Sunday, February 9, 2014

ಹರೀಸಾ ಮತ್ತು ಆತನ ಪಿಸ್ತೋಲು

ಹರೀಶ ಸಿದ್ದಿ, ಎಂಬುದು ಹರೀಸನ ನಿಜವಾದ ಹೆಸರು. ಅವನು ಸಣ್ಯಾ ಸಿದ್ದಿಯ ಮೊಮ್ಮಗ. ಹರೀಸನ ಅಪ್ಪನ ಹೆಸರು ಪರುಷರಾಮ ಎಂದಾಗಿದ್ದರೂ ಊರ ಜನರೆಲ್ಲ ಸೇರಿ ಅದನ್ನು 'ಪರ್ಸು' ಎಂದು ಮಾಡಿಬಿಟ್ಟಿದ್ದರು.
ಮಳಲಗಾಂವಿನ ಶಾಲೆಯ ಹತ್ತಿರ ಅಡವಿಯಲ್ಲಿ ಪರ್ಸುವಿನ ಮನೆ ಇದೆ. ಸಂಜೆ ಹೊತ್ತು ಇಡೀ ಅಡವಿಗೇ ಕೇಳುವಷ್ಟು ಎತ್ತರದ ಸದ್ದು ಮಾಡುತ್ತಾ ಆತನ ಟೇಪ್-ರೆಕಾರ್ಡ ನಲ್ಲಿ ಹಿಂದಿ-ಕನ್ನಡ ಸಿನೆಮಾ ಪದ್ಯಗಳು ಮೊಳಗತೊಡಗುತ್ತವೆ. ಹರೀಸಾ ನಾಲ್ಕನೇ ಇಯತ್ತೆಯವರೆಗು ಶಾಲೆಗೆ ಹೋಗಿದ್ದು ಹಾಗೂ ಇನ್ನೂ ಹೋಗುತ್ತಲೇ ಇರುವದು ಪರ್ಸುವಿಗೆ ಬಹು ಅಚ್ಚರಿಯ ವಿಷಯ. ಯಾಕೆಂದರೆ ಸಣ್ಯಾ ಎಷ್ಟೇ ಹೊಡ್ತಾ ಹಾಕಿದರೂ ಪರ್ಸು ಶಾಲೆಗೆ ಹೋಗುತ್ತಿರಲಿಲ್ಲ. ತನ್ನ ಮಗ ಮಾತ್ರ ಶಾಲೆ ಇನ್ನೂ ಬಿಡಲಿಲ್ಲವಲ್ಲ ಎಂಬುದು ಪರ್ಸು ವಿನ ಸಹಜವಾದ ಕುತೂಹಲ. ಆದರೆ ಇತ್ತೀಚೆಗೆ, ಅಷ್ಟಷ್ಟು ದಿನಕ್ಕೆ ತಾನು ಶಾಲೆಗೆ ಹೋಗುವದಿಲ್ಲ, ಟೀಚರು ಹೊಡ್ತಾ ಹಾಕ್ತ್ರು ಅಂತ ರಗಳೆ ಮಾಡಿ, ಅಡವಿಯಲ್ಲಿ ಎಲ್ಲಾದರು ಅಡಗಿ ಕುಳಿತಿರುವುದೂ, ಪರ್ಸು ಹರೀಸನನ್ನು ದಿನಗಟ್ಟಲೇ ಅಡವಿಯಲ್ಲಿ ಹುಡುಕಿ, ಅಂತೂ ಹಿಡಿದು ಹೊಡ್ತಾ ಹಾಕುವದೂ ಒಂದು ಸಾಮಾನ್ಯದ ವಿಷಯ. ಅದೇನೇ ಇದ್ದರೂ ಊರವರಿಗೆಲ್ಲ ಹರೀಸಾ ಅಂದರೆ ಬಹಳ ಪ್ರೀತಿ. ಆತನನ್ನು ಕಾಡಿಸುವದು ಎಂದರೆ ಎಲ್ಲರಿಗೂ ಏನೋ ಒಂದು ಥರಹದ ಸಂತಸ.



ಕಳೆದ ಗಣೇಶ ಚೌತಿಗೆ ಊರಿಗೆ ಹೋದಾಗ ನನಗೆ ಹರೀಸನ ಒಳಗಿರುವ ಇನ್ನೊಂದು ಪ್ರತಿಭೆ ಅನುಭವಕ್ಕೆ ಬಂತು. ಹಬ್ಬಕ್ಕೆ ಅಂತ ಆತನಿಗೆ ಪರ್ಸು ಒಂದು ಆಟಿಕೆಯ ಪಿಸ್ತೋಲು ಕೊಡಿಸಿದ್ದ. ಅದರಲ್ಲಿ ಹಾಕುವ ಗುಂಡಿಗೆ ಕೇಪು ಎನ್ನುತ್ತಾರೆ. ಪರ್ಸು ಕೊಡಿಸಿದ್ದ ಕೇಪುಗಳನ್ನೆಲ್ಲಾ ಒಂದೇ ಸಮನೇ ಉಮೇದಿಯಲ್ಲಿ ಖಾಲಿಮಾಡಿ, ಮತ್ತೆ ಕೇಪು ಬೇಕೆಂದು ಹಠವನ್ನೂ ಮಾಡಿ, ಪರ್ಸು ವಿನ ಹತ್ತಿರ ಸಣ್ಣದೊಂದು ಹೊಡ್ತಾ ತಿಂದು, ನಮ್ಮ ಮನೆಯಲ್ಲಿ ಹಾಜರಾಗಿದ್ದ.

ಅಷ್ಟರಲ್ಲಿ ವಿಶ್ವಣ್ಣ ಮತ್ತು ನಾನು ನಮ್ಮ ಊರ ಹತ್ತಿರದಲ್ಲಿ ಯಾವುದೋ ಒಂದು ಭತ್ತದ ಗದ್ದೆ ಮಾರಲಿಕ್ಕಿದೆ ಎಂಬ ಸುದ್ದಿಯನ್ನು ಕೇಳಿ ಅದನ್ನು ನೋಡಲು ಹೊರಟಿದ್ದೆವು. ಆದರೆ ದಾರಿ ಸರಿಯಾಗಿ ಗೊತ್ತಿರಲಿಲ್ಲ. ಹರೀಸನ ದೊಡ್ಡಜ್ಜ ಅದೇ ಗದ್ದೆಯಲ್ಲಿ ಕೆಲಸಕ್ಕಿದ್ದು ವಾಸವಾಗಿದ್ದ. ಆದ್ದರಿಂದ ಹರೀಸನಿಗೆ ಅಲ್ಲಿಯ ದಾರಿ ಸರಿಯಾಗಿ ತಿಳಿದಿತ್ತು. ಹರೀಸ ಬಂದಿದ್ದೂ, ನಾವು ಹೊರಟಿದ್ದೂ ಒಟ್ಟಿಗೇ ಆದ್ದರಿಂದ ಆತನನ್ನು ನಮ್ಮ ಕಾರಿನ ಹಿಂಬದಿಯಲ್ಲಿ ಕೂಡ್ರಿಸಿಕೊಂಡು ಹೊರಟೆವು. ಹರೀಸನ ಮುಖವು ತನಗೆ ಇವರ ಜೊತೆ ಹೋದರೆ ಪಿಸ್ತೋಲಿಗೆ ಒಂದಷ್ಟು ಕೇಪು ಸಿಗಬಹುದು ಎಂಬ ಅಸೆಯಿಂದ ಫಳಫಳನೇ ಹೊಳೆಯುತ್ತಿತ್ತು.

ನಾವು ಸಿರಸಿ-ಯೆಲ್ಲಾಪುರ ಮುಖ್ಯ ರಸ್ತೆಗೆ ಸೇರಿ ಮತ್ತೂ ಮುಂದುವರೆದು ಹುತ್ಖಂಡ ಎಂಬ ಊರ ಹತ್ತಿರ ಹೋಗಬೇಕಿತ್ತು. ಹರೀಸನ ಗಮನ ಮಾತ್ರ ಕಾರಿನಲ್ಲಿ ಕುಳಿತಿದ್ದರೂ ತನ್ನ ಪಿಸ್ತೋಲಿನ ಬಗ್ಗೆಯೇ ಇತ್ತು. ಪಿಸ್ತೋಲನ್ನು ವಿಧವಿಧವಾಗಿ ಹಿಡಿದುಕೊಳ್ಳುತ್ತಾ, ಆಚೆ ಈಚೆ ತಿರುಗಿಸುತ್ತಾ, ಪೋಲಿಸರು ಕಳ್ಳನನ್ನು ಹಿಡಿದಾಗ "ಹ್ಯಾಂಡ್ಸ್ ಅಪ್" ಎಂದು ಹೇಳುವಂತೆ ನಟನೆ ಮಾಡುತ್ತಾ, ದಾರಿಯಲ್ಲಿ ಹೋಗುವವರಿಗೆಲ್ಲಾ ಪಿಸ್ತೋಲು ಗುರಿ ತೊರಿಸುತ್ತಾ ತನ್ನದೇ ಆದ ರೀತಿಯಲ್ಲಿ ಖುಷಿಯ ಉತ್ತುಂಗದಲ್ಲಿದ್ದ. ಆತ ಕಳೆದ ಎರಡು ದಿನಗಳಿಂದ ಪಿಸ್ತೋಲನ್ನು ಕೈಯಿಂದ ಬಿಟ್ಟಿರಲಿಲ್ಲ ಎನಿಸುತ್ತದೆ.

ಸ್ವಲ್ಪ ಸಮಯದಲ್ಲೇ ಹುತ್ಖಂಡ ಊರಿನ ಅಡ್ಡರಸ್ತೆ ಬಂದು, ಮುಂದಿನ ದಾರಿ ನಮಗೆ ಗೊತ್ತಿಲ್ಲದ ಕಾರಣ, ಹರೀಸ ದಾರಿ ತೋರಿಸಲು ಕಾರಿನ ತೆರೆದ ಕಿಟಕಿಯಿಂದ ಕೈ ಹೊರಗೆ ಹಾಕಿ ಬಲಕ್ಕೆ ತಿರುಗಲು ಕೈಸನ್ನೆ ಮಾಡುತ್ತಿದ್ದ. ಆದರೆ ಪಿಸ್ತೋಲು ಮಾತ್ರ ಕೈನಲ್ಲಿ ಹಾಗೇ ಇತ್ತು. ಸಲ್ಪ ದಿನದ ಹಿಂದೆ ಯಾವುದೋ ಒಂದಷ್ಟು ಭೂಗತ ಪಾತಕಿಗಳು ಯೆಲ್ಲಾಪುರದಲ್ಲಿ ಪಿಸ್ತೋಲಿನಿಂದ ಯಾರಿಗೋ ಹೊಡೆಯುವ ಗುಂಡು ಗುರಿತಪ್ಪಿ ಇನ್ಯಾರಿಗೋ ತಗುಲಿ ದೊಡ್ಡ ಅವಾಂತರವಾಗಿ, ದೊಡ್ಡ ಸುದ್ದಿಯಾಗಿತ್ತು. ಆದ್ದರಿಂದ ನಮ್ಮ ರಸ್ತೆಯಲ್ಲಿ ಏನೂ ಭಯವಿಲ್ಲ ಎಂದು ಅರಾಮವಾಗಿ ಇಷ್ಟು ದಿನ ತಿರುಗಾಡಿಕೊಂಡಿದ್ದ ಭಾವಂದಿರೆಲ್ಲ ಈಗ ಅತೀ ಎಚ್ಚರಿಕೆಯಿಂದ ತಿರುಗಲು ಶುರುಮಾಡಿದ್ದರು.

ಇದೆಲ್ಲ ಹಿನ್ನೆಲೆಯಿಂದ ಆವತ್ತು ನಡೆದ ಘಟನೆ ಬಹಳ ಅಚ್ಚರಿಯಿಂದ ಕೂಡಿತ್ತು. ದೊಣ್ಣೆಮನೆ ಮಾಚಣ್ಣ ಮತ್ತು ಅವನ ಭಾವ ಇಬ್ಬರೂ ಬೈಕಿನಲ್ಲಿ ಯೆಲ್ಲಾಪುರಕ್ಕೆ ಹೋಗುತ್ತಿದ್ದರು. ಅಷ್ಟರಲ್ಲೇ ನಮ್ಮ ಕಾರಿಗೆ ರಸ್ತೆಯಿಂದ ಬಲಕ್ಕೆ ತಿರುಗಲು ಹರೀಸ ಪಿಸ್ತೋಲು ಹಿಡಿದ ಕೈಯನ್ನು ಹೊರಹಾಕಿ ಬಲಕ್ಕೆ ದಾರಿತೋರಿದ್ದೂ, ಮಾಚಣ್ಣನ ಬೈಕು ಹಿಂದಿನಿಂದ ವೇಗವಾಗಿ ಬಂದಿದ್ದೂ ಏಕಕಾಲಕ್ಕೆ ನಡೆಯಿತು. ನಮ್ಮ ಕಾರು ಸಹಜವಾಗಿ ವೇಗ ಕಡಿಮೆಯಾಗಿ, ಮಾಚಣ್ಣನ ಬೈಕು ಮುಂದೆ ಹೋದಮೇಲೆ ಬಲಕ್ಕೆ ತಿರುಗಲು ಕಾಯುತ್ತಿತ್ತು. ಆದರೆ ವೇಗವಾಗಿ ಬರುತ್ತಿದ್ದ ಮಾಚಣ್ಣನಿಗೆ ಮುಂದೆ ನಿಂತಿರುವ ಕಾರಿನ ಕಿಟಕಿಯಿಂದ ಹೊರಗೆ ಬಂದ ಪಿಸ್ತೋಲು ಹಿಡಿದ ಕೈ ಕಂಡಿತು. ಅದನ್ನು ನೋಡಿ ಅವಾಕ್ಕಾದ ಮಾಚಣ್ಣ ಕೂಡಲೇ ಬೈಕನ್ನು ಬ್ರೇಕ್ ಹಾಕಿ ನಿಲ್ಲಿಸಿಯೇ ಬಿಟ್ಟ. ಮಾಚಣ್ಣ ಮತ್ತು ಅವನ ಭಾವ ಇಬ್ಬರೂ ಮುಂದೆ ನಿಂತಿರುವ ಕಾರಿನಲ್ಲಿ ಯಾವುದೋ ಭೂಗತ ಪಾತಕಿಗಳು ಇದ್ದಾರೆ ಎಂದು ಭಾವಿಸಿ ಕಂಗಾಲಾಗಿಹೋದರು. ಇನ್ನು ಕೆಲವೇ ಕ್ಷಣಗಳಲ್ಲಿ ಮಾಚಣ್ಣ ತನ್ನ ಬೈಕನ್ನು ಹಿಂತಿರುಗಿಸಿ ಪಾರಾಗುತ್ತಿದ್ದನೇನೋ. ಅವನೇನಾದರೂ ತಿರುಗಿ ಹೋಗಿಬಿಟ್ಟಿದ್ದರೆ, ಕೂಡಲೇ ಯೆಲ್ಲಾಪುರ ಪೋಲೀಸ್ ಠಾಣೆಗೆ ಫೋನಾಯಿಸುತ್ತಿದ್ದ.!!!

ವಿಶ್ವಣ್ಣ ಕ್ಷಣಮಾತ್ರದಲ್ಲಿ ಆಗಬಹುದಾಗಿದ್ದ ಗಂಡಾಂತರವನ್ನು ಗ್ರಹಿಸಿ ಕೂಡಲೇ ಕಾರಿನಿಂದ ಇಳಿದು, "ಏ ಮಾಚಣ್ಣ, ಏ ಮಾಚಣ್ಣ, ಯಂಗವೇಯೋ...." ಎಂದು ದೊಡ್ಡದಾಗಿ ಕರೆದ. ಆದರೂ ಮಾಚಣ್ಣನಿಗೆ ಆದ ಆಘಾತ ಮತ್ತು ಹೆದರಿಕೆಯಿಂದ ಹೊರಬಂದು ವಿಶ್ವಣ್ಣನನ್ನು ಗುರುತು ಹಿಡಿಯಲು ಸುಮಾರು ಸಮಯವೇ ಬೇಕಾಯಿತು. ಕೊನೆಗೆ ಅಂತೂ, "ಏ ಯಾರೋ ಖರೇ ಪಿಸ್ತೋಲ್ ಹಿಡ್ಕಂಡ ರೌಡಿಗ ಬೈಂದ ಅಂದ್ಕಂಡ್ನಲ್ರೋ...ಥೋ..ಥೋ...ಮಾರಾಯಾ.." ಎಂದು ನಗುತ್ತಾ, ಕಾರಿನ ಹತ್ತಿರ ಬಂದ. ಪಿಸ್ತೋಲು ಧಾರಿಯಾದ ಹರೀಸನ ಮುಖವನ್ನು ನೋಡಿ, ಅಷ್ಟು ಚಿಕ್ಕ ಹುಡುಗನಿಂದ ತಾನು ಭಯಬಿದ್ದುದನ್ನು ನೆನೆಸಿಕೊಂಡು ನಗತೊಡಗಿದ.

ಹರೀಸನಿಗೆ ತನ್ನ ಪಿಸ್ತೋಲಿನಿಂದ ಯಾರಾದರೂ ನಿಜವಾಗಲೂ ಭಯಭೀತರಾದರಲ್ಲಾ, ಎಂದು ಬಹಳ ಸಂತಸದಿಂದ ಬೀಗತೊಡಗಿದ. ಹುತ್ಖಂಡದಿಂದ ತಿರುಗಿ ಬರುವಾಗ, ವಿಶ್ವಣ್ಣ ಹರೀಸನಿಗೆ ಕೇಳಿದ, "ಹರೀಸಾ ದೊಡ್ಡ ಆದ್ಮೇಲೆ ಎಂತಾ ಅಪ್ಪವ್ನೋ..." ಅಂತ. ಹರೀಸ ಗಂಭೀರವಾಗಿ, ಪಿಸ್ತೋಲನ್ನು ಕೈಯಲ್ಲಿ ಹಿಡಿದು ಆಕಾಶದತ್ತ ಗುರಿತೋರುತ್ತಾ, "ನಾ ಪೋಲೀಸ್ ಆಗವಾ, ಕಳ್ಳಂಗೋಕೆ ಗುಂಡು ಹೊಡ್ಯವಾ... " ಅಂದ....