2011ರ ಜೂನ್ ನಲ್ಲಿ ನಾವೆಲ್ಲ ರೂಪಿನ್ ಪಾಸ್ ಎಂಬ ಹಿಮಾಲಯನ್ ಟ್ರೆಕ್ ಗೆ ಹೋದಾಗ ನಡೆದ ಘಟನೆ... ಉತ್ತರಾಖಂಡದ ದೌಲಾದಿಂದ 5 ದಿನ ಸತತವಾಗಿ ಹಿಮಾಲಯದ ಪರ್ವತಗಳನ್ನು ಹತ್ತಿ ಬಹಳ ಕಷ್ಟದಲ್ಲಿ ರೂಪಿನ್ ಪಾಸ್ (15,250 feet altitude) ಅನ್ನು ದಾಟಿ ಹಿಮಾಚಲ ಪ್ರದೇಶದ ರೌಂತಿಗಢ್ ದಿಕ್ಕಿನಲ್ಲಿ ಸಾಗಿದೆವು. ರೂಪಿನ್ ಪಾಸ್-ನ ಕೊನೆಯ ಏರನ್ನು ಏರಿದ ಕ್ಷಣಗಳು ಮಾತ್ರ ಬಹಳ ಭಯಾನಕವಾಗಿದ್ದವು. ಸ್ವಲ್ಪ ಎಡವಿದರೂ ಕಾಲು ಜಾರಿ ನೀವು ಎಂದೂ ಯಾರೂ ಹುಡುಕಲಾಗದ ಕಂದಕಕ್ಕೆ ಜಾರಿ ಬೀಳುತ್ತೀರಿ. ಅಲ್ಲಿಗೆ ನಿಮ್ಮ ಕಥೆ ಮುಕ್ತಾಯವಾದಂತೆ !!!
ಯಾವ ಚಾರಣವಾದರೂ ಸರಿ, ಒಮ್ಮೆ ಪರ್ವತದ ಏರನ್ನು ಮುಟ್ಟಿ ತಿರುಗಿ ಇಳಿಯುವಾಗ, ಅಂತೂ ಕಷ್ಟದ ಚಾರಣ ಮುಗಿಯಿತೆಂದು ನೀವು ಅತಿ ನಿರಾಳರಾಗಿರುತ್ತೀರಿ. ನಿಮ್ಮ ಕಾಲುಗಳು ಬಳಲಿ ಸೋತು ಶಕ್ತಿಹೀನವಾಗಿ ಜೋಲುತ್ತಿರುತ್ತವೆ. ಅಂತೂ ಇಂತೂ ಕೆಳಗೆ ಮುಟ್ಟಿ ನಿಮ್ಮ ವಾಹನವನ್ನೋ ಇಲ್ಲ ಮುಂದಿನ ಕ್ಯಾಂಪ್ ಅನ್ನೋ ಮುಟ್ಟಿದರೆ ಸಾಕು ಎಂಬ ತುಡಿತ ಮನದಲ್ಲಿ ತುಂಬಿರುತ್ತದೆ. ಹಾಗೆಯೇ ನಮ್ಮ ಗುಂಪಿನ ಕೃಷ್ಣ, ಮಿಥುನ್, ಸಂದೀಪ್ (ಚಿಕ್ ಹುಡುಗ), ಅರುಣ್, ರಸೂಲ್ ಹಾಗೂ ಇತರ ಚಾರಣಿಗರು ಎಲ್ಲರೂ ನಮ್ಮ ನಮ್ಮ ಪಾಡಿಗೆ ಏನೇನೋ ಹರಟುತ್ತಾ ರೂಪಿನ್ ಪಾಸಿನ ಪರ್ವತದ ಇಳಿಜಾರಿನಲ್ಲಿ ಇಳಿಯುತ್ತಿದ್ದೆವು. ಹಿಮ ಕರಗಿದ ಪರ್ವತಗಳ ಮೈಮೇಲೆ ತೆಳ್ಳನೆಯ ಹಸಿರು ಹುಲ್ಲಿನ ಹೊದಿಕೆ ಸುತ್ತಿಕೊಂಡಿದ್ದರಿಂದ ಬಹುದೂರದವರೆಗಿನ ದೃಶ್ಯಗಳು ಗೋಚರಿಸುತ್ತಿದ್ದವು.
ಹಿಮಾಲಯದ ಹುಲ್ಲಿನಿಂದಾವೃತವಾದ ಬೆಟ್ಟಗಳಲ್ಲಿ ಯಾಕ್ ಮೃಗಗಳು ಗೋಚರಿಸುವದು ಸಾಮಾನ್ಯ. ಆದ್ದರಿಂದ ದೂರದಲ್ಲಿ ನಮ್ಮೆಡೆಗೇ ನೋಡುತ್ತಾ ನಿಂತಿದ್ದ 2 ಬೃಹತ್ ಯಾಕ್ ಮೃಗಗಳನ್ನು ನೋಡಿದರೂ ನಮಗೆ ಅದು ಅಂಥಹಾ ವಿಶೇಷವೆಂದೆನಿಸಲಿಲ್ಲ. ಹಾಗೇ ನಮ್ಮ ಸಹಚಾರಣಿಗರಿಂದ ಸ್ವಲ್ಪ ದೂರದಲ್ಲಿ ನಡೆಯುತ್ತಿದ್ದ ನಮಗೆ "ಹೇ ..ಹೇ... ಓಡ್ರೋ... ಓಡ್ರೋ... ಯಾಕ್ ನಮ್ಮ್ ಕಡೇನೇ ಓಡಿ ಬರ್ತಾ ಇದೆ ಕಣ್ರೋ...!!!" ಎಂದು ಕೂಗುತ್ತಾ ನಮ್ಮೆಡೆಗೆ ಓಡಿ ಬರುತ್ತಿರುವ ಗೆಳೆಯರು ಕಂಡರು... ಅವರ ಹಿಂದೆ ಬೆನ್ನಟ್ಟಿ ಬರುತ್ತಿದ್ದ ಯಾಕ್ ಗಳನ್ನ ನೋಡಿ ನಾವೂ ಕಿತ್ತಾಬಿದ್ದು ಇರುವ ಒಂದೇ ಕಾಲುದಾರಿಯಲ್ಲಿ ಓಡಿದೆವು... ಆದರೆ ಎಲ್ಲೆಂದು ಓಡುವದು? ಒಂದೆಡೆ ಕಡಿದಾದ ಪ್ರಪಾತ. ಇನ್ನೊಂದೆಡೆ ನಮ್ಮಿಂದ ಹತ್ತಲಾಗದ ಬೆಟ್ಟ.!!!
ಪುಣ್ಯಕ್ಕೆ ಸ್ವಲ್ಪದರಲ್ಲೇ ಕುರಿಕಾಯುವ ಕುರುಬರು ಛಳಿಗಾಲಕ್ಕೆಂದು ಮಾಡಿಕೊಂಡಿದ್ದ ಕಲ್ಲಿನ ಮನೆಯೊಂದು ಸಿಕ್ಕಿತು. ನಾನು ಅದರಲ್ಲಿ ಹೊಕ್ಕುತ್ತಿದ್ದಂತೆಯೇ ಅಟ್ಟಿಬರುತ್ತಿದ್ದ ಒಂದು ಬೃಹತ್ ಯಾಕ್ ಓಡಿ ಬರುತ್ತಿದ್ದ ಕೃಷ್ಣನಿಂದ ಒಂದೇ ಮೀಟರ್ ದೂರದಲ್ಲಿ ಇತ್ತು !!!! ಕೂಡಲೇ ಕೈಗೆ ಸಿಕ್ಕಿದ ಒಂದು ದೊಡ್ಡ ಕಲ್ಲನ್ನು ಆ ಯಾಕ್ ಕಡೆಗೆ ಎಸೆದೆ. ಏನಾಯಿತೋ ಏನೊ, ಹತ್ತಾರು ಮನುಷ್ಯರನ್ನು ಅಟ್ಟಿಕೊಂಡು ಬರುತ್ತಿದ್ದ ಎರಡೂ ಯಾಕ್ ಗಳು ನಾವು ಮುಂದೆ ಹೋಗಬೇಕಾಗಿದ್ದ ದಾರಿಯಲ್ಲಿ ಓಡಿದವು.
ಮರುಜೀವ ಸಿಕ್ಕಂತಾದ ನಾವೆಲ್ಲ ಸ್ವಲ್ಪ ಸಮಯ ನಾವೆಲ್ಲ ಸುಧಾರಿಸಿಕೊಂಡು ಯಾಕ್ ಗಳು ಎಲ್ಲಿ ಹೋದವೆಂದು ನೋಡಲು ಸ್ವಲ್ಪ ಮುಂದೆ ಹೋದೆವು. ಆದರೆ ದಿಬ್ಬದ ಆಚೆ ನಿಂತಿದ್ದ ಅವುಗಳು ಮತ್ತೆ ವಿರುದ್ಧ ದಿಕ್ಕಿನಲ್ಲಿ ನಮ್ಮೆಡೆಗೆ ಓಡಿಬರಲಾರಂಭಿಸಿದವು !!! ನಾವೆಲ್ಲಾ ಕೈನಲ್ಲಿ ಕಲ್ಲುಗಳು, ನಮ್ಮ ಚಾರಣದ ಕೋಲುಗಳನ್ನ ಎತ್ತಿತೋರಿಸುತ್ತಾ ಪುರಾತನಕಾಲದ ಸೈನಿಕರಂತೆ "ಹೋಯ್ ಹೋಯ್ ಹೋಯ್ ಹೋಯ್" ಎಂದು ಭಯ-ರುದ್ರಾವೇಷದಲ್ಲಿ ಕಿರುಚತೊಡಗಿದೆವು...!!! ಆದರೂ ಆ ಯಾಕ್ ಗಳು ಏನೂ ಹೆದರದೆ ನಮ್ಮನ್ನೇ ದಿಟ್ಟಿಸಿ ನೋಡುತ್ತಾ ನಿಂತಿದ್ದವು...
ಪರಿಸ್ಥಿತಿ ಹಾಗೇ ಇದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ!. ನಮ್ಮ ಕಿರುಚಾಟವನ್ನು ಕೇಳಿದ ನಮ್ಮ ಗೈಡ್ ದೂರದಿಂದ ತಿರುಗಿ ಓಡಿಬಂದು ಎರಡೂ ಯಾಕ್ ಗಳನ್ನು ಬೆಟ್ಟದ ಮೇಲೆಡೆಗೆ ಓಡಿಸಿದ..
ನಮ್ಮ ಗೈಡ್ ಹೇಳಿದ್ದು, "ಇಲ್ಲಿ ಹಳ್ಳಿಯವರು ಯಾಕ್ ಗಳಿಗೆ ತಿನ್ನಲು ಉಪ್ಪನ್ನು ಕೊಡುತ್ತಾರೆ. ಉಪ್ಪು ಎಂದರೆ ಅವಕ್ಕೆ ಎಲ್ಲಿಲ್ಲದ ಪ್ರೀತಿ. ಆದ್ದರಿಂದ ಅವು ನಿಮ್ಮೆಡೆಗೆ ಓಡಿಬಂದಿರಬೇಕು" ಎಂದು. ಅವರು ಕೊಟ್ಟ ಕಾರಣ ಸಮಂಜಸವಾದರೂ ಒಪ್ಪಿಕೊಳ್ಳುವದು ಅಸಾಧ್ಯವಾಗಿತ್ತು. ಆ ದಿನ ಯಾಕ್ ಗಳು ನಮ್ಮನ್ನು ಅರ್ಥಾತ್ ಅಟ್ಟಿಸಿಕೊಂಡೇ ಬಂದಿದ್ದವು ಎಂಬುದು ನಮ್ಮ ಅನಿಸಿಕೆ. ಯಾಕೆಂದು ಗೊತ್ತಿಲ್ಲ.
ಕಡಿದಾದ ಇಳಿಜಾರು ಪರ್ವತಗಳ ಕಾಲುಹಾದಿಯಲ್ಲಿ, ಬೇಡವಾಗಿದ್ದ ಯಾಕ್ ನ ನಿರೀಕ್ಷೆಯಲ್ಲಿ ಮತ್ತೆ ಮತ್ತೆ ಹಿಂತಿರುಗಿ ಭಯದಿಂದ ನೋಡುತ್ತಾ ನಮ್ಮ ಮುಂದಿನ ಕ್ಯಾಂಪ್ ಕಡೆಗೆ ತೆರಳಿದೆವು.... ಇಂದಿಗೂ ಆ ಘಟನೆಯನ್ನು ನೆನೆಸಿಕೊಂಡರೆ ಕೈಯಲ್ಲಿ ಆಯುಧಗಳಿಲ್ಲದ ಮನುಷ್ಯ ಎಷ್ಟು ನಿಸ್ಸಹಾಯಕ ಎಂಬುದು ಅರಿವಾಗುತ್ತದೆ...
2 comments:
nice. i did not know it was so close to krishna.. phew!
adakke helodu trek-gik ella hogbedi anta :)
yes.. it was very near to krishna...ask him, he will narrate with more details ...
Post a Comment