Saturday, September 5, 2015

ನಾಕುದಾರಿಯಲ್ಲೊಂದು ಮರದ ಕಥೆ

ದಟ್ಟನೆಯ ಎತ್ತರೆತ್ತರದ ಮರಗಳ ಕಾಡು, ಅದರ ಜೊತೆಗೂಡಿದ ಜಲಪಾತಗಳ ಸೊಬಗು... ಪರಿಶುದ್ಧ ಗಾಳಿ... ಮಳೆಗಾಲದ ಎಡೆಯಿಲ್ಲದ ಮಳೆ... ಮಲೆನಾಡಿನ ಮಡಿಲಲ್ಲಿರುವ ನಮ್ಮ ಊರಿನ ನಿತ್ಯಹರಿದ್ವರ್ಣ ಕಾಡಿನ ವರ್ಣನೆ ಮಾಡುತ್ತಾ ಹೊರಟರೆ ಅದಕ್ಕೆ ಕೊನೆಯಿಲ್ಲ.

ದುರಾದೃಷ್ಟವೆಂದರೆ ಮರಗಳ್ಳರ ಕಾಟ ನಮ್ಮೂರನ್ನೂ ಬಿಟ್ಟಿಲ್ಲ. ಫಾರೆಸ್ಟನ ಕಣ್ಣು ತಪ್ಪಿಸಿ ಮರಗಳಿಗೆ ಬೆಂಕಿ ಹಚ್ಚಿ ಬೀಳಿಸಿ, ನಂತರ ಉಳಿದ ಮರವನ್ನು ಕಡಿದು ಸಾಗಿಸುವದು ಸಾಮಾನ್ಯ. ಮಾವಿನ ಮರದ ಕಾಯಿ ಬೇಕೆಂದರೆ ಬುಡಗೂಡಿ ಮರವನ್ನೇ ಕಡಿಯುವುದೂ, ರಾತ್ರೋರಾತ್ರಿ ಮನೆಯಂಗಳಕ್ಕೇ ನುಗ್ಗಿ ಗಂಧದ ಮರವನ್ನು ಕಡಿದು ಸಾಗಿಸುವದೂ, ಬೀಟೆ ತೇಗದ ಮರಗಳ ಕಳ್ಳತನಗಳೂ, ಇವೆಲ್ಲ ನಿರಂತರವಾಗಿ ನಡೇದೇ ಇರುವ ಅವಾಂತರಗಳು.

ನಾಕುದಾರಿ ಎಂಬಲ್ಲಿ ನಮ್ಮ ಊರಿನ ಕಾಡುದಾರಿ ಬೇರೆಬೇರೆ ಮನೆಗಳಿಗೆ ಹೋಗಲು ಕವಲೊಡೆಯುತ್ತದೆ. ಹಾಗೆಯೇ ಕನ್ನಡ ಶಾಲೆಯ ಮಕ್ಕಳೆಲ್ಲ ನಾವೊಂದು ದಿನ ಮಳಲಗಾಂವ ಶಾಲೆಯಿಂದ ಸಂಜೆ ಕಾಡುದಾರಿಯಲ್ಲಿ ಮನೆಗೆ ನಡೆದು ಬರುತ್ತಿದ್ದೆವು. ಯಾವ ಕಾರಣಕ್ಕೋ ಏನೋ, ದಾರಿಯ ಪಕ್ಕದಲ್ಲಿನ ಒಂದು ಬಹು ಎತ್ತರದ ದಪ್ಪನೆಯ ಮರದ ಬುಡಕ್ಕೆ ಬೆಂಕಿ ಹೊತ್ತಿತ್ತು. ತುಂಬಾ ಎತ್ತರವಿದ್ದ ಆ ಮರ ಸುಮಾರು  300 ವರ್ಷ ಹಳೆಯದೇ ಇದ್ದಿರಬಹುದು. ಯಾರೋ ಮರಗಳ್ಳರು ಬೇಕೆಂದೇ ಬೆಂಕಿ ಹಚ್ಚಿದ್ದು ಸ್ಪಷ್ಟವಾಗಿತ್ತು. ಅದನ್ನು ನೋಡಿ ಏನಾದರೂ ಮಾಡಲೇಬೇಕೆಂದು ಎಲ್ಲಾ ಮಕ್ಕಳೂ ಮನೆಗೆ ಕಿತ್ತಾಬಿದ್ದು ಓಡಿದೆವು.

ನಮ್ಮ ಮನೆಯ ವಿಶ್ವಣ್ಣ ನಮ್ಮೂರಿಗೇ ಹೆಸರಾಂತ ಪರಿಸರಪ್ರೇಮಿ. ಯಾರಾದರೂ ಒಂದು ಚಿಕ್ಕ ಗಿಡವನ್ನು ಕಡಿದರೂ ಸರಿ, ಅವರಿಗೆ ಪರಿಸರದ ಬಗ್ಗೆ, ಮರಗಳ ಸಂರಕ್ಷಣೆಯ ಬಗ್ಗೆ ತಿಳಿಸಿ,ಮನವೊಲಿಸಿ, ಮತ್ತೊಮ್ಮೆ ಹಾಗಾಗದಂತೆ ನೋಡಿಕೊಳ್ಳುತ್ತಾನೆ.

ನಾನು ಓಡೋಡಿ ಮನೆಗೆ ಬಂದವನೇ, "ವಿಶ್ವಣ್ಣಾ, ಯಾರೋ ನಾಕುದಾರಿಯ ದೊಡ್ಡ ಮರಕ್ಕೆ ಬೆಂಕಿ ಹಚ್ಚಿದ್ದ... ಎಂಥಾ ಮಾಡವೋ..." ಎಂದು ಕೇಳಿದೆ. ಕೂಡಲೇ ವಿಶ್ವಣ್ಣ ಎಂದಿನಂತೆ ಸಟಕ್ಕನೇ ಒಂದು ಉಪಾಯ ಹೂಡಿದ. ಮನೆಯಿಂದ ಸುಮಾರು ಅರ್ಧ ಕಿಮಿ ದೂರದಲ್ಲಿನ ಕಾಡಿನ ಬೆಂಕಿಯನ್ನು ಆರಿಸುವುದು ಸುಲಭದ ಕೆಲಸವಾಗಿರಲಿಲ್ಲ. ಮನೆಯಲ್ಲಿದ್ದ ಟ್ರಾಕ್ಟರಿನ ಟ್ರಾಲಿಯಲ್ಲಿ ಒಂದು ದೊಡ್ಡ ನೀರಿನ ಹಂಡೆಯನ್ನು ತಂದು ಕೂಡಿಸಿದೆವು. ದನದ ಕೊಟ್ಟಿಗೆಯಿಂದ ನೀರಿನ ಹಂಡೆಯಲ್ಲಿ ನೀರು ತುಂಬಿಸಿ, ಇಬ್ಬರೂ ಟ್ರಾಕ್ಟರಿನಲ್ಲಿ ನಾಕುದಾರಿಯ ಕಡೆಗೆ ಹೊರಟೆವು.

ಒಂದೇ ಹಂಡೆಯ ನೀರು ಸಾಲದೇ ಇನ್ನೂ ಎರಡು ಸಲ ದನದ ಕೊಟ್ಟಿಗೆಗೆ ನೀರು ತರಲು ಟ್ರಾಕ್ಟರಿನಲ್ಲಿ ತಿರುಗಿದೆವು. ಸುಮಾರು ಹೊತ್ತು ಸತತವಾಗಿ 3 ಹಂಡೆಯ ನೀರನ್ನು ಉರಿಯುತ್ತಿದ್ದ ಮರದ ಬುಡಕ್ಕೆ ಹಾಕಿ, ಅಂತೂ ಬೆಂಕಿಯನ್ನು ನಂದಿಸಿದೆವು. ಆವತ್ತಿಗೆ ನಾವು ಆ ಮರದ ಬೆಂಕಿಯನ್ನು ಆರಿಸಿರದಿದ್ದರೆ, ಉರಿಯುತ್ತಿದ್ದ ಬೆಂಕಿ ಕಾಳ್ಗಿಚ್ಚಾಗಿ ಹಬ್ಬಿ ಎಷ್ಟು ಮರಗಳನ್ನು ಸುಡುತ್ತಿತ್ತೋ ಏನೋ...

ಇಂದಿಗೂ ನಮ್ಮೂರಿಗೆ ಹೋಗುವಾಗ ಆ ಮರ ಕಾಣುತ್ತದೆ. ನಾನು ವಿಶ್ವಣ್ಣ ಒಟ್ಟಿಗೇ ಇದ್ದರಂತೂ ಆ ಮರದ ಬಳಿ ನಿಂತು, ಆ ದಿನದ ನಮ್ಮ ಟ್ರಾಕ್ಟರಿನ ಸಾಹಸವನ್ನು ನೆನೆಸಿಕೊಳ್ಳುತ್ತೇವೆ.

ಇಂಥ ಸಾವಿರಾರು ಗಿಡ ಮರಗಳು ನಮಗಿಂದು ಉಸಿರಾಡುವ ಗಾಳಿಯನ್ನೂ - ಬದುಕನ್ನೂ ನೀಡಿವೆ. ಆದರೆ ನಾವೆಷ್ಟು ಅವಕ್ಕೆ ಮರಳಿ ನೀಡಿದ್ದೇವೆ...?

Saturday, December 20, 2014

ಪಲಾವ್ ಮಹಾತ್ಮೆ

ಈ ಪಲಾವನ್ನು ಯಾರು ಮೊದಲಿಗೆ ಕಂಡುಹಿಡಿದರೋ ಗೊತ್ತಿಲ್ಲ. ಅವರಿಗೆ ಪುಣ್ಯ ಬರಲಿ ಎಂದು ಆಶಿಸುತ್ತೇನೆ. ಏಕೆಂದರೆ ನಮ್ಮಂಥಹ ಅರೆಬರೆ ಬಾಣಸಿಗರ ಹೊಟ್ಟೆಯ ಹಸಿವನ್ನು ನೀಗಿಸುತ್ತಿದೆಯಲ್ಲವೇ ಈ ಪಲಾವ್ ಎಂಬ ಮಹಾನ್ ಅಡುಗೆ. !!!

ಮೊದಲಿಗೆ ಕಾಲೇಜಿನ ದಿನಗಳಲ್ಲಿ ನಾನು ಅಡುಗೆ ಮಾಡಲು ಶುರು ಮಾಡಿದಾಗ ಸಾರು, ಹುಳಿ, ತಂಬುಳಿ, ಗೊಜ್ಜು, ಪಲ್ಯ ಇತ್ಯಾದಿ ಇತ್ಯಾದಿ ಕ್ಲಿಷ್ಟಕರವಾದ ಅಡುಗೆಗಳನ್ನು ತಯಾರಿಸಲು ಪ್ರಯತ್ನಪಡುತ್ತಾ ಕೈಸುಟ್ಟುಕೊಳ್ಳುತ್ತಿದ್ದೆ. ನನ್ನ ದುರಾದೃಷ್ಟವೋ ಏನೋ, ನನ್ನ ಹಸ್ತದಲ್ಲಿ ನಳರೇಖೆ ಇಲ್ಲ ಎಂಬುದು ಬರಬರುತ್ತಾ ನನಗೇ ಅರಿವಾಗತೊಡಗಿತು. ಒಂದು ದಿನ ಅಡುಗೆಯಲ್ಲಿ ಉಪ್ಪು ಜಾಸ್ತಿ ಆದರೆ ಇನ್ನೊಂದು ದಿನ ಹುಳಿ ಕಡಿಮೆ ಆಗುತ್ತಿತ್ತು. ದಿನವೂ ಒಂದೇ ಕ್ವಾಲಿಟಿಯ ಅಡುಗೆ ಮಾಡುವದು ನನ್ನಿಂದ ಸಾಧ್ಯವಿಲ್ಲದ ಕೆಲಸ ಎಂಬುದು ಅರಿವಾಗತೊಡಗಿತು. ಮೊದಮೊದಲಿಗೆ ನನ್ನ ಅಡುಗೆ ಪ್ರಯತ್ನಗಳು ಶುರುವಾದಾಗ ರೂಮಿಗೆ ಊಟಕ್ಕೆಂದು ಧಾಳಿ ಇಡುತ್ತಿದ್ದ ಗೆಳೆಯರೂ ನನ್ನ ಅಡುಗೆಯ ರುಚಿಯನ್ನು ಒಂದೆರಡು ಸಲ ಸವಿದಮೇಲೆ ನಿಧಾನವಾಗಿ ಊಟಕ್ಕೆ ಬರುವದನ್ನು ನಿಲ್ಲಿಸಿದರು. ನನಗೂ ನಾನು ಮಾಡಿದ ಅಡುಗೆಯನ್ನೇ ತಿನ್ನುವದೂ ಕಷ್ಟವೆನಿಸತೊಡಗಿತು. ಎಲ್ಲರೂ ಒಗ್ಗರಣೆಗೆ ಹಾಕುವುದು ಅದೇ ಎಣ್ಣೆ, ಸಾಸಿವೆ, ಜೀರಿಗೆ, ಮೆಣಸು...ನಾನು ಹಾಕುವುದೂ ಅದನ್ನೇ...ಆದರೆ ನನ್ನ ಅಡುಗೆ ಯಾಕೆ ರುಚಿ ಆಗುವದಿಲ್ಲ? ಎಂಬುದು ಒಂದು ಯಕ್ಷಪ್ರಶ್ನೆಯಾಗಿ ಕಾಣಿಸುತ್ತಿತ್ತು...ದಿನವೂ ಹೊರಗಡೆ ತಿಂದರೆ ಆರೋಗ್ಯ ಕೆಡುತ್ತದೆ...ಮನೆಯಲ್ಲಿ ಮಾಡಿದ್ದು ತಿನ್ನಲು ರುಚಿಸುವದಿಲ್ಲ...

ಇಂಥಹ ಒಂದು ಇಕ್ಕಟ್ಟಿನ ಸಮಯದಲ್ಲಿ ನನಗೊಂದು ಮ್ಯಾಜಿಕ್ ರೆಸಿಪಿಯ ಅಗತ್ಯವಿತ್ತು... ಅನ್ನವಂತೂ ಊಟದಲ್ಲಿ ಇರಲೇಬೇಕು...ತರಕಾರಿಗಳೂ ಹೇರಳವಾಗಿ ಊಟ ಎಂದರೆ ಇರಲೇಬೇಕು...ಅಡುಗೆ ಸ್ಪೈಸಿಯಾಗೂ ಇರಬೇಕು...ಮಜ್ಜಿಗೆಯ ಜೊತೆಗೂ ತಿನ್ನುವಂತಿರಬೇಕು... ಪ್ರತಿ ಸಲ ಮಾಡಿದಾಗಲೂ ರುಚಿ ಒಂದೇ ಥರವಾಗಿರಬೇಕು...ಹತ್ತೇ ನಿಮಿಷದಲ್ಲಿ ಅಡುಗೆ ಮಾಡಿ ಮುಗಿಯಬೇಕು....

ಅಂಥಾ ಒಂದು ಸಂಧಿಗ್ದ ಪರಿಸ್ಥಿತಿಯಲ್ಲಿ ನನಗೆ ಒಲಿದ ಅಡುಗೆಯೇ ಪಲಾವು....!!!

ನಾನು ಮತ್ತು ದಿನೇಶ ಪುಣೆಯ ಮನೆಯಲ್ಲಿ ವೀಕೆಂಡಿನಲ್ಲಿ ವಿಧವಿಧವಾದ ತರಕಾರಿಗಳನ್ನು ಹಾಕಿ, ವಿಧವಿಧವಾದ ಪಲಾವನ್ನು ತಯಾರಿಸಿ ಸವಿಯುತ್ತಿದ್ದೆವು...ಅವನಂತೂ ನನ್ನ ಅಡುಗೆಯ ಅದರಲ್ಲೂ ಪಲಾವಿನ ರುಚಿಯನ್ನು ಸವಿಸವಿದು ನನ್ನ ಫ್ಯಾನ್ ಆಗಿಬಿಟ್ಟಿದ್ದ...:) ಬೆಂಗಳೂರಿನಲ್ಲಿ ನನ್ನ ರೂಂಮೇಟ್ ಆಗಿದ್ದ ಸುನೀಲನಂತೂ ದಿನವೂ ನಾನು ಮಾಡಿದ ಪಲಾವನ್ನು ತಿಂದೂ ತಿಂದೂ ದಿನಕಳೆದಂತೆ ಸ್ಲಿಮ್ ಆಗುತ್ತಲೇ ಇದ್ದ :)

ನನ್ನ ಮನೆಗೆ ಒಮ್ಮೆ ಗೆಳೆಯ ರಘು ಬಂದಿದ್ದ... ಅತ ಅಡುಗೆಯಲ್ಲಿ ಮಹಾ ನಿಪುಣ.... ಎಂಥಹ ಅಡುಗೆಯನ್ನೂ ಲೀಲಾಜಾಲವಾಗಿ ಮಾಡಬಲ್ಲ. ಆತ ಮಾತ್ರ ನನ್ನ ಪಲಾವಿನ ರುಚಿಯನ್ನು ಸವಿದು "ನಿಂಗೆ ಪಲಾವ್ ಮಾಡ್ಲೇ ಬತ್ಲೆ ವಯಾ...ದೋಸ್ತಾ...ಇದ್ಕೆ ಪಲಾವ್ ಪೌಡರು ಹಾಕವೋ ಮಾರಾಯಾ...ಇಲ್ಲೆ ಅಂದ್ರೆ ಎಂಥಾ ರುಚಿನೂ ಆಗ್ತ್ಲ್ಯೋ..." ಎನ್ನುತ್ತಾ ನಾನು ಮಾಡುತ್ತಿದ್ದ ಪಲಾವಿನ ರೆಸಿಪಿಯನ್ನು ಸಾರಾಸಗಟಾಗಿ ತಿರಸ್ಕರಿಸಿಬಿಟ್ಟ !!! ಅಂದಿನಿಂದಲೇ ನನಗೆ ಅರಿವಿಗೆ ಬಂದಿದ್ದು MTR ಪಲಾವ್ ಪೌಡರಿನ ಮಹಿಮೆ!!!

ಅಂದಿನಿಂದ ಇಂದಿನವರೆಗೂ ನನ್ನ ಗೆಳೆಯರಿಗೆ ಅದ್ಭುತವಾದ ಪಲಾವಿನ ರುಚಿಯನ್ನು ತೋರಿಸಿದ್ದೇನೆ... ಅನೇಕರು ನನ್ನ ಪಲಾವಿನ ರೆಸಿಪಿಯನ್ನು ಕಾಪಿ ಮಾಡಿ ಅದು ಅವರೇ ಕಂಡುಹಿಡಿದ ಪಲಾವಿನ ರೆಸಿಪಿ ಎಂದು ಹೇಳಿಕೊಳ್ಳುತ್ತಾರೆ...

ಒಂದು ದಿನ ನೆಂಟರಿಷ್ಟರೆಲ್ಲಾ ಮನೆಗೆ ಬಂದಾಗ ನಾನು "ಪಲಾವ್" ಮಾಡಿದ್ದೆ...ಬಂದವರಲ್ಲಿ ಗಂಡಸರೆಲ್ಲಾ ನನ್ನ ಪಲಾವ್ ರುಚಿಯನ್ನು ಸವಿದು, ತಮ್ಮ ಹೆಂಡಂದಿರಿಗೆ "ಪಲಾವ್ ಮಾಡಿದ್ರೆ ಹಿಂಗ್ ಮಾಡವು..." ಎಂದು ಹೇಳಿ ನನಗೆ 'ಪಲಾವ್' ಸರ್ಟಿಫಿಕೇಟ್ ಕೊಟ್ಟುಬಿಟ್ಟರು...

ದೂರದ ಅಮೇರಿಕದ ಹೋಟೆಲ್ಲಿನ ಅಡುಗೆ ಮನೆಯಲ್ಲಿ ಮತ್ತೆ ನನ್ನ ಪಲಾವು ಘಮಘಮಿಸುತ್ತಿತ್ತು.... ನನ್ನ ಆರೋಗ್ಯ ಹಾಳಾಗದಂತೆ...ಬಾಯಿರುಚಿ ಎಂದಿಗೂ ಸಪ್ಪೆಯಾಗದಂತೆ...ದಿನವೂ ನನ್ನ ಹೊಟ್ಟೆ ತುಂಬಿಸುತ್ತಿರುವ ಅಮೃತಸಮಾನವಾದ ಪಲಾವಿಗೆ ಈ ಬ್ಲಾಗ್ ಬರಹವನ್ನು ಅರ್ಪಿಸುತ್ತಿದ್ದೇನೆ....

Friday, March 7, 2014

ತಮ್ಮನಲ್ಲದ ತಮ್ಮ

ಇದು ಎಲ್ಲಾ ಕಥೆಗಳಿಗಿಂತ ಸ್ವಲ್ಪ ದೊಡ್ಡದು ಹಾಗೂ ವಿಚಿತ್ರ ತಿರುವುಗಳಿಂದ ಕೂಡಿದೆ ಎನ್ನಬಹುದು!

ನಾನು ಕೆಲ ವರ್ಷಗಳ ಹಿಂದೆ ಹೊಸ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿ ಪುಣೆ ನಗರಿಗೆ ತೆರಳಿದೆ. ಆ ಕಂಪೆನಿಯವರು ನನಗೆ ಒಂದು ಹೋಟೆಲ್ಲಿನಲ್ಲಿ ಉಳಿಸಿ ನಂತರ ಒಂದು ತಿಂಗಳೊಳಗೆ ಎಲ್ಲಾದರೂ ಬಾಡಿಗೆ ಮನೆಯನ್ನು ಹುಡುಕಿಕೊಳ್ಳುವಂತೆ ಸಲಹೆ ಮಾಡಿದ್ದರು. ಆದರೆ ಪುಣೆಯಲ್ಲಿ ಬಾಡಿಗೆ ಮನೆ ಹುಡುಕಲು ಬೇರೆ ಭಾಷೆ, ಅಪರಿಚಿತ ನಗರ ಇವೆಲ್ಲ ವಿಷಯಗಳು ಅಷ್ಟೆಲ್ಲಾ ಅಡ್ಡಿಯಾಗಲಿಲ್ಲದಿದ್ದರೂ ನಾನು ಒಬ್ಬ ಬ್ಯಾಚುಲರ್ ಹುಡುಗ ಎಂಬುದು ನನ್ನ ಊಹೆಗೂ ಮೀರಿದ ಘನಘೋರ ತೊಂದರೆಯಾಗಿ ಪರಿಣಮಿಸಿತು.! ಉತ್ತರ ಭಾರತದ ಬ್ಯಾಚುಲರ್ ಪಡ್ಡೆ ಹುಡುಗರ ಚೇಷ್ಟೆಗಳಿಂದ ಬೇಸತ್ತ ಪುಣೆಯ ಮನೆಯ ಓನರುಗಳು ಏನೇ ಆದರೂ ಮದುವೆಯಾಗದ ಹುಡುಗರಿಗೆ ಮನೆ ಕೊಡಬಾರದು ಎಂದು ನಿರ್ಧರಿಸಿಬಿಟ್ಟಿದ್ದರು. ಬಾಡಿಗೆ ಮನೆಗಳನ್ನು ಹುಡುಕಿ ಕೊಡುವ ರಿಯಲ್ ಎಸ್ಟೇಟ್ ಏಜೆಂಟರನ್ನು ಹಿಡಿದು ಎಷ್ಟು ಅಲೆದರೂ ದಿನದ ಕೊನೆಗೆ ಎಂದಿನಂತೆ ಮನೆ ಸಿಗದೇ ನಿರಾಶೆಯಿಂದ ಹೋಟೆಲ್ಲಿಗೆ ಮರಳುವದು ಸಾಮಾನ್ಯ ಸಂಗತಿಯಾಗಿಬಿಟ್ಟಿತ್ತು.  ಹಾಗೇ ಒಂದು ದಿನ ಏಜೆಂಟರುಗಳು ನನ್ನನ್ನು "ಮನೆ ಬಾಡಿಗೆಗೆ ಇದೆ" ಎಂದು ಬರೆದಿದ್ದ ಕೊತ್-ರೋಡ್ ಏರಿಯಾದ ಒಂದು ಮನೆಗೆ ಕರೆದು ತಂದರು. ಆ ಮನೆಯ ಮಾಲೀಕ ಬಾಗಿಲಲ್ಲೇ ನಿಂತು ನನ್ನನ್ನು ಕೇಳಿದ, "ಆಪ್ ಕಾ ಫ್ಯಾಮಿಲಿ ಹೈ ಕ್ಯಾ"... ನಾನು, "ನಹೀ" ಎಂದೆ...ಕೂಡಲೇ ಆ ಮಾಲೀಕ ಪುಣ್ಯಾತ್ಮ "ತೋ ಆಪ್ ಕೋ ಇಧರ್ ಆನೇ ಕಾ ಜರೂರತ್ ನಹೀ ಹೈ" ಎಂದು ಸಿಟ್ಟಿನಲ್ಲಿ ಹೇಳುತ್ತಾ ಮನೆಯ ಬಾಗಿಲನ್ನು ಧಡಾರನೇ ಹಾಕಿಬಿಟ್ಟ!!! :) ದಿನಕಳೆದಂತೆ ನನಗೆ ಮತ್ತು ನನಗೆಂದು ಮನೆ ಹುಡುಕುತ್ತಿದ್ದ ಏಜೆಂಟರುಗಳಿಗೆ ಪರಿಸ್ಥಿತಿಯ ನಿಜವಾದ ಬಿಸಿ ಮುಟ್ಟತೊಡಗಿತು. ಹಾಗೇ ಒಂದು ದಿನ ಕರ್ವೇ ರೋಡಿನ ನಲ್-ಸ್ಟಾಪಿನಲ್ಲಿರುವ 'ಸಮುದ್ರ' ಹೋಟೇಲಿನಲ್ಲಿ ಕುಳಿತು ಏಜೆಂಟರುಗಳೊಡನೆ ಈ ಸಮಸ್ಯೆ ಬಗೆ ಹರಿಸಲು, ಬಿಸಿ ಬಿಸಿ ಚಹಾ ಹೀರುತ್ತಾ, ಸುದೀರ್ಘವಾದ ಮಂತ್ರಾಲೋಚನೆ ನಡೆಸಿ ಅಂತೂ ಎಲ್ಲರೂ ಸೇರಿ ಬಾಡಿಗೆ ಮನೆಯ ಓನರುಗಳ ಮನವೊಲಿಸಲು ಒಂದು ಸಂಚು ಹೂಡಿದೆವು.

ಮರುದಿನ ಕರ್ವೇ ರೋಡಿನ ಎರಾಂಡವಾನ ಎಂಬ ಏರಿಯಾದಲ್ಲಿ, ಸ್ವೀಟ್ ಹೋಮ್ ಎಂಬ ಸೊಸೈಟಿಯಲ್ಲಿನ ಬಾಡಿಗೆ ಮನೆಯ ಮಾಲೀಕರನ್ನು ಭೇಟಿಯಾದೆವು. ಎಲ್ಲರಂತೆ ಈ ಓನರ್ ಸಹಾ ತೆಗೆದ ಬಾಯಿಗೇ "ಆಪ್ ಶಾದೀಶುದಾ ಹೈ ಕ್ಯಾ...?" ಎಂದು ಮುಂತಾಗಿ ಕೇಳತೊಡಗಿದರು... ಕೂಡಲೇ ನಮ್ಮ ಏಜೆಂಟರುಗಳು "ಸರ್ ಕಾ ಶಾದಿ ಫಿಕ್ಸ್ ಹೊಗಯಾ ಹೈ, ದೋ ತೀನ್ ಮಹೀನೆ ಮೆ ಹೋ ಜಾಯೇಗಾ" ಎಂದು ಭರವಸೆ ನೀಡಿದರು..! ಇಷ್ಟು ಕೇಳಿದ ಮೇಲೆ ಸ್ವಲ್ಪ ತಣ್ಣಗಾದ ನಮ್ಮ ಓನರು ಉಳಿದ ಮಾತನ್ನೆಲ್ಲಾ ಆಡಿ, ಅಂತೂ ನನಗೆ ಮನೆಯನ್ನು ಬಾಡಿಗೆ ಕೊಡಲು ಒಪ್ಪಿದರು!!!... ನಾನೂ ಸಹ ಬದುಕಿದೆಯಾ ಬಡಜೀವವೇ ಎಂದು ಒಂದು ನಿಟ್ಟುಸಿರು ಬಿಟ್ಟು ಪುಣೆ ನಗರಿಯಲ್ಲಿ ಸುಖವಾಗಿ ಬದುಕಿದೆ :)
........  .....

ಕಾಲಾನಂತರದಲ್ಲಿ ಮತ್ತೆ ನಾನು ಬೆಂಗಳೂರಿಗೆ ವಾಪಸ್ಸು ಬಂದಾಗಲೇ ನನಗೆ ಅರಿವಾಗಿದ್ದು, ಬೆಂಗಳೂರಿನ ಬಾಡಿಗೆ ಮನೆ ಓನರುಗಳೂ ಪಾಪ ಪುಣೆಯ ಓನರುಗಳಂತೆಯೇ ಬ್ಯಾಚುಲರ್ ಭಯದಂದ ತತ್ತರಿಸಿ ಹೋಗಿದ್ದಾರೆ ಎಂದು!!! ನಮ್ಮ ಕಂಪೆನಿ ವೈಟ್-ಫೀಲ್ಡ್ ನಲ್ಲಿ ಇದ್ದಿದ್ದರಿಂದ ಹತ್ತಿರದಲ್ಲಿರುವ ಬಿ.ಇ.ಎಂ.ಎಲ್ ಬಡಾವಣೆಗೆ ಮನೆ ಹುಡುಕಲು ಬಂದೆ. ಇಲ್ಲಿನ ಮನೆ ಹುಡುಕುವ ಏಜೆಂಟನಾದ 'ರವಿ'ಯ ಹತ್ತಿರ ನಮಗೆ ಒಂದು ಒಳ್ಳೆಯ ಮನೆ ಹುಡುಕಿ ಕೊಡುವಂತೆ ದಂಬಾಲು ಬಿದ್ದೆ. ಆದರೆ ಆತ ಮಾತ್ರ ನನ್ನೆಡೆಗೆ ಸ್ವಲ್ಪವೂ ಕರುಣೆ ತೋರದೇ, "ಸಾರ್ ಈ ಲೇಓಟ್ ನಲ್ಲಿ ಮೊನ್ನೆ ಮೊನ್ನೆ ನಾರ್ಥ್ ಇಂಡಿಯಾದ ಬ್ಯಾಚುಲರ್ ಹುಡುಗರುಗಳು ಮಧ್ಯರಾತ್ರಿಲಿ ಕುಡಿದು, ಡ್ಯಾನ್ಸ್ ಮಾಡಿ ದೊಡ್ಡ ರಂಪಾಟ ಮಾಡಿದಾರೆ ಸಾರ್. ಅದಾದ ಮೇಲಿಂದ ಬ್ಯಾಚುಲರ್ ಹುಡುಗರಿಗೆ ಮನೆ ಬಾಡಿಗೆ ಸಿಗೋ ಛಾನ್ಸೇ ಇಲ್ಲಾ ಬಿಡಿ, ಇದು ಫ್ಯಾಮಿಲಿಗಳಿರೋ ಏರಿಯಾ. ಇಲ್ಲಿ ಎಲ್ಲಾ ಮದುವೆ ಆಗದೇ ಇದ್ದರೆ ಮನೆ ಬಾಡಿಗೆಗೆ ಸಿಗೋದೇ ಎಲ್ಲಾ..." ಎಂಬ ನೀರಸ ಮಾತುಗಳನ್ನಾಡಿದ. ನಾನು "ಇದು ಹೇಗೆ ಸಾರ್, ಈ ಓನರುಗಳೆಲ್ಲಾ ಮೊದಲೊಂದು ದಿನ ಬ್ಯಾಚುಲರ್ ಗಳೇ ಆಗಿದ್ದರು ತಾನೇ...ಮದುವೆ ಆದರೆ ಮಾತ್ರ ಮನೆ ಬಾಡಿಗೆಗೆ ಸಿಗುತ್ತದೆ ಎಂದಾದರೆ ಇದು ಯಾವ ನ್ಯಾಯ ಸಾರ್" ಎಂದು ಅವಲತ್ತುಕೊಂಡೆ...

ಈ ಶೀರ್ಷಿಕೆಯ ಆಕರ್ಷಣೆಯಾದ, "ಸುನೀಲ" ನನ್ನ ದೂರದ ಸಂಬಂಧಿ ಕೂಡಾ ಹೌದು. ಪುಣೆಯಿಂದ ಬಂದ ಮೇಲೆ, ಬೆಂಗಳೂರಿನಲ್ಲಿ ಹೊಸ ಬಾಡಿಗೆ ಮನೆ ಸಿಕ್ಕ ಮೇಲೆ, ಆತ ನನ್ನ ರೂಮೇಟ್ ಆಗುತ್ತೇನೆಂದು ಅಭಯ ನೀಡಿದ್ದ. ಆತ ನನಗೆ ಹೋಲಿಸಿದರೆ ಸುಮಾರಿಗೇ ತೆಳ್ಳನೆಯ ಶಾರೀರ ಹೊಂದಿದ್ದರಿಂದ, ನಿಜವಾದ ತಮ್ಮ ಅಲ್ಲದಿದ್ದರೂ ಆತನನ್ನು ನನ್ನ ತಮ್ಮನನ್ನಾಗಿ ಮಾಡಬೇಕಾಗಿ ಬಂತು:)

ಫ್ಯಾಮಿಲಿ ಅಂದರೆ ಮದುವೆಯೇ ಆಗಿರಬೇಕೆಂದೇನಿಲ್ಲ, ಅಣ್ಣ ತಮ್ಮ ಎಲ್ಲರೂ ಕುಟುಂಬದವರೇ ಎಂದು ಏಜೆಂಟನಾದ ರವಿಯ ಮನವೊಲಿಸಿ ನಮ್ಮ ಈಗಿನ ಮನೆಯ ಓನರನ್ನು ಭೇಟಿಯಾಗಲು ಬಂದೆವು. ಯಥಾಪ್ರಕಾರ ಅವರು "ಓ ಬ್ಯಾಚುಲರಾ...ಇಲ್ಲ...ಇಲ್ಲಾ..ಮನೆ ಖಾಲಿ ಇಲ್ಲಾ" ಎಂದು ಹೇಳತೊಡಗಿದರು...ಆಗ ಕೂಡಲೇ ರವಿ ಭಾವಪರವಶನಾಗಿ, "ಸಾರ್ ಗೆ ಒಂದು ತಮ್ಮ ಇದಾನೆ..ತುಂಬಾ ಚಿಕ್ಕಂದಿನಿಂದಲೂ ಇವರೇ ಆತನಿಗೆ ಓದಿಸಿ ಬೆಳೆಸಿದವರು...ನೋಡಿ ನೀವು ಅಕಸ್ಮಾತ್ ಫ್ಯಾಮಿಲಿಗೇ ಬಾಡಿಗೆ ಕೊಟ್ಟರೆ ಅವರು ನೀರು ಜಾಸ್ತಿ ಖರ್ಚು ಮಾಡ್ತಾರೆ, ಜನರೂ ಜಾಸ್ತಿ ಬರ್ತಾರೆ...ಪಾಪ ಅಣ್ಣ ತಮ್ಮ ಒಳ್ಳೆಯವರು ಇರ್ಲಿ ಬಿಡಿ.. ಇದೂ ಒಂಥರಾ ಫ್ಯಾಮಿಲೀನೇ.." ಎಂದೆಲ್ಲಾ ಮನವೊಲಿಕೆಯ ಮಾತುಗಳನ್ನಾಡಿದ. ರವಿಯ ಮಾತುಗಳಿಗೆ ಮಣಿದ ಮನೆಯ ಓನರು ನಮಗೆ ಅಂತೂ ಷರತ್ತುಬದ್ಧವಾಗಿ ಮನೆಯನ್ನು ಬಾಡಿಗೆಗೆ ಕೊಟ್ಟರು. ನಾನೂ ಕೂಡ ಈ "ತಮ್ಮ" ಎಂಬ ವಿಷಯ ಇಷ್ಟೆಲ್ಲಾ ಕೆಲಸ ಮಾಡುತ್ತದೆ ಅಂದುಕೊಂಡಿರಲಿಲ್ಲ. ಅಂತೂ ಸುನೀಲನ ಅಣ್ಣನಲ್ಲದ ಅಣ್ಣನಾಗಿ ನಾನೂ ಹಾಗೂ ತಮ್ಮನಲ್ಲದ ತಮ್ಮನಾಗಿ ಸುನೀಲನೂ ಇಬ್ಬರೂ ಬೆಂಗಳೂರಿನ ಹೊಸ ಬಾಡಿಗೆ ಮನೆಯಲ್ಲಿ ಠಿಕಾಣಿ ಹೂಡಿದೆವು.


ಈಗಲೂ ನನ್ನ ಕಂಡಕೂಡಲೇ ಓನರ್ ಆಂಟಿ "ತಮ್ಮ ಎಲ್ಲಿ..ಮನೆಗೆ ಬಂದಿಲ್ವಾ ಇನ್ನೂ..?" ಎಂದು ಕೇಳುತ್ತಾರೆ. ನಾನು ಎಂದಿನಂತೆ 'ಇದ್ಯಾವ ತಮ್ಮನಪ್ಪಾ' ಎಂದು ಒಂದು ಕ್ಷಣ ಕನವರಿಸಿ,..ಆಮೇಲೆ ಈ ತಮ್ಮನ ನೆನಪಾಗಿ ..."ಓ ಇಲ್ಲಾ ಆಂಟಿ, ಇನ್ನು ಬಂದಿಲ್ಲಾ..." ಎನ್ನುತ್ತೇನೆ:)

ಮೊನ್ನೆ ಸುನೀಲನ ಅಪ್ಪ ಮನೆಗೆ ಬಂದಿದ್ದರಂತೆ, ಆ ವಿಷಯ ನನಗೆ ತಿಳಿದಿರಲಿಲ್ಲ. ಮನೆಗೆ ಬಂದಕೂಡಲೇ ಆಂಟಿ ಕೇಳಿದರು, "ಸತೀಶ್ ತಂದೆಯವರು ಬಂದಿದ್ದ್ರಲ್ಲಾ, ಇದಾರಾ ಇನ್ನೂ..?" ಅಂತ. ನಾನು ಥಟಕ್ಕನೇ .."ತಂದೆ...? ಯಾವ ತಂದೆ..? ಯಾರ ತಂದೆ ಬಂದಿದ್ದ್ರು...?" ಅಂತ ಕೇಳಿಬಿಟ್ಟೆ !!! ಅದನ್ನು ಕೇಳಿದ ಆಂಟಿ ಕೂಡಲೇ "ನಿಮ್ಮ ತಂದೆ ಬಂದಿರೋದು ನಿನಗೇ ಗೊತ್ತಿಲ್ವಾ..ನಿನ್ನ ತಮ್ಮ ಪರಿಚಯ ಮಾಡಿಸಿಕೊಟ್ಟ...!" ಎಂದು ಹೇಳುತ್ತಾ ನನ್ನೆಡೆಗೆ ವಿಚಿತ್ರವಾಗಿ ನೋಡಿದರು... ಕೂಡಲೇ ನನ್ನಿಂದ ಆದ ಎಡವಟ್ಟನ್ನು ಸರಿಮಾಡಲು, "ಓ..ಓ..ಮರೆತೇಹೋಗಿತ್ತು ಆಂಟಿ, ತುಂಬಾ ಕೆಲ್ಸ ಅಲ್ವಾ..ತಲೆ ಎಲ್ಲೋ ಇರತ್ತೆ..." ಎಂದು ಸಮಜಾಯಿಸಿ ನೀಡಿದೆ. ಅದಕ್ಕೆ ಅವರು,"ಏನಪ್ಪಾ ನೀವು..." ಎಂದು ಹೇಳುತ್ತಾ ಹೊರಟುಹೋದರು. ಸದ್ಯ ನಮ್ಮಿಬ್ಬರ ಅಣ್ಣ-ತಮ್ಮ ನಾಟಕ ಬಯಲಾಗಲಿಲ್ಲವಲ್ಲ ಅಂತ ನಿಟ್ಟುಸಿರು ಬಿಟ್ಟು ಅಂತೂ ಬೀಸುವ ದೊಣ್ಣೆಯೊಂದು ತಪ್ಪಿತು ಎಂದುಕೊಂಡೆ.

ನಮ್ಮ ಆಫೀಸಿನಲ್ಲಿ ಮೊನ್ನೆ ಫ್ಯಾಮಿಲಿ ಡೇ ಇತ್ತು. ನಮ್ಮ ಅಣ್ಣ-ತಮ್ಮಂದಿರ ಕಥೆ ಗೊತ್ತಿರುವದರಿಂದ ಆಫೀಸಿನಲ್ಲಿ ಎಲ್ಲರೂ 'ನಿನ್ನ ತಮ್ಮನನ್ನು' ಫ್ಯಾಮಿಲಿ ಡೇ ಗೆ ಕರೆದುಕೊಂಡು ಬಾ ಎಂದು ದಂಬಾಲು ಬೀಳುತ್ತಾ ಕಾಡಿಸುತ್ತಿದ್ದರು. :)