Monday, April 7, 2008

ಇಪ್ಪತ್ತು ವರ್ಷಗಳ ಬಳಿಕ

ಹೆಲೋ ಗೆಳೆಯರೆ,

"After twenty years" ಎನ್ನುವ ಸಣ್ಣ ಕಥೆ. ಬರೆದವರು ಓ ಹೆನ್ರಿ ಮಹಾಶಯ. ಸಾಹಿತ್ಯ ಜಗತ್ತು ಕಂಡ ಅದ್ಭುತವಾದ ಕಥೆಗಾರರಲ್ಲೊಬ್ಬ. ನನ್ನ ಹತ್ತನೇ ತರಗತಿಯಲ್ಲಿ ಈ ಕಥೆ ನಮಗೆ ಆಂಗ್ಲ ಮಾಧ್ಯಮದ ಗದ್ಯ ವಿಭಾಗದಲ್ಲಿ ಒಳಗೊಳ್ಳಲ್ಪಟ್ಟಿತ್ತು. ಆಗ (jan 2000) ಈ ಕಥೆಯನ್ನು ಕನ್ನಡಕ್ಕೆ ಭಾಷಾಂತರಗೊಳಿಸುವ ಪ್ರಯತ್ನ ನಡೆಸಿದ್ದೆ. ಆ ಪ್ರತಿ ಮೊನ್ನೆ ಮನೆಯನ್ನು "clean:-)" ಮಾಡುವ ಸಮಯದಲ್ಲಿ ದೊರಕಿದಾಗ ಆದ ಸಂತೋಷ ಅಷ್ಟಿಷ್ಟಲ್ಲ...!!!

ಎಷ್ಟೋ ತಿದ್ದುಪಡಿಗಳ ಅವಶ್ಯಕತೆ ಇದ್ದರೂ, ಸುಮಾರು 8 ವರ್ಷಗಳ ಹಿಂದಿನ ನನ್ನ ಭಾವನೆಗಳನ್ನು (ಓ ಹೆನ್ರಿಯ ಮನಸ್ಸಿನ ಮೂಲಕ ಕಂಡಿದ್ದು!!) ತಿರುಚಬಾರದೆಂದೆನಿಸಿತು...

ಇನ್ನೊಮ್ಮೆ ’ಓ ಹೆನ್ರಿ’ಗೆ ಸಲಾಂ ಹೊಡೆಯುತ್ತಾ.....

ಇಪ್ಪತ್ತು ವರ್ಷಗಳ ಬಳಿಕ
.................................

ಪೋಲೀಸ್ ಅಧಿಕಾರಿಯೊಬ್ಬ ಯಾವುದೋ ಕೆಲಸವೊಂದರ ಸಲುವಾಗಿ ಅಂದು ಆ ಬೀದಿಯಲ್ಲಿ ನಡೆಯುತ್ತಾ ಇದ್ದ. ಆತ ನಡೆಯುತ್ತಿರುವ ಶೈಲಿ,ಆತನ ಭಂಗಿ ತುಂಬಾ ಚೈತನ್ಯಕಾರಿಯಾಗಿದ್ದವು. ಬೀಸುತ್ತಿದ್ದ ತಂಪಾದ ಗಾಳಿ ಈಗಲೋ ಆಗಲೋ ಮಳೆ ಬರಬಹುದೆಂಬುದನ್ನು ಸೂಚಿಸುತ್ತಿತ್ತು. ಆದ್ದರಿಂದ ಬೀದಿ ನಿರ್ಜನವಾಗಿತ್ತು. ಆತನನ್ನು ಗಮನಿಸಲು ಅಲ್ಲಿ ಒಂದು ನರಪಿಳ್ಳೆಯೂ ಇರಲಿಲ್ಲ.

ಹೀಗೇ ಆತ ಮುಂದೆ ಮುಂದೆ ನಡೆದ, ತನ್ನ ಕೈಯಲ್ಲಿದ್ದ ಲಾಠಿಯನ್ನು ವಿಧವಿಧವಾಗಿ ತಿರುಗಿಸುತ್ತಾ. ಆತನ ಕಣ್ಣಿನ ತೀಕ್ಷ್ಣ ನೋಟಗಳು ಆ ಬೀದಿಯ ಪ್ರತೀ ನೋಟವನ್ನೂ ಸೆರೆ ಹಿಡಿಯುತ್ತಿದ್ದವು. ಸ್ವತಃ ಶಾಂತಿಯ ರಕ್ಷಕನೋ ಎಂಬಂತೆ ಆತ ಅಲ್ಲಿ ಪ್ರತ್ಯಕ್ಷನಾಗಿದ್ದ. ಅಲ್ಲಲ್ಲಿ ಔಷಧಿ ಅಂಗಡಿಗಳೋ, ಹೊಟೇಲುಗಳೋ ತೆರೆದಿದ್ದು ಕಂಡುಬರುತ್ತಿತ್ತು. ಆದರೆ ಬೀದಿಯುದ್ದಕ್ಕೂ ಮುಚ್ಚಿದ ಬಾಗಿಲುಗಳೇ ಕಣ್ಣನ್ನು ಕುಕ್ಕುತ್ತಿದ್ದವು.

ಆತ ಹೀಗೆಯೇ ನಡೆಯುತ್ತಿದ್ದಂತೆ ಸ್ವಲ್ಪ ಸಮಯದಲ್ಲಿ ಆತ ತನ್ನ ನಡಿಗೆಯನ್ನು ಒಮ್ಮೆಲೇ ನಿಧಾನಿಸಿದ. ಅಲ್ಲೊಂದು ಕಬ್ಬಿಣದ ಅಂಗಡಿ ಇತ್ತು. ಬಾಗಿಲು ಮುಚ್ಚಿತ್ತು. ಆ ಬಾಗಿಲನ್ನು ಓರೆಯಾಗಿ ಒರಗಿ ನಿಂತಿದ್ದ ಒಬ್ಬಾತನನ್ನು ಆತ ಕಂಡ. ಸ್ವಲ್ಪ ತೆಳ್ಳಗಿದ್ದ ಆ ವ್ಯಕ್ತಿಯ ಕೈಯಲ್ಲಿ ಇನ್ನೂ ಬೆಂಕಿ ಹೊತ್ತಿಸದ ಸಿಗರೇಟೊಂದು ಇತ್ತು. ಯಾವಾಗ ಪೋಲೀಸ್ ಅಧಿಕಾರಿಯು ತನ್ನ ನಡಿಗೆಯನ್ನು ನಿಧಾನಗೊಳಿಸಿದನೋ ಆ ಕೂಡಲೇ ಬಾಗಿಲಿಗೆ ಓರೆಯಾಗಿ ನಿಂತಿದ್ದ ಮನುಷ್ಯ ತನ್ನ ಮಾತನ್ನು ಆರಂಭಿಸಿದ.

"ಅವೆಲ್ಲಾ ಸರಿ ಆಫೀಸರ್, ನಾನು ನನ್ನೊಬ್ಬ ಗೆಳೆಯನಿಗಾಗಿ ಕಾಯ್ತಾ ಇಲ್ಲಿ ನಿಂತುಕೊಂಡಿದ್ದೇನೆ ಅಷ್ಟೇ. ನಾವಿಬ್ಬರೂ ಇಂದು ಇದೇ ಸಮಯದಲ್ಲಿ ಇಲ್ಲಿ ಭೇಟಿಯಾಗುವ ಒಪ್ಪಂದ ನಡೆದದ್ದು ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದೆ. ನಿಮಗೆ ನನ್ನ ಮಾತು ಹಾಸ್ಯಾಸ್ಪದವಾಗಿ ಕಾಣುವದಿಲ್ಲವೇ?..ಇರಲಿ. ನಾನು ನಿಮಗೆ ಎಲ್ಲವನ್ನೂ ಬಿಡಿಸಿ ಹೇಳಲು ಇಷ್ಟಪಡುತ್ತೇನೆ. ಬಹಳ ವರ್ಷಗಳ ಹಿಂದೆ ಇಲ್ಲೊಂದು "ಬಿಗ್ ಜೋ ಬ್ರಾಡೀಸ್" ಎಂಬ ಹೊಟೇಲೊಂದಿತ್ತು......."

"ಸುಮಾರು ಐದು ವರ್ಷಗಳ ಹಿಂದೆಯೇ ಅದನ್ನು ಕೆಡವಿಬಿಟ್ಟರು." ಪೊಲೀಸ್ ಅಧಿಕಾರಿ ಹೇಳಿದ.

ಅಷ್ಟರಲ್ಲಿ ಗೋಡೆಗೆ ಒರೆಯಾಗಿ ನಿಂತಿದ್ದ ಆ ಮನುಷ್ಯ ತನ್ನ ಬಾಯಲ್ಲಿರುವ ಸಿಗರೇಟಿಗೆ ಬೆಂಕಿ ಹಚ್ಚಲೆಂದು ಬೆಂಕಿ ಕಡ್ಡಿಯನ್ನು ಗೀರಿದ. ಅಲ್ಲಿಯವರೆಗೆ ಪೊಲೀಸನಿಗೆ ಆ ನಿಂತ ವ್ಯಕ್ತಿಯ ಮುಖ ಅಷ್ಟು ಸ್ಪಷ್ಟವಾಗಿ ಕಂಡಿರಲಿಲ್ಲ. ಆದರೆ ಬೆಂಕಿ ಕಡ್ಡಿಯ ಬೆಳಕಿನಲ್ಲಿ ಆ ನಿಂತ ಮನುಷ್ಯನ - ಅಗಲವಾದ ಹಾಗೂ ಚೌಕವಾದ ಮುಖವನ್ನೂ, ತೀಕ್ಷ್ಣವಾದ ಕಣ್ಣುಗಳನ್ನೂ ಹಾಗೂ ಬಲಹುಬ್ಬಿನ ಮೇಲೊಂದು ಗಾಯವನ್ನೂ ಆ ಅಧಿಕಾರಿ ಕಂಡುಕೊಂಡ. ಅಲ್ಲದೇ ಆ ವ್ಯಕ್ತಿ ಒಂದು ವಜ್ರದ ಸರವನ್ನೂ ಧರಿಸಿದ್ದ.

ನಿಂತ ಮನುಷ್ಯ ಮುಂದುವರೆಸಿದ. " ಇಪ್ಪತ್ತು ವರ್ಷಗಳ ಹಿಂದೆ ಇದೇ ರಾತ್ರಿ, ನಾನೂ ನನ್ನ ಅತ್ಯುತ್ತಮ ಗೆಳೆಯ ಜಿಮ್ಮಿ ವೇಲ್ಸ್ ಇಬ್ಬರೂ ಇದೇ ’ಬಿಗ್ ಜೋ ಬ್ರಾಡೀಸ್’ ಹೊಟೇಲಿನಲ್ಲಿ ಊಟ ಮಾಡಿದ್ದೆವು. ಈ ಇಡೀ ಜಗತ್ತಿನಲ್ಲೇ ನನ್ನ ಅತ್ಯುತ್ತಮ ಸ್ನೇಹಿತ ಆತ. ನಾನೂ ಮತ್ತು ಜಿಮ್ಮಿ ಇಬ್ಬರೂ ಇದೇ ನ್ಯೂಯಾರ್ಕ್ ನಗರದಲ್ಲಿ ಅಣ್ಣತಮ್ಮಂದಿರಂತೆ ಬೆಳೆದವು. ಆಗ ನನಗೆ 18 ವರ್ಷ ಪ್ರಾಯ. ಆತನಿಗೆ 20 ವರ್ಷವಾಗಿತ್ತು. ಆ ರಾತ್ರಿಯ ಊಟದ ನಂತರ ನಾನು ನನ್ನ ಭವಿಷ್ಯವನ್ನು ಅರಸಿಕೊಂಡು ಪಶ್ಚಿಮದ ಕಡೆಗೆ ಹೊರಟೆ. ಆದರೆ ಜಿಮ್ಮಿ ಮಾತ್ರ ಇಲ್ಲೇ ಇದ್ದಿರಬಹುದು. ಆತ ಈ ನ್ಯೂಯಾರ್ಕ್ ನಗರ ಮಾತ್ರ ಪ್ರಪಂಚದಲ್ಲಿ ಬದುಕಲು ಯೋಗ್ಯವಾದ ಜಾಗವೆಂದು ತಿಳಿದಿದ್ದ. ಇರಲಿ ಬಿಡಿ. ಆ ರಾತ್ರಿ ನಾವಿಬ್ಬರೂ ಒಂದು ಒಪ್ಪಂದ ಮಾಡಿಕೊಂಡೆವು. ಏನೆಂದರೆ ’20 ವರ್ಷಗಳ ಬಳಿಕ ಸರಿಯಾಗಿ,ನಾವು ಹೇಗೇ ಇರಲಿ-ಎಲ್ಲೇ ಇರಲಿ, ಇದೇ ಸಮಯಕ್ಕೆ ಇದೇ ಜಾಗದಲ್ಲಿ ನಾವಿಬ್ಬರೂ ಮತ್ತೆ ಪರಸ್ಪರ ಭೇಟಿಯಾಗಬೇಕೆಂದು."

"ಇದು ಬಹಳ ಆಷ್ಚರ್ಯದ ವಿಷಯವಾಗಿದೆ....ನೀವಿಬ್ಬರೂ ಬೇರೆಯಾದ ಮೇಲೆ ಪರಸ್ಪರ ಪತ್ರವ್ಯವಹಾರ ನಡೆಸಲಿಲ್ಲವೇ?..." ಕೇಳಿದ ಪೊಲೀಸ್ ಅಧಿಕಾರಿ.

"ಹೂಂ..ಹೌದು..ಎಲ್ಲೋ ಒಮ್ಮೊಮ್ಮೆ ಪತ್ರಗಳ ಮುಖಾಂತರ ನಾವು ಪರಸ್ಪರ ಸಂಧಿಸಿದ್ದೆವು. ಕೊನೆಗೊಮ್ಮೆ ಅದರ ಕೊಂಡಿಯೂ ತಪ್ಪಿ ಹೋಯಿತು. ಆದರೆ ನೀವು ಏನೇ ಹೇಳಿ,ಪಷ್ಚಿಮದಲ್ಲಿ ಸಾಕಷ್ಟು ಅವಕಾಶಗಳಿವೆ. ಅಲ್ಲಿ ನಾನು ಸುಂದರವಾದ ಜೀವನ ನಡೆಸಿದೆ.ಇರಲಿ....ಆದರೆ ಇಂದು ಜಿಮ್ಮಿ ನನ್ನನ್ನು ಭೇಟಿ ಆಗೇ ಆಗ್ತಾನೆ. ಏಕೆಂದರೆ ಆತ ಸತ್ಯವಂತನಾಗಿದ್ದ. ಕೊಟ್ಟ ಮಾತಿಗೆ ಎಂದೂ ತಪ್ಪಿದವನಲ್ಲ. ಆತ ನನ್ನನ್ನು ಮರೆಯಲೂ ಸಾಧ್ಯವಿಲ್ಲ. ಇಂದು ಈ ಕ್ಷಣ, ಈ ಅಂಗಡಿಯ ಬಾಗಿಲ ಬಳಿ ನಿಲ್ಲಲು ನಾನು ಸಾವಿರಾರು ಮೈಲಿ ದೂರದಿಂದ ಬಂದಿರುವೆ..."

ತನ್ನ ಗೆಳೆಯನಿಗಾಗಿ ಕಾಯುತ್ತಾ ನಿಂತಿದ್ದ ಆ ಮನುಷ್ಯ ತನ್ನ ಕಿಸೆಯಿಂದ ಸುಂದರವಾದ ಕೈಗಡಿಯಾರವೊಂದನ್ನು ತೆಗೆದ. ಅದರಲ್ಲಿನ ಚುಕ್ಕೆಗಳು ವಜ್ರದ ಹರಳುಗಳಿಂದ ಮಾಡಿದ್ದರಿಂದ ಆ ಗಡಿಯಾರ ಕಣ್ಣನ್ನು ಕುಕ್ಕುವಂತಿತ್ತು...
"ಹತ್ತು ಗಂಟೆಗೆ ಕೇವಲ 3 ನಿಮಿಷಗಳಿವೆ. ಇದೇ ಹತ್ತು ಗಂಟೆಗೆ ನಾನೂ ಮತ್ತು ಜಿಮ್ಮಿಯೂ ಆ ಹೊಟೇಲಿನ ಬಾಗಿಲಿಂದ ಬೇರೆ ಬೇರೆ ಕಡೆಗೆ ಹೊರಟೆವು." ಆತ ಹೇಳಿದ.

"ನೀವು ಪಶ್ಚಿಮದಲ್ಲಿ ಬಹಳ ಸುಖವಾಗಿ ಬದುಕುತ್ತಿದ್ದೀರಿ ಎಂದೆನಿಸುತ್ತದೆ..."

"ಹೌದು ಹೌದು...ಆದರೆ ಜಿಮ್ಮಿ ಒಂದು ರೀತಿಯಲ್ಲಿ ಬಹಳ ಒಳ್ಳೆಯ ಕೆಲಸವನ್ನೇ ಮಾಡಿದ ಎಂದೆನಿಸುತ್ತದೆ. ಯಾಕೆಂದರೆ ಜಿಮ್ಮಿ ಎಷ್ಟು ಒಳ್ಳೆಯವನೋ ಅಷ್ಟೇ ಒಂದು ಥರಹದ ನಿಧಾನದ ಮನುಷ್ಯ. ನಾನು ಈ ಮಟ್ಟಕ್ಕೆ ಏರಬೇಕಾದರೆ ಎಷ್ಟು ಕಷ್ಟಪಟ್ಟೆ...ಎಷ್ಟು ಜನರ ಜೊತೆ ಹೋರಾಡಿದೆ...ಹೇಳತೀರದು...ಜಿಮ್ಮಿಗಂತೂ ಇಂಥಹ ಸ್ಥಿತಿ ಖಡ್ಗದ ಓರೆಯ ಮೇಲೆ ನಿಂತಷ್ಟು ಕಷ್ಟವಾಗುತ್ತಿತ್ತು...."

ಪೊಲೀಸ್ ಅಧಿಕಾರಿ ತನ್ನ ಲಾಠಿಯನ್ನು ಆಚೀಚೆ ತಿರುಗಿಸುತ್ತಾ, ಒಂದೆರಡು ಹೆಜ್ಜೆಯನಿಟ್ಟು ಹೇಳಿದ.
"ನಾನಿನ್ನು ಹೊರಡುವೆ.ನಿಮ್ಮ ಗೆಳೆಯ ಇಲ್ಲಿಗೆ ಸ್ವಲ್ಪ ಕ್ಷಣಗಳಲ್ಲಿ ಬಂದೇ ಬರುತ್ತಾನೆ ಎಂಬ ಆಸೆಯನ್ನು ಹಾಗೇ ಇಟ್ಟುಕೊಳ್ಳಿ...ನಾನಿನ್ನು ಬರಲೇ..?"

ಆತ ಉತ್ತರಿಸಿದ."ನನ್ನ ಗೆಳೆಯ ಬರಲಾರ ಎಂದೂ ನಾ ಹೇಳಲಾರೆ. ನಾನು ಇನ್ನೂ ಅರ್ಧಗಂಟೆಯ ಸಮಯವನ್ನು ಆತನಿಗೆ ಕೊಡುವೆ. ನನ್ನ ಗೆಳೆಯ ಜಿಮ್ಮಿ ಭೂಮಿಯ ಮೇಲೆ ಬದುಕಿದ್ದಾನೆ ಎಂದರೆ,ಆತ ಬಂದೇ ಬರುತ್ತಾನೆ"

"ಗುಡ್ ನೈಟ್" ಹೇಳಿದ ಪೊಲೀಸ್ ಅಧಿಕಾರಿ ಹಾಗೇ ತನ್ನ ಸ್ವಾಭಾವಿಕ ಶೈಲಿಯಲ್ಲಿ ಮುಂದೆ ಹೊರಟ.
* * *

ಹಿತಕರವಾದ ತಂಗಾಳಿ ಬೀಸುತ್ತಿತ್ತು. ಆಗಲೇ ಸ್ವಲ್ಪ ತುಂತುರು ಹನಿಗಳೂ ಸುರಿದಿದ್ದವು. ಬೆರಳೆಣಿಕೆಯಷ್ಟೇ ದಾರಿಹೋಕರು ಕಾಣುತ್ತಿದ್ದರು. ಕಬ್ಬಿಣದ ಅಂಗಡಿಯ ಬಾಗಿಲಿಗೆ ಓರೆಯಾಗಿ ನಿಂತಿದ್ದ ಮನುಷ್ಯ ಪ್ರತೀ ದಾರಿಹೋಕರಲ್ಲೂ ತನ್ನ ಗೆಳೆಯನನ್ನೇ ನಿರೀಕ್ಷಿಸುತ್ತಾ, ಅಲ್ಲವೆಂದು ತಿಳಿದಾಗ ಬೇಸರಿಸುತ್ತಿದ್ದ. ಕತ್ತಲೆಯಲ್ಲಿ ಮುಳುಗಿಹೋದ ಆ ಬೀದಿಯ ಅಂತ್ಯದಲ್ಲಿ ತನ್ನ ಜೀವನದ ಗೆಳೆಯ ಜಿಮ್ಮಿಯನ್ನು ಹುಡುಕಲು ಆತ ವಿಫಲನಾದ. ಇನ್ನೊಂದು ಸಿಗರೇಟು ಹಚ್ಚಿದ...ಒಂದು ಮಾತನ್ನು ಉಳಿಸಿಕೊಳ್ಳಲೆಂದೇ ಸಾವಿರಾರು ಮೈಲಿ ದೂರದಿಂದ ಬಂದ ಆತ ಮೂಕನಾಗಿ ಆ ಬೀದಿಯ ಈ ತುದಿಯಿಂದ ಆ ತುದಿಯವರೆಗೂ ನಿರೀಕ್ಷಕನಾಗಿ, ಕಾತರತೆಯಿಂದ ನೋಡುತ್ತಿದ್ದ.

ಸುಮಾರು 20 ನಿಮಿಷಗಳ ಬಳಿಕ ಆ ನಿರ್ಜನ ಬೀದಿಯಲ್ಲಿ ಒಬ್ಬ ಎತ್ತರದ ಮನುಷ್ಯ ಬಂದ. ಆತ ಒಂದು ಉದ್ದವಾದ ಕೋಟನ್ನೂ ಧರಿಸಿದ್ದ. ಆ ಕೋಟಿನ ಕಾಲರ್ ಆತನೆರಡೂ ಕಿವಿಗಳನ್ನು ಮುಟ್ಟಿದ್ದವು. ಗಡಿಬಿಡಿಯಲ್ಲಿಯೇ ಬಂದ ಆತ ನೇರವಾಗಿ ಕಬ್ಬಿಣದ ಅಂಗಡಿಯ ಬಾಗಿಲಿಗೇ ಹೋದ.

"ಬಾಬ್ ಎಂದರೆ ನೀವೇನಾ......?"...ಸಂಶಯದಿಂದ ಕೇಳಿತು ಆ ವ್ಯಕ್ತಿ.

"ಅಂದರೆ ನೀನು ಜಿಮ್ಮಿ ವೆಲ್ಸ್ ನೆ...?"...ಓರೆಯಾಗಿ ನಿಂತ ಮನುಷ್ಯ ತಡೆಯಲಾರದೇ ಕಿರುಚಿದ.

"ಅಬ್ಬಾ..." ಆ ವ್ಯಕ್ತಿ ಹಾಗೆಂದು ಅದ್ಗರಿಸಿತು.

ಅದನ್ನು ಕೇಳುತ್ತಲೇ ಆ ನಿಂತಿದ್ದ ವ್ಯಕ್ತಿ...ಬಾಬ್..ಓಡೋಡಿ ಬಂದು ಆ ಎತ್ತರದ ವ್ಯಕ್ತಿಯನ್ನು ಅಪ್ಪಿಕೊಂಡ. ಇಬ್ಬರಲ್ಲೂ ಆನಂದಭಾಷ್ಪದ ಸುರಿಮಳೆಯಾಯಿತು.

ಈಗ ಬಂದ ವ್ಯಕ್ತಿ ಹೇಳತೊಡಗಿದ. "ಬಾಬ್, ನಾನು ನಿನ್ನನ್ನು ಇಲ್ಲಿ ಕಂಡೇ ಕಾಣುವೆ ಎಂದು ಭರವಸೆಯಿತ್ತು.ದೈವಲೀಲೆ.ಇರಲಿ:ಇರಲಿ..ಇರಲಿ...ಇಪ್ಪತ್ತು ವರ್ಷಗಳು ಎಷ್ಟು ಸುಧೀರ್ಘ ಅಲ್ಲವೇ?..ಆ ಹಳೇ ಹೊಟೇಲ್ ಅಂತೂ ಈಗ ಇಲ್ಲಿ ಇಲ್ಲ.ಬಾಬ್ ಅಂದಿನಂತೆ ಇಂದೂ ಒಂದು ಊಟ ಮಾಡೋಣ. ಅಡ್ಡಿ ಇಲ್ಲ ತಾನೇ?...ಬಾಬ್ ನೀನು ಪಶ್ಚಿಮಕ್ಕೆ ಹೋದ ಮೇಲೇ ಹೇಗೆ ಬದುಕಿದೆ?"

ಬಾಬ್ ಹೇಳಿದ. "ಹುಂ ..ಅದು ಎಲ್ಲವನ್ನೂ ಕೊಟ್ಟಿತು. ನಾನು ಏನೆಲ್ಲ ಬಯಸಿದೆನೊ ಅದೆಲ್ಲವನ್ನೂ. ಆದರೆ ನೀನು ತುಂಬಾ ಬದಲಾದೆ. ಈ 20 ವರ್ಷಗಳಲ್ಲಿ ನೀನು ತುಂಬಾ ಎತ್ತರವಾದೆ ಅನಿಸುತ್ತದೆ"

"ಓ ಅದಾ..ಇಲ್ಲವಲ್ಲಾ...ನಾನು ನನ್ನ ಇಪ್ಪತ್ತನೇ ಪ್ರಾಯದಲ್ಲಿ ಎಷ್ಟು ಎತ್ತರವಿದ್ದೆನೋ ಅದಕ್ಕಿಂತ ಸ್ವಲ್ಪ ಜಾಸ್ತಿ ಎತ್ತರವಾದೆ ಅಷ್ಟೇ..."

"ನ್ಯೂಯಾರ್ಕ್ ನಲ್ಲಿ ಚೆನ್ನಾಗಿದ್ದೀಯಾ ಜಿಮ್ಮಿ...?"

"ಸಾಧಾರಣವಾಗಿ ಇದ್ದೇನೆ. ನಗರ ಇಲಾಖೆಯಲ್ಲಿ ಒಂದು ಸಣ್ಣ ಕೆಲಸದಲ್ಲಿ ಇದ್ದೇನೆ. ಬಾ ಬಾಬ್. ನನಗೊಂದು ಒಳ್ಳೆಯ ಜಾಗ ಗೊತ್ತಿದೆ.ಅಲ್ಲಿ ಹೋಗಿ ಕುಳಿತು ನಮ್ಮ ಸಾಧನೆಗಳ ಬಗ್ಗೆ ಮಾತನಾಡೋಣವಂತೆ..."

ಎರಡೂ ಗೆಳೆಯರು ಹೆಗಲ ಮೇಲೆ ಕೈ ಹಾಕಿಕೊಂಡು ನಡೆಯಲಾರಂಭಿಸಿದರು. ಅದರಲ್ಲಿ ಒಬ್ಬಾತ ಪಶ್ಚಿಮದಿಂದ ಬಂದವನು.ತನ್ನ ಸಾಧನೆಗಳಿಂದ ಕೊಬ್ಬಿ ತಾನೇ ಎಲ್ಲವನ್ನೂ ಮೊದಲು ಹೇಳತೊಡಗಿದ. ಇನ್ನೊಬ್ಬ ಸುಮ್ಮನೇ ತನ್ನ ಕೋಟಿನಲ್ಲಿ ಕೈಹಾಕಿಕೊಂಡು ಆಸಕ್ತಿಯಿಂದ ಕೇಳುತ್ತಾ ನಡೆದ.

ಅವರು ಹೋಗುತ್ತಿದ್ದ ದಾರಿಯಲ್ಲಿ ಒಂದು ಔಷಧಿಯ ಅಂಗಡಿ ಇತ್ತು. ಅಲ್ಲಿನ ಪ್ರಕಾಶಮಾನವಾದ ಬೆಳಕೂ ರಸ್ತೆಯವರೆಗೂ ಚೆಲ್ಲುತ್ತಿತ್ತು.ಆ ಬೆಳಕಿನ ಆವರಣವನ್ನು ಪ್ರವೇಶಿಸಿದ ಕೂಡಲೇ ಇಬ್ಬರೂ ತಮ್ಮ ಮುಖಗಳನ್ನು ಪರಸ್ಪರ ನೋಡಿಕೊಂಡರು.ಆದರೆ ಪಶ್ಚಿಮದಿಂದ ಬಂದ ವ್ಯಕ್ತಿ ಕೂಡಲೆ ಕೋಟ್ ಧರಿಸಿದ್ದ ವ್ಯಕ್ತಿಯ ಹೆಗಲಿನಿಂದ ತನ್ನ ಕೈಯನ್ನು ತೆಗೆಯುತ್ತಾ ಕಿರುಚಿದ......
"ನೀನು ಜಿಮ್ಮಿ ವೆಲ್ಸ್ ಅಲ್ಲವೇ ಅಲ್ಲಾ....20 ವರ್ಷಗಳು ಸುಧೀರ್ಘ ಹೌದು. ಆದರೆ ಒಬ್ಬ ವ್ಯಕ್ತಿಯ ಉದ್ದವಾದ ಮೂಗನ್ನು ಗಿಡ್ಡದಾಗಿ ಮಾಡುವಷ್ಟು ಅಲ್ಲವೇ ಅಲ್ಲ.....!!!!"

ಆದರೆ ಆ ಕೋಟಿನ ವ್ಯಕ್ತಿ ಹೇಳಿತು. "ಆದರೆ ಅದೇ 20 ವರ್ಷ ಒಬ್ಬ ಒಳ್ಳೆಯವನನ್ನು ಕೆಟ್ಟವನನ್ನಾಗಿ ಮಾಡಬಹುದಲ್ಲವೇ!!
ನೀನು ಈಗಾಗಲೇ ಹತ್ತು ನಿಮಿಷಗಳ ಹಿಂದೆ ನನ್ನಿಂದ ಬಂಧಿತನಾಗಿದ್ದೀಯಾ...ಏ ಹುಚ್ಚ ಬಾಬ್....ಚಿಕಾಗೋ ಪೋಲೀಸರು ನೀನು ಅವರಿಂದ ತಪ್ಪಿಸಿಕೊಂಡೆ ಎಂದೇ ತಿಳಿದಿದ್ದರು.....!! ಆದರೆ ನಾವು ನಿನ್ನಿಂದ ಮೋಸಹೋಗಲಿಲ್ಲ...ಒಂದು ಚಿಕ್ಕ ಆಟವನ್ನು ಆಡಿದೆವು...ತಪ್ಪಿಸಿಕೊಳ್ಳುವ ಪ್ರಯತ್ನವಂತೂ ಮಾಡಲಾರೆ ತಾನೇ....? ...ಅದೇ ಒಳ್ಳೆಯದು. ನಾವೂ ಸ್ಟೇಶನ್ನಿಗೆ ಹೋಗುವ ಮೊದಲು ನಿನಗೊಂದು ಕಾಗದ ಕೊಡಬೇಕಾಗಿದೆ......" ಎನ್ನುತ್ತಾ ಆ ವ್ಯಕ್ತಿ ಒಂದು ಕಾಗದವನ್ನು ಬಾಬ್ ನ ಕೈಗಿತ್ತಿತು.
ಅದನ್ನು ಓದಿ ಮುಗಿಸುವಷ್ಟರಲ್ಲಿ ಬಾಬ್ ನ ಕೈಗಳು ನಡುಗುತ್ತಿದ್ದವು...ದೃಷ್ಟಿ ಮಂಜಾಗಿತ್ತು...ಮುಖ ಬಿಳುಚಿತ್ತು....ಆತ ನಿಸ್ಸಹಾಯಕನಾಗಿದ್ದ....ಅದರಲ್ಲಿ,

"ಬಾಬ್,
ನಾನು ನಮ್ಮಿಬ್ಬರ ಒಪ್ಪಂದದಂತೆ ಸರಿಯಾದ ಸಮಯದಲ್ಲಿ ಅಲ್ಲಿದ್ದೆ. ನೀನು ಸಿಗರೇಟು ಹಚ್ಚಲು ಕಡ್ಡಿಯನ್ನು ಗೀರಿದಾಗ ಸರಿಯಾಗಿ ನಿನ್ನ ಮುಖವನ್ನು ಕಂಡೆ.ಹಾಗೇ ನಿನ್ನ ಮುಖ ಚಿಕಾಗೋ ಪೋಲೀಸರಿಗೆ ಬೇಕಾಗಿದೆ ಎಂದೂ ತಿಳಿದೆ. ಆದರೆ ಗೆಳೆಯಾ ನಿನ್ನನ್ನು ಬಂಧಿಸುವುದು ನನ್ನ ಕೈಯಲ್ಲಿ ಸಾಧ್ಯವಿರಲಿಲ್ಲ. ಅದಕ್ಕಾಗಿ ಈ ಪೋಲೀಸಿನವನನ್ನು ಕಳುಹಿಸಿದೆ.
- ಇಂತಿ ಜಿಮ್ಮಿ "

3 comments:

Kiran Pradhan said...

ಅಲ್ಪ ಸ್ವಲ್ಪ ಕನ್ನಡ and English,

ನಮ್ಮ ಸತೀಶನ ಕನ್ನಡ ಬರೆಯುವುದಕ್ಕೆ ಬರೊಲ್ಲ

Another ಕಥೆಯ summary

This is just a story telling types story, not actual words.

It is thrilling to the same level

Once agian related to police,

ಒಬ್ಬ ಪೋಲೀಸ್ ಮತ್ತೊಬ್ಬ ಕಳ್ಳ

ಕಳ್ಳ, ಹಣ ಕದ್ದು ಅದನ್ನು ನೆಲದಲ್ಲಿ ಹುದುಗಿಟ್ಟು ಹಿ೦ದಿರುಗುವಾಗ ಪೋಲೀಸರ ಸೆರೆಗೆ ಸಿಕ್ಕು ಸೆರೆಮನೆ ವಾಸದಲ್ಲಿರುತ್ತಾನೆ.

ಕಳ್ಳನಿಗೆ frustrate ಆಗಿ, "ಸಾಕಪ್ಪ ಜೈಲು, ಹೆಗಾದರು ಮಾಡಿ escape ಆಗೊಣ". ಉಪಾಯ ಮಾಡಿ ನಮ್ಮ ಪೋಲೀಸ್ ಅಧಿಕಾರಿಗೆ ಹಣದ ವ್ಯಾಮೊಹ ತೊರಿಸಿ, "ಎನಾದರು ಮಾಡಿ ನನ್ನ ಆಚೆ ಕಳ್ಸಪ್ಪ"ಎ೦ದು ಬೇಡಿ, ೫೦% ಕೊಡುತ್ತೆನೆ೦ದು ಹೇಳಿ ಒಪ್ಪಿಸಿದ.

ಅಧಿಕಾರಿ ಆಸೆಗೆ ಬಿದ್ದು, one fine day ಉಪಾಯ ಮಾಡಿ ಕಳ್ಳನ ಹತ್ತಿರ ಬ೦ದು ಪಿಸುಗುಟ್ಟಿದ, "ಜೈಲಿನಲ್ಲಿ ಯಾರಾದರು ಮರಣ ಹೊ೦ದಿದರು ಎ೦ದು ಗೊತ್ತಾದ ಕೂಡಲೆ ನೀನು ಸತ್ತ೦ತೆ ನಟಿಸು, ಅಧಿಕಾರಿಗಳು ಹಣ ಉಳಿಸುವುದಕ್ಕೆ ಇಬ್ಬರನ್ನು ಒ೦ದೆ ಶವ ಪೆಟ್ಟಿಗೆಯಲ್ಲಿ ಹಾಕಿ ಹೂಳುತ್ತಾರೆ, ಸ್ವಲ್ಪ ಸಮಯದ ನ೦ತರ ನಾನು ಬ೦ದು ನಿನ್ನನ್ನು ಹೊರಗೆ ತೆಗೆಯುತ್ತೆನೆ, ನ೦ತರ ೫೦% ಪಾಲು ಹ೦ಚಿ ನೀನು ನಿನ್ನ ದಾರಿ ಹಿಡಿ ".

ಕಳ್ಳನಿಗೆ ಎಲ್ಲಿಲ್ಲದ ಆನ೦ದ, ಯಾರಾದರು ಸಾಯುತ್ತರೆ ಎ೦ದು ಬಕಪಕ್ಷಿಯ೦ತೆ ಕಾಯುತ್ತಿದ್ದ. ಒ೦ದು ದಿನಾ ಬೆಳಿಗ್ಗೆ ಪಕ್ಕದ ರೂಮಿನವ, ಓ ಜೈಲಿನಲ್ಲಿ ಯಾರೋ ಸತ್ತರ೦ತೆ ಅ೦ತೆ ಎ೦ದು ಮಾತನಾಡುತಿದ್ದ. ಇದನ್ನು ಕೆಳಿದ ಕಳ್ಳನಿಗೆ ಸ್ವರ್ಗ ಸಿಕ್ಕಿದ೦ತೆ ಆಗಿ, ತಾನು ಸತ್ತ೦ತೆ ನಟಿಸಿದ.

ನಮ್ಮ "ಮಾಮ"ನ ಉಪಾಯದ೦ತೆ, ಇಬ್ಬರನ್ನು ಒ೦ದೆ ಶವ ಪೆಟ್ಟಿಗೆಯಲ್ಲಿ ಹಾಕಿ, ಸ್ಮಶಾಣಕ್ಕೆ ವಲಸೆ ಹೊರಟರು, ಕಳ್ಳ ಪೆಟ್ಟಿಗೆ ಒಳಗಿನ ಕತ್ತಲೆಯಲ್ಲಿ ಆನ೦ದದಿ೦ದ ಉಸಿರಾಡುತ್ತಿದ್ದ. ಎಲ್ಲರು ಅ೦ತಿಮ ಕಾರ್ಯ ಮುಗಿಸಿ ವಾಪಸ್ ಹೊರಟರು.

"ಮಾಮ" ಹೇಳಿದ೦ತೆ ಬರಬೆಕ್ಕಿದ್ದ ಸಮಯ ಮೀರಲು ಆರ೦ಭಿಸಿತು, ಕಳ್ಳನಿಗೆ ಭಯ!!!

೨ ಘ೦ಟೆ ಕಳೆದರು ಯಾರು ಪತ್ತೆ ಇಲ್ಲ!!!

ಕಳ್ಳ ತನ್ನ ಬಳಿ ಇದ್ದ, lighter ಎನಾದರು ಮಾಡೊಣ ಎ೦ದು ತೆಗೆದ.

ಬೆಳಕಿನಲ್ಲಿ ಆತ ಕ೦ಡದ್ದು ಭಯಾನಕ, ಪಕ್ಕದಲ್ಲಿ ಇದ್ದ ಶವ ನಮ್ಮ " ಮಾಮನದ್ದು".

ಹೇಗಿದೆ ಸ್ನೆಹಿತರೆ ಕಥೆ??

ಅನಂತ said...

ಸತೀಶ್, ಸಕ್ಕತ್ತಾಗಿದೆ ಕಥೆ... ಕಿರಣ್ ಹೇಳಿದ ಕಥೆಯೂ ಚೆನ್ನಾಗಿದೆ..

ಬಡಗಿ said...

Dear Sathish,

On the occasion of 8th year celebration of Kannada saahithya. com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends.