ಬೆಟ್ಟದ ಜೀವ...
ನಮ್ಮಲ್ಲಿ ಅನೇಕರು ಓದಿರಬಹುದಾದ ಶಿವರಾಮ ಕಾರಂತರ ಪ್ರಖ್ಯಾತ ಕೃತಿಗಳಲ್ಲಿ ಒಂದು.
ಸುಬ್ರಹ್ಮಣ್ಯದ ಕುಮಾರ ಪರ್ವತದ ಬಳಿ ಅಕಸ್ಮಾತ್ ಆಗಿ ಕಾರಂತರು ದಾರಿ ತಪ್ಪಿ ಒಬ್ಬ ಮಹನೀಯರ ಮನೆಗೆ ಬರುತ್ತಾರೆ. ದೂರದ ಬೆಟ್ಟದಲ್ಲಿ, ಮನುಷ್ಯರ ಓಡಾಟವೇ ಇರದ ಜಾಗದಲ್ಲಿ ತೋಟವನ್ನು ಮಾಡಿಕೊಂಡಿದ್ದ ಗೋಪಾಲಯ್ಯನವರನ್ನು ನೋಡಿ ಆಶ್ಚರ್ಯವಾಗಿ ಅಲ್ಲೇ ಒಂದು ವಾರದವರೆಗೆ ತಂಗುತ್ತಾರೆ. ಪೇಟೆಯ ಜೀವನ ಹಾಗೂ ನಿಸರ್ಗದ ಜೊತೆಗಿನ ಜೀವನ ಶೈಲಿಯ ವ್ಯತ್ಯಾಸವನ್ನು ಕಾರಂತರು ಇಲ್ಲಿ ಬಹಳ ಸೂಕ್ಷ್ಮವಾಗಿ ವಿವರಿಸಿದ್ದಾರೆ.ಇದನ್ನು ಓದುತ್ತಿದ್ದಂತೆ ನಾವು ಕುಮಾರಪರ್ವತಕ್ಕೆ ಚಾರಣಕ್ಕೆ ತೆರಳಿದಾಗ ಅಲ್ಲಿನ ಭಟ್ಟರ( ಇವರು ಕುಮಾರ ಪರ್ವತದ ಅರ್ಧದಷ್ಟು ಎತ್ತರದಲ್ಲಿ ಇನ್ನೂ ಬೇಸಾಯವನ್ನು ನಡೆಸುತ್ತಿದ್ದಾರೆ!!!) ಮನೆಯಲ್ಲಿ ನಮಗಾದ ಅನುಭವಗಳನ್ನು ಕಾರಂತರ ಅನುಭವಗಳಿಗೆ ತಾಳೆ ಮಾಡಿಕೊಂಡೆ:-).
ನಮ್ಮ ನಾಗರೀಕತೆಯಲ್ಲಿ ಇಷ್ಟೆಲ್ಲಾ ಕ್ರಾಂತಿಕಾರೀ ಬದಲಾವಣೆಗಳಾಗಿವೆ. ಎಲ್ಲರೂ ಹೊಸ ಹೊಸ ಜೀವನ ಶೈಲಿಗಳಿಗೆ ಮಾರುಹೋಗುತ್ತಿದ್ದೇವೆ...ದಿನದಿನಕ್ಕೂ.. ಯಾರಾದರೂ ಬಸ್ಸೇ ಬರಲಾಗದ, ಸೈಕಲ್ಲನ್ನೂ ತುಳಿಯಲಾಗದ, ಜನ ಸಂಚಾರವೇ ಇರದ, ಕಾಡು ಪ್ರಾಣಿಗಳ ಬೆದರಿಕೆಯಡಿ, ’ಬೆಟ್ಟದ ಮೇಲೊಂದು ಮನೆಯ ಮಾಡಿಕೊಂಡು ಇರು’ ಎಂದರೆ ಕೋಟಿ ಕೊಟ್ಟರೂ ಹೋಗಲಿಕ್ಕಿಲ್ಲ ನಾವೆಲ್ಲ ಅಲ್ಲವೇ..?..
ಆದರೂ ಕಾರಂತರು ಹೋದಾಗ ಇದ್ದ ಭಟ್ಟರೂ ಹಾಗೂ ಈಗ ಕುಮಾರ ಪರ್ವತದಲ್ಲಿ ನೆಲೆಸಿರುವ ಭಟ್ಟರಂತವರು ಕೋಟಿಗೊಬ್ಬರು. ಎಲ್ಲರಂತೆ ಜೀವಿಸುವ ಅವಕಾಶವಿದ್ದೂ ನಿಸರ್ಗದ ನಿಕಟತೆಯನ್ನೇ ಅಪ್ಪಿಕೊಂಡವರು. ಆನೆಗಳು ತೋಟಕ್ಕೆ ಧಾಳಿಯಿಟ್ಟರೆ ಒಂದೇ ಕ್ಷಣದಲ್ಲಿ ವರ್ಷಾನುಗಟ್ಟಳೆ ಕಷ್ಟಪಟ್ಟು ಬೆಳೆದ ಬೆಳೆಯ ನಾಶ, ಹುಲಿ ಬಂದು ಮನೆಯ ಜಾನುವಾರುಗಳನ್ನು ಹೊತ್ತೊಯ್ದರೆ ಅದು ಹುಲಿಯ ಪಾಲು..ಬೇಸಾಯಕ್ಕೆ ಸಿಗದ ಆಳುಕಾಳುಗಳು..ಯಾವತ್ತಲೂ ಆವರಿಸಿರುವ ಮೋಡದ ವಾತಾವರಣದಿಂದ ಆಗಾಗ್ಗೆ ಬರುವ ಛಳಿಯ ಜ್ವರ..ಒಮ್ಮೆ ಪೇಟೆಗೆ ಹೋಗಬೇಕೆಂದರೆ ದಿನಗಟ್ಟಲೆ ಸಮಯ...ಇತ್ಯಾದಿ ಇತ್ಯಾದಿ ಅನೇಕ ತೊಡಕುಗಳು.
ಇಷ್ಟೆಲ್ಲಾ ಕಷ್ಟ ಕಾರ್ಪಣ್ಯಗಳನ್ನೆಲ್ಲಾ ಮೀರಿ ಇವರು ತಮ್ಮ ಸುತ್ತಲಿನ ಬೆಟ್ಟಗುಡ್ಡಗಳಿಗಿಂತ ಸುಂದರವಾದುದನ್ನು ಬೇರೆಲ್ಲಿಯೂ ಕಾಣಲಿಲ್ಲ..ನಮಗೆ ಏನಾದರೊಂದು ಬೇಕು. ರಾಜಕೀಯವೋ, ಜಾತಿಯೋ, ಧರ್ಮವೋ, ಪಂಥವೋ, ದೇಶವೋ, ನಮ್ಮ ಆದರ್ಶಗಳೋ...ಏನಾದರೊಂದು...ಅದಕ್ಕಾಗಿ ನಾವು ಸದಾ ತುಡಿಯುತ್ತಿರುತ್ತೇವೆ. ಅದಕ್ಕೇ ನಮಗೆ ಗೋಪಾಲಯ್ಯನವರಂತೆ ಬದುಕಲು ಸಾಧ್ಯವಿಲ್ಲ. ಜೀವನ ಪೂರ್ತಿಯೂ ಪ್ರಕೃತಿಯ ಜೊತೆ ಬದುಕಲು ಇವೆಲ್ಲವನ್ನು ಬಿಡಬೇಕೆನೋ...ಯಾಕೆಂದರೆ ನಮ್ಮನ್ನು ಸಾಕಿದ ಈ ಭೂಮಿ, ಈ ನೀರು, ಈ ಆಕಾಶ ಯಾವುದಕ್ಕೂ ಇದಾವುದರ ಪರಿವೆಯಿಲ್ಲ...ಅದು ಕೇವಲ ಮಾನವತೆಯನ್ನು ಬೇಡುತ್ತದೆ ಹಾಗೂ ಕಲಿಸುತ್ತದೆ... ಅಂಥ ಬದುಕನಲ್ಲಿ ಕಾಣುವ ಮಾನವನ ಸಂತೋಷ-ನೆಮ್ಮದಿಗಳು, ನಮ್ಮ ಸಾಧನೆಯ-ಛಲದ ಮನುಷ್ಯ ಜೀವನದಲ್ಲಿ ದಕ್ಕುವದು ಬಹಳ ಕಠಿಣವೆಂದೆನಿಸುತ್ತದೆ.
ಹಳ್ಳಿಯ ಜನರಲ್ಲಿನ ಅತಿಥಿ ಸತ್ಕಾರ, ಅವರ ಅಮಾಯಕತೆ, ಎಂದಿಗೂ ಮುಪ್ಪಡರದ ಸುಂದರ ಮನಸ್ಸು, ಎಲ್ಲದಕ್ಕಿಂತ ಮುಖ್ಯವಾಗಿ ನಿಸರ್ಗದ ಜೊತೆಗಿನ ಅವಿನಾಭಾವ ಸಂಬಂಧ ಹಾಗೂ ನಿಸರ್ಗದ ಜೊತೆಗಿನ ಸಹಬಾಳ್ವೆ...ಇಂತಹ ವಿಷಯಗಳು ನಮಗೆ ಅರ್ಥವಾಗದವು. ಅದನ್ನು ಕಾರಂತರು ಬಹಳ ಒತ್ತಿ ಒತ್ತಿ ನಮಗೆ ತಿಳಿಸುತ್ತಾರೆ. ಇದು ನಮ್ಮ ಇಂದಿನ ಜೀವನ ಪದ್ಧತಿಯನ್ನು ಪುನರಾಮರ್ಶಿಸುವಂತೆ ಮಾಡುತ್ತದೆ.
"ಬೆಟ್ಟದ ಜೀವ"ದಲ್ಲಿ ಮಾನವ ಜೀವನದ ಇನ್ನೊಂದು ಮಗ್ಗುಲನ್ನು ಕಾಣಬಹುದು...
ಕಾರಂತರ "ಬೆಟ್ಟದ ಜೀವ"ವನ್ನು ಓದಿ...ತಪ್ಪದೇ...
No comments:
Post a Comment