Thursday, August 15, 2013

ಹೊಂಡದಲ್ಲಿ ಬಿದ್ದ ಹೋಂಡಾ

ಅಂದು ಶನಿವಾರ. ನಮ್ಮ ಐಟಿ ಕಂಪನಿಗಳ ರಜೆಯ ದಿನ. ಎಲ್ಲಾ ಟೆಕ್ಕಿಗಳೂ ಬಾಲಬಿಚ್ಚಿ ತಮ್ಮ ಇತರೆ ಇತರೆ ಕಾರ್ಯಗಳಲ್ಲಿ ಮಗ್ನರಾಗುವ ದಿನ. ನನಗೆ ಇತ್ತೀಚೆಗೆ ಯಾಕೋ ಫಾರಂ ಹೌಸ್ ನ ಚಟ ಬಡಿದು, ಅಂತರ್ಜಾಲದಲ್ಲಿ ಕಂಡ ಕಂಡ ರಿಯಲ್ ಎಸ್ಟೇಟ್ ಏಜೆಂಟರುಗಳಿಗೆ ಫೋನಾಯಿಸುತ್ತಾ ಇದ್ದೆ. ಅಷ್ಟರಲ್ಲೇ ನನ್ನ ಅಡ್ವೋಕೇಟ್ ಗೆಳೆಯ ವಿನೀತ್ ಫೋನಾಯಿಸಿದ. ಆತನ ಪ್ಲಾನ್ ನಂತೆ, ನಮಗೆಲ್ಲ ಚಿರಪರಿಚಿತರಾದ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಅವರ ಫಾರಂ ಹೌಸ್ ಗೆ ಹೊರಟೆವು. ಅಲ್ಲಿಗೆ ಹೋಗುವ ದಾರಿ ಗೊತ್ತಿರದ ನಾನು, ಕಕ್ಕಾಬಿಕ್ಕಿಯಾಗಿ ಅತ್ತ ಇತ್ತ ನೋಡುತ್ತ ಗಾಡಿಯನ್ನು ಓಡಿಸುತ್ತಿದ್ದೆ. ಪಕ್ಕದಲ್ಲಿ ಕುಂತಿದ್ದ ವಿನೀತನಿಗೆ ಎಂದಿನಂತೆ ಸಾವಿರಾರು ಫೋನ್ ಕರೆಗಳು ಬಂದೂ ಬಂದೂ ಸತಾಯಿಸುತ್ತಲೇ ಇದ್ದವು. ಆತ ಒಂದು ಕಡೆ ಫೋನಿನಲ್ಲಿ ಮಾತನಾಡುತ್ತಲೂ, ಇನ್ನೊಂದು ಕಡೆ ದಾರಿ ಗೊತ್ತಿರದ ನನಗೆ ದಾರಿಯನ್ನು ಕೈ ಸನ್ನೆ ಮಾಡಿ ತೋರುತ್ತಲೂ ಇದ್ದ.

ಕೆಂಗೇರಿಯ ರಾಮೋಹಳ್ಳಿಯಲ್ಲಿ ಬಲಕ್ಕೆ ತಿರುಗಬೇಕಾಗಿದ್ದ ಗಾಡಿ ದಾರಿತಪ್ಪಿ ದೊಡ್ಡ ಆಲದಮರವನ್ನು ದಾಟಿ ಮಂಚಿನಬೆಲೆ ಡ್ಯಾಮ್ ಹತ್ತಿರ ಹೋಗಿಬಿಟ್ಟಿತು. ವಿನೀತನಿಗೂ ದಾರಿ ಸರಿಯಾಗಿ ಗೊತ್ತಿರಲಿಲ್ಲ ಎಂದು ನನಗೆ ಆಗ ತಿಳಿಯಿತು. ವಿನೀತ ಮಾತ್ರ ಫೋನಿನಲ್ಲಿಯೇ ಮಗ್ನನಾಗಿದ್ದ. ಏನಪ್ಪಾ ಇದು ಎಂದು ಕನವರಿಸಿ, ಗೂಗಲ್ ನ ಮ್ಯಾಪಿಗೆ ಕೈಮುಗಿದು ಅದರಲ್ಲಿ ಕಣ್ಣಾಡಿಸಿ ಅಂತೂ ಸರಿದಾರಿಯನ್ನು ಹುಡುಕಿ, ವಿನೀತನಿಗೆ ಫೋನ್ ಮಾಡಿದವರಿಗೆ ಮನಸ್ಸಿನಲ್ಲಿಯೇ ಬೈಯುತ್ತಾ ಗಾಡಿಯನ್ನು ವಾಪಸ್ಸು ತಿರುಗಿಸಿದೆ. ಮಾಡಿದ ತಪ್ಪು ಮತ್ತೆ ಮಾಡಬಾರದೆಂದು ಕಂಡಕಂಡವರಿಗೆಲ್ಲಾ ರಾಮೋಹಳ್ಳಿಯ ದಾರಿ ಕೇಳುತ್ತಾ, ಕೇಳಿದ್ದನ್ನು ಗೂಗಲ್ ಮ್ಯಾಪಿನಲ್ಲಿ ನೋಡಿ ಖಚಿತಪಡಿಸಿಕೊಳ್ಳುತ್ತಾ, ಒಂದು ಚಿಕ್ಕದಾದ ಡಾಂಬರು ರಸ್ತೆಯಲ್ಲಿ ಗಾಡಿ ಓಡಿಸುತ್ತಾ ಇದ್ದೆ.

ನೋಡನೋಡುತ್ತಲೇ ರಾಮೋಹಳ್ಳಿಯ ಕಿರಿದಾದ ಡಾಂಬರು ರಸ್ತೆಯಲ್ಲಿ, ಹಾಲ್ಟಿಂಗ್ ಎಶ್ಟಿ ಗಾಡಿ (ST: State Transport ಬಸ್ಸಿಗೆ ನನ್ನ ಅಜ್ಜ ಹಾಗೂ ಅಜ್ಜಿ ಬಳಸುತ್ತಿದ್ದ ಶಾರ್ಟ್ ಫಾರಂ ಶಬ್ದ!) ಎದುರಿಗೆ ಬಂದುಬಿಟ್ಟಿತು. ಅಷ್ಟು ಚಿಕ್ಕ ರಸ್ತೆಯಲ್ಲಿ ನಾನು ಗಾಡಿಯನ್ನು ಪಕ್ಕಕ್ಕೆ ಇಳಿಸುವಂತೆಯೇ ಇರಲಿಲ್ಲ. ಬಸ್ಸಿನ ಡ್ರೈವರನೂ ಸಹಾ ಹಳೇ ಕಾಲದ ಪುಂಗಿ ಹಾರನ್ನ್ ನ್ನು ಊದುತ್ತಾ 'ದಾರಿಕೊಡು' ಎಂದು ನನ್ನನ್ನು ಕಣ್ಸನ್ನೆಯಲ್ಲೇ ಬೆದರಿಸಿದ. ಅಷ್ಟರಲ್ಲಿ ಪಕ್ಕದಲ್ಲಿ ಮತ್ತೆ ಇನ್ನೊಂದು ಫೋನಿನಲ್ಲಿ ಮಾತನಾಡುತ್ತ ಕುಳಿತಿದ್ದ ವಿನೀತನಿಗೆ ಆರನೇ ಸೆನ್ಸ್ ಜಾಗೃತವಾದಂತೆ ಪಕ್ಕಕ್ಕೆ ಗಾಡಿ ತಿರುಗಿಸುವಂತೆ ಕೈಸನ್ನೆ ಮಾಡಿದ. ಎಡಗಡೆ ಒಂದು ಗೇಟ್ ಇತ್ತು. ಇದೂ ಒಂದು ಫಾರಂ ಹೌಸ್ ನ ಗೇಟ್ ಇರಬೇಕು ಎಂದು ಭಾಸವಾಗಿ ಕಣ್ಣು ಮುಚ್ಚಿಕೊಂಡು ಎಡಗಡೆ ಗಾಡಿಯನ್ನು ತಿರುಗಿಸಿಬಿಟ್ಟೆ. ಅಷ್ಟೇ ಆದದ್ದು...

ಗಾಡಿ ಹೊಂಡದಲ್ಲಿ ಬಿದ್ದುಬಿಟ್ಟಿತ್ತು.! ಹೊಂಡದಲ್ಲಿ ಮಳೆಗೆ ಚೆನ್ನಾಗಿ ಹುಲ್ಲು ಬೆಳೆದಿತ್ತು. ಆಳದಲ್ಲಿದ್ದ ಗಾಡಿ ಮುಂದೂ ಹೋಗಲಾರದೇ ಹಿಂದೂ ಬರಲಾರದೇ ಒದ್ದಾಡುತ್ತಿತ್ತು. ವಿನೀತನ ಫೋನು ನಿಂತು ಆತನ ಕಕ್ಕಾಬಿಕ್ಕಿಯಾದ ಮುಖ ನನ್ನನ್ನೇ ನೋಡುತ್ತಿತ್ತು. ಅದೇ ಹೊತ್ತಿಗೆ ನಾಗೇಶ್ ಹೆಗಡೆ ಅಂಕಲ್ ಫೋನ್ ಮಾಡಿ 'ಎಲ್ಲಿದೀರ್ರೋ' ಎಂದು ಕೇಳಿದರು. "ಅಂಕಲ್ ಹೊಂಡದಲ್ಲಿ ಇದ್ಯ, ಕಡೀಗೆ ಮಾಡ್ತೆ" ಎಂದು ಹೇಳಿ ಫೋನ್ ಇಟ್ಟೆ.!

ಅಷ್ಟರಲ್ಲಿ ಎದುರಿಗೆ ನಿಂತಿದ್ದ ಬಸ್ಸಿನಿಂದ ಒಬ್ಬೊಬ್ಬರಾಗಿ ಇಳಿದು ಬರತೊಡಗಿದರು. ನಾಲ್ಕಾರು ಹುಡುಗರು ಬಂದು ಸ್ಥಳಪರೀಕ್ಷೆ ಮಾಡಿ, "ಸಾರ್, ಹೊಂಡದಲ್ಲಿ ಬಿದ್ದೊಗಯ್ತೆ ಕಾರು, ಕಟಿಂಗ್ ತಗೋವಾಗ ನೋಡ್ಕೋಬಾರ್ದಾ ಸಾರ್" ಎನ್ನತೊಡಗಿದರು. ಇನ್ನೂ ಕೆಲವರು ಕಾರಿನ ಮಾಡೆಲ್ಲು, ಹೆಸರು, ಕಂಪೆನಿ ಇತ್ಯಾದಿಗಳನ್ನು ಪರೀಕ್ಷಿಸಿ, "ಅಯ್ಯೋ ಹೋಂಡಾ ಬೇರೆ, ಹೊಂಡದಲ್ಲಿ ಬಿದ್ದೊಯ್ತಲ್ಲಾ" ಎಂದರು.!!!

ಅಷ್ಟರಲ್ಲಿ ಎಶ್ಟಿ ಗಾಡಿಯ ಡ್ರೈವರನೂ ಕಂಡಕ್ಟರನೂ ಇಳಿದು ಬಂದು ನನ್ನ ಅಸಹಾಯಕ ಮುಖವನ್ನು ನೋಡಿ ಕನಿಕರದಿಂದ, "ಸಾರ್ ಎಲ್ಲಾ ಸೇರಿ ಎತ್ತಿಬಿಡೋಣಾ ಗಾಡೀನಾ, ಬೇರೆ ದಾರಿ ಇಲ್ಲಾ ಬುಡಿ" ಎಂದರು. ಸುಮಾರು 15 ಜನ ಸೇರಿ ಬಹುಪ್ರಯತ್ನದಿಂದ ಗಾಡಿಯನ್ನು ಹೊಂಡದಿಂದ ಮೇಲೆತ್ತಿದರು. ಇಲ್ಲವಾದಲ್ಲಿ ಹೋಂಡಾ ಕ್ಕೆ ಇನ್ನೆಷ್ಟು ದಿನ ಹೊಂಡದಲ್ಲಿ ಮುಳುಗಿರುವ ಭಾಗ್ಯವಿತ್ತೇನೋ. ಆ ಕ್ಷಣಕ್ಕೆ, ಎಲ್ಲಾ ಟ್ಯಾಕ್ಸಿಯವರು "ತಂದೆ ತಾಯಿಯ ಕೃಪೆ" ಎಂದು ಹಿಂದಿನ ಗಾಜಿನ ಮೇಲೆ ಬರೆಸಿದಂತೆ, ನಾನೂ ಸಹಾ "ರಾಮೋಹಳ್ಳಿಯ ಜನರ ಕೃಪೆ" ಎಂದು ಬರೆಸಬೇಕೆಂದುಕೊಂಡೆ.!!

 

No comments: