Tuesday, August 20, 2013

ಬಿಳಿ ಅಂಗಿ ಹಾಗೂ ಮಡಿಕೇರಿಯ ಬ್ಯಾಂಕ್ ಮ್ಯಾನೇಜರ್ರು

ನಾನು ಹಾಗೂ ನನ್ನ ಆಪ್ತ ಮಿತ್ರ ಗೋಣಿಕೊಪ್ಪದ ಆಕಾಶ್ ಗಣಪತಿ(ನಾವೆಲ್ಲ ಪ್ರೀತಿಯಿಂದ ಗಣಪ ಎಂದು ಕರೆಯುತ್ತೇವೆ ಅವನಿಗೆ) ಆವತ್ತು ಮೈಸೂರಿನ ಅವನ ಬಾಡಿಗೆ ಮನೆಯಲ್ಲಿ ಒಂದು ಕಪ್ ಕಾಫಿ ಹೀರುತ್ತ ಕುಳಿತಿದ್ದೆವು. ಆದಿನ ಗಣಪ ನನಗೆ ಬಿಳಿ ಅಂಗಿಯನ್ನು ಧರಿಸುವದರ ಮಹತ್ವದ ಬಗ್ಗೆ ವಿವರಣೆ ಕೊಡುತ್ತಿದ್ದ. ಎಲ್ಲಾ ರಾಜಕೀಯ ಪುಢಾರಿಗಳೂ, ಗವರ್ನಮೆಂಟ್ ಅಧಿಕಾರಿಗಳೂ ಬಿಳಿಯ ಅಂಗಿ ಹಾಕಿದ್ದರಿಂದಲೇ ಒಂದು ಹಂತಕ್ಕೆ ಜನರೆದುರಿಗೆ ತಾವೇನೋ ದೊಡ್ಡ ಜನ ಎಂದು ಬಿಂಬಿಸಿಕೊಳ್ಳುತ್ತಾರೆ ಎಂಬುದು ಆತನ ವಾದವಾಗಿತ್ತು. ಬಿಳಿಯ ಅಂಗಿಗೆ ಬಹಳ ಪವರ್ ಇರುವುದಾಗಿಯೂ ಆದ್ದರಿಂದ ತಾನು ಒಟ್ಟಿಗೇ 4 ಬಿಳಿಯ ಅಂಗಿಯ ಸೆಟ್ ಖರೀದಿಸಿರುವುದಾಗಿಯೂ ಆತ ಹೇಳಿದ. ಎಲ್ಲಾ ಗವರ್ನಮೆಂಟ್ ಕಛೇರಿಗಳಿಗೆ, ಬ್ಯಾಂಕುಗಳಿಗೆ ತಾನು ಬಿಳಿಯ ಅಂಗಿ ಹಾಕಿ ಹೋಗುವದರಿಂದಲೇ ತನ್ನ ಎಲ್ಲಾ ಕೆಲಸಗಳೂ ಸಾರಾಸಗಟಾಗಿ ಮುಗಿಯುತ್ತದೆ ಎಂಬಿತ್ಯಾದಿ ವಿವರಗಳನ್ನೂ ಆತ ಕೊಟ್ಟ. ಎಲ್ಲವನ್ನು ಕೇಳಿದ ಮೇಲೆ ನನಗೆ ಹೊಳೆದಿದ್ದು, ಆವತ್ತು ಆಶ್ಚರ್ಯವೆಂಬಂತೆ ನನ್ನ ಬ್ಯಾಗಿನಲ್ಲೂ ಒಂದು ಬಿಳಿಯ ಅಂಗಿ ಇತ್ತೆಂಬುದು.!!

ಗಣಪ ಒಂದು ವಿಚಿತ್ರವಾದ ಸಮಸ್ಯೆಯಲ್ಲಿ ಸಿಕ್ಕಿಕೊಂಡಿದ್ದ. ಆ ಸಂಕೀರ್ಣ ಸಮಸ್ಯೆಯ ಆಳ ಮತ್ತು ಅಗಲ ಬಹಳವಾಗಿತ್ತು. ಕರ್ನಾಟಕದ ಸಿಎಮ್ಮು ಮರಳು ಸಾಗಾಟನೆಯನ್ನು ರಾತ್ರೋರಾತ್ರಿ ನಿಷೇಧಿಸಿದ್ದರಿಂದ ಆತ ಕಟ್ಟಿಸುತ್ತಿದ್ದ ಮನೆಗೆ ಮರಳು ಸಿಗದೇ ಮನೆಯ ನಿರ್ಮಾಣ ಅರ್ಧಕ್ಕೇ ನಿಂತುಬಿಟ್ಟಿತ್ತು. ಮನೆ ಕಟ್ಟುವ ಮೇಸ್ತ್ರಿ ಇದೇ ಸಮಯದ ಪ್ರಯೋಜನ ಪಡೆಯಲು, ಇದೆಲ್ಲಾ "ಸ್ಯಾಂಡ್ ಮಾಫಿಯಾ"ದವರ ಕುತಂತ್ರವಾಗಿರುವುದಾಗಿಯೂ, ಎಲ್ಲಾ ಮರಳು ಲಾರಿಗಳನ್ನೂ ಮೈಸೂರಿಗೆ ಬರುತ್ತಲೇ ಪೋಲೀಸರು ಹಿಡಿದು ಒಳಗೆ ಹಾಕುತ್ತಿರುವುದಾಗಿಯೂ, ಎಲ್ಲರಿಗೂ ಮಾಮೂಲು ಹೊಂದಿಸಲು ಇನ್ನೂ ಹೆಚ್ಚು ಕ್ಯಾಷು ಕೊಡಬೇಕಾಗಿಯೂ ಸತಾಯಿಸುತ್ತಿದ್ದ. ಅಷ್ಟರಲ್ಲೇ ಆತನ ಹೊಸಮನೆಯ ಕ್ಯೂರಿಂಗ್ ಮಾಡುವ ಶಿವಣ್ಣ ಯಾಕೋ ಇತ್ತೀಚೆಗೆ ಮೈಗಳ್ಳತನವನ್ನು ರೂಢಿಮಾಡಿಕೊಂಡು, ಹೊಸ ಸಿಮೆಂಟ್ ಗೆ ನೀರು ಹಾಕದೇ ಅಲ್ಲಲ್ಲಿ ಸುಮ್ಮನೇ ಅಲೆದಾಡಿಕೊಂಡಿದ್ದ. ಇದರಿಂದ ಬೇಸರಗೊಂಡಿದ್ದ ಗಣಪನ ಪ್ರಕಾರ ಇವರಿಗೆಲ್ಲ ಸ್ವಲ್ಪ ಬಿಳಿ ಅಂಗಿಯ ಬಿಸಿತಟ್ಟಿಸಿದರೆ ಸರಿಯಾಗುತ್ತದೆ ಎಂಬುದಾಗಿತ್ತು. ಆದ್ದರಿಂದ ಆದಿನ ನಾನು ತಂದಿದ್ದ ಬಿಳಿಯ ಅಂಗಿಯನ್ನು ತೊಟ್ಟು "ಮಡಿಕೇರಿಯಿಂದ ಬಂದ ಬ್ಯಾಂಕ್ ಮ್ಯಾನೇಜರ್ರ್ ಸಾರ್" ನ ಪಾತ್ರ ಧರಿಸಬೇಕಾಯಿತು.

ಗಣಪನ ಜೊತೆ ಬಿಳಿ ಅಂಗಿಯ ತೊಟ್ಟ ನಾನು ಬ್ಯಾಂಕ್ ಮ್ಯಾನೇಜರ್ ಆಗಲು ಮುಖವನ್ನು ಗಂಟಿಕ್ಕಿಕೊಂಡು ಮನೆ ಕಟ್ಟುತ್ತಿದ್ದ ಜಾಗಕ್ಕೆ ಹೋದೆ. "ಮಡಿಕೇರಿಯಿಂದ ಬ್ಯಾಂಕ್ ಮ್ಯಾನೇಜರ್ರ್ ಸಾಹೇಬ್ರು ಬಂದುಬಿಟ್ಟಿದ್ದಾರೆ, ಮನೆ ಕಟ್ಟಲು ತಡವಾದ್ದರಿಂದ ವಿಚಾರಣೆಗೆ ಆರ್ಡರ್ ಆಗಿದೆ" ಎಂದು ಇಳಿ ದನಿಯಲ್ಲಿ ಗಣಪ ಶಿವಣ್ಣನಿಗೆ ಹೇಳಿದ. ಹೌಹಾರಿದ ಶಿವಣ್ಣ ನನಗೆ "ನಮಸ್ಕಾರಾ ಸಾರ್" ಎನ್ನುತ್ತಾ ಏನೋ ತಪ್ಪು ಮಾಡಿದವರಂತೆ ಕೈಕಟ್ಟಿ ದೂರದಲ್ಲಿ ನಿಂತುಕೊಂಡ. ಮ್ಯಾನೇಜರ್ರು ಬಂದ ವಿಷಯ ಗೊತ್ತಾಗಿ ಮೇಸ್ತ್ರಿ ಸ್ವಾಮಿಯೂ ಬಂದ. "ಎಲ್ಲಾ ಸೇರಿ ಬ್ಯಾಂಕ್ ಮನೆ ಕಟ್ಟಲು ಅಂತಾ ಕೊಟ್ಟಿರೋ ಹಣಾನ ನುಂಗಿ ನೀರು ಕುಡೀತಾ ಇದೀರಾ, ಹೀಗೇ ಆದರೆ ಈ ಮನೆ ನಾ ಸೀಜ್ ಮಾಡ್ಬೇಕಾಗತ್ತೆ" ಎಂದು ಹೇಳುತ್ತಾ ನನ್ನ ಮೊಬೈಲ್ ಫೋನಿನಲ್ಲಿ ಕಟ್ಟುತ್ತಿದ್ದ ಮನೆಯ ಫೋಟೊಗಳನ್ನು ತೆಗೆದೆ. ಅಷ್ಟೊತ್ತಿಗೆ ಬಿಳಿ ಅಂಗಿ ಹಾಕಿದ್ದ ನನ್ನಲ್ಲಿ ನಿಜವಾಗಿಯೂ ಯಾವುದೋ ಮ್ಯಾನೇಜರ್ರ್ ನ ಆತ್ಮ ಪ್ರವೇಶವಾದಂತಾಯಿತು.:) ಮತ್ತೂ ಮುಖವನ್ನು ಗಂಟು ಹಾಕಿಕೊಂಡು ಗಣಪನಿಗೆ "ಏನು ಗಣಪತಿ ಅವರೇ ಬೇಗಾ ಮನೆ ಕಟ್ಟಲಿಲ್ಲಾ ಅಂದರೆ ಮೇಲಿನವರಿಗೆ ರಿಪೋರ್ಟ್ ಹೋಗತ್ತೆ ನೋಡಿ. ಆಮೇಲೆ ಸ್ಟ್ರಿಕ್ಟ್ ಆಕ್ಶನ್ ತಗೋಬೇಕಾಗತ್ತೆ" ಎಂದೆಲ್ಲಾ ಏನೇನೋ ಹೇಳಿದೆ. ಮರಳು ತಂದು ಕೆಲಸ ಮುಂದುವರಿಯವರೆಗೂ ಹೊಸದಾಗಿ ಬ್ಯಾಂಕಿನಿಂದ ದುಡ್ಡನ್ನು ರಿಲೀಸ್ ಮಾಡಲಿಕ್ಕೆ ಆಗುವದಿಲ್ಲ ಎಂದೂ ಖಡಾಖಂಡಿತವಾಗಿ ಹೇಳಿದೆ. ಇದನ್ನೆಲ್ಲಾ ನೋಡಿ ಒಂದು ಹದಕ್ಕೆ ಬಂದಿದ್ದ ಮೇಸ್ತ್ರಿ "ಸಾಮಿ, ಚೆಕ್ ಪೋಸ್ಟ್ ನವ್ರಿಗೆ, ಪೋಲೀಸ್ ನೋರಿಗೆ ಎಲ್ಲಾ ಮಾಮೂಲು ಕೊಟ್ಟು ಮೈಸೂರ್ ಗೆ ಮರಳು ಲಾರಿ ಟ್ರಿಪ್ ಬರ್ತಾ ಐತೆ, ಅದರಲ್ಲಿ ನಾನು ಒಂದು ಟ್ರಿಪ್ ತರ್ತೀನಿ, ದುಡ್ಡು ಹೆಂಗೋ ಹೊಂದ್ಸ್ಕೋತೀನಿ ಬುಡಿ" ಅಂದ. ಶಿವಣ್ಣ ತಾನೂ ಇನ್ನು ನಿಯತ್ತಿನಿಂದ ಕ್ಯೂರಿಂಗ್ ಮಾಡುತ್ತೇನೆ ಎಂದು ವಚನ ನೀಡಿದ. ಒಟ್ಟಿನಲ್ಲಿ ಗಣಪನ ಸಮಸ್ಯೆ ಆ ಕ್ಷಣಕ್ಕೆ ಶಾಂತವಾಯಿತು.

ತಿರುಗಿ ಮನೆಗೆ ಬರುತ್ತಾ ಗಣಪ ಬಿಳಿ ಅಂಗಿಗಿರುವ ಶಕ್ತಿ ಹಾಗೂ ಮಹತ್ವವನ್ನು ಸವಿವರವಾಗಿ ಮತ್ತೆ ಮತ್ತೆ ವರ್ಣಿಸಿದ. ಅದಕ್ಕೇ ಈಗ ಆಫೀಸಿನಲ್ಲಿ ಮ್ಯಾನೇಜರ್ ಜೊತೆ ಮೀಟಿಂಗ್ ಇರುವಾಗ ಬಿಳಿಯ ಅಂಗಿ ತೊಟ್ಟೇ ಹೋಗುತ್ತೇನೆ!!!

No comments: