Thursday, January 3, 2013

ಕಿಶೋರ್ ಮಾಸ್ತರ್ರು ಹಾಗೂ ಭತ್ತದ ಕಾಳು



ನನ್ನ ಅತಿ ಪ್ರೀತಿಯ ಸರ್ ಅವರು. ನನಗೆ 1,2,3 ನೇ ಇಯತ್ತೆ ಕಲಿಸಿದವರು. ಏನೂ ಕಲಿಸದೇ ಬಹುಪ್ರೀತಿಯಿಂದ ಪರೀಕ್ಷೆಯಲ್ಲಿ ಪಾಸು ಮಾಡಿದವರು :) ಅವರಂಥಹಾ ಶಿಕ್ಷಕರು ಇನ್ನು ಸಿಗುವದು ಕಷ್ಟ ಬಿಡಿ.

ಮೊಳಗೊಮ್ಮೆ ಶಾಲೆ. ನಮ್ಮೂರಿನ ಸುತ್ತಮುತ್ತಲ 10km ಕಾಡಿಗೆ ಅದೊಂದೇ ಶಾಲೆ. ಊರ ಹೆಸರು ಮಳಲಗಾಂವ್ ಅಂತಾದರೂ ಎಲ್ಲರ ಬಾಯಲ್ಲಿ ಅದಕ್ಕೆ ಮೊಳಗೊಮ್ಮೆ ಶಾಲೆ ಎಂದೇ ಹೆಸರು. ನಮ್ಮ ಅಜ್ಜ ಶುರುಮಾಡಿದ ಶಾಲೆ. ಅಲ್ಲಿ ಕಲಿಸುತ್ತಾ ಇದ್ದಿದ್ದು ಕೇವಲ 5ನೇ ಇಯತ್ತೆವರೆಗೆ ಮಾತ್ರ. ಶಾಲೆಯಲ್ಲಿ ಇದ್ದವರೇ 15-20 ಮಂದಿ ಮಕ್ಕಳು. ಅದಕ್ಕೆ ಕಿಶೋರ್ ಸರ್ ಹಾಗೂ ಭಯಾನಕ ಸಿಟ್ಟಿನ ಜ್ನಾನದೇವ್ ಸರ್ ಎಂಬಂಥಾ ಎರಡು ಜನ ಶಿಕ್ಷಕರು.

ಕಿಶೋರ್ ಮಾಸ್ತರರು ಆಗ ಶಾಲೆಗೆ ಹಿರಿಯ ಶಿಕ್ಷಕರು. ಗುರುಗಳ ಬಗ್ಗೆ ಈ ರೀತಿ ಹೇಳಬಾರದು. ಆದರೂ ಎಲ್ಲರಿಗೂ ಗೊತ್ತಿರುಂತೆ ಅವರು ಮಹಾನ್ ಕುಡುಕರು :) ಅವರ ಹೆಂಡತಿ ಅವರನ್ನು ಬಿಟ್ಟು ಯಾರದೋ ಜೊತೆ ಓಡಿ ಹೋಗಿದ್ದಳಂತೆ. ಅದಾದ ಮೇಲೆ ಮಾನಿನಿಯ ಸಹವಾಸಕ್ಕೆ ಹೋಗದೇ ಮದ್ಯಪಾನದಲ್ಲಿ ಅನುರಕ್ತರಾದವರು ಇನ್ನೂ ಹಾಗೆಯೇ ಇದ್ದಾರೆ :)

ಆಗ ನಾನು ಒಂದನೇ ಇಯತ್ತೆಯಲ್ಲಿ ಇದ್ದೆ. ಕಿಶೋರ್ ಸರ್ ಪ್ರತಿದಿನ ಬೆಳಿಗ್ಗೆ ಶಾಲೆಗೆ ಅಪ್ಪಟ ಇಸ್ತ್ರಿ ಮಾಡಿದ ಬಿಳೀ ಅಂಗಿ & ಕರೀ ಪ್ಯಾಂಟು ಧರಿಸಿ ಸರಿಯಾದ ಸಮಯಕ್ಕೆ ಹಾಜರಾಗಿರುತ್ತಿದ್ದರು. ಅವರೆಂದರೆ ಮಕ್ಕಳಿಗೆಲ್ಲಾ ಪ್ರಾಣ. ಯಾಕೆಂದರೆ ಅವರು ಏನನ್ನೂ ಕಲಿಸುತ್ತಿರಲಿಲ್ಲ. ಯಾರಿಗೂ ಹೊಡೆದು ಬಯ್ದು ಮಾಡಿ ಗೊತ್ತಿದ್ದವರಲ್ಲ. ಬೆಳಿಗ್ಗೆಯಿಂದಲೇ ಪಾನಸೇವನೆ ಮಾಡಿ, ಎಲ್ಲೋ ನೋಡುತ್ತಾ, ಯಾವುದೋ ವಿಚಿತ್ರವಾದ ಮಂದಹಾಸವನ್ನು ಮುಖದ ಮೇಲೆ ಧರಿಸಿ ಮರದ ಖುರ್ಚಿಯ ಮೇಲೆ ಸದಾ ಸುಖಾಸೀನರಾಗಿರುತ್ತಿದ್ದರು. ಕ್ಲಾಸಿನಲ್ಲಿ ನಾವೆಲ್ಲ ಮಕ್ಕಳು ನಮಗೆ ಬೇಕಾದ ಆಟವಾಡಿಕೊಂಡು ಇರುತ್ತಿದ್ದೆವು.

ಶಾಲೆಗೆ ಹೋದ ಕೂಡಲೇ, ಚಿಕ್ಕವನಾಗಿದ್ದ ನನ್ನನ್ನು ಕರೆದು, "ಬಾರೋ ಚಚಿ ಇಲ್ಲಿ" ಎಂದು ಪ್ರೀತಿಯಿಂದ ಅವರ ಹೆಗಲ ಮೇಲೆ ಕೂರಿಸಿಕೊಳ್ಳುತ್ತಿದ್ದರು. ಬಹಳ ಸೌಂದರ್ಯಪ್ರಜ್ನೆಯವರಾಗಿದ್ದರಿಂದ ಅವರಿಗೆ ತಲೆಯಲ್ಲಿ ಬಿಳಿಯ ಕೂದಲು ಹುಟ್ಟಿದರೆ ಸುತಾರಾಂ ಆಗುತ್ತಿರಲಿಲ್ಲ. ಅದಕ್ಕೇ ಅವರ ಹೆಗಲ ಮೇಲೆ ನನ್ನ ಕೂರಿಸಿಕೊಂಡು, ಒಂದು ಭತ್ತದ ಕಾಳನ್ನು ಕೊಟ್ಟು, ಅವರ ಕೇಶರಾಶಿಯಲ್ಲಿ ಅಲ್ಲಲ್ಲಿ ಇರುತ್ತಿದ್ದ ಬಿಳಿಯ ಕೂದಲನ್ನು ಹೆಕ್ಕಿ ಕಿತ್ತು ತೆಗೆಯಲು ಹೇಳುತ್ತಿದ್ದರು. ನಾನಂತೂ ಬಹು ಆನಂದದಿಂದ ಆ ಕೆಲಸವನ್ನು ಗಮನಕೊಟ್ಟು ಬಹು ಮುತುವರ್ಜಿಯಿಂದ ಮಾಡುತ್ತಿದ್ದೆ. ಎಲ್ಲ ಮಲೆನಾಡಿನ ಮನೆಗಳಂತೆಯೇ ನಮ್ಮ ಮನೆಯಲ್ಲಿ ಸಹಾ ಯಾರೂ ಶಾಲೆಯಲ್ಲಿ ನಮ್ಮ ಮಕ್ಕಳು ಏನು ಕಲಿಯುತ್ತಿದ್ದಾರೆ ಎಂದು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಶಾಲೆಯಲ್ಲಿ ಕಿಶೋರ್ ಸರ್ ಅವರ ಬಿಳಿ ಕೂದಲು ಕೀಳುವದು, ಮನೆಯಲ್ಲಿ ಸುಬ್ಬಣ್ಣನ ಜೊತೆ ಗಿಲ್ಲಿ-ದಾಂಡು ಆಡುವದು. ಆಹಾ ಎಂಥ ಸುಂದರ ಜೀವನ :) ನಾನಂತೂ 3ನೇ ಇಯತ್ತೆಯವರೆಗೆ ಅ,ಆ ವನ್ನೂ ಕಲಿತಿರಲಿಲ್ಲ !!!

ನಾನು 3ನೇ ಇಯತ್ತೆವರೆಗೂ, "ಇದನ್ನೇ" ಕಲಿಯಲು ಎಲ್ಲರೂ ಶಾಲೆಗೆ ಹೋಗುತ್ತಾರೆ ಅಂದುಕೊಂಡಿದ್ದೆ !!!

ಕಿಶೋರ್ ಸರ್ ನಮ್ಮ ಮನೆಯ ಕೆರೆಯಲ್ಲಿ ಪಾನಮತ್ತರಾಗಿ ಈಜುತ್ತಾರೆ, ಎಲ್ಲಾದರೂ ಅವಘಡವಾದೀತು ಎಂದು ಎಲ್ಲ ಸೇರಿ ಅವರನ್ನು ಟ್ರಾನ್ಸ್-ಫರ್ ಮಾಡಿಸಿಬಿಟ್ಟರು. ಆ ದಿನ ನಮ್ಮೂರಿನ ಎಲ್ಲಾ ಮಕ್ಕಳ ಪಾಲಿಗೆ ಕರಾಳ ದಿನ.
ನಾನಂತೂ "ಮಾಸ್ತರ್ರು ಬೇರೆ ಆಯ್ದ್ರು, ಮಗ್ಗಿ ಕೇಳ್ತ್ರು, ಯನ್ಗೆ ಹೊಟ್ಟೆ ನೋಯ್ತು, ಶಾಲ್ಗೆ ಹೋಗ್ತ್ನಿಲ್ಲೆ" ಎಂದು ಸುಮಾರು ದಿನಗಳವರೆಗೆ ಗೋಳೊ ಎಂದು ಅಳುತ್ತಾ ಶಾಲೆಯನ್ನು ತಪ್ಪಿಸಿದ್ದೆ.

ಈಗೆಲ್ಲಾ Lkg,Ukg, ಯಲ್ಲೇ kgಗಟ್ಟಲೇ ಪುಸ್ತಕ ಹೊತ್ತು, ಸದಾ ಶಾಲೆಯ ಟ್ಯೂಷನ್ನು, ಹೋಮ್-ವರ್ಕು ಗಳ ಬಗ್ಗೆ ಚಿಂತಿಸುವ ಮಕ್ಕಳನ್ನು ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ. ಕನ್ನಡ ಶಾಲೆಯಲ್ಲಿ ನಮ್ಮ ಅಮಾಯಕತೆಗೆ ಏನೂ ಕುಂದು ತರದೇ, ಪಾಸು ಮಾಡಿಸಿ, ಶಾಲೆ "ಕಲಿಸಿದ", ಇಂದಿಗೂ ಒಂದು ಕಾಲದ ಮೊಳಗೊಮ್ಮೆ ಶಾಲೆಯ ಮಕ್ಕಳ ನೆಚ್ಚಿನ ಕಿಶೊರ್ ಮಾಸ್ತರ್ ರಿಗೆ ಈ ಬ್ಲಾಗ್ ಪೋಸ್ಟ್ ಅರ್ಪಿಸುತ್ತಿದ್ದೇನೆ...

No comments: