Showing posts with label ಕವನ. Show all posts
Showing posts with label ಕವನ. Show all posts

Tuesday, June 14, 2011

ಮತ್ತೆ ಮತ್ತೇಕೆ ಓಡಿ ಬರುವೆ ನಾ

ಮತ್ತೆ ಮತ್ತೇಕೆ ಓಡಿ ಬರುವೆ ನಾ
ನಿನ್ನಾ ಮಡಿಲಿಗೆ,

ಮರೆತಿದ್ದೆ ನಿನ್ನಾ ತಣ್ಣೀರಿನ
ಪ್ರೀತಿಯ ಸ್ಪರ್ಶ,
ಅದೆಲ್ಲಿ ಕಳೆದಿದ್ದೆ ನಿನ್ನಲ್ಲಾಡಿದ
ಉಸಿರಿನ ಪುಳಕ,
ಕಳೆದಿದ್ದೆ ನೀಲಾಬಾನಿನ
ತಂಪನೆಯ ನೋಟ,
ಮರೆತಿದ್ದೆ ದಟ್ಟಾರಣ್ಯದ
ಹಕ್ಕಿಗಳ ಚಿಲಿಪಿಲಿ ನಾದ,

ಕಾಣದ ದಾರಿಗೆ,
ಗುರಿಯಿರದ ಬದುಕಿಗೆ,
ಹುಚ್ಚು ಓಟದ ಮನಕೆ,
ಜೀವ ನೀಡಲು ಕೈ
ಎಳೆದು ಕರೆಯುವೆ ನೀ,

ಮತ್ತೆ ಮತ್ತೇಕೆ ಓಡಿ ಬರುವೆ ನಾ
ಓ ಹಿಮಾಲಯವೇ ನಿನ್ನಾ ಮಡಿಲಿಗೆ,
ತಬ್ಬಲಿಯ ಮಗುವಿನಂತೆ...

Saturday, June 28, 2008

ಓ ದಿಗಂತವೇ..........



ಓ ದಿಗಂತವೇ
ಚಿಂತಿಸುತಲಿದ್ದೆ ನಿನ್ನ………

ಬೀಗುತಲಿದ್ದೆ, ನಿನ್ನ ಕಂಡ
ಭ್ರಮೆಯಲ್ಲಿ, ಅರ್ಧಸತ್ಯದ
ಜಾಡಿನಲ್ಲಿ, ನಿಜವಾಗಿಯೂ
ನೀನು ಪೂರ್ತಿಯಲ್ಲವೇ?
ಓ ದಿಗಂತವೇ………

ಹುಡುಕಿದೆ ನಿನ್ನ ಕೋಟಿ
ನಾಮ ದೇಶ ನದಿ ಬಯಲುಗಳಲ್ಲಿ
ಧ್ಯಾನವೇಕಾಂತಗಳೇಕೆ ನಿನ್ನೆಡೆಯ
ದಾರಿ ತೋರಲಿಲ್ಲ, ನೀ
ನನ್ನಲ್ಲೇ ಇದ್ದೆಯಂತಲ್ಲವೆ?
ಓ ದಿಗಂತವೇ…..

ಲೋಕ ಗುಮ್ಮನೆಂದಿತು, ವಿಜ್ನಾನ
ಸಾಧ್ಯವೇ ಇಲ್ಲವೆಂದಿತು,
ಜೊತೆಗೆ ಯಾರಿಲ್ಲ, ಒಬ್ಬಂಟಿ
ಕೊನೆಯಿಲ್ಲದ, ದಿಕ್ಕಿಲ್ಲದ ಪಯಣ,
ಓ ದಿಗಂತವೇ, ಅಂಜುತಲಿದ್ದೆ……..

ಈ ಜಗದ ಓಟದಲ್ಲಿ,
ಅನ್ವೇಷಣೆಯ ಸುಖದಲ್ಲಿ, ಭದ್ರತೆಯ
ಅಡಿಪಾಯಗಳಲ್ಲಿ ನೀನಿಲ್ಲ, ಆದರೂ
ನೀ ನೆರಳು ತೋರಲಿಲ್ಲ, ನಡುಗುತಲಿದ್ದೆ
ಓ ದಿಗಂತವೇ,……. …

ನಾನೋಡಿ ಬಂದೆ ಸಾವಿರ ಕೋಟಿ
ಗುರು ತತ್ವಗಳೆಲ್ಲೆಯ ಮೀರಿ
ಹಣ ಮೋಹ ದಾಹಗಳ ಮೀರಿ
ಕೊನೆಯಲ್ಲಿ ನನ್ನನ್ನೇ ಮೀರಿಸುವ
ಬವಣೆಯಲ್ಲಿ,
ದಣಿದಿದ್ದೆ… ಓ ದಿಗಂತವೇ,……….

ಮೋಡ ಹರಿದಿತ್ತು, ದಿನ ಚಿಗುರಿತ್ತು.
ಹೊಂಗಿರಣ ಮೈಚೆಲ್ಲಿದಾಗ
ನೀರಾಯಿತು ಹುಚ್ಚು ಮನಸ್ಸು
ಬಸಿದ ಕಣ್ಣೀರಿನಲ್ಲಿ ತುಂಬಿತ್ತು
ಕರುಣೆ …. ಓ ದಿಗಂತವೇ,………

ತಂಗಾಳಿ ಮುತ್ತುತಲಿತ್ತು…
ಚಂದಿರ ಮೇಲೇರಿತ್ತು, ಹೃದಯ
ಬಡಿದಿತ್ತು, ದೀಪ ಬೆಳಗಿತ್ತು……..
ಓ ದಿಗಂತವೇ,……………………