ಕಂಪು

ಮಲೆನಾಡಿನ ಮಾನ್ಸೂನ್ ಮಳೆಯ ಅರ್ಭಟದ ಭೀಕರತೆ ಅದನ್ನು ಅನುಭವಿಸಿದವರಿಗಷ್ಟೇ ಗೊತ್ತು.
ಸುತ್ತಲೂ ಕರಿಯ ಕಗ್ಗತ್ತಲ ಕಾಡು. ಕಪ್ಪಾದ ಮೋಡ ಆಗಸವನ್ನು ಆಕ್ರಮಿಸಿದರೆ ಸೂರ್ಯನನ್ನು ತಿರುಗಿ ಕಾಣಲು ೩ ರಿಂದ ೪ ತಿಂಗಳೇ ಕಾಯಬೇಕು. ಮಳೆಯ ಆರ್ಭಟಕ್ಕೆ ಮೇಲ್ಮಣ್ಣನ್ನೆಲ್ಲಾ ಕೊಚ್ಚಿಕೊಂಡು ಕೆಂಪಾಗಿ ರಭಸದಿಂದ ಹರಿಯುವ ಸಣ್ಣಪುಟ್ಟ ತೊರೆಗಳು. ಅಲ್ಲಲ್ಲಿ ಮತ್ತಿಮರ,ಕೌಲುಮರಗಳ ಮೇಲೆ ಬೆಳೆಯುತ್ತಿರುವ ಮರಕೆಸು. ಮಳೆಗಾಲದ್ದೇ ಆದ ಹೂಗಳಿಂದ ತುಂಬಿರುವ ಎಲ್ಲರ ಮನೆಯ ಹೂದೋಟಗಳು...
ಸರಿಯಾದ ಕಾಲುವೆಗಳಿಲ್ಲದೇ ರಸ್ತೆಯಲ್ಲಿಯೇ ನೀರು ಹರಿಹರಿದು ಕೊರಕಲು-ಮುರುಕಲು ರಸ್ತೆಗಳು.ರಸ್ತೆಯ ಮಣ್ಣು ನೀರಿಂದ ಬರುವ ಜಂಗನ್ನು ತಡೆಯಲು ಎಲ್ಲರ ವಾಹನಗಳ ಚಕ್ರಕ್ಕೆ ಬಡಿದ ಹಳದಿ ಪೇಂಟು. ಇನ್ನು ಕೆಲಸದವರಂತೂ ಕಂಬಳಿಯ ಕೊಪ್ಪೆಯನ್ನು ಮಾಡಿಕೊಂಡು ಅದನ್ನು ಬೆನ್ನಿಗೆ ಹೊದ್ದು ಗದ್ದೆಯ ಕೆಲಸಕ್ಕೆ ಹೊರಡುತ್ತಾರೆ.
ತೋಟಗಳಲ್ಲಿ ಮಳೆಗಾಲದಲ್ಲಿ ಮಾತ್ರ ಬದುಕುವ ಉಂಬಳಗಳ ಕಾಟ. ಮನೆಯ ಅಂಗಳವಂತೂ ಕುರ್ಲಿ, ಚ್ವಾರಟೆ ಹುಳ, ನಂಜುಳೆ (ಎರೆಹುಳು) ಗಳ ಸಾಮ್ರಾಜ್ಯ.. ಪರ್ಸು ಮತ್ತು ಅವನ ಕಡೆಯವರು ಕುರ್ಲಿಯ ಚಟ್ನಿ ಮತ್ತು ಸಾರು ಬಹಳ ರುಚಿ ಇರುತ್ತದೆ ಎಂದು ಹೇಳುತ್ತಾರೆ..!!!
ಗದ್ದೆಯನ್ನು ಉಳಲು ವರ್ಷದಂತೆ ಜೋರು ತಯಾರಿ. ಹಾಳಾಗಿರುವ ಟ್ರ್ಯಾಕ್ಟರ್ ನ ರಿಪೇರಿ, ಉತ್ತ ಗದ್ದೆಯ ನೆಲವನ್ನು ಸಮಾನಾಂತರ ಮಾಡಲು ಬಳಸುವ ಎತ್ತುಗಳಿಗೆ ಭರ್ಜರಿ ಊಟ. ಭತ್ತವನ್ನು ಬಿತ್ತಲು ಬಳಸುವ ಒಳ್ಳೇ ಜಾತಿಯ ಭತ್ತದ ಬೀಜದ ಹುಡುಕಾಟ.

more to follow in coming days....