ಕಾಳೀ ನದಿ.
ಆಕೆ ಗೋವಾದ ಕುಶಾವಳಿಯಲ್ಲಿ ಹುಟ್ಟಿ ಕರ್ನಾಟಕದ ಪಶ್ಚಿಮ ಘ್ಹಟ್ಟಗಳ ತಪ್ಪಲಿನಲ್ಲಿ ಲತೆಯಾಗಿ ಹರಿದು ಅರಬ್ಬೀ ಸಮುದ್ರವನ್ನು ಸೇರುವ ಬಗೆ ನಿಜಕ್ಕೂ ರುದ್ರರಮಣೀಯ. ನದಿಯ ನೀರು ಕಪ್ಪಾಗಿದ್ದರಿಂದಲೋ ಎನೋ...ಅವಳಿಗೆ ಕಾಳೀ ಎನ್ನುತ್ತಾರೆ ಜನ.ಆಕೆಯ ದಂಡೆಗಳ ಅಕ್ಕಪಕ್ಕದಲ್ಲಿ ತಲೆತಲಾಂತರದಿಂದ ನಡೆಯುತ್ತಿದ್ದ ಬೇಸಾಯ ಅಂತಿಮಗೊಳ್ಳುವ ಕಾಲ ಬಂದಿದ್ದು ಸರಕಾರಕ್ಕೆ ಕಾಳೀ ನದಿಯಿಂದ ಉತ್ಪಾದಿಸಬಹುದಾದ ವಿದ್ಯುತ್ ಬಗ್ಗೆ ಆಸೆ ಹುಟ್ಟಿದಾಗ...
ಅಪ್ಪರ್ ಖಾನೇರಿ ಡ್ಯಾಮ್, ಸೂಪಾ ಡ್ಯಾಮ್, ಬೊಮ್ಮನಹಳ್ಳಿ ಪಿಕ್ ಅಪ್ ಡ್ಯಾಮ್ , ನಾಗಝರಿ ಪವರ್ ಹೌಸ್ , ಕೊಡಸಳ್ಳಿ ಡ್ಯಾಮ್, ಕೈಗಾ ಅಣುಸ್ಥಾವರ, ಕದ್ರಾ ಡ್ಯಾಮ್. ಹೀಗೆ ಕಾಳಿಗೆ ಈಗ ಹಲವಾರು ಕಟ್ಟೆಗಳು....
* * *
ಅರ್ಧಚಂದ್ರಾಕಾರದಲ್ಲಿ ಹಬ್ಬಿರುವ ಪಶ್ಚಿಮ ಘಟ್ಟಗಳ ತೆಕ್ಕೆಯಲ್ಲಿ ಒಂದು ಊರು ಕಳಚೆ. ಅಲ್ಲಿಂದ ಇನ್ನೂ ಕೆಳಗಿಳಿದು ಹೋದರೆ ಕಣಿವೆ ಪ್ರದೇಶ,ಅಲ್ಲೊಂದು ಊರು ಕೊಡಸಳ್ಳಿ.ಪಕ್ಕದಲ್ಲೇ ಕಂಡೂ ಕಾಣದಂತೆ ಕಪ್ಪಾಗಿ ಹರಿಯುತ್ತಿರುವ ನದಿ ಕಾಳಿ, ಅಥವಾ ಅಲ್ಲಿನ ಜನರ ಭಾಷೆಯಲ್ಲಿ ಹೊಳೆ ...ಎಲ್ಲರ ಪ್ರೀತಿಯ ಹೊಳೆ....
ಕೊಡಸಳ್ಳಿ ಮಲೆನಾಡಿನ ಕಾಡಿನ ಹಂದರದಲ್ಲಿ ಬೆಚ್ಚನೆಯ ಆನಂದದಲ್ಲಿ ಮಲಗಿದ್ದ ಊರು.ಊರಿಗೆ ಬಸ್ಸು ಬರಲು ಸಾಧ್ಯವೇ ಇಲ್ಲ. ದೂರದ ಕಳಚೆಗೆ ಬಸ್ಸಲ್ಲಿ ಬರಬೇಕು. ಅಲ್ಲಿಂದ ಕಾಲ್ನಡಿಗೆ. ಅಂದು ನಾನು ಮತ್ತೆ ದೊಸ್ತ ರಘು ಕಳಚೆಯ ಬಸ್ಸು ಹತ್ತಿದಾಗಲೇ ಜೀವ ಕೈಯಲ್ಲಿತ್ತು. ಕಡಿದಾದ ಬೆಟ್ಟಗಳ ನಡುವೆ ಬಸ್ಸು ಓಡುತ್ತಿದ್ದಾಗ, ಅಲ್ಲಲ್ಲಿ ತೋಟಗಳ ನಡುವೆ ಹುದುಗಿದ್ದ ಮನೆಗಳು ಬೆಂಕಿಪೊಟ್ಟಣಗಳಂತೆ ತೋರುತ್ತಿದ್ದವು. ಮಳೆ ಮಾತ್ರ " ಹುಯ್ಯೋ " ಅಂತ ಹೊಯ್ದುಕೊಳ್ಳುತ್ತಲೇ ಇತ್ತು.
ಎಂದಿನಂತೆ ಕಳಚೆಗೆ ಬಂದಾಗ ನಮ್ಮ ಭಿಕ್ಷೆ ಗಣಪತಿ ಅಜ್ಜರ ಮನೆಯಲ್ಲಿಯೇ. ಅಂದು ನಾವು ಬಂದಾಗ ರಾತ್ರಿಯಾಗಿತ್ತು. ಮಾದಜ್ಜಿಯ ಸವಿಸವಿಯಾದ ಊಟವನ್ನು ಸವಿದು ಅಂದು ಎಂದಿನಂತೆ ಬೆಂಕಿಯ ಮುಂದೆ ನಾವೆಲ್ಲರೂ ಸೇರಿದ್ದೆವು. ಗಣಪತಿ ಅಜ್ಜರ ಸಂಚಿಯಿಂದ ಎಂದಿನಂತೆ ಒಂದೊಂದೇ ಕಥೆಗಳು ಹೊರಬರಲಾರಂಭಿಸಿದ್ದವು. ನಾವು ಕುತೂಹಲ ಉತ್ಸಾಹದೊಂದಿಗೆ ತುದಿಗಾಲಲ್ಲಿ ಕುಳಿತು, ಬಾಯಿ ತೆರೆದು, ರೆಪ್ಪೆ ಬಡಿಯಲೂ ಆಗದೇ ಅವರ ಕಥೆಗಳನ್ನು ಕೇಳುತ್ತಿದ್ದರೆ, ಎಂದೂ ಮುಗಿಯದ ಉತ್ಸಾಹದೊಂದಿಗೆ ಅಜ್ಜರ ಬಾಯಿಂದ ಬರುವ ಆ ಕಥೆಗಳು ನಮ್ಮ ಮನದಿಂದ ಅಳಿಯಬೇಕಾದರೆ ನಾವೇ ಅಳಿಯಬೇಕಷ್ಟೆ...!!! ಅಂದಿನ ರಾತ್ರಿ ಭಯ ಹುಟ್ಟಿಸುವಂತಿತ್ತು. ಅಜ್ಜರ ಸಂಚಿಯಿಂದ ಕೊಡಸಳ್ಳಿ ಡ್ಯಾಮಿನ ಕಥೆಗಳು ಹೊರಬರತೊಡಗಿದ್ದವು.....
* * *
ಇಂದಿಗೆ ಸುಮಾರು ಹತ್ತು ವರುಷಗಳ ಹಿಂದಿನ ಕಥೆ...ಸರಕಾರದ ಆದೇಶ ನಿಶ್ಚಿತವಾಗಿತ್ತು...ಪಶ್ಚಿಮ ಘಟ್ಟಗಳ ತೆಕ್ಕೆಯಲ್ಲಿ ಬಳುಕುತ್ತ ಮುಂದೆ ಸಾಗಿದ್ದ ಕಾಳಿಗೆ, ಕೊಡಸಳ್ಳಿಯ ಬಳಿ ಕಟ್ಟೆ ಕಟ್ಟುವದು ಎಲ್ಲ ರೀತಿಯಿಂದಲೂ ನಿಶ್ಚಿತವಾಗಿತ್ತು. ಬಹಳ ಕಷ್ಟದಲ್ಲಿ ಡ್ಯಾಮು ಕಟ್ಟಬೇಕೆಂಬ ಜಾಗಕ್ಕೆ ರಸ್ತೆಯಾಯಿತು. ಅಲ್ಲಿಗೆ ಬಂದ ಎಂಜಿನಿಯರುಗಳನ್ನು ಮೊದಮೊದಲಿಗೆ ಜನ ಶಿಕಾರಿಗೆ ಬಂದವರಿರಬಹುದೆಂದು ನಂಬಿದ್ದರು!!!.
ಭೂತದಂತಹ ಟ್ರಕ್ಕುಗಳೂ, ಬುಲ್ಡೋಜರುಗಳೂ, ಕ್ರೇನುಗಳೂ ಬಂದವು.ಕಾಳಿಯ ಗರ್ಭದೊಳಗೆ ಕಾಂಕ್ರೀಟು ಏಳತೊಡಗಿತು. ಇವೆಲ್ಲವುಗಳ ಅರಿವಾದೊಡನೆ ಜನರ ಆಕ್ರೋಶ ಮುಗಿಲಿಗೇರತೊಡಗಿತು.ಪರಿಸರವಾದಿಗಳೊಡನೆ ಜನ ರಸ್ತೆಗಿಳಿದರು. ಊರ ಮುಖಂಡ ಈಶಣ್ಣ ಕೋರ್ಟಿಗೆ ತಳ್ಳಿ ಅರ್ಜಿ ಸಲ್ಲಿಸಿದನು.ಕ್ರಾಂತಿಕಾರೀ ಯುವಕರು ಆತ್ಮಹತ್ಯೆಯ ಬೆದರಿಕೆಯೊಡ್ಡಿದರು. ಆದರೆ ಎಲ್ಲಾ ತರಹದ ವಿರೋಧಗಳು ಇನ್ನೂ ಹರಿಯುತ್ತಿದ್ದ ಕಾಳಿಯಲ್ಲಿ ಕೊಚ್ಚಿ ಹೋದವು. ಹಿನ್ನೀರು ತುಂಬುವ ಜಾಗದಲ್ಲಿ ಇಂತಿಷ್ಟು ಜಾಗ ಮುಳುಗುತ್ತದೆ ಎಂದು ಎಂಜಿನಿಯರುಗಳು ನಿಖರವಾಗಿ ಬರೆದುಕೊಟ್ಟರು.ಜನರೆಲ್ಲಾ ನಿಧಾನವಾಗಿ ಅವರ ಪುನರ್ವಸತಿ ಜಾಗಗಳಿಗೆ ತೆರಳಬೇಕೆಂದೂ,ಅವರ ಆಸ್ತಿಗೆ ತಕ್ಕಷ್ಟು ಪರಿಹಾರವನ್ನು ನೀಡಲಾಗುವುದೆಂದೂ ನೋಟೀಸುಗಳು ಬಂದವು. ಕಾಳಿಯ ಕಣಿವೆಯಲ್ಲಿ ಗರಗಸದ ಶಬ್ದವೇ ಹಕ್ಕಿಯ ಚಿಲಿಪಿಲಿಯಾಯಿತು.ನಾಟಾಗಳನ್ನು ಒಯ್ಯುವ ಲಾರಿಗಳು ರಾಕ್ಷಸರಂತೆ ವಿಜ್ರಂಭಿಸತೊಡಗಿದವು. ಮರಕುಟುಕನ ಬದಲಿಗೆ ಕೊಡಲಿಯ ಏಟುಗಳು 'ಕಟಕ್ ಕಟಕ್' ಎಂದವು. ಹೀಗೇ ಎರಡು ವರ್ಷಗಳು ಕಳೆದವು. ಕಟ್ಟೆ ಮೇಲೇರತೊಡಗಿತು.
ಜನರಿಗೆ ಪುನರ್ವಸತಿ ಜಾಗವೆಂದು ತಿಳಿಸಲಾಗಿದ್ದ 'ಬಂಜರು ಭೂಮಿ'ಗೆ ತೆರಳಲು ಕೊನೆಯ ಗಡುವಿನ ದಿನಾಂಕವೂ ನಿಶ್ಚಿತವಾಯಿತು. ಎಲ್ಲರೂ ನಿಸ್ಸಹಾಯಕರಾಗಿದ್ದರು.ತಮ್ಮೆಲ್ಲರ ತಾತ-ಮುತ್ತಾತರ ಕಾಲದಿಂದಲೂ ಉಳಿದು ಬೆಳೆದು ಬಂದಿದ್ದ ತಮ್ಮ ಊರನ್ನು ಹೇಗೆ ಬಿಟ್ಟು ಬದುಕುವುದು ಎಂಬುದು ಎಲ್ಲರ ದೊಡ್ಡ ಚಿಂತೆಯಾಗಿತ್ತು. ತಮಗೇ ವಿಧಿ ಏಕಿಂಥ ಶಿಕ್ಷೆ ಕೊಟ್ಟಿತು ಎಂದು ಅರ್ಥವಾಗದೇ ಜನ ಮೂಕರಾದರು.ಜೀವನದ ಜೀವಂತಿಕೆಯೇ ಹೊರಟುಹೋಯಿತು. ತಾವು ಹುಟ್ಟಿ ಬೆಳೆದ ಸ್ವರ್ಗವನ್ನು ಬಿಟ್ಟು ಯಾವುದೋ ಬಂಜರು ಭೂಮಿಯಲ್ಲಿ ಹೋಗಿ ಕುಳಿತಿರಲು ಯಾರಿಗೆ ತಾನೇ ಮನಸ್ಸಾದೀತು......?
* * *
"ಕಿರಿಯ ಪ್ರಾಥಮಿಕ ಶಾಲೆ ಕೊಡಸಳ್ಳಿ"-ಶಾಲೆಯ ಘಂಟೆ ಬಾರಿಸಿತ್ತು."ಏ ನಾಣಿ ನಮ್ಮ ಶಾಲೆ ಮುಳುಗುತ್ತಂತೆ ನಮಗೆ ಇನ್ನು ಯಾವಾಗಲೂ ರಜೆಯೇ..." ಎಂದು ಕೂಗುತ್ತಾ ಓಡಿ ಬಂದ ಮೇಲ್ಮನೆ ರಾಮು. "ಏ ಹಾಗೆಲ್ಲ ಕೂಗಬೇಡ ಸೋರ್ ಕೇಳಿಸ್ಕೊಂಡ್ರೆ ಲತ್ತೆ ಗ್ಯಾರಂಟಿ" ಎಂದು ಸಣ್ಣ ದನಿಯಲ್ಲಿ ಉಸುರಿದ ನಾಣಿ. "ಏ ನಮ್ಮನೇಲಿ ಹೇಳಿದ್ರು ಇನ್ನೆರಡು ತಿಂಗಳಿನಲ್ಲಿ ನಮ್ಮ ಶಾಲೆ ಮುಳುಗುತ್ತಂತೆ, ಆ ಡ್ಯಾಮಿನ ಬಾಗಿಲು ಮುಚ್ಚುತ್ತಾರಂತೆ, ಆಗ ಇಲ್ಲೆಲ್ಲ ನೀರು ತುಂಬಿ ನಮ್ಮ ಶಾಲೆಯೂ ...." ರಾಮುವಿನ ಮಾತು ನಾಣಿಯ ತಗ್ಗಿದ ತಲೆಯನ್ನು ನೋಡಿ ನಿಂತಿತು. ಸಂಜೆ ನಾಣಿ ಶಾಲೆಯಿಂದ ಬರುತ್ತಲೇ ದುಃಖದಿಂದ ಬಂದ. " ಅಕ್ಕಾ ಅಕ್ಕಾ ನಮ್ಮ ಶಾಲೆ ಹೊಳೆಯಲ್ಲಿ ಮುಳುಗುತ್ತಂತೆ ಏಕಕ್ಕಾ ....?" ಎಂದು ಬಿಕ್ಕುತ್ತಾ ಕೇಳಿದ. "ಅದೆಲ್ಲಾ ನಿಂಗ್ಯಾಕೆ?"..ಅಕ್ಕ ಸಿಡಿಮಿಡಿಯಾಗಿ ಬಯ್ದುಬಿಟ್ಟಳು. ಅಪ್ಪ ಖುರ್ಚಿಯ ಮೇಲೆ ಕುಳಿತು ತೋಟವನ್ನೇ ನೋಡುತ್ತಿದ್ದರು. ಅಮ್ಮನ ಮುಖ ಪೂರ್ಣ ಬಾಡಿತ್ತು.
ನಾಣಿಗೆ ಇದ್ಯಾವುದೂ ಯಾವಾಗಿನಂತೆ ತೋರಲಿಲ್ಲ. ಡ್ಯಾಮಿನ ಬಾಗಿಲು ಮುಚ್ಚುವದೂ, ಹೊಳೆಯ ನೀರು ನಿಲ್ಲುವದೂ, ನೀರು ಮೇಲೇರುತ್ತಾ ಮೇಲೇರುತ್ತಾ ಊರು ಕೇರಿಗಳನ್ನೆಲ್ಲಾ ಮುಳುಗಿಸಿಬಿಡುವದೂ, ನಾವೆಲ್ಲಾ ಇಲ್ಲಿಂದ ಮತ್ತೆಲ್ಲಿಗೋ ಹೋಗುವದೂ, ಇದ್ಯಾವದೂ ನಾಣಿಗೆ ಸ್ವಲ್ಪವೂ ಅರ್ಥವಾಗಲಿಲ್ಲ.ಆದರೆ ತನ್ನ ಪ್ರೀತಿಯ ಶಾಲೆ ಮುಳುಗುವದು ಮಾತ್ರ ಆತನಿಗೆ ಅತೀವ ದುಃಖದ ವಿಷಯವಾಗಿತ್ತು. ಶಾಲೆಯ ಜೊತೆಗೆ ತನ್ನ ಪ್ರೀತಿಯ 'ಸೋರ್' ಸಹಾ ಮುಳುಗಿಬಿಟ್ಟರೆ ಎಂಬುದನ್ನು ಕಲ್ಪಿಸಿಕೊಂಡ ನಾಣಿಗೆ ಅತೀವ ದುಃಖವಾಯಿತು. ಆದರೆ ಶಾಲೆಯ ಪುಸ್ತಕ, ಮಗ್ಗಿಗಳು ತನಗೆ ತೊಂದರೆ ಕೊಡಲಾರವು ಎಂದು ಅನಿಸಿ ಸ್ವಲ್ಪ ಖುಷಿಯಾಯಿತಾದರೂ ಆತನಿಗೆ ದುಃಖ ತಡೆಯಲಾಗಲಿಲ್ಲ. ಏನೂ ಅರ್ಥವಾಗದ ನಾಣಿ ಸುಮ್ಮನೇ ರಾಮುವಿನ ಮನೆಯ ಕಡೆಗೆ ಓಡಿದ.....
* * *
ಈಶಣ್ಣನಿಗೆ ಮೊದಲಿನಿಂದಲೂ ಸುಧಾರಣೆಯ ಹುಚ್ಚು. ಎಲ್ಲರ ಊರುಗಳಂತೆಯೇ ತನ್ನ ಊರಿಗೂ ರಸ್ತೆ,ಕರೆಂಟು,ಬಸ್ಸು,ಶಾಲೆಗಳಿಗಾಗಿ ಹೋರಾಡುವ ಮನಸ್ಸು. ಕೊಡಸಳ್ಳಿಗೆ ಸಣ್ಣದೊಂದು ರಸ್ತೆಯಾದರೂ ಬಸ್ಸು ಬರುವಷ್ಟಾಗಲಿಲ್ಲ. ಶಾಲೆ ಅಂತೂ ಇಂತೂ ಸ್ಯಾಂಕ್ಶನ್ ಆಯಿತು. ಕರೆಂಟಿನ ಕಂಬ ಬಂದರೂ ಕರ್ಎಂಟು ಬರಲಿಲ್ಲ.ಆದರೂ ತನ್ನ ತೋಟದ ಕೆಲಸಗಳನ್ನು ಬಿಟ್ಟು ಸರಕಾರೀ ಕಛೇರಿಗಳನ್ನು ಅಲೆಯುವದು ಆತನ ಛಲ. ಸರ್ಕಾರದ ಆದೇಶ ನಿಶ್ಚಿತವಾಗಿತ್ತು. ಮೊನ್ನೆ "ಕೊನೆಯ ನೋಟೀಸು" ಬಂದಿತ್ತು...ಊರು ಖಾಲಿ ಮಾಡಲು. ಈಶಣ್ಣನಿಗೆ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತೆ ಭಾಸವಾಯಿತು.ತಾನು ಊರಿನ ಏಳ್ಗೆಗಾಗಿ ಪಟ್ಟ ಕಷ್ಟವೆಲ್ಲಾ ಊರಿನ ಜೊತೆಗೇ ಮುಳುಗುತ್ತದಲ್ಲಾ ಎಂದು ಮನದುಂಬಿ ಮರುಗಿದ.ಈ ಕೊನೆಯ ನೋಟೀಸು ಊರಿನ ಬಗೆಗಿನ ಕೊನೆಯ ಚೂರು ಆಸೆಯನ್ನೂ ಕರಗಿಸಿತ್ತು.ಈಶಣ್ಣ ನಿಧಾನವಾಗಿ ಖುರ್ಚಿಯ ಮೇಲೆ ಕುಸಿದ. ಆ "ಕೊನೆಯ ನೋಟೀಸು" ಕೈಯಿಂದ ಜಾರಿತು.ದೂರದಲ್ಲಿ ಹೆಬ್ಬಯಕೆಯ ಡ್ಯಾಮು ಕಾಣುತ್ತಿತ್ತು.ಯಾಕೋ ಈಶಣ್ಣ ಇದ್ದಕ್ಕಿದ್ದಂತೆ ಮೂಕನಾಗಿಹೋದ....
* * *
ಆದರೆ ಕೂಲಿ ಕೆಲಸದ ಯೆಂಕನಿಗೆ ಇವೆಲ್ಲದರಿಂದ ಗರಬಡಿದಂತಾಗಿತ್ತು.ಬೆಳೆ ಬೆಳೆಯಲಾರದ ಪುನರ್ವಸತಿಯ ಭೂಮಿಯಲ್ಲಿ ತನಗೇನೂ ಕೆಲಸ ಸಿಗಲಾರದು ಎಂಬುದು ಆತನಿಗೆ ಮನದಟ್ಟಾಗಿತ್ತು.ತನಗಾಗಿ ಇದ್ದ ಗುಡಿಸಿಲಿಗಾಗಿ ಸಿಕ್ಕ ಹತ್ತು ಸಾವಿರ ರೂಪಾಯಿ ಪರಿಹಾರದ ದುಡ್ಡನ್ನು ಕೈನಲ್ಲಿ ಹಿಡಿದು ದಿಕ್ಕುಕಾಣದೇ ನಿಂತಿದ್ದ. ಸರ್ಕಾರದಿಂದ ಅಧಿಕಾರಿಗಳು ಲೆಕ್ಕಪತ್ರ,ಕಡತಗಳ ಸಮೇತ ಬಂದರು.ಆಸ್ತಿಪಾಸ್ತಿಗಳಿಗೆ ಪರಿಹಾರಧನವನ್ನು ನೀಡುವ ಕೆಲಸ ಶುರುವಾಯಿತು.ಅಧಿಕಾರಿಗಳು ನಿಜಕ್ಕಿಂತಲೂ ಹೆಚ್ಚು ಆಸ್ತಿಯನ್ನು ತೋರಿಸಿ ಪರಿಹಾರದ ದುಡ್ಡಿನಲ್ಲಿ ಎಷ್ಟೋ ದುಡ್ಡನ್ನು ತಮ್ಮ ಎಕೌಂಟಿಗೆ ಸೇರಿಸಿಕೊಂಡರು. ಕುಸುಮಾ ಮತ್ತು ಪುಂಡ ರಾಜೇಶನ ಪ್ರೇಮಪ್ರಕರಣ ಇಡೀ ಊರಿಗೇ ತಿಳಿದ ಕುತೂಹಲದ ವಿಷಯ.ಕುಸುಮಾ ಅಚ್ಚೆಮನೆ ಗಜುಭಟ್ಟರ ಒಬ್ಬಳೇ ಮಗಳು.ಹಿತ್ತಲ ಗುಲಾಬಿಯಂತೆ ಬೆಳೆದ ಕುಸುಮಾ ಕಳೆದ ಮೂರು ವರ್ಷಗಳಿಂದ ಭಟ್ಟರ ಕೈತಪ್ಪಿದ್ದಳು. ರಾಜು ಕೇವಲ ಪೋಕರಿಯಾಗಿದ್ದರೆ ಭಟ್ಟರಿಗೇನೂ ತೊಂದರೆಯಿರಲಿಲ್ಲ..ಆದರೆ ಆತ ಕಡುಬಡವನೂ ಹೌದು.ಹದಿನೈದು ಎಕರೆ ಒಣ ಭೂಮಿಗೆ ಒಡೆಯನಾದ ಈತ ಓದಿದ್ದು ಕೇವಲ ಎರಡನೇ ಕ್ಲಾಸಿನವರೆಗೆ.ಗಜುಭಟ್ಟರಿಗೆ ಈ ಸಂಬಂಧ ಸುತಾರಾಂ ಇಷ್ಟವಿರಲಿಲ್ಲ.ಆದರೆ ರಾಜು ಎಂದಿಗೂ ಹಿಂತಿರುಗಿ ನೋಡಿದವನೇ ಅಲ್ಲ.
ತಮ್ಮ ಎದುರಿಗೇ ತಾವು ಬೆವರು ಸುರಿಸಿದ ಮಣ್ಣಿಗೆ ಬೆಲೆ ಕಟ್ಟುವದನ್ನು ನೋಡುತ್ತಿದ್ದ ಜನರ ಕಣ್ಣಲ್ಲಿ ಕಂಬನಿಗಳು ಮೂಡಿದವು.ಇವೆಲ್ಲ ಒಂದು ಹುಚ್ಚು ಕನಸೋ ಅಥವಾ ಕೆಟ್ಟ ಕನಸೋ ಎಂದು ಅವರಿಗೆ ತಿಳಿಯಲಿಲ್ಲ. ರಾಜುವಿನಂಥಹ ಆಶಾವಾದಿಗಳು ತುಂಬಾ ಜನ ಕೊಡಸಳ್ಳಿಯಲ್ಲಿ ತಯಾರಾದರು.ಪರಿಹಾರ ಕೊಡುವ ಅಧಿಕಾರಿಗಳಿಗೆ ಲಂಚದ ರುಚಿ ತೋರಿ ತನ್ನ ಬರಡು ಜಮೀನಿಗೆ ಹದಿನೈದು ಲಕ್ಷ ಗಿಟ್ಟಿಸಿಕೊಂಡ ರಾಜೇಶ ಈಗ ಗಜುಭಟ್ಟರ ಕೈಗೆ ನಿಲುಕುವಂತಿರಲಿಲ್ಲ. ಯಾಕೋ ಗೊತ್ತಿಲ್ಲ,ಆಗಿನಿಂದ ಗಜುಭಟ್ಟರಿಗೆ ರಾಜುವೆಂದರೆ ಅಪಾರ ಗೌರವ. ಅಂದಿನಿಂದ ಕುಸುಮಾ ಅತ್ಯಂತ ಸಂತೋಷವಾಗಿದ್ದಾಳೆ.
* * *
ಏನಕ್ಕೂ ಅಂಜದೇ ಕೆಚ್ಚೆದೆಯಿಂದ ಹರಿಯುತ್ತಿದ್ದ ಕಾಳಿ ದಾರಿಕಾಣದೇ ನಿಂತು ಇಂದಿಗೆ ಐದು ವರ್ಷಗಳೇ ಸಂದವೇನೋ..... ಇಂದು ಹೊಳೆಯ ಮಡಿಲಲ್ಲಿದ್ದ ಜನ ಅಲ್ಲಿಲ್ಲ. ಮಲೆನಾಡಿನ ಬೆಚ್ಚನೆಯ ಕಾಡೊಳಗೆ ಮಲಗಿದ್ದ ಅವರನ್ನು ಪುನರ್ವಸತಿ ಪ್ರದೇಶ ಎಂಬ ಬಂಜರು ಭೂಮಿಯಲ್ಲಿ ಕುಳ್ಳಿರಿಸಲಾಗಿದೆ.ವರ್ತಮಾನದ ಜೀವನದಲ್ಲಿ ಜೀವಿಸಲು ಬಾರದೇ, ತಮ್ಮ ಹಳೆಯ ಬದುಕನ್ನು ಇನ್ನೂ ಎಷ್ಟು ಚೆನ್ನಾಗಿ ಬದುಕಬಹುದಿತ್ತೆಂದು ಅವರು ಇಂದು ಪರಿತಪಿಸುತ್ತಾರೆ. ನಮ್ಮ ನಿಮ್ಮಂಥಹ ಹೊರ ಜಗತ್ತಿನ ವ್ಯಕ್ತಿ ಇವರ ಜೀವನದೊಳಗೆ ಹೊಕ್ಕು ನೋಡಿದರೆ ಅರ್ಥವಾಗದ ಭಾವನೆಗಳ ಕಂದಕದೊಳಕ್ಕೆ ಬೀಳುತ್ತೇವೆ. ಆದರೆ ಸರ್ಕಾರದ ಕಣ್ಣಿಗೆ ಕಾಣುವದು ವಿದ್ಯುತ್ ಉತ್ಪಾದನೆ ಆಗುತ್ತಿರುವದು ಮಾತ್ರ. ಆದರೆ... ಆದರೆ.... ಊರು ಮುಳುಗುವಾಗ ಏನಕ್ಕೆ ಅಂತ ಅರ್ಥವಾಗದೇ ಕಣ್ತುಂಬ ಅತ್ತ ಪುಟ್ಟ ನಾಣಿಯ ದುಃಖ ನಮಗೆ ನಾಟುವದಿಲ್ಲ.ಊರ ಏಳ್ಗೆಗಾಗಿ ಏನೆಲ್ಲ ಮಾಡಿ ಅದೇ ಊರು ಮುಳುಗಿದಾಗ ಈಶಣ್ಣನಿಗೆ ಆದ ವೇದನೆ ನಮಗೆ ಬೇಕಿಲ್ಲ.ಊರು ಮುಳುಗಿದ ನಂತರವೂ ಆ ಘೋರ ಸತ್ಯವನ್ನು ಒಪ್ಪಲಾಗದೇ ಮಾನಸಿಕ ಸ್ಥಿಮಿತಿಯನ್ನು ಕಳೆದುಕೊಂಡ ರಾಮಣ್ಣ ನಮ್ಮ ನೋಟದಲ್ಲಿ ನಿಜವಾಗಿಯೂ ಶತಮೂರ್ಖ.ಊರು ಮುಳುಗಡೆ ಆಗುತ್ತಿರುವಾಗ ತನ್ನ ಆಸೆ ಈಡೇರಿದ್ದಕ್ಕೆ ಕುಸುಮಾ ಹಾಕಿದ ಕೇಕೆಯನ್ನು ನೋಡಿಯೂ ನಮಗೆ ಜೀವನ ಆಡುವ ಆಟಗಳ ಬಗ್ಗೆ ಆಶ್ಚರ್ಯ ವಾಗುವದಿಲ್ಲ!. ಊರು ಕೇರಿಗಳ ಜೊತೆ,ಗದ್ದೆ ತೋಟಗಳ ಜೊತೆ, ದೇವಸ್ಥಾನದ ದೇವರುಗಳ ಜೊತೆ,ಮರ-ಗಿಡಗಂಟಿ-ಕಲ್ಲುಮುಳ್ಳುಗಳ ಜೊತೆ,ಜೊತೆಯಾಗಿ ಇಂಥಹ ಭಾವನೆಗಳು ಮುಳುಗಿ ಸುಮಾರು ಐದಾರು ವರ್ಷಗಳೇ ಸಂದುಹೋದವೇನೋ...
* * *
ಮರುದಿನ ಬೆಳಿಗ್ಗೆ ಅಜ್ಜರು, ಮಾದೇವಮ್ಮ, ರಘು, ನಾನು ಎಲ್ಲರೂ ಕೊಡಸಳ್ಳಿಯ ಹಿನ್ನೀರಿನ ಜಾಗಕ್ಕೆ ಬಂದೆವು.ನಾವೆಲ್ಲ ಮೂಕರಾಗಿದ್ದೆವು.ಶಾಂತವಾಗಿ ನೆಲೆಸಿದ್ದ ನೀರಿನ ಕೆಳಗೆ ಒಂದೊಂದೇ ಅವಶೇಷಗಳು ಕಾಣುತ್ತಿದ್ದವು. ನೀರಲ್ಲೇ ನಿಂತಿದ್ದರೂ ಮರಗಳೆಲ್ಲಾ ಒಣಗಿಬಿಟ್ಟಿದ್ದವು.ರಘು ನಮ್ಮನ್ನೇ ಶಾಂತವಾಗಿ ನೋಡುತ್ತಿದ್ದ ನೀರಿಗೆ ಠಪ್ ಎಂದು ಹೊಡೆದ.ನೀರಿನ ಆಳದಿಂದ ಎಲ್ಲೋ ಹುದುಗಿದ್ದ ಜನರ ಮೌನ ಆಕ್ರಂದನ ಮೇಲೆದ್ದು ಬಂದು ಎದೆಯನ್ನು ಸೀಳಿದಂತಾಯಿತು. ದೂರದಲ್ಲಿ ಒಂದೆರಡು ಕಲ್ಲಿನ ಕಂಬಗಳು ಬಿದ್ದಿದ್ದವು.ಅವು ಕೊಡಸಳ್ಳಿಯ ಹಳೆಯ ದೇವಸ್ಥಾನದ ಕಂಬಗಳಾಗಿದ್ದವೆಂದು ಅಜ್ಜರು ಹೇಳಿದರು.ನೀರಿನ ಕೆಳಗೆ ನಾಣಿಯ ಪುಟ್ಟ ಹೆಜ್ಜೆಗಳು ಮೂಡಿದಂತಾಯಿತು.ಮುರಿದ ಶಾಲೆಯ ಗೋಡೆಯ ಮೇಲೆ 'ಉದ್ಘಾಟಕರು:-ಈಶಣ್ಣನವರು......' ಎಂದೆಲ್ಲ ಬರೆದಿತ್ತು.ದೂರದ ಬೆಟ್ಟದಲ್ಲೊಂದು ಪ್ರಾಣಿ ಚಲಿಸುತ್ತಿರುವಂತೆ ಕಂಡಿತು. ಅದು ನಮ್ಮ ರಾಮಣ್ಣನೇ ಇರಬಹುದೆಂದು ಭಟ್ಟರು ಊಹಿಸಿದರು.ನೀರಿನ ಅಂಚಿಗೆ ಒಂದು ಹೂವಿನ ಗಿಡದಲ್ಲಿ ಸೊಂಪಾಗಿ ಹೂಗಳು ಮೂಡಿದ್ದವು.ನೀರಿನ ಮಧ್ಯದಲ್ಲಿ ತಲೆಕಡಿದ ಅಡಿಕೆ ಮರಗಳು ಹಾಗೆಯೇ ನಿಂತಿದ್ದವು.ಅವುಗಳ ಮೇಲೆ ಯಂಕನ ಬೆವರ ಹನಿಗಳು ಮೂಡಿದಂತಾಯಿತು. ಮನಸ್ಸು ಚೂರಾಗಿ ಹೋಗಿತ್ತು. ಡ್ಯಾಮಿನ ಹಿಂದಿನ ಇಷ್ಟೆಲ್ಲ ಇತಿಹಾಸವನ್ನು ಅರಗಿಸಿಕೊಳ್ಳುವಷ್ಟು ಶಕ್ತಿ ನಮಗಿರಲಿಲ್ಲ.ನಮ್ಮೆಲ್ಲರ ಕಣ್ಣಿನ ಎರಡೆರಡು ಹನಿ ತೊಟ್ಟು ನೀರು ನಿಂತ ಹೊಳೆಗೆ ಸೇರಿದವು...
ಕಾಲುಗಳು ನಿಧಾನವಾಗಿ ಅಜ್ಜರ ಮನೆಯತ್ತ ಹೆಜ್ಜೆ ಹಾಕಿದರೂ,ಮನಸ್ಸು ಮಾತ್ರ ನಿಂತು ಹೋದ ಹೊಳೆಯ ಒಳಕ್ಕೆ ಹೊಕ್ಕು ಇನ್ನೂ ಅಡಗಿದ್ದ ಸಾವಿರಾರು ಭಾವನೆಗಳನ್ನು ಹೆಕ್ಕಲು ಹವಣಿಸುತ್ತಿತ್ತು. ಡ್ಯಾಮು ಮಾತ್ರ ಅಚಲವಾಗಿ ಗಂಭೀರತೆಯಿಂದ ನಮ್ಮನ್ನೇ ನೋಡುತ್ತಿತ್ತು.ನಿಂತ ಹೊಳೆ ನಿಂತೇ ಇತ್ತು.............
--ಎಂ.ಆರ್.
4 comments:
ತುಂಬಾ ಚೆನ್ನಾಗಿ ಬರ್ದಿದ್ದೀಯ ಕಣೊ!
ಹೌದು.. ನಮಗೆ ಅವರೆಲ್ಲರ ವೇದನೆಯ ಆಳ ಅರ್ಥವಾಗುವುದೇ ಇಲ್ಲ.
ಇದಕ್ಕೆ ’ಕಥೆಗಳು’ ಅಂತ ಲೇಬಲ್ ಹಾಕಿದ್ದೀಯ. ಕಥೆ ಅಂದ್ರೆ ಕಾಲ್ಪನಿಕ ಅನ್ನಿಸಿಬಿಡತ್ತೆ ಅನ್ನಿಸ್ತು.
I do not know how to use the Kannada script which is the reason why I am posting my comment in English.
The writing has left behind in me a deep impression, perhaps in someways a justification of what I have always felt. Reading your article made me reflect my own thoughts about the issue you chose to write. It is a deeply sensitive issue and perhaps people who have been unfortunate to not develop a cordial note with nature will never come to grips with the essence of what you write.
For some vague reason I recollect the high priest of nature, William Wordsworth, who said, "Poetry cannot be made to flow through artificially laid pipes. Poetry is born, not in minds but in hearts overflowing with powerful emotions". The ability to feel one with nature, I reckon, is endowed upon those who have heads synchronous with their hearts thereby allowing to feel one with nature and at the same time being able to interpret the sanctity of this union.
It was an extremely beautiful and sensitive write up and my many congratulations to you and I hope there will be many more such articles in the future.
Good luck.
very nice story(reality)with a good narration. I heard same situation from my mother when Linganamakki dam was constructed and my grandpa(mother's father)suffered a lot to get the compensation for his property and pain caused for them to leave the place. I visited few places near to sharavathi back water, situation now is very horrible. After every rainy season soil will get clotted from the bottom of the river and water level get decreased. After a decade or so we will able to see the effect of so called developement with fighting against nature. Finally governament did not achieve anything. They are not able to provide proper electricity for the people who lost everything to produce electricity or any other so called noble cause from governament.
Post a Comment