Friday, March 7, 2014

ತಮ್ಮನಲ್ಲದ ತಮ್ಮ

ಇದು ಎಲ್ಲಾ ಕಥೆಗಳಿಗಿಂತ ಸ್ವಲ್ಪ ದೊಡ್ಡದು ಹಾಗೂ ವಿಚಿತ್ರ ತಿರುವುಗಳಿಂದ ಕೂಡಿದೆ ಎನ್ನಬಹುದು!

ನಾನು ಕೆಲ ವರ್ಷಗಳ ಹಿಂದೆ ಹೊಸ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿ ಪುಣೆ ನಗರಿಗೆ ತೆರಳಿದೆ. ಆ ಕಂಪೆನಿಯವರು ನನಗೆ ಒಂದು ಹೋಟೆಲ್ಲಿನಲ್ಲಿ ಉಳಿಸಿ ನಂತರ ಒಂದು ತಿಂಗಳೊಳಗೆ ಎಲ್ಲಾದರೂ ಬಾಡಿಗೆ ಮನೆಯನ್ನು ಹುಡುಕಿಕೊಳ್ಳುವಂತೆ ಸಲಹೆ ಮಾಡಿದ್ದರು. ಆದರೆ ಪುಣೆಯಲ್ಲಿ ಬಾಡಿಗೆ ಮನೆ ಹುಡುಕಲು ಬೇರೆ ಭಾಷೆ, ಅಪರಿಚಿತ ನಗರ ಇವೆಲ್ಲ ವಿಷಯಗಳು ಅಷ್ಟೆಲ್ಲಾ ಅಡ್ಡಿಯಾಗಲಿಲ್ಲದಿದ್ದರೂ ನಾನು ಒಬ್ಬ ಬ್ಯಾಚುಲರ್ ಹುಡುಗ ಎಂಬುದು ನನ್ನ ಊಹೆಗೂ ಮೀರಿದ ಘನಘೋರ ತೊಂದರೆಯಾಗಿ ಪರಿಣಮಿಸಿತು.! ಉತ್ತರ ಭಾರತದ ಬ್ಯಾಚುಲರ್ ಪಡ್ಡೆ ಹುಡುಗರ ಚೇಷ್ಟೆಗಳಿಂದ ಬೇಸತ್ತ ಪುಣೆಯ ಮನೆಯ ಓನರುಗಳು ಏನೇ ಆದರೂ ಮದುವೆಯಾಗದ ಹುಡುಗರಿಗೆ ಮನೆ ಕೊಡಬಾರದು ಎಂದು ನಿರ್ಧರಿಸಿಬಿಟ್ಟಿದ್ದರು. ಬಾಡಿಗೆ ಮನೆಗಳನ್ನು ಹುಡುಕಿ ಕೊಡುವ ರಿಯಲ್ ಎಸ್ಟೇಟ್ ಏಜೆಂಟರನ್ನು ಹಿಡಿದು ಎಷ್ಟು ಅಲೆದರೂ ದಿನದ ಕೊನೆಗೆ ಎಂದಿನಂತೆ ಮನೆ ಸಿಗದೇ ನಿರಾಶೆಯಿಂದ ಹೋಟೆಲ್ಲಿಗೆ ಮರಳುವದು ಸಾಮಾನ್ಯ ಸಂಗತಿಯಾಗಿಬಿಟ್ಟಿತ್ತು.  ಹಾಗೇ ಒಂದು ದಿನ ಏಜೆಂಟರುಗಳು ನನ್ನನ್ನು "ಮನೆ ಬಾಡಿಗೆಗೆ ಇದೆ" ಎಂದು ಬರೆದಿದ್ದ ಕೊತ್-ರೋಡ್ ಏರಿಯಾದ ಒಂದು ಮನೆಗೆ ಕರೆದು ತಂದರು. ಆ ಮನೆಯ ಮಾಲೀಕ ಬಾಗಿಲಲ್ಲೇ ನಿಂತು ನನ್ನನ್ನು ಕೇಳಿದ, "ಆಪ್ ಕಾ ಫ್ಯಾಮಿಲಿ ಹೈ ಕ್ಯಾ"... ನಾನು, "ನಹೀ" ಎಂದೆ...ಕೂಡಲೇ ಆ ಮಾಲೀಕ ಪುಣ್ಯಾತ್ಮ "ತೋ ಆಪ್ ಕೋ ಇಧರ್ ಆನೇ ಕಾ ಜರೂರತ್ ನಹೀ ಹೈ" ಎಂದು ಸಿಟ್ಟಿನಲ್ಲಿ ಹೇಳುತ್ತಾ ಮನೆಯ ಬಾಗಿಲನ್ನು ಧಡಾರನೇ ಹಾಕಿಬಿಟ್ಟ!!! :) ದಿನಕಳೆದಂತೆ ನನಗೆ ಮತ್ತು ನನಗೆಂದು ಮನೆ ಹುಡುಕುತ್ತಿದ್ದ ಏಜೆಂಟರುಗಳಿಗೆ ಪರಿಸ್ಥಿತಿಯ ನಿಜವಾದ ಬಿಸಿ ಮುಟ್ಟತೊಡಗಿತು. ಹಾಗೇ ಒಂದು ದಿನ ಕರ್ವೇ ರೋಡಿನ ನಲ್-ಸ್ಟಾಪಿನಲ್ಲಿರುವ 'ಸಮುದ್ರ' ಹೋಟೇಲಿನಲ್ಲಿ ಕುಳಿತು ಏಜೆಂಟರುಗಳೊಡನೆ ಈ ಸಮಸ್ಯೆ ಬಗೆ ಹರಿಸಲು, ಬಿಸಿ ಬಿಸಿ ಚಹಾ ಹೀರುತ್ತಾ, ಸುದೀರ್ಘವಾದ ಮಂತ್ರಾಲೋಚನೆ ನಡೆಸಿ ಅಂತೂ ಎಲ್ಲರೂ ಸೇರಿ ಬಾಡಿಗೆ ಮನೆಯ ಓನರುಗಳ ಮನವೊಲಿಸಲು ಒಂದು ಸಂಚು ಹೂಡಿದೆವು.

ಮರುದಿನ ಕರ್ವೇ ರೋಡಿನ ಎರಾಂಡವಾನ ಎಂಬ ಏರಿಯಾದಲ್ಲಿ, ಸ್ವೀಟ್ ಹೋಮ್ ಎಂಬ ಸೊಸೈಟಿಯಲ್ಲಿನ ಬಾಡಿಗೆ ಮನೆಯ ಮಾಲೀಕರನ್ನು ಭೇಟಿಯಾದೆವು. ಎಲ್ಲರಂತೆ ಈ ಓನರ್ ಸಹಾ ತೆಗೆದ ಬಾಯಿಗೇ "ಆಪ್ ಶಾದೀಶುದಾ ಹೈ ಕ್ಯಾ...?" ಎಂದು ಮುಂತಾಗಿ ಕೇಳತೊಡಗಿದರು... ಕೂಡಲೇ ನಮ್ಮ ಏಜೆಂಟರುಗಳು "ಸರ್ ಕಾ ಶಾದಿ ಫಿಕ್ಸ್ ಹೊಗಯಾ ಹೈ, ದೋ ತೀನ್ ಮಹೀನೆ ಮೆ ಹೋ ಜಾಯೇಗಾ" ಎಂದು ಭರವಸೆ ನೀಡಿದರು..! ಇಷ್ಟು ಕೇಳಿದ ಮೇಲೆ ಸ್ವಲ್ಪ ತಣ್ಣಗಾದ ನಮ್ಮ ಓನರು ಉಳಿದ ಮಾತನ್ನೆಲ್ಲಾ ಆಡಿ, ಅಂತೂ ನನಗೆ ಮನೆಯನ್ನು ಬಾಡಿಗೆ ಕೊಡಲು ಒಪ್ಪಿದರು!!!... ನಾನೂ ಸಹ ಬದುಕಿದೆಯಾ ಬಡಜೀವವೇ ಎಂದು ಒಂದು ನಿಟ್ಟುಸಿರು ಬಿಟ್ಟು ಪುಣೆ ನಗರಿಯಲ್ಲಿ ಸುಖವಾಗಿ ಬದುಕಿದೆ :)
........  .....

ಕಾಲಾನಂತರದಲ್ಲಿ ಮತ್ತೆ ನಾನು ಬೆಂಗಳೂರಿಗೆ ವಾಪಸ್ಸು ಬಂದಾಗಲೇ ನನಗೆ ಅರಿವಾಗಿದ್ದು, ಬೆಂಗಳೂರಿನ ಬಾಡಿಗೆ ಮನೆ ಓನರುಗಳೂ ಪಾಪ ಪುಣೆಯ ಓನರುಗಳಂತೆಯೇ ಬ್ಯಾಚುಲರ್ ಭಯದಂದ ತತ್ತರಿಸಿ ಹೋಗಿದ್ದಾರೆ ಎಂದು!!! ನಮ್ಮ ಕಂಪೆನಿ ವೈಟ್-ಫೀಲ್ಡ್ ನಲ್ಲಿ ಇದ್ದಿದ್ದರಿಂದ ಹತ್ತಿರದಲ್ಲಿರುವ ಬಿ.ಇ.ಎಂ.ಎಲ್ ಬಡಾವಣೆಗೆ ಮನೆ ಹುಡುಕಲು ಬಂದೆ. ಇಲ್ಲಿನ ಮನೆ ಹುಡುಕುವ ಏಜೆಂಟನಾದ 'ರವಿ'ಯ ಹತ್ತಿರ ನಮಗೆ ಒಂದು ಒಳ್ಳೆಯ ಮನೆ ಹುಡುಕಿ ಕೊಡುವಂತೆ ದಂಬಾಲು ಬಿದ್ದೆ. ಆದರೆ ಆತ ಮಾತ್ರ ನನ್ನೆಡೆಗೆ ಸ್ವಲ್ಪವೂ ಕರುಣೆ ತೋರದೇ, "ಸಾರ್ ಈ ಲೇಓಟ್ ನಲ್ಲಿ ಮೊನ್ನೆ ಮೊನ್ನೆ ನಾರ್ಥ್ ಇಂಡಿಯಾದ ಬ್ಯಾಚುಲರ್ ಹುಡುಗರುಗಳು ಮಧ್ಯರಾತ್ರಿಲಿ ಕುಡಿದು, ಡ್ಯಾನ್ಸ್ ಮಾಡಿ ದೊಡ್ಡ ರಂಪಾಟ ಮಾಡಿದಾರೆ ಸಾರ್. ಅದಾದ ಮೇಲಿಂದ ಬ್ಯಾಚುಲರ್ ಹುಡುಗರಿಗೆ ಮನೆ ಬಾಡಿಗೆ ಸಿಗೋ ಛಾನ್ಸೇ ಇಲ್ಲಾ ಬಿಡಿ, ಇದು ಫ್ಯಾಮಿಲಿಗಳಿರೋ ಏರಿಯಾ. ಇಲ್ಲಿ ಎಲ್ಲಾ ಮದುವೆ ಆಗದೇ ಇದ್ದರೆ ಮನೆ ಬಾಡಿಗೆಗೆ ಸಿಗೋದೇ ಎಲ್ಲಾ..." ಎಂಬ ನೀರಸ ಮಾತುಗಳನ್ನಾಡಿದ. ನಾನು "ಇದು ಹೇಗೆ ಸಾರ್, ಈ ಓನರುಗಳೆಲ್ಲಾ ಮೊದಲೊಂದು ದಿನ ಬ್ಯಾಚುಲರ್ ಗಳೇ ಆಗಿದ್ದರು ತಾನೇ...ಮದುವೆ ಆದರೆ ಮಾತ್ರ ಮನೆ ಬಾಡಿಗೆಗೆ ಸಿಗುತ್ತದೆ ಎಂದಾದರೆ ಇದು ಯಾವ ನ್ಯಾಯ ಸಾರ್" ಎಂದು ಅವಲತ್ತುಕೊಂಡೆ...

ಈ ಶೀರ್ಷಿಕೆಯ ಆಕರ್ಷಣೆಯಾದ, "ಸುನೀಲ" ನನ್ನ ದೂರದ ಸಂಬಂಧಿ ಕೂಡಾ ಹೌದು. ಪುಣೆಯಿಂದ ಬಂದ ಮೇಲೆ, ಬೆಂಗಳೂರಿನಲ್ಲಿ ಹೊಸ ಬಾಡಿಗೆ ಮನೆ ಸಿಕ್ಕ ಮೇಲೆ, ಆತ ನನ್ನ ರೂಮೇಟ್ ಆಗುತ್ತೇನೆಂದು ಅಭಯ ನೀಡಿದ್ದ. ಆತ ನನಗೆ ಹೋಲಿಸಿದರೆ ಸುಮಾರಿಗೇ ತೆಳ್ಳನೆಯ ಶಾರೀರ ಹೊಂದಿದ್ದರಿಂದ, ನಿಜವಾದ ತಮ್ಮ ಅಲ್ಲದಿದ್ದರೂ ಆತನನ್ನು ನನ್ನ ತಮ್ಮನನ್ನಾಗಿ ಮಾಡಬೇಕಾಗಿ ಬಂತು:)

ಫ್ಯಾಮಿಲಿ ಅಂದರೆ ಮದುವೆಯೇ ಆಗಿರಬೇಕೆಂದೇನಿಲ್ಲ, ಅಣ್ಣ ತಮ್ಮ ಎಲ್ಲರೂ ಕುಟುಂಬದವರೇ ಎಂದು ಏಜೆಂಟನಾದ ರವಿಯ ಮನವೊಲಿಸಿ ನಮ್ಮ ಈಗಿನ ಮನೆಯ ಓನರನ್ನು ಭೇಟಿಯಾಗಲು ಬಂದೆವು. ಯಥಾಪ್ರಕಾರ ಅವರು "ಓ ಬ್ಯಾಚುಲರಾ...ಇಲ್ಲ...ಇಲ್ಲಾ..ಮನೆ ಖಾಲಿ ಇಲ್ಲಾ" ಎಂದು ಹೇಳತೊಡಗಿದರು...ಆಗ ಕೂಡಲೇ ರವಿ ಭಾವಪರವಶನಾಗಿ, "ಸಾರ್ ಗೆ ಒಂದು ತಮ್ಮ ಇದಾನೆ..ತುಂಬಾ ಚಿಕ್ಕಂದಿನಿಂದಲೂ ಇವರೇ ಆತನಿಗೆ ಓದಿಸಿ ಬೆಳೆಸಿದವರು...ನೋಡಿ ನೀವು ಅಕಸ್ಮಾತ್ ಫ್ಯಾಮಿಲಿಗೇ ಬಾಡಿಗೆ ಕೊಟ್ಟರೆ ಅವರು ನೀರು ಜಾಸ್ತಿ ಖರ್ಚು ಮಾಡ್ತಾರೆ, ಜನರೂ ಜಾಸ್ತಿ ಬರ್ತಾರೆ...ಪಾಪ ಅಣ್ಣ ತಮ್ಮ ಒಳ್ಳೆಯವರು ಇರ್ಲಿ ಬಿಡಿ.. ಇದೂ ಒಂಥರಾ ಫ್ಯಾಮಿಲೀನೇ.." ಎಂದೆಲ್ಲಾ ಮನವೊಲಿಕೆಯ ಮಾತುಗಳನ್ನಾಡಿದ. ರವಿಯ ಮಾತುಗಳಿಗೆ ಮಣಿದ ಮನೆಯ ಓನರು ನಮಗೆ ಅಂತೂ ಷರತ್ತುಬದ್ಧವಾಗಿ ಮನೆಯನ್ನು ಬಾಡಿಗೆಗೆ ಕೊಟ್ಟರು. ನಾನೂ ಕೂಡ ಈ "ತಮ್ಮ" ಎಂಬ ವಿಷಯ ಇಷ್ಟೆಲ್ಲಾ ಕೆಲಸ ಮಾಡುತ್ತದೆ ಅಂದುಕೊಂಡಿರಲಿಲ್ಲ. ಅಂತೂ ಸುನೀಲನ ಅಣ್ಣನಲ್ಲದ ಅಣ್ಣನಾಗಿ ನಾನೂ ಹಾಗೂ ತಮ್ಮನಲ್ಲದ ತಮ್ಮನಾಗಿ ಸುನೀಲನೂ ಇಬ್ಬರೂ ಬೆಂಗಳೂರಿನ ಹೊಸ ಬಾಡಿಗೆ ಮನೆಯಲ್ಲಿ ಠಿಕಾಣಿ ಹೂಡಿದೆವು.


ಈಗಲೂ ನನ್ನ ಕಂಡಕೂಡಲೇ ಓನರ್ ಆಂಟಿ "ತಮ್ಮ ಎಲ್ಲಿ..ಮನೆಗೆ ಬಂದಿಲ್ವಾ ಇನ್ನೂ..?" ಎಂದು ಕೇಳುತ್ತಾರೆ. ನಾನು ಎಂದಿನಂತೆ 'ಇದ್ಯಾವ ತಮ್ಮನಪ್ಪಾ' ಎಂದು ಒಂದು ಕ್ಷಣ ಕನವರಿಸಿ,..ಆಮೇಲೆ ಈ ತಮ್ಮನ ನೆನಪಾಗಿ ..."ಓ ಇಲ್ಲಾ ಆಂಟಿ, ಇನ್ನು ಬಂದಿಲ್ಲಾ..." ಎನ್ನುತ್ತೇನೆ:)

ಮೊನ್ನೆ ಸುನೀಲನ ಅಪ್ಪ ಮನೆಗೆ ಬಂದಿದ್ದರಂತೆ, ಆ ವಿಷಯ ನನಗೆ ತಿಳಿದಿರಲಿಲ್ಲ. ಮನೆಗೆ ಬಂದಕೂಡಲೇ ಆಂಟಿ ಕೇಳಿದರು, "ಸತೀಶ್ ತಂದೆಯವರು ಬಂದಿದ್ದ್ರಲ್ಲಾ, ಇದಾರಾ ಇನ್ನೂ..?" ಅಂತ. ನಾನು ಥಟಕ್ಕನೇ .."ತಂದೆ...? ಯಾವ ತಂದೆ..? ಯಾರ ತಂದೆ ಬಂದಿದ್ದ್ರು...?" ಅಂತ ಕೇಳಿಬಿಟ್ಟೆ !!! ಅದನ್ನು ಕೇಳಿದ ಆಂಟಿ ಕೂಡಲೇ "ನಿಮ್ಮ ತಂದೆ ಬಂದಿರೋದು ನಿನಗೇ ಗೊತ್ತಿಲ್ವಾ..ನಿನ್ನ ತಮ್ಮ ಪರಿಚಯ ಮಾಡಿಸಿಕೊಟ್ಟ...!" ಎಂದು ಹೇಳುತ್ತಾ ನನ್ನೆಡೆಗೆ ವಿಚಿತ್ರವಾಗಿ ನೋಡಿದರು... ಕೂಡಲೇ ನನ್ನಿಂದ ಆದ ಎಡವಟ್ಟನ್ನು ಸರಿಮಾಡಲು, "ಓ..ಓ..ಮರೆತೇಹೋಗಿತ್ತು ಆಂಟಿ, ತುಂಬಾ ಕೆಲ್ಸ ಅಲ್ವಾ..ತಲೆ ಎಲ್ಲೋ ಇರತ್ತೆ..." ಎಂದು ಸಮಜಾಯಿಸಿ ನೀಡಿದೆ. ಅದಕ್ಕೆ ಅವರು,"ಏನಪ್ಪಾ ನೀವು..." ಎಂದು ಹೇಳುತ್ತಾ ಹೊರಟುಹೋದರು. ಸದ್ಯ ನಮ್ಮಿಬ್ಬರ ಅಣ್ಣ-ತಮ್ಮ ನಾಟಕ ಬಯಲಾಗಲಿಲ್ಲವಲ್ಲ ಅಂತ ನಿಟ್ಟುಸಿರು ಬಿಟ್ಟು ಅಂತೂ ಬೀಸುವ ದೊಣ್ಣೆಯೊಂದು ತಪ್ಪಿತು ಎಂದುಕೊಂಡೆ.

ನಮ್ಮ ಆಫೀಸಿನಲ್ಲಿ ಮೊನ್ನೆ ಫ್ಯಾಮಿಲಿ ಡೇ ಇತ್ತು. ನಮ್ಮ ಅಣ್ಣ-ತಮ್ಮಂದಿರ ಕಥೆ ಗೊತ್ತಿರುವದರಿಂದ ಆಫೀಸಿನಲ್ಲಿ ಎಲ್ಲರೂ 'ನಿನ್ನ ತಮ್ಮನನ್ನು' ಫ್ಯಾಮಿಲಿ ಡೇ ಗೆ ಕರೆದುಕೊಂಡು ಬಾ ಎಂದು ದಂಬಾಲು ಬೀಳುತ್ತಾ ಕಾಡಿಸುತ್ತಿದ್ದರು. :)

4 comments:

ganya said...

Ha ha nindu olle story.... tammanallada timma... He he..

chethan said...

Ee thara aaglilva?

http://youtu.be/9lpA7zrPEac

ಬಂಧ said...

ಬಾಡಿಗೆ ಮನೆಗೋಸ್ಕರ ಬಾಡಿಗೆ ತಮ್ಮ!!

ಸಂಧ್ಯಾ ಶ್ರೀಧರ್ ಭಟ್ said...

ಕೆಲವೊಮ್ಮೆ ಏನೂ ಅಲ್ಲದವರೂ ಎಲ್ಲವೂ ಆಗಿಬಿಡುತ್ತಾರೆ ಒಮ್ಮೊಮ್ಮೆ ಅನುಕೂಲಕ್ಕೆ.. ಒಮ್ಮೊಮ್ಮೆ ಅನುಭವಕ್ಕೆ...