Showing posts with label ಸುಮ್ಮನೇ. Show all posts
Showing posts with label ಸುಮ್ಮನೇ. Show all posts

Saturday, December 20, 2014

ಪಲಾವ್ ಮಹಾತ್ಮೆ

ಈ ಪಲಾವನ್ನು ಯಾರು ಮೊದಲಿಗೆ ಕಂಡುಹಿಡಿದರೋ ಗೊತ್ತಿಲ್ಲ. ಅವರಿಗೆ ಪುಣ್ಯ ಬರಲಿ ಎಂದು ಆಶಿಸುತ್ತೇನೆ. ಏಕೆಂದರೆ ನಮ್ಮಂಥಹ ಅರೆಬರೆ ಬಾಣಸಿಗರ ಹೊಟ್ಟೆಯ ಹಸಿವನ್ನು ನೀಗಿಸುತ್ತಿದೆಯಲ್ಲವೇ ಈ ಪಲಾವ್ ಎಂಬ ಮಹಾನ್ ಅಡುಗೆ. !!!

ಮೊದಲಿಗೆ ಕಾಲೇಜಿನ ದಿನಗಳಲ್ಲಿ ನಾನು ಅಡುಗೆ ಮಾಡಲು ಶುರು ಮಾಡಿದಾಗ ಸಾರು, ಹುಳಿ, ತಂಬುಳಿ, ಗೊಜ್ಜು, ಪಲ್ಯ ಇತ್ಯಾದಿ ಇತ್ಯಾದಿ ಕ್ಲಿಷ್ಟಕರವಾದ ಅಡುಗೆಗಳನ್ನು ತಯಾರಿಸಲು ಪ್ರಯತ್ನಪಡುತ್ತಾ ಕೈಸುಟ್ಟುಕೊಳ್ಳುತ್ತಿದ್ದೆ. ನನ್ನ ದುರಾದೃಷ್ಟವೋ ಏನೋ, ನನ್ನ ಹಸ್ತದಲ್ಲಿ ನಳರೇಖೆ ಇಲ್ಲ ಎಂಬುದು ಬರಬರುತ್ತಾ ನನಗೇ ಅರಿವಾಗತೊಡಗಿತು. ಒಂದು ದಿನ ಅಡುಗೆಯಲ್ಲಿ ಉಪ್ಪು ಜಾಸ್ತಿ ಆದರೆ ಇನ್ನೊಂದು ದಿನ ಹುಳಿ ಕಡಿಮೆ ಆಗುತ್ತಿತ್ತು. ದಿನವೂ ಒಂದೇ ಕ್ವಾಲಿಟಿಯ ಅಡುಗೆ ಮಾಡುವದು ನನ್ನಿಂದ ಸಾಧ್ಯವಿಲ್ಲದ ಕೆಲಸ ಎಂಬುದು ಅರಿವಾಗತೊಡಗಿತು. ಮೊದಮೊದಲಿಗೆ ನನ್ನ ಅಡುಗೆ ಪ್ರಯತ್ನಗಳು ಶುರುವಾದಾಗ ರೂಮಿಗೆ ಊಟಕ್ಕೆಂದು ಧಾಳಿ ಇಡುತ್ತಿದ್ದ ಗೆಳೆಯರೂ ನನ್ನ ಅಡುಗೆಯ ರುಚಿಯನ್ನು ಒಂದೆರಡು ಸಲ ಸವಿದಮೇಲೆ ನಿಧಾನವಾಗಿ ಊಟಕ್ಕೆ ಬರುವದನ್ನು ನಿಲ್ಲಿಸಿದರು. ನನಗೂ ನಾನು ಮಾಡಿದ ಅಡುಗೆಯನ್ನೇ ತಿನ್ನುವದೂ ಕಷ್ಟವೆನಿಸತೊಡಗಿತು. ಎಲ್ಲರೂ ಒಗ್ಗರಣೆಗೆ ಹಾಕುವುದು ಅದೇ ಎಣ್ಣೆ, ಸಾಸಿವೆ, ಜೀರಿಗೆ, ಮೆಣಸು...ನಾನು ಹಾಕುವುದೂ ಅದನ್ನೇ...ಆದರೆ ನನ್ನ ಅಡುಗೆ ಯಾಕೆ ರುಚಿ ಆಗುವದಿಲ್ಲ? ಎಂಬುದು ಒಂದು ಯಕ್ಷಪ್ರಶ್ನೆಯಾಗಿ ಕಾಣಿಸುತ್ತಿತ್ತು...ದಿನವೂ ಹೊರಗಡೆ ತಿಂದರೆ ಆರೋಗ್ಯ ಕೆಡುತ್ತದೆ...ಮನೆಯಲ್ಲಿ ಮಾಡಿದ್ದು ತಿನ್ನಲು ರುಚಿಸುವದಿಲ್ಲ...

ಇಂಥಹ ಒಂದು ಇಕ್ಕಟ್ಟಿನ ಸಮಯದಲ್ಲಿ ನನಗೊಂದು ಮ್ಯಾಜಿಕ್ ರೆಸಿಪಿಯ ಅಗತ್ಯವಿತ್ತು... ಅನ್ನವಂತೂ ಊಟದಲ್ಲಿ ಇರಲೇಬೇಕು...ತರಕಾರಿಗಳೂ ಹೇರಳವಾಗಿ ಊಟ ಎಂದರೆ ಇರಲೇಬೇಕು...ಅಡುಗೆ ಸ್ಪೈಸಿಯಾಗೂ ಇರಬೇಕು...ಮಜ್ಜಿಗೆಯ ಜೊತೆಗೂ ತಿನ್ನುವಂತಿರಬೇಕು... ಪ್ರತಿ ಸಲ ಮಾಡಿದಾಗಲೂ ರುಚಿ ಒಂದೇ ಥರವಾಗಿರಬೇಕು...ಹತ್ತೇ ನಿಮಿಷದಲ್ಲಿ ಅಡುಗೆ ಮಾಡಿ ಮುಗಿಯಬೇಕು....

ಅಂಥಾ ಒಂದು ಸಂಧಿಗ್ದ ಪರಿಸ್ಥಿತಿಯಲ್ಲಿ ನನಗೆ ಒಲಿದ ಅಡುಗೆಯೇ ಪಲಾವು....!!!

ನಾನು ಮತ್ತು ದಿನೇಶ ಪುಣೆಯ ಮನೆಯಲ್ಲಿ ವೀಕೆಂಡಿನಲ್ಲಿ ವಿಧವಿಧವಾದ ತರಕಾರಿಗಳನ್ನು ಹಾಕಿ, ವಿಧವಿಧವಾದ ಪಲಾವನ್ನು ತಯಾರಿಸಿ ಸವಿಯುತ್ತಿದ್ದೆವು...ಅವನಂತೂ ನನ್ನ ಅಡುಗೆಯ ಅದರಲ್ಲೂ ಪಲಾವಿನ ರುಚಿಯನ್ನು ಸವಿಸವಿದು ನನ್ನ ಫ್ಯಾನ್ ಆಗಿಬಿಟ್ಟಿದ್ದ...:) ಬೆಂಗಳೂರಿನಲ್ಲಿ ನನ್ನ ರೂಂಮೇಟ್ ಆಗಿದ್ದ ಸುನೀಲನಂತೂ ದಿನವೂ ನಾನು ಮಾಡಿದ ಪಲಾವನ್ನು ತಿಂದೂ ತಿಂದೂ ದಿನಕಳೆದಂತೆ ಸ್ಲಿಮ್ ಆಗುತ್ತಲೇ ಇದ್ದ :)

ನನ್ನ ಮನೆಗೆ ಒಮ್ಮೆ ಗೆಳೆಯ ರಘು ಬಂದಿದ್ದ... ಅತ ಅಡುಗೆಯಲ್ಲಿ ಮಹಾ ನಿಪುಣ.... ಎಂಥಹ ಅಡುಗೆಯನ್ನೂ ಲೀಲಾಜಾಲವಾಗಿ ಮಾಡಬಲ್ಲ. ಆತ ಮಾತ್ರ ನನ್ನ ಪಲಾವಿನ ರುಚಿಯನ್ನು ಸವಿದು "ನಿಂಗೆ ಪಲಾವ್ ಮಾಡ್ಲೇ ಬತ್ಲೆ ವಯಾ...ದೋಸ್ತಾ...ಇದ್ಕೆ ಪಲಾವ್ ಪೌಡರು ಹಾಕವೋ ಮಾರಾಯಾ...ಇಲ್ಲೆ ಅಂದ್ರೆ ಎಂಥಾ ರುಚಿನೂ ಆಗ್ತ್ಲ್ಯೋ..." ಎನ್ನುತ್ತಾ ನಾನು ಮಾಡುತ್ತಿದ್ದ ಪಲಾವಿನ ರೆಸಿಪಿಯನ್ನು ಸಾರಾಸಗಟಾಗಿ ತಿರಸ್ಕರಿಸಿಬಿಟ್ಟ !!! ಅಂದಿನಿಂದಲೇ ನನಗೆ ಅರಿವಿಗೆ ಬಂದಿದ್ದು MTR ಪಲಾವ್ ಪೌಡರಿನ ಮಹಿಮೆ!!!

ಅಂದಿನಿಂದ ಇಂದಿನವರೆಗೂ ನನ್ನ ಗೆಳೆಯರಿಗೆ ಅದ್ಭುತವಾದ ಪಲಾವಿನ ರುಚಿಯನ್ನು ತೋರಿಸಿದ್ದೇನೆ... ಅನೇಕರು ನನ್ನ ಪಲಾವಿನ ರೆಸಿಪಿಯನ್ನು ಕಾಪಿ ಮಾಡಿ ಅದು ಅವರೇ ಕಂಡುಹಿಡಿದ ಪಲಾವಿನ ರೆಸಿಪಿ ಎಂದು ಹೇಳಿಕೊಳ್ಳುತ್ತಾರೆ...

ಒಂದು ದಿನ ನೆಂಟರಿಷ್ಟರೆಲ್ಲಾ ಮನೆಗೆ ಬಂದಾಗ ನಾನು "ಪಲಾವ್" ಮಾಡಿದ್ದೆ...ಬಂದವರಲ್ಲಿ ಗಂಡಸರೆಲ್ಲಾ ನನ್ನ ಪಲಾವ್ ರುಚಿಯನ್ನು ಸವಿದು, ತಮ್ಮ ಹೆಂಡಂದಿರಿಗೆ "ಪಲಾವ್ ಮಾಡಿದ್ರೆ ಹಿಂಗ್ ಮಾಡವು..." ಎಂದು ಹೇಳಿ ನನಗೆ 'ಪಲಾವ್' ಸರ್ಟಿಫಿಕೇಟ್ ಕೊಟ್ಟುಬಿಟ್ಟರು...

ದೂರದ ಅಮೇರಿಕದ ಹೋಟೆಲ್ಲಿನ ಅಡುಗೆ ಮನೆಯಲ್ಲಿ ಮತ್ತೆ ನನ್ನ ಪಲಾವು ಘಮಘಮಿಸುತ್ತಿತ್ತು.... ನನ್ನ ಆರೋಗ್ಯ ಹಾಳಾಗದಂತೆ...ಬಾಯಿರುಚಿ ಎಂದಿಗೂ ಸಪ್ಪೆಯಾಗದಂತೆ...ದಿನವೂ ನನ್ನ ಹೊಟ್ಟೆ ತುಂಬಿಸುತ್ತಿರುವ ಅಮೃತಸಮಾನವಾದ ಪಲಾವಿಗೆ ಈ ಬ್ಲಾಗ್ ಬರಹವನ್ನು ಅರ್ಪಿಸುತ್ತಿದ್ದೇನೆ....

Friday, March 7, 2014

ತಮ್ಮನಲ್ಲದ ತಮ್ಮ

ಇದು ಎಲ್ಲಾ ಕಥೆಗಳಿಗಿಂತ ಸ್ವಲ್ಪ ದೊಡ್ಡದು ಹಾಗೂ ವಿಚಿತ್ರ ತಿರುವುಗಳಿಂದ ಕೂಡಿದೆ ಎನ್ನಬಹುದು!

ನಾನು ಕೆಲ ವರ್ಷಗಳ ಹಿಂದೆ ಹೊಸ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿ ಪುಣೆ ನಗರಿಗೆ ತೆರಳಿದೆ. ಆ ಕಂಪೆನಿಯವರು ನನಗೆ ಒಂದು ಹೋಟೆಲ್ಲಿನಲ್ಲಿ ಉಳಿಸಿ ನಂತರ ಒಂದು ತಿಂಗಳೊಳಗೆ ಎಲ್ಲಾದರೂ ಬಾಡಿಗೆ ಮನೆಯನ್ನು ಹುಡುಕಿಕೊಳ್ಳುವಂತೆ ಸಲಹೆ ಮಾಡಿದ್ದರು. ಆದರೆ ಪುಣೆಯಲ್ಲಿ ಬಾಡಿಗೆ ಮನೆ ಹುಡುಕಲು ಬೇರೆ ಭಾಷೆ, ಅಪರಿಚಿತ ನಗರ ಇವೆಲ್ಲ ವಿಷಯಗಳು ಅಷ್ಟೆಲ್ಲಾ ಅಡ್ಡಿಯಾಗಲಿಲ್ಲದಿದ್ದರೂ ನಾನು ಒಬ್ಬ ಬ್ಯಾಚುಲರ್ ಹುಡುಗ ಎಂಬುದು ನನ್ನ ಊಹೆಗೂ ಮೀರಿದ ಘನಘೋರ ತೊಂದರೆಯಾಗಿ ಪರಿಣಮಿಸಿತು.! ಉತ್ತರ ಭಾರತದ ಬ್ಯಾಚುಲರ್ ಪಡ್ಡೆ ಹುಡುಗರ ಚೇಷ್ಟೆಗಳಿಂದ ಬೇಸತ್ತ ಪುಣೆಯ ಮನೆಯ ಓನರುಗಳು ಏನೇ ಆದರೂ ಮದುವೆಯಾಗದ ಹುಡುಗರಿಗೆ ಮನೆ ಕೊಡಬಾರದು ಎಂದು ನಿರ್ಧರಿಸಿಬಿಟ್ಟಿದ್ದರು. ಬಾಡಿಗೆ ಮನೆಗಳನ್ನು ಹುಡುಕಿ ಕೊಡುವ ರಿಯಲ್ ಎಸ್ಟೇಟ್ ಏಜೆಂಟರನ್ನು ಹಿಡಿದು ಎಷ್ಟು ಅಲೆದರೂ ದಿನದ ಕೊನೆಗೆ ಎಂದಿನಂತೆ ಮನೆ ಸಿಗದೇ ನಿರಾಶೆಯಿಂದ ಹೋಟೆಲ್ಲಿಗೆ ಮರಳುವದು ಸಾಮಾನ್ಯ ಸಂಗತಿಯಾಗಿಬಿಟ್ಟಿತ್ತು.  ಹಾಗೇ ಒಂದು ದಿನ ಏಜೆಂಟರುಗಳು ನನ್ನನ್ನು "ಮನೆ ಬಾಡಿಗೆಗೆ ಇದೆ" ಎಂದು ಬರೆದಿದ್ದ ಕೊತ್-ರೋಡ್ ಏರಿಯಾದ ಒಂದು ಮನೆಗೆ ಕರೆದು ತಂದರು. ಆ ಮನೆಯ ಮಾಲೀಕ ಬಾಗಿಲಲ್ಲೇ ನಿಂತು ನನ್ನನ್ನು ಕೇಳಿದ, "ಆಪ್ ಕಾ ಫ್ಯಾಮಿಲಿ ಹೈ ಕ್ಯಾ"... ನಾನು, "ನಹೀ" ಎಂದೆ...ಕೂಡಲೇ ಆ ಮಾಲೀಕ ಪುಣ್ಯಾತ್ಮ "ತೋ ಆಪ್ ಕೋ ಇಧರ್ ಆನೇ ಕಾ ಜರೂರತ್ ನಹೀ ಹೈ" ಎಂದು ಸಿಟ್ಟಿನಲ್ಲಿ ಹೇಳುತ್ತಾ ಮನೆಯ ಬಾಗಿಲನ್ನು ಧಡಾರನೇ ಹಾಕಿಬಿಟ್ಟ!!! :) ದಿನಕಳೆದಂತೆ ನನಗೆ ಮತ್ತು ನನಗೆಂದು ಮನೆ ಹುಡುಕುತ್ತಿದ್ದ ಏಜೆಂಟರುಗಳಿಗೆ ಪರಿಸ್ಥಿತಿಯ ನಿಜವಾದ ಬಿಸಿ ಮುಟ್ಟತೊಡಗಿತು. ಹಾಗೇ ಒಂದು ದಿನ ಕರ್ವೇ ರೋಡಿನ ನಲ್-ಸ್ಟಾಪಿನಲ್ಲಿರುವ 'ಸಮುದ್ರ' ಹೋಟೇಲಿನಲ್ಲಿ ಕುಳಿತು ಏಜೆಂಟರುಗಳೊಡನೆ ಈ ಸಮಸ್ಯೆ ಬಗೆ ಹರಿಸಲು, ಬಿಸಿ ಬಿಸಿ ಚಹಾ ಹೀರುತ್ತಾ, ಸುದೀರ್ಘವಾದ ಮಂತ್ರಾಲೋಚನೆ ನಡೆಸಿ ಅಂತೂ ಎಲ್ಲರೂ ಸೇರಿ ಬಾಡಿಗೆ ಮನೆಯ ಓನರುಗಳ ಮನವೊಲಿಸಲು ಒಂದು ಸಂಚು ಹೂಡಿದೆವು.

ಮರುದಿನ ಕರ್ವೇ ರೋಡಿನ ಎರಾಂಡವಾನ ಎಂಬ ಏರಿಯಾದಲ್ಲಿ, ಸ್ವೀಟ್ ಹೋಮ್ ಎಂಬ ಸೊಸೈಟಿಯಲ್ಲಿನ ಬಾಡಿಗೆ ಮನೆಯ ಮಾಲೀಕರನ್ನು ಭೇಟಿಯಾದೆವು. ಎಲ್ಲರಂತೆ ಈ ಓನರ್ ಸಹಾ ತೆಗೆದ ಬಾಯಿಗೇ "ಆಪ್ ಶಾದೀಶುದಾ ಹೈ ಕ್ಯಾ...?" ಎಂದು ಮುಂತಾಗಿ ಕೇಳತೊಡಗಿದರು... ಕೂಡಲೇ ನಮ್ಮ ಏಜೆಂಟರುಗಳು "ಸರ್ ಕಾ ಶಾದಿ ಫಿಕ್ಸ್ ಹೊಗಯಾ ಹೈ, ದೋ ತೀನ್ ಮಹೀನೆ ಮೆ ಹೋ ಜಾಯೇಗಾ" ಎಂದು ಭರವಸೆ ನೀಡಿದರು..! ಇಷ್ಟು ಕೇಳಿದ ಮೇಲೆ ಸ್ವಲ್ಪ ತಣ್ಣಗಾದ ನಮ್ಮ ಓನರು ಉಳಿದ ಮಾತನ್ನೆಲ್ಲಾ ಆಡಿ, ಅಂತೂ ನನಗೆ ಮನೆಯನ್ನು ಬಾಡಿಗೆ ಕೊಡಲು ಒಪ್ಪಿದರು!!!... ನಾನೂ ಸಹ ಬದುಕಿದೆಯಾ ಬಡಜೀವವೇ ಎಂದು ಒಂದು ನಿಟ್ಟುಸಿರು ಬಿಟ್ಟು ಪುಣೆ ನಗರಿಯಲ್ಲಿ ಸುಖವಾಗಿ ಬದುಕಿದೆ :)
........  .....

ಕಾಲಾನಂತರದಲ್ಲಿ ಮತ್ತೆ ನಾನು ಬೆಂಗಳೂರಿಗೆ ವಾಪಸ್ಸು ಬಂದಾಗಲೇ ನನಗೆ ಅರಿವಾಗಿದ್ದು, ಬೆಂಗಳೂರಿನ ಬಾಡಿಗೆ ಮನೆ ಓನರುಗಳೂ ಪಾಪ ಪುಣೆಯ ಓನರುಗಳಂತೆಯೇ ಬ್ಯಾಚುಲರ್ ಭಯದಂದ ತತ್ತರಿಸಿ ಹೋಗಿದ್ದಾರೆ ಎಂದು!!! ನಮ್ಮ ಕಂಪೆನಿ ವೈಟ್-ಫೀಲ್ಡ್ ನಲ್ಲಿ ಇದ್ದಿದ್ದರಿಂದ ಹತ್ತಿರದಲ್ಲಿರುವ ಬಿ.ಇ.ಎಂ.ಎಲ್ ಬಡಾವಣೆಗೆ ಮನೆ ಹುಡುಕಲು ಬಂದೆ. ಇಲ್ಲಿನ ಮನೆ ಹುಡುಕುವ ಏಜೆಂಟನಾದ 'ರವಿ'ಯ ಹತ್ತಿರ ನಮಗೆ ಒಂದು ಒಳ್ಳೆಯ ಮನೆ ಹುಡುಕಿ ಕೊಡುವಂತೆ ದಂಬಾಲು ಬಿದ್ದೆ. ಆದರೆ ಆತ ಮಾತ್ರ ನನ್ನೆಡೆಗೆ ಸ್ವಲ್ಪವೂ ಕರುಣೆ ತೋರದೇ, "ಸಾರ್ ಈ ಲೇಓಟ್ ನಲ್ಲಿ ಮೊನ್ನೆ ಮೊನ್ನೆ ನಾರ್ಥ್ ಇಂಡಿಯಾದ ಬ್ಯಾಚುಲರ್ ಹುಡುಗರುಗಳು ಮಧ್ಯರಾತ್ರಿಲಿ ಕುಡಿದು, ಡ್ಯಾನ್ಸ್ ಮಾಡಿ ದೊಡ್ಡ ರಂಪಾಟ ಮಾಡಿದಾರೆ ಸಾರ್. ಅದಾದ ಮೇಲಿಂದ ಬ್ಯಾಚುಲರ್ ಹುಡುಗರಿಗೆ ಮನೆ ಬಾಡಿಗೆ ಸಿಗೋ ಛಾನ್ಸೇ ಇಲ್ಲಾ ಬಿಡಿ, ಇದು ಫ್ಯಾಮಿಲಿಗಳಿರೋ ಏರಿಯಾ. ಇಲ್ಲಿ ಎಲ್ಲಾ ಮದುವೆ ಆಗದೇ ಇದ್ದರೆ ಮನೆ ಬಾಡಿಗೆಗೆ ಸಿಗೋದೇ ಎಲ್ಲಾ..." ಎಂಬ ನೀರಸ ಮಾತುಗಳನ್ನಾಡಿದ. ನಾನು "ಇದು ಹೇಗೆ ಸಾರ್, ಈ ಓನರುಗಳೆಲ್ಲಾ ಮೊದಲೊಂದು ದಿನ ಬ್ಯಾಚುಲರ್ ಗಳೇ ಆಗಿದ್ದರು ತಾನೇ...ಮದುವೆ ಆದರೆ ಮಾತ್ರ ಮನೆ ಬಾಡಿಗೆಗೆ ಸಿಗುತ್ತದೆ ಎಂದಾದರೆ ಇದು ಯಾವ ನ್ಯಾಯ ಸಾರ್" ಎಂದು ಅವಲತ್ತುಕೊಂಡೆ...

ಈ ಶೀರ್ಷಿಕೆಯ ಆಕರ್ಷಣೆಯಾದ, "ಸುನೀಲ" ನನ್ನ ದೂರದ ಸಂಬಂಧಿ ಕೂಡಾ ಹೌದು. ಪುಣೆಯಿಂದ ಬಂದ ಮೇಲೆ, ಬೆಂಗಳೂರಿನಲ್ಲಿ ಹೊಸ ಬಾಡಿಗೆ ಮನೆ ಸಿಕ್ಕ ಮೇಲೆ, ಆತ ನನ್ನ ರೂಮೇಟ್ ಆಗುತ್ತೇನೆಂದು ಅಭಯ ನೀಡಿದ್ದ. ಆತ ನನಗೆ ಹೋಲಿಸಿದರೆ ಸುಮಾರಿಗೇ ತೆಳ್ಳನೆಯ ಶಾರೀರ ಹೊಂದಿದ್ದರಿಂದ, ನಿಜವಾದ ತಮ್ಮ ಅಲ್ಲದಿದ್ದರೂ ಆತನನ್ನು ನನ್ನ ತಮ್ಮನನ್ನಾಗಿ ಮಾಡಬೇಕಾಗಿ ಬಂತು:)

ಫ್ಯಾಮಿಲಿ ಅಂದರೆ ಮದುವೆಯೇ ಆಗಿರಬೇಕೆಂದೇನಿಲ್ಲ, ಅಣ್ಣ ತಮ್ಮ ಎಲ್ಲರೂ ಕುಟುಂಬದವರೇ ಎಂದು ಏಜೆಂಟನಾದ ರವಿಯ ಮನವೊಲಿಸಿ ನಮ್ಮ ಈಗಿನ ಮನೆಯ ಓನರನ್ನು ಭೇಟಿಯಾಗಲು ಬಂದೆವು. ಯಥಾಪ್ರಕಾರ ಅವರು "ಓ ಬ್ಯಾಚುಲರಾ...ಇಲ್ಲ...ಇಲ್ಲಾ..ಮನೆ ಖಾಲಿ ಇಲ್ಲಾ" ಎಂದು ಹೇಳತೊಡಗಿದರು...ಆಗ ಕೂಡಲೇ ರವಿ ಭಾವಪರವಶನಾಗಿ, "ಸಾರ್ ಗೆ ಒಂದು ತಮ್ಮ ಇದಾನೆ..ತುಂಬಾ ಚಿಕ್ಕಂದಿನಿಂದಲೂ ಇವರೇ ಆತನಿಗೆ ಓದಿಸಿ ಬೆಳೆಸಿದವರು...ನೋಡಿ ನೀವು ಅಕಸ್ಮಾತ್ ಫ್ಯಾಮಿಲಿಗೇ ಬಾಡಿಗೆ ಕೊಟ್ಟರೆ ಅವರು ನೀರು ಜಾಸ್ತಿ ಖರ್ಚು ಮಾಡ್ತಾರೆ, ಜನರೂ ಜಾಸ್ತಿ ಬರ್ತಾರೆ...ಪಾಪ ಅಣ್ಣ ತಮ್ಮ ಒಳ್ಳೆಯವರು ಇರ್ಲಿ ಬಿಡಿ.. ಇದೂ ಒಂಥರಾ ಫ್ಯಾಮಿಲೀನೇ.." ಎಂದೆಲ್ಲಾ ಮನವೊಲಿಕೆಯ ಮಾತುಗಳನ್ನಾಡಿದ. ರವಿಯ ಮಾತುಗಳಿಗೆ ಮಣಿದ ಮನೆಯ ಓನರು ನಮಗೆ ಅಂತೂ ಷರತ್ತುಬದ್ಧವಾಗಿ ಮನೆಯನ್ನು ಬಾಡಿಗೆಗೆ ಕೊಟ್ಟರು. ನಾನೂ ಕೂಡ ಈ "ತಮ್ಮ" ಎಂಬ ವಿಷಯ ಇಷ್ಟೆಲ್ಲಾ ಕೆಲಸ ಮಾಡುತ್ತದೆ ಅಂದುಕೊಂಡಿರಲಿಲ್ಲ. ಅಂತೂ ಸುನೀಲನ ಅಣ್ಣನಲ್ಲದ ಅಣ್ಣನಾಗಿ ನಾನೂ ಹಾಗೂ ತಮ್ಮನಲ್ಲದ ತಮ್ಮನಾಗಿ ಸುನೀಲನೂ ಇಬ್ಬರೂ ಬೆಂಗಳೂರಿನ ಹೊಸ ಬಾಡಿಗೆ ಮನೆಯಲ್ಲಿ ಠಿಕಾಣಿ ಹೂಡಿದೆವು.


ಈಗಲೂ ನನ್ನ ಕಂಡಕೂಡಲೇ ಓನರ್ ಆಂಟಿ "ತಮ್ಮ ಎಲ್ಲಿ..ಮನೆಗೆ ಬಂದಿಲ್ವಾ ಇನ್ನೂ..?" ಎಂದು ಕೇಳುತ್ತಾರೆ. ನಾನು ಎಂದಿನಂತೆ 'ಇದ್ಯಾವ ತಮ್ಮನಪ್ಪಾ' ಎಂದು ಒಂದು ಕ್ಷಣ ಕನವರಿಸಿ,..ಆಮೇಲೆ ಈ ತಮ್ಮನ ನೆನಪಾಗಿ ..."ಓ ಇಲ್ಲಾ ಆಂಟಿ, ಇನ್ನು ಬಂದಿಲ್ಲಾ..." ಎನ್ನುತ್ತೇನೆ:)

ಮೊನ್ನೆ ಸುನೀಲನ ಅಪ್ಪ ಮನೆಗೆ ಬಂದಿದ್ದರಂತೆ, ಆ ವಿಷಯ ನನಗೆ ತಿಳಿದಿರಲಿಲ್ಲ. ಮನೆಗೆ ಬಂದಕೂಡಲೇ ಆಂಟಿ ಕೇಳಿದರು, "ಸತೀಶ್ ತಂದೆಯವರು ಬಂದಿದ್ದ್ರಲ್ಲಾ, ಇದಾರಾ ಇನ್ನೂ..?" ಅಂತ. ನಾನು ಥಟಕ್ಕನೇ .."ತಂದೆ...? ಯಾವ ತಂದೆ..? ಯಾರ ತಂದೆ ಬಂದಿದ್ದ್ರು...?" ಅಂತ ಕೇಳಿಬಿಟ್ಟೆ !!! ಅದನ್ನು ಕೇಳಿದ ಆಂಟಿ ಕೂಡಲೇ "ನಿಮ್ಮ ತಂದೆ ಬಂದಿರೋದು ನಿನಗೇ ಗೊತ್ತಿಲ್ವಾ..ನಿನ್ನ ತಮ್ಮ ಪರಿಚಯ ಮಾಡಿಸಿಕೊಟ್ಟ...!" ಎಂದು ಹೇಳುತ್ತಾ ನನ್ನೆಡೆಗೆ ವಿಚಿತ್ರವಾಗಿ ನೋಡಿದರು... ಕೂಡಲೇ ನನ್ನಿಂದ ಆದ ಎಡವಟ್ಟನ್ನು ಸರಿಮಾಡಲು, "ಓ..ಓ..ಮರೆತೇಹೋಗಿತ್ತು ಆಂಟಿ, ತುಂಬಾ ಕೆಲ್ಸ ಅಲ್ವಾ..ತಲೆ ಎಲ್ಲೋ ಇರತ್ತೆ..." ಎಂದು ಸಮಜಾಯಿಸಿ ನೀಡಿದೆ. ಅದಕ್ಕೆ ಅವರು,"ಏನಪ್ಪಾ ನೀವು..." ಎಂದು ಹೇಳುತ್ತಾ ಹೊರಟುಹೋದರು. ಸದ್ಯ ನಮ್ಮಿಬ್ಬರ ಅಣ್ಣ-ತಮ್ಮ ನಾಟಕ ಬಯಲಾಗಲಿಲ್ಲವಲ್ಲ ಅಂತ ನಿಟ್ಟುಸಿರು ಬಿಟ್ಟು ಅಂತೂ ಬೀಸುವ ದೊಣ್ಣೆಯೊಂದು ತಪ್ಪಿತು ಎಂದುಕೊಂಡೆ.

ನಮ್ಮ ಆಫೀಸಿನಲ್ಲಿ ಮೊನ್ನೆ ಫ್ಯಾಮಿಲಿ ಡೇ ಇತ್ತು. ನಮ್ಮ ಅಣ್ಣ-ತಮ್ಮಂದಿರ ಕಥೆ ಗೊತ್ತಿರುವದರಿಂದ ಆಫೀಸಿನಲ್ಲಿ ಎಲ್ಲರೂ 'ನಿನ್ನ ತಮ್ಮನನ್ನು' ಫ್ಯಾಮಿಲಿ ಡೇ ಗೆ ಕರೆದುಕೊಂಡು ಬಾ ಎಂದು ದಂಬಾಲು ಬೀಳುತ್ತಾ ಕಾಡಿಸುತ್ತಿದ್ದರು. :)

Saturday, October 19, 2013

ಬ್ಲುಜೀನ್ಸ್ (Bluejeans) ಕಥೆಗಳು

ಸ್ವಲ್ಪ ದಿನಗಳ ಹಿಂದೆ ನಾನು ಬ್ಲುಜೀನ್ಸ್ ಎಂಬ ಕಂಪೆನಿಗೆ ಕೆಲಸಕ್ಕೆ ಸೇರಿಕೊಂಡೆ. ಈಗೀಗ ಕಂಪೆನಿಯ ಬಾಸುಗಳು ಕಂಪೆನಿ ಶುರು ಮಾಡಿದಾಗ ಅದಕ್ಕೆ ವಿಚಿತ್ರ ಹೆಸರುಗಳನ್ನು ಇಡುತ್ತಾರೆ. ಹೆಸರು ವಿಚಿತ್ರವಾಗಿದ್ದರೆ ಜನರ ಮನಸ್ಸಿನಲ್ಲಿ ಅದು ಅಚ್ಚೊತ್ತಿ ಉಳಿಯುತ್ತದೆ ಎಂಬುದು ಅವರ ಆಂಬೋಣ. ಮಾಡುವದು ಸಾಫ್ಟ್ ವೇರ ಕೆಲಸವಾದರೂ, 'ಒಳ್ಳೆಯ' ಹಾಗೂ 'ವಿಚಿತ್ರ' ಹೆಸರು ಇಡಬೇಕೆಂದು ನಿರ್ಧರಿಸಿ ನಮ್ಮ ಕಂಪನಿಗೆ 'ಬ್ಲುಜೀನ್ಸ್' ಎಂದು ನಾಮಕರಣ ಮಾಡಿಬಿಟ್ಟರು. ಅಲ್ಲಿಂದ ಶುರುವಾಯಿತು ನಮ್ಮ ಬ್ಲುಜೀನ್ಸ್ ಕಥೆಗಳು...:)

ನಾನು ಯಾವ ಕಂಪೆನಿಯಲ್ಲಿ ಕೆಲಸ ಮಾಡುತ್ತೇನೆ, ಅಲ್ಲಿ ಎಷ್ಟು ಸಂಬಳ, ಊಟ ಫ್ರೀಯಾಗಿ ಕೊಡುತ್ತಾರೋ ಇಲ್ಲವೋ ಇತ್ಯಾದಿ ವಿಚಾರಗಳು ನಾನು ದಿನಾಲೂ ಕುಡಿಯುವ ಟೀ ಅಂಗಡಿಯ ಮಲ್ಲುವಿಗೆ ನನಗಿಂತಲೂ ಚೆನ್ನಾಗಿ ತಿಳಿದಿರುತ್ತದೆ.!!  ನನ್ನ ಹಳೆಯ ಕಂಪೆನಿ ಮುಚ್ಚಿ, ನಾನು ಹೊಸ ಕಂಪೆನಿಗೆ ಸೇರಿದ್ದು ಈ ಮಲ್ಲುವಿಗೆ ಹೇಗೆ ತಿಳಿಯಿತೋ ಗೊತ್ತಿಲ್ಲ, ಆಸಾಮಿ ಒಂದು ದಿನ ಟೀ ಕೊಡುತ್ತಾ ಕೇಳಿದ, "ಸಾರು ನಿಮ್ಮ ಈ ಹೊಸಾ ಕಂಪೆನಿ ಹೆಸರೇನು?" ಅಂತ. ನಾನು "ಬ್ಲುಜೀನ್ಸ್" ಎಂದೆ. ಅಷ್ಟೇ ಆಗಿದ್ದು. ಆತ ಮುಂದೇನೂ ಕೇಳಲಿಲ್ಲ. ನಮ್ಮ ಏರಿಯಾದ ಚಾ ದೋಸ್ತರುಗಳಿಗೆ, ನನಗೆ ಬಾಡಿಗೆ ಮನೆ ಕೊಡಿಸಿದ ರಿಯಲ್ ಎಸ್ಟೇಟ್ ಏಜೆಂಟನಿಗೆ, ಅದೆಲ್ಲಾ ಬಿಡಿ ನಮ್ಮ ಓನರಿಗೂ ಹೇಳಿದನಂತೆ, 'ಸತೀಶ್ ಸಾರು ಸಾಫ್ಟ್ ವೇರು ಕೆಲಸದಲ್ಲಿ ದುಡ್ಡು ಹಾಕಿ ಎಲ್ಲಾ ಕಳಕೊಂಡು ಈಗ ಗಾರ್ಮೆಂಟ್ ಫ್ಯಾಕ್ಟರಿಗೆ ಸೇರಿಕೊಂಡ್ರಂತೆ, ಪಾಪ ಅವರಿಗೆ ಈ ಪರಿಸ್ಥಿತಿ ಬರಬಾರದಿತ್ತು!' ಎಂತೆಲ್ಲಾ :) ಆತನಿಗೆ ನಮ್ಮ ಕಂಪೆನಿ ಸಾಫ್ಟ್ ವೇರು ಕೆಲ್ಸಾನೇ ಮಾಡತ್ತೆ ಅಂತ ಎಷ್ಟೇ ಸಮಜಾಯಿಸಿ ಹೇಳಿದರೂ, ಟೀ ಕೊಡುವಾಗ ಮೊದಲು ಕೊಡುವಷ್ಟು ಮರ್ಯಾದೆ ಈಗ ಕೊಡುವದಿಲ್ಲ ಆತ!

ಈ ಕಾಟನ್ ಪ್ಯಾಂಟ್ ಗಳಿಗೆ ಸ್ವಲ್ಪ ಮಣ್ಣಾದರೂ ತೊಳೆಯಬೇಕು, ಅಷ್ಟಷ್ಟು ದಿನಕ್ಕೆ ಇಸ್ತ್ರಿ ಮಾಡಬೇಕು ಎಂಬಿತ್ಯಾದಿ ಕಾರಣಗಳಿಂದ ಬೇಸತ್ತು, ಇದ್ಯಾವ ಗೊಡವೆಗಳಿರದ ಜೀನ್ಸ್ ಪ್ಯಾಂಟ್ ಕೊಳ್ಳಲು ಒಂದು ಅಂಗಡಿಗೆ ಹೋದೆ. ಅಂಗಡಿಯವನಿಗೆ "ಒಳ್ಳೇ ನೀಲಿ ಬಣ್ಣದ ಎರಡು ಜೀನ್ಸ್ ಪ್ಯಾಂಟ್ ಕೊಡಿ" ಎಂದೆ. ಅದಕ್ಕೆ ಆತ, "ಸಾರ್ ನೀವು ಎಲ್ಲಿ ಕೆಲ್ಸಾ ಮಾಡ್ತೀರಾ, ಕಾರ್ಪೋರೇಟ್ ಡಿಸ್ಕೌಂಟ್ ಇದೆ, ನಿಮ್ಮ ಕಂಪೆನಿ ಲೀಸ್ಟ್ ಆಗಿದ್ರೆ ಕಡ್ಮೆ ಮಾಡ್ಕೊಡ್ತೀನಿ" ಎಂದು ಹೇಳಿದ. ನಾನು "ಬ್ಲುಜೀನ್ಸ್" ಎಂದೆ. ಅಷ್ಟು ಹೇಳಿದ್ದೇ ತಡ, ಆತನ ಮುಖಚಹೆರೆಯೇ ಬದಲಾಯಿತು. "ಸಾರ್ ನಮ್ಗೂ ಸಲ್ಪ ಸಪ್ಲೈ ಕೊಡಿ ಸಾರ್, ಒಳ್ಳೆ ಬುಸಿನೆಸ್ಸ್ ನಡೀತಾ ಇದೆ ನಮ್ಮ್ ಅಂಗಡೀಲಿ, ಮಾರ್ಜಿನ್ ಕಡ್ಮೆ ಕೊಟ್ರೂ ಪರ್ವಾಗಿಲ್ಲ" ಎನ್ನಬೇಕೇ !!! ಅವನ ಮಾತನ್ನು ಕೇಳಿ ನಾನು ತಬ್ಬಿಬ್ಬಾಗಿ, "ಇಲ್ಲಾ ನಾನು ಅಲ್ಲಿ ಕೆಲ್ಸಾ ಮಾಡ್ತೀನಿ ಅಷ್ಟೇ ..." ಎಂದು ಹೇಳುವಷ್ಟರಲ್ಲಿ, ನನಗೆ ಮುಂದೆ ಮಾತನಾಡಲೂ ಕೊಡದೇ ಹಾಸ್ಯವಾಗಿ, "ಊಹೋ ಯುನಿಫಾರಂ ತಗೋಳಕ್ಕೆ ಬಂದ್ರಾ ಸಾರ್" ಎಂದ! ನಾನು ಮರುಮಾತನಾಡದೇ ಅವನು ಹೇಳಿದಷ್ಟು ದುಡ್ಡು ಕೊಟ್ಟು ಜೀನ್ಸ್ ಪ್ಯಾಂಟ್ ಕೊಂಡು ಕೂಡಲೇ ಅಲ್ಲಿಂದ ಜಾಗ ಖಾಲಿ ಮಾಡಿದೆ :)

ಇಷ್ಟರಲ್ಲೇ ನಾನು 'ಬ್ಲುಜೀನ್ಸ್'ಗೆ ಸೇರಿದ್ದ ಸುದ್ದಿ ನನ್ನ ಪ್ರಯತ್ನಕ್ಕೂ ಮೀರಿ ಎಲ್ಲೆಡೆ ಪಸರಿಸಿತ್ತು. ನನ್ನ ಊರಿನ ಹುಡುಗನೊಬ್ಬ ನನಗೆ ಫೋನಾಯಿಸಿ, "ಸತೀಶಣ್ಣ ನಿನಗೆ ಕಂಪೆನಿ ಡಿಸ್ಕೌಂಟ್ ಸಿಗತ್ತಲ್ವಾ, ಕಡಿಮೆ ದುಡ್ಡಲ್ಲಿ ನಂಗೂ ನಿಮ್ಮ ಕಂಪೆನಿಯ ಜೀನ್ಸ್ ಪ್ಯಾಂಟ್ ಕೊಡ್ಸಿಕೊಡು ಪ್ಲೀಸ್" ಎಂದ !. ನಾನು ನೇರವಾಗಿ, "ಆಯ್ತು ಕೊಡ್ಸೋಣ, ನಿನ್ನ ಸೈಜ್ ಕೊಡಪ್ಪ, ಸ್ಪೆಷಲ್ ಪ್ಯಾಂಟ್ ಮಾಡ್ಸಿಕೊಡೋಣ" ಎಂದೆ! :)

ಬೆಂಗಳೂರಲ್ಲಿ ಜಾಗ ತಗೋಬೇಕು, ಸ್ವಲ್ಪ ಸಾಲ ಕೊಡಿ ಎಂದು ಬ್ಯಾಂಕ್ ಗೆ ಫೋನ್ ಮಾಡಿದೆ. ಅವರ ಮೊದಲ ಪ್ರಶ್ನೆ, "ಸಾರ್ ನೀವು ಎಲ್ಲಿ ಕೆಲ್ಸಾ ಮಾಡ್ತೀರಾ?", ನಾನು-"ಬ್ಲುಜೀನ್ಸ್", ಬ್ಯಾಂಕ್-"ಸಾರ್ ಇದು ಯಾವ್ ಥರಾ ಕಂಪೆನಿ ಸಾರ್ ಇದು, ಗಾರ್ಮೆಂಟ್ಸಾ?"!!, ಅದಕ್ಕೆ ನಾನು-"ಇಲ್ಲಾ ಸಾಫ್ಟ್ ವೇರು", ಬ್ಯಾಂಕ್-"ಓಹ್ ಹೀಗೂ ಹೆಸರು ಇರತ್ತಾ ಸಾರ್, ಯಾವ್ದಕ್ಕೂ ನಾವು ವೆರಿಫೈ ಮಾಡಿ ನಿಮಗೆ ಹೇಳ್ತೀವಿ ಸಾರ್."!!. ಆ ಬ್ಯಾಂಕಿನವ್ರು ಕೊನೆಗೂ ನನಗೆ ತಿರುಗಿ ಫೋನ್ ಮಾಡಲೇ ಇಲ್ಲ. ! :)

ನಮ್ಮ ಹಳ್ಳಿಹಳ್ಳಿಯ ಮೂಲೆಗಳಿಂದಲೂ ಇನ್ಫೋಸಿಸ್-ವಿಪ್ರೋ ಕಂಪೆನಿಗಳಿಗೆ ಜನ ಕೆಲಸಕ್ಕೆ ಸೇರಿದ್ದರಿಂದ, ನಮ್ಮ ಊರಿನ ಎಲ್ಲ ಹಿರಿಯರಿಗೂ ಸಾಫ್ಟ್ ವೇರಿನ ಬಗ್ಗೆ ಮಾಹಿತಿ ಚೆನ್ನಾಗಿಯೇ ಇದೆ. ಅವರಿಗೆ C, C++, Java ಗೊತ್ತಿಲ್ಲ ಅನ್ನೋದು ಬಿಟ್ಟರೆ, ಸಾಫ್ಟ್ ವೇರು ಕಂಪೆನಿಗಳ ಬಗ್ಗೆ ಧಾರಾಳವಾಗಿ ಗೊತ್ತು. ಊರಿಗೆ ಹಬ್ಬ ಹರಿದಿನಗಳಿಗೆ ಹೋದರೆ ಎಲ್ಲರೂ ಕೇಳುವದು, "ಒಹ್ ಬೆಂಗ್ಳೂರು ಬಸ್ಸಿಗೆ ಬಂದ್ಯಾ, ಯಾವ್ ಕಂಪೆನಿ?". ಹಾಗೇ ನಮ್ಮ ಊರ ಹತ್ತಿರದ ಒಬ್ಬ ಅಜ್ಜ, ಗಣಪಜ್ಜ ನಂಗೆ ಅದನ್ನೇ ಕೇಳಿದ. ನಾನು "ಬ್ಲುಜೀನ್ಸ್" ಎಂದೆ.  ನಾನು ಇನ್ಫೋಸಿಸ್ ನಲ್ಲಿ ಕೆಲ್ಸ ಮಾಡುತ್ತಿಲ್ಲ ಎಂದು ಆತನಿಗೆ ತಿಳಿದು ನನ್ನೆಡೆಗೆ ಒಂದು ವಿಚಿತ್ರವಾದ ನೋಟವನ್ನು ಬೀರಿದ. ಆ ನೋಟದ ಮರ್ಮ ವನ್ನು ಅರಿತ ನಾನು ಕೂಡಲೇ ಅವನಿಗೆ ನಮ್ಮ ಕಂಪೆನಿ ಎನೇನು ಮಾಡುತ್ತದೆ ಎಂದೂ ಹೇಳಿದೆ. ಆದರೆ ನನ್ನ ಉತ್ತರದ ಮೊದಲ ಶಬ್ದ ಆತನ ಮನದಲ್ಲಿ ಅಚ್ಚೊತ್ತಿಬಿಟ್ಟಿತ್ತು. ನನ್ನ ಮಾತು ಮುಗಿದ ಮೇಲೆ, "ಎಲ್ಲಾ ಬಿಟ್ಟು ಪ್ಯಾಂಟು ಮಾಡ ಕೆಲ್ಸಕ್ಕೆ ಸೇರ್ಕ್ಯಂಡ್ಯಲ್ಲ ಮಾರಾಯಾ, ನಿಂಗೋಕೆಲ್ಲಾ ಬರೀ ಬೆಂಗ್ಳೂರು ಹುಚ್ಚು, ಅಂತಾ ಕೆಲ್ಸ ಮಾಡ ಬದ್ಲು ಊರಲ್ಲಿ ತೋಟ ಗದ್ದೆ ಮಾಡದು ಸಾವ್ರ ಪಾಲು ಚೊಲೊ, ವಿಚಾರ ಮಾಡು ಇನ್ನಾದ್ರುವಾ, ಊರಿಗೆ ಬಂದ್ ಬುಡು" ಎಂದ.!!! ನಾನು ಸುಮ್ಮನೆ "ಆಯ್ತು ಅಡ್ಡಿಲ್ಲೆ" ಎಂದೆ :) ಈಗ ಗಣಪಜ್ಜ ಊರಿಗೆಲ್ಲ ಈ ವಿಷಯವನ್ನ ಡಂಗುರ ಬಡಿದು ಸಾರಿದ್ದರಿಂದ, ನನ್ನ ಈ ಕ್ಲಿಷ್ಟಕರವಾದ ಕಂಪೆನಿಯ ಹೆಸರನ್ನು ಯಾರ ಹತ್ತಿರವೂ ಹೇಳುವಂತಿಲ್ಲ :)

ನಾಡಿದ್ದು ನಮ್ಮ ಕಂಪೆನಿಯ ದೊಡ್ಡ ಬಾಸು ಅಮೇರಿಕೆಯಿಂದ ಬೆಂಗಳೂರಿಗೆ ಬರುತ್ತಾರಂತೆ. ಅವರು ನಂಗೆ "ಸತೀಶಾ ನಿಂಗೆ ಏನು ಬೇಕು ನನ್ನಿಂದ" ಎಂದೇನಾದ್ರು ಕೇಳಿದರೆ!!, "ದಯವಿಟ್ಟು ಕಂಪೆನಿ ಹೆಸರು ಬದಲಾಯಿಸಿ" ಎಂದು ಕೇಳೋಣ ಎಂದುಕೊಂಡೆ :)

Tuesday, August 20, 2013

ಬಿಳಿ ಅಂಗಿ ಹಾಗೂ ಮಡಿಕೇರಿಯ ಬ್ಯಾಂಕ್ ಮ್ಯಾನೇಜರ್ರು

ನಾನು ಹಾಗೂ ನನ್ನ ಆಪ್ತ ಮಿತ್ರ ಗೋಣಿಕೊಪ್ಪದ ಆಕಾಶ್ ಗಣಪತಿ(ನಾವೆಲ್ಲ ಪ್ರೀತಿಯಿಂದ ಗಣಪ ಎಂದು ಕರೆಯುತ್ತೇವೆ ಅವನಿಗೆ) ಆವತ್ತು ಮೈಸೂರಿನ ಅವನ ಬಾಡಿಗೆ ಮನೆಯಲ್ಲಿ ಒಂದು ಕಪ್ ಕಾಫಿ ಹೀರುತ್ತ ಕುಳಿತಿದ್ದೆವು. ಆದಿನ ಗಣಪ ನನಗೆ ಬಿಳಿ ಅಂಗಿಯನ್ನು ಧರಿಸುವದರ ಮಹತ್ವದ ಬಗ್ಗೆ ವಿವರಣೆ ಕೊಡುತ್ತಿದ್ದ. ಎಲ್ಲಾ ರಾಜಕೀಯ ಪುಢಾರಿಗಳೂ, ಗವರ್ನಮೆಂಟ್ ಅಧಿಕಾರಿಗಳೂ ಬಿಳಿಯ ಅಂಗಿ ಹಾಕಿದ್ದರಿಂದಲೇ ಒಂದು ಹಂತಕ್ಕೆ ಜನರೆದುರಿಗೆ ತಾವೇನೋ ದೊಡ್ಡ ಜನ ಎಂದು ಬಿಂಬಿಸಿಕೊಳ್ಳುತ್ತಾರೆ ಎಂಬುದು ಆತನ ವಾದವಾಗಿತ್ತು. ಬಿಳಿಯ ಅಂಗಿಗೆ ಬಹಳ ಪವರ್ ಇರುವುದಾಗಿಯೂ ಆದ್ದರಿಂದ ತಾನು ಒಟ್ಟಿಗೇ 4 ಬಿಳಿಯ ಅಂಗಿಯ ಸೆಟ್ ಖರೀದಿಸಿರುವುದಾಗಿಯೂ ಆತ ಹೇಳಿದ. ಎಲ್ಲಾ ಗವರ್ನಮೆಂಟ್ ಕಛೇರಿಗಳಿಗೆ, ಬ್ಯಾಂಕುಗಳಿಗೆ ತಾನು ಬಿಳಿಯ ಅಂಗಿ ಹಾಕಿ ಹೋಗುವದರಿಂದಲೇ ತನ್ನ ಎಲ್ಲಾ ಕೆಲಸಗಳೂ ಸಾರಾಸಗಟಾಗಿ ಮುಗಿಯುತ್ತದೆ ಎಂಬಿತ್ಯಾದಿ ವಿವರಗಳನ್ನೂ ಆತ ಕೊಟ್ಟ. ಎಲ್ಲವನ್ನು ಕೇಳಿದ ಮೇಲೆ ನನಗೆ ಹೊಳೆದಿದ್ದು, ಆವತ್ತು ಆಶ್ಚರ್ಯವೆಂಬಂತೆ ನನ್ನ ಬ್ಯಾಗಿನಲ್ಲೂ ಒಂದು ಬಿಳಿಯ ಅಂಗಿ ಇತ್ತೆಂಬುದು.!!

ಗಣಪ ಒಂದು ವಿಚಿತ್ರವಾದ ಸಮಸ್ಯೆಯಲ್ಲಿ ಸಿಕ್ಕಿಕೊಂಡಿದ್ದ. ಆ ಸಂಕೀರ್ಣ ಸಮಸ್ಯೆಯ ಆಳ ಮತ್ತು ಅಗಲ ಬಹಳವಾಗಿತ್ತು. ಕರ್ನಾಟಕದ ಸಿಎಮ್ಮು ಮರಳು ಸಾಗಾಟನೆಯನ್ನು ರಾತ್ರೋರಾತ್ರಿ ನಿಷೇಧಿಸಿದ್ದರಿಂದ ಆತ ಕಟ್ಟಿಸುತ್ತಿದ್ದ ಮನೆಗೆ ಮರಳು ಸಿಗದೇ ಮನೆಯ ನಿರ್ಮಾಣ ಅರ್ಧಕ್ಕೇ ನಿಂತುಬಿಟ್ಟಿತ್ತು. ಮನೆ ಕಟ್ಟುವ ಮೇಸ್ತ್ರಿ ಇದೇ ಸಮಯದ ಪ್ರಯೋಜನ ಪಡೆಯಲು, ಇದೆಲ್ಲಾ "ಸ್ಯಾಂಡ್ ಮಾಫಿಯಾ"ದವರ ಕುತಂತ್ರವಾಗಿರುವುದಾಗಿಯೂ, ಎಲ್ಲಾ ಮರಳು ಲಾರಿಗಳನ್ನೂ ಮೈಸೂರಿಗೆ ಬರುತ್ತಲೇ ಪೋಲೀಸರು ಹಿಡಿದು ಒಳಗೆ ಹಾಕುತ್ತಿರುವುದಾಗಿಯೂ, ಎಲ್ಲರಿಗೂ ಮಾಮೂಲು ಹೊಂದಿಸಲು ಇನ್ನೂ ಹೆಚ್ಚು ಕ್ಯಾಷು ಕೊಡಬೇಕಾಗಿಯೂ ಸತಾಯಿಸುತ್ತಿದ್ದ. ಅಷ್ಟರಲ್ಲೇ ಆತನ ಹೊಸಮನೆಯ ಕ್ಯೂರಿಂಗ್ ಮಾಡುವ ಶಿವಣ್ಣ ಯಾಕೋ ಇತ್ತೀಚೆಗೆ ಮೈಗಳ್ಳತನವನ್ನು ರೂಢಿಮಾಡಿಕೊಂಡು, ಹೊಸ ಸಿಮೆಂಟ್ ಗೆ ನೀರು ಹಾಕದೇ ಅಲ್ಲಲ್ಲಿ ಸುಮ್ಮನೇ ಅಲೆದಾಡಿಕೊಂಡಿದ್ದ. ಇದರಿಂದ ಬೇಸರಗೊಂಡಿದ್ದ ಗಣಪನ ಪ್ರಕಾರ ಇವರಿಗೆಲ್ಲ ಸ್ವಲ್ಪ ಬಿಳಿ ಅಂಗಿಯ ಬಿಸಿತಟ್ಟಿಸಿದರೆ ಸರಿಯಾಗುತ್ತದೆ ಎಂಬುದಾಗಿತ್ತು. ಆದ್ದರಿಂದ ಆದಿನ ನಾನು ತಂದಿದ್ದ ಬಿಳಿಯ ಅಂಗಿಯನ್ನು ತೊಟ್ಟು "ಮಡಿಕೇರಿಯಿಂದ ಬಂದ ಬ್ಯಾಂಕ್ ಮ್ಯಾನೇಜರ್ರ್ ಸಾರ್" ನ ಪಾತ್ರ ಧರಿಸಬೇಕಾಯಿತು.

ಗಣಪನ ಜೊತೆ ಬಿಳಿ ಅಂಗಿಯ ತೊಟ್ಟ ನಾನು ಬ್ಯಾಂಕ್ ಮ್ಯಾನೇಜರ್ ಆಗಲು ಮುಖವನ್ನು ಗಂಟಿಕ್ಕಿಕೊಂಡು ಮನೆ ಕಟ್ಟುತ್ತಿದ್ದ ಜಾಗಕ್ಕೆ ಹೋದೆ. "ಮಡಿಕೇರಿಯಿಂದ ಬ್ಯಾಂಕ್ ಮ್ಯಾನೇಜರ್ರ್ ಸಾಹೇಬ್ರು ಬಂದುಬಿಟ್ಟಿದ್ದಾರೆ, ಮನೆ ಕಟ್ಟಲು ತಡವಾದ್ದರಿಂದ ವಿಚಾರಣೆಗೆ ಆರ್ಡರ್ ಆಗಿದೆ" ಎಂದು ಇಳಿ ದನಿಯಲ್ಲಿ ಗಣಪ ಶಿವಣ್ಣನಿಗೆ ಹೇಳಿದ. ಹೌಹಾರಿದ ಶಿವಣ್ಣ ನನಗೆ "ನಮಸ್ಕಾರಾ ಸಾರ್" ಎನ್ನುತ್ತಾ ಏನೋ ತಪ್ಪು ಮಾಡಿದವರಂತೆ ಕೈಕಟ್ಟಿ ದೂರದಲ್ಲಿ ನಿಂತುಕೊಂಡ. ಮ್ಯಾನೇಜರ್ರು ಬಂದ ವಿಷಯ ಗೊತ್ತಾಗಿ ಮೇಸ್ತ್ರಿ ಸ್ವಾಮಿಯೂ ಬಂದ. "ಎಲ್ಲಾ ಸೇರಿ ಬ್ಯಾಂಕ್ ಮನೆ ಕಟ್ಟಲು ಅಂತಾ ಕೊಟ್ಟಿರೋ ಹಣಾನ ನುಂಗಿ ನೀರು ಕುಡೀತಾ ಇದೀರಾ, ಹೀಗೇ ಆದರೆ ಈ ಮನೆ ನಾ ಸೀಜ್ ಮಾಡ್ಬೇಕಾಗತ್ತೆ" ಎಂದು ಹೇಳುತ್ತಾ ನನ್ನ ಮೊಬೈಲ್ ಫೋನಿನಲ್ಲಿ ಕಟ್ಟುತ್ತಿದ್ದ ಮನೆಯ ಫೋಟೊಗಳನ್ನು ತೆಗೆದೆ. ಅಷ್ಟೊತ್ತಿಗೆ ಬಿಳಿ ಅಂಗಿ ಹಾಕಿದ್ದ ನನ್ನಲ್ಲಿ ನಿಜವಾಗಿಯೂ ಯಾವುದೋ ಮ್ಯಾನೇಜರ್ರ್ ನ ಆತ್ಮ ಪ್ರವೇಶವಾದಂತಾಯಿತು.:) ಮತ್ತೂ ಮುಖವನ್ನು ಗಂಟು ಹಾಕಿಕೊಂಡು ಗಣಪನಿಗೆ "ಏನು ಗಣಪತಿ ಅವರೇ ಬೇಗಾ ಮನೆ ಕಟ್ಟಲಿಲ್ಲಾ ಅಂದರೆ ಮೇಲಿನವರಿಗೆ ರಿಪೋರ್ಟ್ ಹೋಗತ್ತೆ ನೋಡಿ. ಆಮೇಲೆ ಸ್ಟ್ರಿಕ್ಟ್ ಆಕ್ಶನ್ ತಗೋಬೇಕಾಗತ್ತೆ" ಎಂದೆಲ್ಲಾ ಏನೇನೋ ಹೇಳಿದೆ. ಮರಳು ತಂದು ಕೆಲಸ ಮುಂದುವರಿಯವರೆಗೂ ಹೊಸದಾಗಿ ಬ್ಯಾಂಕಿನಿಂದ ದುಡ್ಡನ್ನು ರಿಲೀಸ್ ಮಾಡಲಿಕ್ಕೆ ಆಗುವದಿಲ್ಲ ಎಂದೂ ಖಡಾಖಂಡಿತವಾಗಿ ಹೇಳಿದೆ. ಇದನ್ನೆಲ್ಲಾ ನೋಡಿ ಒಂದು ಹದಕ್ಕೆ ಬಂದಿದ್ದ ಮೇಸ್ತ್ರಿ "ಸಾಮಿ, ಚೆಕ್ ಪೋಸ್ಟ್ ನವ್ರಿಗೆ, ಪೋಲೀಸ್ ನೋರಿಗೆ ಎಲ್ಲಾ ಮಾಮೂಲು ಕೊಟ್ಟು ಮೈಸೂರ್ ಗೆ ಮರಳು ಲಾರಿ ಟ್ರಿಪ್ ಬರ್ತಾ ಐತೆ, ಅದರಲ್ಲಿ ನಾನು ಒಂದು ಟ್ರಿಪ್ ತರ್ತೀನಿ, ದುಡ್ಡು ಹೆಂಗೋ ಹೊಂದ್ಸ್ಕೋತೀನಿ ಬುಡಿ" ಅಂದ. ಶಿವಣ್ಣ ತಾನೂ ಇನ್ನು ನಿಯತ್ತಿನಿಂದ ಕ್ಯೂರಿಂಗ್ ಮಾಡುತ್ತೇನೆ ಎಂದು ವಚನ ನೀಡಿದ. ಒಟ್ಟಿನಲ್ಲಿ ಗಣಪನ ಸಮಸ್ಯೆ ಆ ಕ್ಷಣಕ್ಕೆ ಶಾಂತವಾಯಿತು.

ತಿರುಗಿ ಮನೆಗೆ ಬರುತ್ತಾ ಗಣಪ ಬಿಳಿ ಅಂಗಿಗಿರುವ ಶಕ್ತಿ ಹಾಗೂ ಮಹತ್ವವನ್ನು ಸವಿವರವಾಗಿ ಮತ್ತೆ ಮತ್ತೆ ವರ್ಣಿಸಿದ. ಅದಕ್ಕೇ ಈಗ ಆಫೀಸಿನಲ್ಲಿ ಮ್ಯಾನೇಜರ್ ಜೊತೆ ಮೀಟಿಂಗ್ ಇರುವಾಗ ಬಿಳಿಯ ಅಂಗಿ ತೊಟ್ಟೇ ಹೋಗುತ್ತೇನೆ!!!

Thursday, August 15, 2013

ಹೊಂಡದಲ್ಲಿ ಬಿದ್ದ ಹೋಂಡಾ

ಅಂದು ಶನಿವಾರ. ನಮ್ಮ ಐಟಿ ಕಂಪನಿಗಳ ರಜೆಯ ದಿನ. ಎಲ್ಲಾ ಟೆಕ್ಕಿಗಳೂ ಬಾಲಬಿಚ್ಚಿ ತಮ್ಮ ಇತರೆ ಇತರೆ ಕಾರ್ಯಗಳಲ್ಲಿ ಮಗ್ನರಾಗುವ ದಿನ. ನನಗೆ ಇತ್ತೀಚೆಗೆ ಯಾಕೋ ಫಾರಂ ಹೌಸ್ ನ ಚಟ ಬಡಿದು, ಅಂತರ್ಜಾಲದಲ್ಲಿ ಕಂಡ ಕಂಡ ರಿಯಲ್ ಎಸ್ಟೇಟ್ ಏಜೆಂಟರುಗಳಿಗೆ ಫೋನಾಯಿಸುತ್ತಾ ಇದ್ದೆ. ಅಷ್ಟರಲ್ಲೇ ನನ್ನ ಅಡ್ವೋಕೇಟ್ ಗೆಳೆಯ ವಿನೀತ್ ಫೋನಾಯಿಸಿದ. ಆತನ ಪ್ಲಾನ್ ನಂತೆ, ನಮಗೆಲ್ಲ ಚಿರಪರಿಚಿತರಾದ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಅವರ ಫಾರಂ ಹೌಸ್ ಗೆ ಹೊರಟೆವು. ಅಲ್ಲಿಗೆ ಹೋಗುವ ದಾರಿ ಗೊತ್ತಿರದ ನಾನು, ಕಕ್ಕಾಬಿಕ್ಕಿಯಾಗಿ ಅತ್ತ ಇತ್ತ ನೋಡುತ್ತ ಗಾಡಿಯನ್ನು ಓಡಿಸುತ್ತಿದ್ದೆ. ಪಕ್ಕದಲ್ಲಿ ಕುಂತಿದ್ದ ವಿನೀತನಿಗೆ ಎಂದಿನಂತೆ ಸಾವಿರಾರು ಫೋನ್ ಕರೆಗಳು ಬಂದೂ ಬಂದೂ ಸತಾಯಿಸುತ್ತಲೇ ಇದ್ದವು. ಆತ ಒಂದು ಕಡೆ ಫೋನಿನಲ್ಲಿ ಮಾತನಾಡುತ್ತಲೂ, ಇನ್ನೊಂದು ಕಡೆ ದಾರಿ ಗೊತ್ತಿರದ ನನಗೆ ದಾರಿಯನ್ನು ಕೈ ಸನ್ನೆ ಮಾಡಿ ತೋರುತ್ತಲೂ ಇದ್ದ.

ಕೆಂಗೇರಿಯ ರಾಮೋಹಳ್ಳಿಯಲ್ಲಿ ಬಲಕ್ಕೆ ತಿರುಗಬೇಕಾಗಿದ್ದ ಗಾಡಿ ದಾರಿತಪ್ಪಿ ದೊಡ್ಡ ಆಲದಮರವನ್ನು ದಾಟಿ ಮಂಚಿನಬೆಲೆ ಡ್ಯಾಮ್ ಹತ್ತಿರ ಹೋಗಿಬಿಟ್ಟಿತು. ವಿನೀತನಿಗೂ ದಾರಿ ಸರಿಯಾಗಿ ಗೊತ್ತಿರಲಿಲ್ಲ ಎಂದು ನನಗೆ ಆಗ ತಿಳಿಯಿತು. ವಿನೀತ ಮಾತ್ರ ಫೋನಿನಲ್ಲಿಯೇ ಮಗ್ನನಾಗಿದ್ದ. ಏನಪ್ಪಾ ಇದು ಎಂದು ಕನವರಿಸಿ, ಗೂಗಲ್ ನ ಮ್ಯಾಪಿಗೆ ಕೈಮುಗಿದು ಅದರಲ್ಲಿ ಕಣ್ಣಾಡಿಸಿ ಅಂತೂ ಸರಿದಾರಿಯನ್ನು ಹುಡುಕಿ, ವಿನೀತನಿಗೆ ಫೋನ್ ಮಾಡಿದವರಿಗೆ ಮನಸ್ಸಿನಲ್ಲಿಯೇ ಬೈಯುತ್ತಾ ಗಾಡಿಯನ್ನು ವಾಪಸ್ಸು ತಿರುಗಿಸಿದೆ. ಮಾಡಿದ ತಪ್ಪು ಮತ್ತೆ ಮಾಡಬಾರದೆಂದು ಕಂಡಕಂಡವರಿಗೆಲ್ಲಾ ರಾಮೋಹಳ್ಳಿಯ ದಾರಿ ಕೇಳುತ್ತಾ, ಕೇಳಿದ್ದನ್ನು ಗೂಗಲ್ ಮ್ಯಾಪಿನಲ್ಲಿ ನೋಡಿ ಖಚಿತಪಡಿಸಿಕೊಳ್ಳುತ್ತಾ, ಒಂದು ಚಿಕ್ಕದಾದ ಡಾಂಬರು ರಸ್ತೆಯಲ್ಲಿ ಗಾಡಿ ಓಡಿಸುತ್ತಾ ಇದ್ದೆ.

ನೋಡನೋಡುತ್ತಲೇ ರಾಮೋಹಳ್ಳಿಯ ಕಿರಿದಾದ ಡಾಂಬರು ರಸ್ತೆಯಲ್ಲಿ, ಹಾಲ್ಟಿಂಗ್ ಎಶ್ಟಿ ಗಾಡಿ (ST: State Transport ಬಸ್ಸಿಗೆ ನನ್ನ ಅಜ್ಜ ಹಾಗೂ ಅಜ್ಜಿ ಬಳಸುತ್ತಿದ್ದ ಶಾರ್ಟ್ ಫಾರಂ ಶಬ್ದ!) ಎದುರಿಗೆ ಬಂದುಬಿಟ್ಟಿತು. ಅಷ್ಟು ಚಿಕ್ಕ ರಸ್ತೆಯಲ್ಲಿ ನಾನು ಗಾಡಿಯನ್ನು ಪಕ್ಕಕ್ಕೆ ಇಳಿಸುವಂತೆಯೇ ಇರಲಿಲ್ಲ. ಬಸ್ಸಿನ ಡ್ರೈವರನೂ ಸಹಾ ಹಳೇ ಕಾಲದ ಪುಂಗಿ ಹಾರನ್ನ್ ನ್ನು ಊದುತ್ತಾ 'ದಾರಿಕೊಡು' ಎಂದು ನನ್ನನ್ನು ಕಣ್ಸನ್ನೆಯಲ್ಲೇ ಬೆದರಿಸಿದ. ಅಷ್ಟರಲ್ಲಿ ಪಕ್ಕದಲ್ಲಿ ಮತ್ತೆ ಇನ್ನೊಂದು ಫೋನಿನಲ್ಲಿ ಮಾತನಾಡುತ್ತ ಕುಳಿತಿದ್ದ ವಿನೀತನಿಗೆ ಆರನೇ ಸೆನ್ಸ್ ಜಾಗೃತವಾದಂತೆ ಪಕ್ಕಕ್ಕೆ ಗಾಡಿ ತಿರುಗಿಸುವಂತೆ ಕೈಸನ್ನೆ ಮಾಡಿದ. ಎಡಗಡೆ ಒಂದು ಗೇಟ್ ಇತ್ತು. ಇದೂ ಒಂದು ಫಾರಂ ಹೌಸ್ ನ ಗೇಟ್ ಇರಬೇಕು ಎಂದು ಭಾಸವಾಗಿ ಕಣ್ಣು ಮುಚ್ಚಿಕೊಂಡು ಎಡಗಡೆ ಗಾಡಿಯನ್ನು ತಿರುಗಿಸಿಬಿಟ್ಟೆ. ಅಷ್ಟೇ ಆದದ್ದು...

ಗಾಡಿ ಹೊಂಡದಲ್ಲಿ ಬಿದ್ದುಬಿಟ್ಟಿತ್ತು.! ಹೊಂಡದಲ್ಲಿ ಮಳೆಗೆ ಚೆನ್ನಾಗಿ ಹುಲ್ಲು ಬೆಳೆದಿತ್ತು. ಆಳದಲ್ಲಿದ್ದ ಗಾಡಿ ಮುಂದೂ ಹೋಗಲಾರದೇ ಹಿಂದೂ ಬರಲಾರದೇ ಒದ್ದಾಡುತ್ತಿತ್ತು. ವಿನೀತನ ಫೋನು ನಿಂತು ಆತನ ಕಕ್ಕಾಬಿಕ್ಕಿಯಾದ ಮುಖ ನನ್ನನ್ನೇ ನೋಡುತ್ತಿತ್ತು. ಅದೇ ಹೊತ್ತಿಗೆ ನಾಗೇಶ್ ಹೆಗಡೆ ಅಂಕಲ್ ಫೋನ್ ಮಾಡಿ 'ಎಲ್ಲಿದೀರ್ರೋ' ಎಂದು ಕೇಳಿದರು. "ಅಂಕಲ್ ಹೊಂಡದಲ್ಲಿ ಇದ್ಯ, ಕಡೀಗೆ ಮಾಡ್ತೆ" ಎಂದು ಹೇಳಿ ಫೋನ್ ಇಟ್ಟೆ.!

ಅಷ್ಟರಲ್ಲಿ ಎದುರಿಗೆ ನಿಂತಿದ್ದ ಬಸ್ಸಿನಿಂದ ಒಬ್ಬೊಬ್ಬರಾಗಿ ಇಳಿದು ಬರತೊಡಗಿದರು. ನಾಲ್ಕಾರು ಹುಡುಗರು ಬಂದು ಸ್ಥಳಪರೀಕ್ಷೆ ಮಾಡಿ, "ಸಾರ್, ಹೊಂಡದಲ್ಲಿ ಬಿದ್ದೊಗಯ್ತೆ ಕಾರು, ಕಟಿಂಗ್ ತಗೋವಾಗ ನೋಡ್ಕೋಬಾರ್ದಾ ಸಾರ್" ಎನ್ನತೊಡಗಿದರು. ಇನ್ನೂ ಕೆಲವರು ಕಾರಿನ ಮಾಡೆಲ್ಲು, ಹೆಸರು, ಕಂಪೆನಿ ಇತ್ಯಾದಿಗಳನ್ನು ಪರೀಕ್ಷಿಸಿ, "ಅಯ್ಯೋ ಹೋಂಡಾ ಬೇರೆ, ಹೊಂಡದಲ್ಲಿ ಬಿದ್ದೊಯ್ತಲ್ಲಾ" ಎಂದರು.!!!

ಅಷ್ಟರಲ್ಲಿ ಎಶ್ಟಿ ಗಾಡಿಯ ಡ್ರೈವರನೂ ಕಂಡಕ್ಟರನೂ ಇಳಿದು ಬಂದು ನನ್ನ ಅಸಹಾಯಕ ಮುಖವನ್ನು ನೋಡಿ ಕನಿಕರದಿಂದ, "ಸಾರ್ ಎಲ್ಲಾ ಸೇರಿ ಎತ್ತಿಬಿಡೋಣಾ ಗಾಡೀನಾ, ಬೇರೆ ದಾರಿ ಇಲ್ಲಾ ಬುಡಿ" ಎಂದರು. ಸುಮಾರು 15 ಜನ ಸೇರಿ ಬಹುಪ್ರಯತ್ನದಿಂದ ಗಾಡಿಯನ್ನು ಹೊಂಡದಿಂದ ಮೇಲೆತ್ತಿದರು. ಇಲ್ಲವಾದಲ್ಲಿ ಹೋಂಡಾ ಕ್ಕೆ ಇನ್ನೆಷ್ಟು ದಿನ ಹೊಂಡದಲ್ಲಿ ಮುಳುಗಿರುವ ಭಾಗ್ಯವಿತ್ತೇನೋ. ಆ ಕ್ಷಣಕ್ಕೆ, ಎಲ್ಲಾ ಟ್ಯಾಕ್ಸಿಯವರು "ತಂದೆ ತಾಯಿಯ ಕೃಪೆ" ಎಂದು ಹಿಂದಿನ ಗಾಜಿನ ಮೇಲೆ ಬರೆಸಿದಂತೆ, ನಾನೂ ಸಹಾ "ರಾಮೋಹಳ್ಳಿಯ ಜನರ ಕೃಪೆ" ಎಂದು ಬರೆಸಬೇಕೆಂದುಕೊಂಡೆ.!!

 

Thursday, April 22, 2010

ಹಸಿರು..


ಅಂತೂ ಬಹಳ ದಿನಗಳ ನಂತರ ಮನೆಯಲ್ಲಿ ಗಿಡ ಬೆಳೆಸುವ ನಮ್ಮ ಯೋಜನೆ ಇಂದು ಶುರು ಆಯಿತು. ಇಂದು "Earth Day" ಆಗಿರುವದಕ್ಕೂ, ನಮ್ಮ ರೂಮಿಗೆ ಚೆಂದದ ಗಿಡವೊಂದು ಆಗಮಿಸಿದ್ದಕ್ಕೂ ತಾಳೆಯಾಗುತ್ತಿದ್ದಂತೆ ನಮ್ಮಲ್ಲಿ ಹರ್ಷ ಮೂಡಿತು.

Friday, October 30, 2009

ಪಾಕಶಾಸ್ತ್ರ ಮಹಿಮೆ

" ಏಯ್ ತಮಾ... ಕುಕ್ಕರ್ ನಲ್ಲಿ ಬರೀ ಅಕ್ಕಿ ಅಷ್ಟೇ ಇಟ್ಟು ಒಲೆ ಮೇಲೆ ಇಟ್ರೆ ಅನ್ನ ಹೆಂಗಾಗವೋ ಮಾರಾಯಾ....:-) ... ಅಕ್ಕಿಗೆ ನೀರು ಯಾರು ಹಾಕ್ತ್ವ ಮಾರಾಯಾ " ....ಇದು ನನ್ನ ಅಣ್ಣನ ಧಾರವಾಡದ ಗೆಳೆಯರ ರೂಮಿನಲ್ಲಿ ಇದ್ದಾಗ ನಡೆದ ಕಥೆ.
ನನ್ನ ಅಡುಗಾಪ್ರಮಾದದ ಪ್ರಥಮ ಅನುಭವ!!!!!

* * *

ಅಲ್ಲಿಯವರೆಗೂ ನನಗೆ ಅಡುಗೆ ಮಾಡುವದು ಅಂದ್ರೆ ಇಷ್ಟೆಲ್ಲಾ ಕಷ್ಟದ ಕೆಲಸ ಎಂಬ ಕಲ್ಪನೆಯೇ ಇರಲಿಲ್ಲ. ಅಡುಗೆ ಮನೆಗೆ ಹೋದರೆ ತಿನ್ನಲು ಏನಾದರೊಂದು ಸಿಕ್ಕುತ್ತದೆ ಎಂದಷ್ಟೇ ನನ್ನ ಅಂದಾಜಾಗಿತ್ತು. ಆದರೆ ನೀವು ಯಾವುದೇ ಅಡುಗೆಮನೆಯಲ್ಲಿ ಕಾಲಿರಿಸಿ, ಅಲ್ಲಿ ಅವರು ಅಡುಗೆ ಮಾಡುವದನ್ನು ಗಮನಿಸಿದರೆ ಅವರೆಲ್ಲಾ ಎಂಥಹಾ ಬುದ್ಧಿಜೀವಿಗಳು ಎಂಬ ಸತ್ಯ ಅರಿವಿಗೆ ಬರುತ್ತದೆ.

* * *

ಮಲೆನಾಡಿನಲ್ಲಿ ಅಪ್ಪೇಹುಳಿ ಎನ್ನುವ ಅಡುಗೆ ಪದಾರ್ಥ (ರುಚಿ : ನಿಂಬೆಕಾಯಿ, ಹುಳಿಕಂಚಿಕಾಯಿ ಇತ್ಯಾದಿ ಹುಳಿ ಪದಾರ್ಥಗಳನ್ನು ಉಪಯೋಗಿಸುವದರಿಂದ ಹುಳಿಹುಳಿಯಾಗಿರತ್ತದೆ, ಅನ್ನದ ಜೊತೆ ಕಲಸಿ ತಿನ್ನಬಹುದು ಅಥವಾ ಹಾಗೇ ಕುಡಿಯಬಹುದು. ನಂತರ ಬರುವ ಸುಖನಿದ್ರೆಗೆ ಸಾಟಿಯಿಲ್ಲ) ಹಿಮಾಲಯದ ಹಿಮದಷ್ಟೇ ಪ್ರಖ್ಯಾತ.

ನಾವು ಮೈಸೂರಿನಲ್ಲಿದ್ದಾಗ ನನ್ನ ರೂಮ್ ಮೇಟ್ ಗಳಾದ ಕಿರಣ ಹಾಗೂ ಪಡ್ಡಿ (ಪ್ರದೀಪ್) ಇಬ್ಬರೂ ’ನಿನ್ನ ಊರಿನ ಅಪ್ಪೇಹುಳಿ ಮಾಡು’ ಎಂದು ದಂಬಾಲು ಬಿದ್ದರು. ಕೂಡಲೇ ಎಲ್ಲೋ ಕೇಳಿ ನೆನಪಿಗೆ ಬಂದಂತೆ ನೀರಿಗೆ ಒಂದು ಒಗ್ಗರಣೆ ಕೊಟ್ಟೆ. ಆದರೆ ಅಷ್ಟೇ ಮಾಡಿದರೆ ಅಪ್ಪೇಹುಳಿ ಆಗಲಾರದೆಂದು ಕಲ್ಪನೆಯೇ ಇರಲಿಲ್ಲ. ಪಡ್ಡಿ ಮತ್ತು ಕಿರಣ ಇಬ್ಬರೂ ನನ್ನ ಹೊಸರುಚಿಯ ರುಚಿ ನೋಡಿ ಮುಖ ಹುಳಿ ಮಾಡಿದರು. ಮರುದಿನದವರೆಗೆ ಹಾಗೆಯೇ ಇಟ್ಟ ಅಪ್ಪೇಹುಳಿ ಹೊಸಥರಹದ ರುಚಿಗೆ ಮೂಡಿತು. ಮರುದಿನ ರೂಮಿಗೆ ಬಂದ ನಮ್ಮ ಇನ್ನೊಬ್ಬ ದೊಸ್ತ ಅಜುವಿಗೆ ಅಪ್ಪೇಹುಳಿಯ ವರ್ಣನೆ ಮಾಡಿದ ಕೂಡಲೇ ಆತ ಅಡುಗೆ ಮನೆಗೆ ಹೋಗಿ ಉಳಿದಿದ್ದ ಅಪ್ಪೇಹುಳಿಯನ್ನು ಗಟಗಟನೆ ಕುಡಿದೇಬಿಟ್ಟ!!! ’ ಆಹಾ... ಎನ್ ಸೂಪರ್ ಮಾಡಿದೀಯೋ ಮಗಾ.... " ಎಂದು ಹೇಳುತ್ತಾ ಆನಂದದ ಪರಾಕಾಷ್ಠೆಗೆ ತಲುಪಿಬಿಟ್ಟ.

* * *

ಹೀಗೇ ನಡೆದ ನನ್ನ ಅಡುಗೆಯ ಪ್ರಯೋಗಗಳಲ್ಲಿ ಅನೇಕ ಸತ್ಯವನ್ನು ಕಂಡುಕೊಂಡಿದ್ದೇನೆ. ನನ್ನ ಸಹನೆ, ನೆನಪಿನಶಕ್ತಿ ಎಲ್ಲವನ್ನೂ ಓರೆಗಲ್ಲಿಗೆ ಹಚ್ಚಿದ್ದೇನೆ. ಅದರಲ್ಲಿ ಪ್ರಥಮ ಸತ್ಯವೆಂದರೆ ’ನಾನು ಹಾಲು ಕಾಯಿಸಲು ಅಯೊಗ್ಯ, ಅದು ನನ್ನಿಂದ ಸಾಧ್ಯವಿಲ್ಲ’ ಎಂದು.

* * *

ನನ್ನ ಅಡುಗೆಮನೆಯ 6 ವರ್ಷಗಳ ಅನುಭವವ ಹೊರತಾಗಿಯೂ ವಾರಕ್ಕೆ 4 - 5 ದಿನ ಒಲೆಯ ಮೇಲಿಟ್ಟ ಹಾಲು ಉಕ್ಕಿ ಒಲೆಯನ್ನೆಲ್ಲಾ ಆವರಿಸಿಬಿಡುವದೂ, ನಂತರ ನಾನು ಅದನ್ನು ಅಸಾಧ್ಯವಾದ ನೋವಿನಿಂದ ಒರೆಸುವುದೂ ಒಂದು ಸಾಮಾನ್ಯ ವಿಷಯ. ಆದರೆ ಮೊನ್ನೆಯ ಒಂದು ಘಟನೆ ನನಗೆ ಪ್ರಥಮ ಸತ್ಯದರ್ಶನವನ್ನು ಮಾಡಿಸಿತು. ಒಲೆಯ ಮೇಲಿಟ್ಟ ಹಾಲು ಸತತವಾಗಿ 3-4 ಗಂಟೆಗಳ ಕಾಲ ಕುದಿದು.... ಬಿಳಿಯ ಹಾಲು ಕಪ್ಪಾಗಿ... ಫಳಫಳ ಹೊಳೆಯುತ್ತಿದ್ದ ಪಾತ್ರೆಯೂ ಕಪ್ಪಾಗಿ....ರೂಮಿನ ತುಂಬಾ ಹೊಗೆ ಆವರಿಸಿಬಿಟ್ಟಿತು... ಆದರೆ ನನ್ನ ಕೊಳಲ ಜೊತೆಯಲ್ಲಿದ್ದ ಮನಸ್ಸಿಗೆ ಇದ್ಯಾವುದರ ಪರಿವೆಯೇ ಆಗದೇ,... ಹೀಗೇ ಅವಾಂತರಗಳ ಸರಮಾಲೆ.....


* * *
 ಸಿರಸಿಯಿಂದ ತಂದ ಹೊಸ ದೋಸೆ ಬಂಡಿಯಲ್ಲಿ ತೆಳ್ಳವ್ ದೋಸೆ ಮಾಡೋಣವೆಂದು ಆಸೆಪಟ್ಟು ಒಂದು ಕೆ.ಜಿ. ದೋಸೆಹಿಟ್ಟು ಮನೆಗೆ ತಂದು, ಒಂದು ಪಾತ್ರೆಯಲ್ಲಿ ಹಾಕಿ ಹದಮಾಡಿದೆ. ದೋಸೆ ಬಂಡಿಯನ್ನು ಬಿಸಿಗೆ ಇಟ್ಟು ಪಕ್ಕದಲ್ಲಿ ಬಿಸಿಬಿಸಿಯಾದ ಚಾ ಮಾಡೋಣ ಎಂದು ಹಾಲನ್ನು ಕಾಯಿಸಲು ಇಟ್ಟಿದ್ದೆ. ಚಹಾ ಮಾಡಿದ ನಂತರ ದೋಸೆ ಹಿಟ್ಟಿನ ಪಾತ್ರೆಯನ್ನು ಬಂಡಿಯ ಪಕ್ಕದ ಒಲೆಯಮೇಲೆ ಇಟ್ಟುಕೊಂಡು ಪಕ್ಕದ ಉರಿಯಲ್ಲಿ ದೋಸೆ ಎರೆಯಲು ಶುರು ಮಾಡಿದೆ. ಒಂದು ದೋಸೆಯೇನೋ ಚಟಪಟ ಸದ್ದು ಮಾಡುತ್ತಾ ಮೇಲೆದ್ದು ಬಂತು. ಆದರೆ ಸ್ವಲ್ಪ ಹೊತ್ತಿನಲ್ಲೇ ದೋಸೆ ಹಿಟ್ಟಿನ ಪಾತ್ರೆಯಲ್ಲಿದ್ದ ದೋಸೆ ಹಿಟ್ಟು ಗಟ್ಟಿಯಾಗಿ ಹೊಗೆ ಬಿಡತೊಡಗಿತ್ತು.  ಇದೇನಪ್ಪಾ ಹೊಸತು ಎಂದು ಬಗ್ಗಿ ನೋಡಿದರೆ - ಚಹಾ ಮಾಡಲು ಹಚ್ಚಿದ್ದ ಬೆಂಕಿ ಆರಿಸಲು ಮರೆತೇ ಬಿಟ್ಟಿದ್ದೆ !!!!   ದೋಸೆ ಹಿಟ್ಟಿನ ಪಾತ್ರೆಯಲ್ಲಿದ್ದ ಹಿಟ್ಟು ಗಟ್ಟಿಯಾಗಿ ಮುದ್ದೆಯಾಗಿಬಿಟ್ಟಿತ್ತು :( .... ಹಾಗೇ ನನ್ನ ತೆಳ್ಳವ್ ದೋಸೆ ಮಾಡುವ ಆಸೆ ನನಸಾಗಲೇ ಇಲ್ಲ :(
* * *

ಅಡುಗೆಮನೆ ಎಂದರೆ ಅದೊಂದು ಎಲ್ಲಾ ಥರಹದ ಜೀವಿಗಳಿಗೆ ಆಶ್ರಯತಾಣ. ಅಲ್ಲಿ ಮನುಷ್ಯನೇ ಅಲ್ಪಸಂಖ್ಯಾತ. ರಾತ್ರಿ ಲೈಟ್ ಆಫ್ ಮಾಡಿದಕೂಡಲೇ ಹೊರಬರುವ ಸಾವಿರಾರು ಜಿರಲೆಗಳು... ನಮ್ಮ ಕಸದಬುಟ್ಟಿಯಲ್ಲಿ ಸದಾ ಮನೆ ಮಾಡಿರುವ ಇಲಿಗಳು... ನಮ್ಮ ರೂಮಿನಲ್ಲಿ ಕಾಯಿಸುವ ಹಾಲಿನ ಮೇಲೆ ಸದಾ ಕಣ್ಣಿಟ್ಟಿರುವ ಬೀದಿಯ ಬೆಕ್ಕು...ಊರಿಂದ ತರುವ ಬೆಲ್ಲದ ಡಬ್ಬಿಗೆ ನೇರ ದಾಪುಗಾಲು ಹಾಕುವ ಇರುವೆಗಳು... ಇವೆಲ್ಲರೂ ನಮ್ಮ ಆಜನ್ಮ ವೈರಿಗಳಂತೆ ಭಾಸವಾಗುತ್ತಾರೆ.

ಇಷ್ಟೆಲ್ಲಾ ಕಷ್ಟಗಳನ್ನು ನಿಭಾಯಿಸಿ ರುಚಿಕರವಾದ ಅಡುಗೆ ತಯಾರುಮಾಡುವದು ಸುಲಭಸಾಮಾನ್ಯವೇ?

Monday, September 8, 2008

ಮಳೆಯ ಮೇಲೇಕೆ ದೂರು...?

ಮಳೆ... ಇದು ಅದೇ ಮಳೆಯ ನೀರಲ್ಲವೇ? ಚಿಕ್ಕಂದಿನಲ್ಲಿ ಮಳೆ ಬಂದ ಕೂಡಲೇ ಮನೆಯಿಂದ ಹೊರಕ್ಕೋಡಿ ಕುಣಿದಾಡುತ್ತಿದ್ದೆವಲ್ಲವೇ? ಬೊಗಸೆಯಲ್ಲಿ ನೀರ ಹಿಡಿದು ಗೆಳೆಯನ ಮುಖಕ್ಕೆ ಸೋಕುತ್ತಿದ್ದೆವಲ್ಲವೇ? ಆಕಾಶದೆಡೆಗೆ ಮುಖಮಾಡಿ ಕಣ್ಣಿನಲ್ಲಿ ಪಟಪಟನೇ ಬೀಳುವ ಮಳೆಯ ಹನಿಯನ್ನು ಹಾಗೇ ಆಕರೆದು ಬಾಯನ್ನಗಲಸಿ ಕುಡಿದು ತಪ್ತರಾಗುತ್ತಿದ್ದೆಲ್ಲವೇ?.....ಮಳೆ ತುಂಬಿ ಬಂದು ಅಂತರ್ಜಲ ಉಕ್ಕಿ ಹರಿದಾಗ ದಾರಿಯಲ್ಲಿ ಅಡ್ಡವಾಗಿ ಹರಿಯುತ್ತಿದ್ದ ಒರತೆ ನೀರಿನಲ್ಲಿ ತಾಸುಗಟ್ಟಲೇ ಆಟವಾಡುತ್ತಿದ್ದೆವಲ್ಲವೆ? ಮಳೆಗಾಲದಲ್ಲಿ ತುಂಬಿದ ಬಾವಿಯನ್ನು ಬಗ್ಗಿ ನೋಡುವದು, ಕಣಕಿದ ಬಾವಿಯ ನೀರನ್ನು ಕೋಲಿನಲ್ಲಿ ಅಳಕಿಸುತ್ತಾ ಆಟವಾಡುತ್ತಿದ್ದೆವಲ್ಲವೇ? ಮಳೆ ಬಂದ ಕೂಡಲೇ ಮನೆಯಲ್ಲಿ ಎಷ್ಟು ಖುಷಿ? ಅಜ್ಜ ಪಂಚಾಂಗ ನೋಡಿ ’ಈ ವರ್ಷ ಒಳ್ಳೆ ಮಳೆ ಇದ್ದು ಕಾಣ್ತು’ ಎಂದಾಗ ಮನೆಯಲ್ಲಿ ಎಲ್ಲರ ನಿಟ್ಟುಸಿರು ಇನ್ನೂ ನನ್ನ ಕಿವಿಯಲ್ಲಿ ಗಿರಕಿ ಹೊಡೆಯುತ್ತದೆ.

ಏನಾಯಿತು ಈಗ...? ಒಮ್ಮೆಲೇ...? ಒಂದು ಹನಿ ಮಳೆ ಬಿದ್ದರೂ ’ಥತ್ ಮಳೆ..ಹಾಳಾದ್ದು...ಯಾಕಾದರೂ ಬಂತೋ....ನನ್ನ ಇಡೀ ದಿನವೆಲ್ಲಾ ಹಾಳು...’ ಎಂದೇಕೆ ಗೊಣಗಾಡುತ್ತೇವೆ?

ಇಷ್ಟು ಬೇಗ ನಮ್ಮನ್ನು ಬೆಳೆಸಿದ ನಿಸರ್ಗವನ್ನು ದೂಷಿಸತೊಡಗಿಬಿಟ್ಟೆವೇ? ನಮ್ಮ ಮುಂದಿನ ಜನಾಂಗಕ್ಕೆ ಮಳೆ ಎಂದರೆ ಕೇವಲ ಟ್ರಾಫಿಕ್ ಜ್ಯಾಮ್ ಗೆ ಕಾರಣವಾಗುವ ಅಪರಾಧಿಯಂತೆ ತೋಚುವದೇ?....ನಾವು ಉಸಿರಾಡುವ ಈ ಗಾಳಿ, ಕುಡಿಯುವ ಈ ನೀರು, ಉಣ್ಣುವ ಅನ್ನ, ಬೆಂಕಿ...ಇವೆಲ್ಲ ಎಂದಿನಿಂದಲೂ ಇತ್ತು. ಅದಕ್ಕಾಗಿ ಮಾನವ ಉಳಿದು ಬೆಳೆದಿದ್ದಾನೆ. ನಾವು ತಂತ್ರಜ್ನಾನದಲ್ಲಿ ಎಷ್ಟೇ ಮುಂದುವರಿದರೂ, ನಮ್ಮ ಕೈಯಲ್ಲಿ ಕೋಟಿ-ಕೋಟಿ ಹಣವಿದ್ದರೂ ನಾವೆಲ್ಲರೂ ಕೊನೆಗೆ ಮಾನವ ಪ್ರಾಣಿಗಳು. ನಿಸರ್ಗದೊಡನೆ ಸಂಪೂರ್ಣ ಒಡನಾಟ ದಿನವೂ ಸಾಧ್ಯವಿಲ್ಲದಿದ್ದರೂ, ಅದರ ಇರುವಿಕೆಯ ತುಣುಕುಗಳನ್ನಾದರೂ ದೂಷಿಸದೇ ಪ್ರೀತಿಸಬಹುದಲ್ಲವೇ?.

ಹೊರಗೆ ತುಂತುರು ಮಳೆ... ಎಲ್ಲ ಮರೆತು ಮಳೆಯಲ್ಲಿ ಒಮ್ಮೆ ಮಿಂದು ಬರೋಣ ಎಂಬಾಸೆ.