ಸರ್-ಪಾಸ್ …..
ಆ ದಿನ .... ಕಸೋಲಿನಲ್ಲಿ 72 ವರ್ಷದ ಬಸವರಾಜ ಅಂಕಲ್ ಸರ್-ಪಾಸ್ ಚಾರಣಕ್ಕೆ ಬಂದ ಇಸ್ರೇಲಿನ ಯುವಕನೊಬ್ಬನಿಗೆ ಹೇಳುತ್ತಿದ್ದರು, "ಭಾರತದಲ್ಲಿ ಒಂದು ಹಳೆಯ ಹೇಳಿಕೆ ಇದೆ. ನೀವು ಸಮುದ್ರವನ್ನೂ ಮತ್ತು ಹಿಮಾಲಯವನ್ನೂ ಕಣ್ಣಾರೆ ನೋಡಿದ ವಿನಹ ಅವುಗಳ ಗಾಂಭೀರ್ಯತೆ, ವಿಶಾಲತೆ, ಆಳವನ್ನು ಅಳೆಯಲಾಗಲೀ ವರ್ಣಿಸಲಾಗಲೀ ಸಾಧ್ಯವಿಲ್ಲ" ಎಂದು. ಆ ಕ್ಷಣದಲ್ಲೊಮ್ಮೆ ನನಗದು ಅಷ್ಟು ಬಲವಾಗಿ ನಾಟಲಿಲ್ಲ. ಆದರೆ ಈಗ ನನ್ನಲ್ಲಿ ಹಿಮಾಲಯದ ಬಗ್ಗೆ ವರ್ಣಿಸಲು ಬಹಳ ಶಬ್ದಗಳೂ ಉಳಿಯಲಿಲ್ಲ.
ಚಾರಣದ ಬಗ್ಗೆ ನಾನಿನ್ನೂ ಬರೆದಿಲ್ಲವಾದ್ದರಿಂದ ನಮ್ಮ "ಟ್ರೆಕ್ಕಿಂಗ್ ಬಾಯ್ಸ್" ಬಗ್ಗೆ ಒಂದೆರಡು ಮಾತನ್ನ ಹೇಳಿಬಿಡುತ್ತೇನೆ.
ಪ್ರವೀಣ (ಇವರು ನಾರಾ ಎಂದೇ ಪ್ರಸಿದ್ಧರು) , ಕ್ರಿಷ್ಣ, ರಸೂಲ, ಚೇತನ್, ಪ್ರದೀಪ(ಕೊಪ್ಪ), ರಾಧೇಶ, ಪ್ರಮೋದ, ವಿಕಾಸ ರೆಡ್ಡಿ, ಮಿಥುನ್ ಇವರುಗಳೆಲ್ಲಾ ಬಹಳ ಉತ್ಸಾಹಭರಿತ ಚಾರಣಿಗರು. ಪಶ್ಚಿಮ ಘಟ್ಟಗಳ ಎಲ್ಲಾ ಗುಡ್ಡಗಳನ್ನು ಹತ್ತಿ ಇಳಿಯುವದೂ ಒಂದು ಚಟವೇ ಬಿಡಿ:-). ಆದರೆ ಹಿಮಾಲಯ ಒಂದು ವಿಶೇಷ ಆಕರ್ಷಣೆಯೇ ಸರಿ. ಎಲ್ಲರೂ ಸುಮಾರು ಒಂದು ವರ್ಷದಿಂದ ಹಿಮಾಲಯದ ಚಾರಣಕ್ಕೆ ಗುರಿಯಿಡುತ್ತಿದ್ದೆವು. ಆದರೆ ಕಾರಣಾಂತರಗಳಿಂದ ನಾವು ೬ ಜನ ಮಾತ್ರ ಈ ಸಲದ (may 2nd batch, SarPass trek, Organized by Youth Hostel association of India) ಸರ್-ಪಾಸ್ ಚಾರಣಕ್ಕೆ ತೆರಳಲು ಸಕಲ ಸಿದ್ಧತೆಗಳನ್ನೂ ನಡೆಸಿದೆವು.
ದಿಲ್ಲಿಗೆ ತೆರಳಿ ಅಲ್ಲಿಂದ ಹಿಮಾಚಲ ಪ್ರದೇಶದ ಕುಲು ಕಣಿವೆಯತ್ತ ಬಸ್ಸಲ್ಲಿ ಪಯಣಿಸಿದೆವು. ದಾರಿಯಗುಂಟ "ಬಿಯಾಸ್" ನದಿಯ ಪ್ರಪಾತ ಹಾಗೂ ಅಲ್ಲಿನ ಬೆಟ್ಟಗುಡ್ಡಗಳು ನಮ್ಮನ್ನು ಸ್ವಾಗತಿಸಿದವು. ಆದರೆ ಆ ಪ್ರಪಾತದ ಅಂಚಿನಲ್ಲಿ ಬಸ್ಸು ಸಾಗುತ್ತಿರುವಾಗ ನನಗೆ ಮಾತ್ರ ಜೀವ ಅರ್ಧ ಕೈಯಲ್ಲಿ ಬಂದಿತ್ತು. ಆದರೆ ಉಳಿದ ೧೪-೧೫ ದಿನಗಳನ್ನು ಅಂಥಹ ಕಣಿವೆ-ಪ್ರಪಾತಗಳಿರುವ ದೇಶದಲ್ಲೇ ಕಳೆದ ಮೇಲೆ, ಪ್ರಪಾತದ ಅಂಚಿನಲ್ಲಿ ಸಾಗುವದು ಅಷ್ಟೇನೂ ಅಂಜಿಕೆ ತರಲಿಲ್ಲ.
ನಮ್ಮ ಬೇಸ್ ಕ್ಯಾಂಪ್ ಇದ್ದಿದ್ದು ಕಸೋಲ್ ಎಂಬ ಊರಲ್ಲಿ. ಇದು ನೀವು ಕುಲುವಿಂದ ಭುಂತರ್ ಊರಿನ ಮುಖಾಂತರ ಮಣಿಕರ್ಣಕ್ಕೆ ಹೋಗುವಾಗ ೫ ಕಿಮಿ ಹಿಂದೆ ನಿಮಗಿದು ಎದುರಾಗುತ್ತದೆ. ಸುತ್ತಲೂ ಮುತ್ತಿಕೊಂಡ ಮುಗಿಲೆತ್ತರದ ಬೆಟ್ಟಗಳು. ಅಲ್ಲೊಂದು ಸಣ್ಣ ಊರು ಇದು. ಯಾವಗಲೂ ಇಸ್ರೇಲಿ ಪ್ರವಾಸಿಗರು ತುಂಬಿರುವ ಜಾಗ. ಪಕ್ಕದಲ್ಲೇ ಹರಿಯುವ ಪಾರ್ವತಿ ನದಿ. ಅಲ್ಲೇ ಇರುವ ಯುತ್ ಹಾಸ್ಟೇಲಿನ ಬೇಸ್ ಕ್ಯಾಂಪನಲ್ಲಿ ಮೇ ೨ ರಂದು ತೂರಿಕೊಂಡೆವು.
ನಿಮಗೆ ನಾನು ಯೂತ್-ಹಾಸ್ಟೇಲ್ ಬಗ್ಗೆ ಸ್ವಲ್ಪ ಹೇಳಲೇಬೇಕು. ಎಲ್ಲಾ ದೇಶಗಳಲ್ಲೂ,ಸುಮಾರಿಗೆ ಎಲ್ಲಾ ನಗರಗಳಲ್ಲೂ ತನ್ನ ಶಾಖೆಗಳನ್ನು ಹೊಂದಿದೆ. ದೇಶ ಹಾಗೂ ಅಂತರರಾಷ್ಟ್ರೀಯ ಏಕತೆಗಳನ್ನು ಯುವಜನರಲ್ಲಿ ಮೂಡಿಸುವುದು ಹಾಗೂ ಪ್ರಕ್ರ್‍ತಿಯ ಬಗ್ಗೆ ಜನರಲ್ಲಿ ಜಾಗ್ರತಿ ಹಾಗೂ ಸಖ್ಯತೆಯನ್ನು ಬೆಳೆಸುವದು ಇದರ ಉದ್ದೇಶಗಳಲ್ಲಿ ಕೂಡಿವೆ. ಭಾರತೀಯ ಸರಕಾರ ಇದರ ಚಾರಣ ಹಾಗೂ ಸಾಹಸದ ಕಾರ್ಯಕ್ರಮಗಳಿಗೆ ಧನಸಹಾಯ ನೀಡುತ್ತದೆ. ಆದ್ದರಿಂದ ಮಧ್ಯಮ ವರ್ಗದ ಜನರೂ ಸಹ ಸುಲಭವಾಗಿ ದೇಶದ ಒಂದೆಡೆಯಿಂದ ಇನ್ನೊಂದೆಡೆಗೆ ಸಂಚರಿಸಬಹುದು. ಇದರ ಅಂತರ್ಜಾಲದ ದಾರಿ... .
ಹಾಗೇ ಇನ್ನು ನಮ್ಮ ಚಾರಣದ ಕಥೆ ನಿಮ್ಮ ಮುಂದೆ ತೆರೆಯುತ್ತದೆ.
ದಿನ 1.(ಮೇ ೨, ೨೦೦೮):-
ಅಂದು ಕುಲುವಿನಿಂದ ಕಸೋಲಿನಲ್ಲಿನ ಬೇಸ್-ಕ್ಯಾಂಪಿನಲ್ಲಿ ’report’ ಮಾಡಿಕೊಂಡೆವು.
ನಮಗೆ ’allot’ ಆದ ಟೆಂಟಿನಲ್ಲಿ ನಮ್ಮ ಬ್ಯಾಗುಗಳನ್ನು ಇಳಿಸಿ, ಕಸೋಲಿನಲ್ಲಿ ಎನಾದರೂ ಶಾಪಿಂಗ್ ಮಾಡೋಣವೆಂದುಕೊಂಡೆವು. ಆದರೆ ನಾವು ಅಂದುಕೊಂಡಂತೆ ನಮ್ಮ ಯಲ್ಲಾಪುರವೋ ಅಥವಾ ಸಿರಸಿ ಪೇಟೆಯಂತೆ ಇರುವದಿಲ್ಲ ಹಿಮದ ತಪ್ಪಲಿನಲ್ಲಿರುವ ’city’ ಗಳು ಎಂದು ಅಲ್ಲಿಗೆ ಹೋದ ಮೇಲೇ ಗೊತ್ತಾಗಿದ್ದುJ. ಅತೀ ಅವಶ್ಯವಾಗಿದ್ದ ಜೊತೆ ಚಪ್ಪಲಿಯೂ ಸಿಗದೇ, ಅಂತೂ ಕೊನೆಗೆ ಸಿಕ್ಕಿದ 8 ನಂಬರಿನ ಜೋಡಿಗೆ 100 ರೂಪಾಯಿ ಕೊಟ್ಟು ಕೊಂಡೆವು.!! ಹಾಗೇ ಅಲ್ಲೊಂದು ಸಣ್ಣ ಹೊಟೇಲಿನಲ್ಲಿ ಕುಡಿದ ಆಡಿನ ಹಾಲಂತೂ ಅದ್ಭುತವಾಗಿತ್ತು.
ನಮ್ಮ ಒಂದೊಂದೂ ಟೆಂಟುಗಳಲ್ಲಿ 15-16 ಜನರನ್ನು ತುಂಬಿಸಿದ್ದರು. ಮಲಗಲು ಜಾಗ ಅಥವಾ ನಮ್ಮ ಹೊರೆಗಳನ್ನು ಇಡಲು ಇರುವ ಜಾಗ ಎಂದೆಲ್ಲಾ ಇರಲಿಲ್ಲ. ಹೇಗೋ 3x6 ಅಡಿ ಜಾಗ ಸಿಕ್ಕರೆ ಸಾಕು ಎಂಬಂಥಾ ಸ್ಥಿತಿJ. ಕಸೋಲ್ ಇದ್ದಿದ್ದೇ 7,500 ಅಡಿ ಎತ್ತರದಲ್ಲಿ. ನಮಗೆ ಸಿಗುತ್ತಿದ್ದ ನೀರೂ ಸಹಾ ಅತೀ ಥಂಡಿಯಾಗಿರುತ್ತಿತ್ತು. ಸ್ನಾನದ ಬಗ್ಗೆ ಯೋಚಿಸುವಂತೆಯೂ ಇರಲಿಲ್ಲ. ಇನ್ನು 12 ದಿನ ನಮ್ಮ ಚಾರಣ ಮುಗಿಯುವವರೆಗೆ ಸ್ನಾನದ “ತಲೆಬಿಸಿ” ಇಲ್ಲವೆಂದು ನನಗೆ ಬಹಳ ನಿರಾಳವಾಯಿತುJ.
ಇನ್ನು ಊಟದ ಬಗ್ಗೆ ಅಂತೂ ಕೇಳಲೇಬೇಡಿ. ದೆಹಲಿಯಿಂದ ಕುಲುವಿಗೆ ತೆರಳುವ ದಾರಿಯಲ್ಲೇ ಬಹಳ ಚಿಂತಿತನಾಗಿದ್ದೆ. ಆಗ ತಾನೇ “Food Poisoning” ಇಂದ 10 ದಿನದ ರಜೆಯನ್ನು ಖಾಲಿಮಾಡಿದ್ದೆ. ಅದಕ್ಕಿಂತಲೂ ಮುಖ್ಯವಾಗಿ 5 KG ಇಳಿದಿದ್ದೆ. ಇದು ನನ್ನನ್ನು ಮಾನಸಿಕವಾಗಿ ಬಹಳ ತಳಮಳಗೊಳಿಸಿತ್ತು. ಅದೂ ಡಾಕ್ಟರ್ ಹೇಳಿದ ಹಾಗೂ ನನಗೆ ಅತಿ ಪ್ರಿಯವಾದ ಅನ್ನವನ್ನು ತಿನ್ನಲು ಇರುವ ಎಲ್ಲಾ ಸಾಧ್ಯತೆಗಳ ಬಗ್ಗೆ ಯೋಚಿಸುತ್ತಿದ್ದೆJ. ಆದರೆ ಉತ್ತರ ಭಾರತದಲ್ಲಿ ಅನ್ನವನ್ನು ಆಹಾರದಲ್ಲಿ ಬಳಸುವದು ಬಹಳ ಕಡಿಮೆ. ಅದರಲ್ಲೂ ಅನ್ನವನ್ನು ಅರ್ಧ ಬೇಯಿಸಿರುವದರಿಂದ ಅದನ್ನು ತಿಂದರೆ ನಮಗಾಗುವ ಹಾನಿಯೇ ಹೆಚ್ಚು. ಇದನ್ನೆಲ್ಲಾ ನನ್ನ ಆಫೀಸಿನ ಸೀನಿಯರ್ ಗಳಾದ ಹಾಗೂ ಸಹಚಾರಣಿಗರೂ ಆಗಿದ್ದ ಕ್ರಿಷ್ಣ, ಮಿಥುನ್, ಚೇತನ್, ರಾಧೇಶ್, ಪ್ರಮೋದ್ ಇವರೆಲ್ಲಾ ತಿಳಿಸಿ ಹೇಳಿದ್ದರಿಂದ ಕೊನೆಗೆ ರೋಟಿ-ಆಲೂ ವನ್ನೇ ತಿಂದು ಬದುಕಲು ನಿರ್ಧರಿಸಿದೆJ.
ಬೇಸ್ ಕ್ಯಾಂಪಿನಲ್ಲಿ ಸಂಜೆಯ ಊಟದ ನಂತರ ಇದ್ದ ’ಕ್ಯಾಂಪ್-ಫೈರ್’ ನಲ್ಲಿ ಎಲ್ಲರ ಪ್ರತಿಭೆಗಳು ಹೊರಬರುತ್ತಿದ್ದವು. ಅದರಲ್ಲೂ ಪ್ರಮೋದ್ ಹಾಡುತ್ತಿದ್ದ ಹಳೆಯ ಹಿಂದೀ ಹಾಡುಗಳು ಎಲ್ಲರನ್ನು ಮೋಡಿಗೊಳಿಸುತ್ತಿದ್ದವು.
ದಿನ 2.(ಮೇ ೩, ೨೦೦೮):- ಬಹಳ ವಿರಳವಾದ ತೊಂದರೆ ಎಂದರೆ “High Altitude Sickness”. ಕೆಲವರಿಗೆ ಎತ್ತರದ ಪ್ರದೇಶಗಳಿಗೆ ಹೋದಂತೆ ತಲೆಸುತ್ತುವದು,ವಾಂತಿ,ಜ್ವರ ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಏನೂ ಮದ್ದಿಲ್ಲ.ಸದ್ಯಕ್ಕೆ. ಇದರ ಪರೀಕ್ಷೆಗೆಂದು ನಮ್ಮನ್ನು ಸುಮಾರು 1000ft ಎತ್ತರಕ್ಕೆ ನಮ್ಮನ್ನು ಕರೆದೊಯ್ದರು. ನಮ್ಮ ಟೀಮ್ – ಲೀಡರ್ ಆದ ಮೋಹನ್( ಇವರು ಮೈಸೂರಿನವರು. ನ್ಯಾಚುರಲಿಸ್ಟ್) ಹಾಗೂ ಇನ್ನೊಬ್ಬ ಅನುಭವಿ ಚಾರಣಿಗರಾದ ಸೋಲಂಕಿಯವರ ಪರಿಚಯ ಚೆನ್ನಾಗಿ ಆಯಿತು.
ದಿನ 3.(ಮೇ ೪, ೨೦೦೮):- ಹೆಸರಿಗೆ ’ಬರ್ಡ್ ವಾಚಿಂಗ್’ ಎಂಬ ಕಾರ್ಯಕ್ರಮ. ಅಮೇಲೆ ’ರಾಕ್ -ಕ್ಲೈಂಬಿಂಗ್’ ಕಾರ್ಯಕ್ರಮ ಗಳು. ಆದರೆ ನಮ್ಮ ಟೀಮಿನಲ್ಲಿ ತುಂಬಾ ಜನರಿದ್ದಿದ್ದರಿಂದ ನಾನು ಮತ್ತು ಕಾಲನ್ನು ಉಳುಕಿಸಿಕೊಂಡಿದ್ದ ಮಿಥುನ್ ಇಬ್ಬರೂ ಸುಮಾರು ಹೊತ್ತು ಅಲ್ಲೇ ಹರಿಯುತ್ತಿದ್ದ ನದಿಯ ನೀರಿನ ಫೊಟೋಗ್ರಫಿ ಮಾಡಿದೆವು. ಹಾಗೆಯೇ ನಾನು ಗಮನಿಸಿದ ಅಂಶವೆಂದರೆ ಅಲ್ಲಿಯ ನದಿಯ ನೀರು ಬಿಳಿಯ ಹಾಲಿನಂತಿರುವದು. ಅದು ಆಗ ತಾನೇ ಹಿಮದಿಂದ ಕರಗಿದ ನೀರಾಗಿದ್ದರಿಂದಲೋ ಏನೋ. ಅಲ್ಲಿಯ ನದಿಯಲ್ಲಿ ಸಿಗುವ ಕಲ್ಲುಗಳೂ ಸಾಮಾನ್ಯವಾಗಿ ಬಿಳಿಯತ್ತ ತಿರುಗಿದ್ದವು.
ಹಾಗೆಯೇ ಕಸೋಲಿನ ಪೇಟೆಯಲ್ಲಿ ನಾಲ್ಕಾರು ರೌಂಡು ಹೊಡೆದು, ಪಾರ್ವತೀ ನದಿಯ ಮೇಲಿರುವ ಸಣ್ಣದೊಂದು ತೂಗು ಸೇತುವೆ ಹತ್ತಿರ ಸ್ವಲ್ಪ ಅಡ್ಡಾಡಿ ಬಂದೆವು. ಮೈಮೇಲೆ ತುಂಡು ಕಾವಿಯ ಧರಿಸಿ ತಿರುಗಾಡುವ ಸನ್ಯಾಸಿಗಳನ್ನು ನೋಡುತ್ತಾ ನಿಮಗೆ ನಿಮ್ಮ ಆಶ್ಚರ್ಯದ ದೃಷ್ಟಿಯನ್ನು ಬಿಗಿಹಿಡಿಯಲಾಗುವದಿಲ್ಲ. ಸನ್ಯಾಸಿಗಳಂತೆಯೇ ವೇಷಧಾರಿಗಳಾಗಿ ತಿರುಗುವ ’ಫ಼ಾರಿನರ್‍ಸ್’ ಗಳಿಗೇನೂ ಕಮ್ಮಿಯಿಲ್ಲ. ಅನೇಕ ಜನರ ಅಭಿಪ್ರಾಯವೆಂದರೆ ಹಿಮಾಲಯದ ಬಗೆಗೆ ಜಗತ್ತಿನ ಎಲ್ಲಾ ದೇಶದ ಜನರಿಗೂ ಒಂದು ಥರಹ ಕುತೂಹಲ. ಅದಕ್ಕೇ ಇಲ್ಲಿನ ಸನ್ಯಾಸಿಗಳ ಬಗೆಗಂತೂ ವಿಪರೀತ. ಅದರೆ ಇಲ್ಲಿ ಯಾರು ಹಿತವರೆಂದು ಅರಿಯುವದು ’ಮಿಲಿಯನ್ ಡಾಲರ್’ ಪ್ರಶ್ನೆ.!!
ಕ್ಯಾಮೆರಾದ ಮ್ಯಾನುಯಲ್ ನಲ್ಲಿ ಬರೆದ ಪ್ರಕಾರ, ಕೇವಲ ’{5 to 45}' ಡಿಗ್ರಿವರೆಗೆ ಮಾತ್ರ ಅದು ಸರಿಯಾಗಿ ಕೆಲಸ ಮಾಡುತ್ತದೆ. ಹಾಗೆಯೇ ಮುಂಬರುವ ಹತ್ತು ದಿನಗಳಲ್ಲಿ ನಮಗೆ ಚಾರ್ಜ್ ಮಾಡಲು ಕರೆಂಟು ಸಿಗುವ ಸಾಧ್ಯತೆಯೇ ಇರಲಿಲ್ಲ. ಅಲ್ಲಿನ ವಿಪರೀತ ಛಳಿಗೆ ಬ್ಯಾಟರಿ ಬೇಗಬೇಗನೇ ಕರಗುತ್ತಿತ್ತು. ನನ್ನ ಹಾಗೇ ಇದು ಎಲ್ಲರ ಗೋಳೂ ಆಗಿತ್ತು. ಚಾರ್ಜಿಂಗ್ ಪಾಯಿಂಟ್ ಕೇವಲ ಐದೇ ಇದ್ದದ್ದರಿಂದ ಹಾಗೂ ಅಷ್ಟರಲ್ಲೇ ತಮ್ಮ ಮೊಬೈಲ್ ಹಾಗೂ ಕ್ಯಾಮೆರಾ ಚಾರ್ಜ್ ಮಾಡುವ ಅಭ್ಯರ್ಥಿಗಳ ಸಂಖ್ಯೆ ನೂರರ ಮೇಲಿದ್ದರಿಂದ, ಕ್ಯಾಮೆರಾದ ಬ್ಯಾಟರಿಯನ್ನು ಚಾರ್ಜ್ ಮಾಡಿ ಇಟ್ಟುಕೊಳ್ಳುವದೂ ಒಂದು ಹರಸಾಹಸವೇ ಆಯಿತು.!!!
ಅಂದು ರಾತ್ರಿ ಅಂತೂ ನಾಳೆ ಬೆಟ್ಟ ಹತ್ತಲು ಶುರು ಮಾಡುವದು ಎಂದು ಮರುದಿನದ ಬೆಳಿಗ್ಗೆಯನ್ನೇ ಕಾಯುತ್ತಾ ನಿದ್ರೆಹೋದೆವು...
This Video in youtube is just a try for capturing all the moments in ten mins.
1 comment:
ಲೋ.. ಚೆನ್ನಾಗಿ ಬರ್ದಿದಿಯಾ.. ಮುಂದಿನ ಕಂತಿಗಾಗಿ ಕಾಯ್ತಿದಿನಿ... ;)
Post a Comment